ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ ತೆಂಗನ್ನು ಏಕ ಬೆಳೆಯಾಗಿ ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು ಬೆಳೆಸಿರಿ.
- ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ ಒಂದು ಎಕ್ರೆಯಲ್ಲಿ ಸುಮಾರು 8000 ಕಾಯಿಗಳು.
- ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು.
- ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ? ಖಂಡಿತವಾಗಿಯೂ ಸಾಲದು.
- ಒಂದೆಕ್ರೆ ತೆಂಗಿನ ಬೆಳೆಯಲ್ಲಿ ಮುಖ್ಯ ಬೆಳೆಗಿಂತ ದುಪ್ಪಟ್ಟು ಮಿಶ್ರ ಬೆಳೆಯಿಂದ ಉತ್ಪತ್ತಿ ಪಡೆಯಲು ಸಾಧ್ಯ. ಮಿಶ್ರ ಬೆಳೆಇಲ್ಲದ ತೆಂಗಿನ ಬೆಳೆ ಬರಡು.
ಮಿಶ್ರ ಬೆಳೆ ಆಯ್ಕೆ ಅಗತ್ಯ:
- ತೆಂಗಿನ ತೋಟದಲ್ಲಿ(30×30 ಅಡಿ ಅಂತರ) ನಾಲ್ಕು ತೆಂಗಿನ ಮರಗಳ ಮಧ್ಯಂತರದಲ್ಲಿ ದೊರೆಯುವ ಸ್ಥಳಾವಕಾಶ ಸುಮಾರು 800 ಚದರ ಅಡಿ.
- ಉಳಿದ ಸ್ಥಳಾವಕಾಶ ತೆಂಗಿಗೆ ಉಪಯೋಗವಾಗುತ್ತದೆ.
- ಒಂದು ಎಕ್ರೆಯ ಸುಮಾರು 43560 ಚದರ ಅಡಿಯಲ್ಲಿ , 10,000 ಚದರ ಅಡಿ ಸ್ಥಳಾವಕಾಶ ತೆಂಗಿಗೆ ಬಳಕೆಯಾದರೂ ಉಳಿದ ಸ್ಥಳಾವಕಾಶದಲ್ಲಿ ಸಾಕಷ್ಟು ಮಿಶ್ರ ಬೆಳೆಗಳನ್ನು ಬೆಳೆಸಬಹುದು.
ಮಿಶ್ರ ಬೆಳೆ ಬೆಳೆಸುವಾಗ ಆಯಾ ಪ್ರದೇಶಕ್ಕನುಗುಣವಾಗಿ ಹೊಂದಿಕೆಯಾಗುವ ಮಿಶ್ರ ಬೆಳೆಗಳನ್ನು ಆಯ್ಕೆ ಮಾಡಬೇಕು. ಕರಾವಳಿ, ಮಲೆನಾಡು, ಅರೆ ಮಲೆನಾಡಿನಲ್ಲಿ ಒಂದು ಬೆಳೆಯಾದರೆ ಬಯಲು ಸೀಮೆಯಲ್ಲಿ ಬೇರೆ ಬೆಳೆಗಳನ್ನೇ ಆಯ್ಕೆ ಮಾಡಬೇಕು. ಇಲ್ಲವಾದರೆ ಅದು ಲಾಭದಾಯಕವಾಗುವುದಿಲ್ಲ.
ಕರಾವಳಿ – ಮಲೆನಾಡು- ಅರೆ ಮಲೆನಾಡು:
- ಈ ಪ್ರದೇಶದಲ್ಲಿ ತೆಂಗಿನ ಮರದ ಕಾಂಡಕ್ಕೆ ಕರಿಮೆಣಸು ಹಬ್ಬಿಸುವ ಮೂಲಕ ಮರಕ್ಕೆ ಸುಮಾರು 3 ಕಿಲೋ ಒಣ ಮೆಣಸು ಅಂದರೆ 900-1000 ರೂ . ಆದಾಯ ಪಡೆಯಬಹುದು.
- ನಾಲ್ಕು ಮರಗಳ ಮಧ್ಯಂತರದಲ್ಲಿ ಸುಮಾರು15-20 ಬಾಳೆಯನ್ನು ಬೆಳೆಸಬಹುದು. ಇದರಿಂದ 3000 ರೂ . ಉತ್ಪಾದನೆ ಪಡೆಯಬಹುದು.
- ತೆಂಗಿನ ಮರದ ಮಧ್ಯಂತರದಲ್ಲಿ ಒಂದು ಸಾಲಿನಲ್ಲಿ ರಾಂಬುಟಾನ್, ಬೆಳೆಸುವುದರಿಂದ 5-6 ವರ್ಷದ ಒಂದು ಮರದಿಂದ ವಾರ್ಷಿಕ 1000 ರೂ. ಆದಾಯ ಪಡೆಯಬಹುದು.
- ಶುಂಠಿಯನ್ನು ತೆಂಗಿನ ಮರದ ಮದ್ಯಂತರದಲ್ಲಿ ಬೆಳೆಸಿ ಕನಿಷ್ಟ ಸುಮಾರು 4000 ರೂ. ಆದಾಯ ಪಡೆಯಬಹುದು.
- ಸಿಹಿ ಗೆಣಸನ್ನು ಬೆಳೆಸಿದರೆ ನಾಲ್ಕು ಮರಗಳ ಮದ್ಯಂತರದಲ್ಲಿ ಸುಮಾರು 2 ಕ್ವಿಂಟಾಲಿಗೂ ಹೆಚ್ಚು ಸಿಹಿ ಗೆಣಸನ್ನು ಪಡೆಯಬಹುದು. ಇದರಿಂದ ಕನಿಷ್ಟ 2000 ರೂ. ಆದಾಯ ಪಡೆಯಬಹುದು.
- ಕೊಕ್ಕೋ ಬೆಳೆದರೆ ಒಂದು ಮರದದಿಂದ 5 +5 (10) ಕಿಲೋ ಕೊಕ್ಕೋ ಬೀಜ ಪಡೆಯಬಹುದು.
- ನಾಲ್ಕು ತೆಂಗಿನ ಮರದ ಮಧ್ಯೆ ನಾಲ್ಕು ಕೊಕ್ಕೋ ಬೆಳೆಸಿ, ಸುಮಾರು 2000 ರೂ. ಉತ್ಪತ್ತಿ ಪಡೆಯಬಹುದು.
ಮ್ಯಾಂಗೋಸ್ಟಿನ್, ತರಕಾರಿ ಹಾಗೆಯೇ ವೀಳ್ಯದೆಲೆ, ಅರಶಿನ, ಅನನಾಸು ಮುಂತಾದ ಬೆಳೆಯನ್ನೂ ಬೆಳೆಸಿ ತೆಂಗಿನ ಮರದ ಉತ್ಪತ್ತಿಗಿಂತ ಹೆಚ್ಚಿನ ಉತ್ಪತ್ತಿಯನ್ನು ಪಡೆಯಬಹುದು.
ಬಯಲು ನಾಡಿನ ಭಾಗಗಳಲ್ಲಿ:
- ಬಯಲು ನಾಡಿನಲ್ಲಿ ಬೆಳೆಸಬಹುದಾದ ಪ್ರಾಮುಖ್ಯ ಬೆಳೆಗಳಾದ ಸೀಬೆ, ತರಕಾರಿ, ಲಿಂಬೆ, ಪಪ್ಪಾಯ, ಅರಶಿನ, ಶುಂಠಿ, ಬೆಳೆಗಳನ್ನು ಬೆಳೆಯಬಹುದು.
- ಪ್ರಮುಖ ಆದಾಯದ ಬೆಳೆಯಾದ ಶ್ರೀಗಂಧವನ್ನೂ ಸಹ ತೆಂಗಿನ ತೋಟದಲ್ಲಿ ಬೆಳೆಯಬಹುದು.
- ಸುವರ್ಣ ಗಡ್ಡೆ, ಕೆಸು, ಹಾಗೂ ನುಗ್ಗೆ, ಬೆಳೆಯಬಹುದು. ಶ್ರೀಗಂಧ ಬೆಳೆಸಲು ತೆಂಗಿನ ತೋಟ ಉತ್ತಮ ಎಂದು ಕಂಡು ಬಂದಿದೆ.
- ತೆಂಗಿನ ಮರಕ್ಕೂ ವೀಳ್ಯದೆಲೆಯನ್ನು ಹಬ್ಬಿಸಬಹುದು. ಪಶು ಪಾಲನೆ ಮಾಡುವವರು ಹುಲ್ಲಿ ಬೆಳೆಸಿ ಮೇವು ಉತ್ಪಾದನೆ ಮಾಡಿಕೊಳ್ಳಬಹುದು.
- ವಾಣಿಜ್ಯ ಬೆಳೆಯಾದ ಹತ್ತಿಯನ್ನೂ, ಕಬ್ಬನ್ನು ಸಹ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಸುವವರಿದ್ದಾರೆ.
- ಉತ್ತರ ಕರ್ನಾಟಕದ ಬಾಗಲಕೋಟೆ ಪ್ರದೇಶದಲ್ಲಿ ತೆಂಗಿನ ತೋಟದ ಮಧ್ಯಂತರದಲ್ಲಿ ಜವಾರಿ ಬಾಳೆಯನ್ನೂ ಬೆಳೆಯುವವರಿದ್ದಾರೆ.
- ಹಿಪ್ಪು ನೇರಳೆಯನ್ನು ತೆಂಗಿನ ತೋಟದ ಮಧ್ಯಂತರದಲ್ಲಿ ಬೆಳೆಸಿ ರೇಶ್ಮೆ ವ್ಯವಸಾಯ ಮಾಡುವುದು ತುಂಬಾ ಲಾಭದ್ದು.
- ಇದನ್ನು ರಾಮನಗರ, ಕನಕಪುರ, ಮಂಡ್ಯ ಅಲ್ಲದೆ ಬೆಳಗಾವಿ ಸುತಮುತ್ತ ಕಾಣಬಹುದು.
- ಚನ್ನರಾಯ ಪಟ್ಟಣ ಸುತಮುತ್ತ, ಹಲವಾರು ರೈತರು ಸೌತೇ ಆಯಿ, ಸಿಹಿ ಕುಂಬಳ ಬೆಳೆದು ವಾರ್ಷಿಕ 50000 ಕ್ಕೂ ಹೆಚ್ಚು ಆದಾಯ ಪಡೆಯುವವರಿದ್ದಾರೆ.
ತೆಂಗಿನ ತೋಟವನ್ನು ಮಿಶ್ರ ಬೆಳೆಗಳನ್ನು ಬೆಳೆಸಿದರೆ ಮಾತ್ರ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯ. ಬಹುವಾರ್ಷಿಕ ಬೆಳೆಗಳಲ್ಲದ ಬೆಳೆಗಳನ್ನು ಬೆಳೆಯುವಾಗ ಪ್ರತೀ ವರ್ಷ ಬೆಳೆ ಪರಿವರ್ತನೆ ಮಾಡಬೇಕು. ಆಂಶಿಕ ನೆರಳನ್ನು ಅಪೇಕ್ಷಿಸುವ ಬೆಳೆಗಳನ್ನು ಆಯ್ಕೆ ಮಾಡಿಕೊಂಡರೆ ತುಂಬಾ ಅನುಕೂಲ. ಮಿಶ್ರ ಬೆಳೆ ಇರುವ ತೋಟದಲ್ಲಿ ಇಳುವರಿ ದುಪ್ಪಟ್ಟು.
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೊಕಿನ. ರೈತರು ತೆಂಗಿನ ಮಧ್ಯೆ ಬೆಳೆಯಬಹುದಾದ ಮಿಶ್ರ ಬೆಳೆಯನ್ನು ದಯವಿಟ್ಟು ತಿಳಿಸಿಕೊಡಿ