ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು. ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು.
- ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ ತನಕ ಹಲಸಿನ ಮರ ಹೂವು ಬಿಡುವ ಕಾಲ.
- ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ ಕೆಲವು ನಿಧಾನವಾಗಿ ಶಿವರಾತ್ರೆ ನಂತರವೂ ಹೂವು ಬಿಡುತ್ತವೆ.
- ಗಾಳಿ ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ.
- ವಾಸ್ತವವಾಗಿ ಹಾಗಲ್ಲ. ಶುಷ್ಕ ವಾತಾವರಣ ಇದ್ದಾಗ ಹೂ ಬಿಡುವಿಕೆ ಹೆಚ್ಚು.
ಹಲಸಿನ ಮರಗ ಹೂವು ಒಂದು ಕೌತುಕ.
- ಹಲಸಿನ ಮರದಲ್ಲಿ ಎಲ್ಲಾ ಮರಗಳಂತೆ ಎಲೆ ಬಾಗದಲ್ಲಿ ಹೂ ಬಿಡುವುದಲ್ಲ.
- ಕಾಂಡ ಮತ್ತು ದಪ್ಪದ ರೆಂಬೆಗಳಲ್ಲಿ ಮಾತ್ರ ಹೂ ಬಿಡುತ್ತದೆ.
- ಅಧಿಕ ಸಂಖ್ಯೆಯಲ್ಲಿ ಹೂ ಬಿಡುತ್ತವೆಯಾದರೂ ಅದರಲ್ಲಿ ಫಲಿತ ಗೊಳ್ಳುವ ಹೆಣ್ಣು ಹೂವು ಕೆಲವೇ ಕೆಲವು ಮಾತ್ರ.(ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಹೂವು ಎನ್ನುತ್ತೇವೆ.
- ಇದು ಗಂಡು ಮತ್ತು ಹೆಣ್ಣು ಮಿಡಿಗಳು) ಕೆಲವು ಮರಗಳಲ್ಲಿ ನೆಲಮಟ್ಟದಲ್ಲೂ ಮಿಡಿ ಬಿಡುತ್ತದೆ.
- ಹೆಣ್ಣು ಮಿಡಿಗಳು ಗೊಂಚಲುಗಳಲ್ಲಿ ಗಂಡು ಮಿಡಿಗಳ ಸಮೇತವಾಗಿ ಬಿಡುವುದು ಜಾಸ್ತಿ.
- ಗಂಡು ಮಿಡಿಗಳು ಬೇರೆ ಕಡೆಯಲ್ಲೂ ಬಿಡುವುದಿದೆ.
- ಗಂಡು ಮಿಡಿಗಳ ಆಕಾರ ಮತ್ತು ಹೆಣ್ಣು ಮಿಡಿಗಳ ಆಕಾರ ಭಿನ್ನವಾಗಿರುತ್ತದೆ.ಮೇಲ್ಮೈ ಸಹ ಭಿನ್ನವಾಗಿರುತ್ತದೆ.
ಪರಾಗಸ್ಪರ್ಶ ಆಗಬೇಕು:
ಹಲಸಿನ ಮರದಲ್ಲಿ ಮಿಡಿ ಬಿಡುವ ಸಮಯದಲ್ಲಿ ಒಂದು ಸುವಾಸನೆ ಸುತ್ತಲೂ ಹಬ್ಬುತ್ತದೆ. ಈ ಸುವಾಸನೆಯನ್ನು ಆಘ್ರಾಣಿಸಿಯೇ ಹಲಸು ಮಿಡಿ ಬಿಟ್ಟಿದೆ ಎಂದು ತಿಳಿಯಬಹುದು. ಈ ಸುವಾಸನೆ ಮತ್ತೇನೂ ಅಲ್ಲ. ಅದರ ಪರಾಗಕಣಗಳು ಗಾಳಿಯಲ್ಲಿ ಹಾರುವಾಗ ಬರುವಂತದ್ದು.
- ಗಂಡು ಮಿಡಿಗಳ ಮೇಲ್ಮೈ ನಯವಾಗಿದು, ಹೆಣ್ಣು ಮಿಡಿಗಳಲ್ಲಿ ಮುಳ್ಳುಗಳ ರಚನೆ ಇರುತ್ತವೆ.
- ಗಂಡು ಸಣ್ಣದಾಗಿರುತ್ತದೆ. ಹೆಣ್ಣು ದೊಡ್ಡದಿರುತ್ತದೆ.ಗಂಡು ಮಿಡಿಗಳಲ್ಲಿ ಬರೇ ಪರಾಗ ಇರುವ ಹೂ ಮಾತ್ರ ಇರುತ್ತವೆ.
- ಹೆಣ್ಣು ಮಿಡಿಗಳಲ್ಲಿ ಅಂಡಾಶಯ ಮತ್ತು ಶಲಾಖೆಗಳೆರಡೂ ಇರುತ್ತವೆ.
- ಗಂಡು ಮಿಡಿ ತನ್ನ ರಕ್ಷಾ ಪೊರೆಯನ್ನು ಬಿಡಿಸಿದ ಮರು ದಿನದಲ್ಲಿ ಕಪ್ಪಗಾಗುತ್ತಾ ಕೆಲವೇ ದಿನದಲ್ಲಿ ಉದುರುತ್ತದೆ.
- ಹೆಣ್ಣು ಮಿಡಿಯ ರಕ್ಷಾ ಪೊರೆ ಬಿಡಿಸಿದ ತರುವಾಯ ಮುಳ್ಳಿನ ಮೇಲಿರುವ ಹೂವುಗಳು ಅರಳಿ ಪರಾಗಸ್ಪರ್ಷಕ್ಕೆ ಸಜ್ಜಾಗುತ್ತವೆ.
- ಇದು 4-6 ದಿನಗಳ ತನಕವೂ ಮುಂದುವರಿಯುತ್ತವೆ.
- ಪರಾಗಸ್ಪರ್ಶ ಆದ ತರುವಾಯ ಮುಳ್ಳಿನ ತುದಿ ಭಾಗ ಕಪ್ಪಗಾಗುತ್ತದೆ.
- ಹೆಣ್ಣು ಮಿಡಿಯನ್ನು ಪರೆ ಬಿದ್ದ ತಕ್ಷಣ ಕಾಗದಲ್ಲಿ ಸುತ್ತಿಟ್ಟರೆ ಅದು ಪರಾಗಸ್ಪರ್ಶ ಆಗದೆ ಉದುರಿ ಬೀಳುತ್ತದೆ.
- ಅದ ಕಾರಣ ಹಲಸು ಅನ್ಯ ಪರಾಗಸ್ಪರ್ಶದಿಂದ ಫಲಿಸುವ ಕಾಯಿಯಾಗಿದೆ.
- ಗಂಡು ಹೂವಿನ ಪರಾಗವು ಹೆಣ್ಣು ಹೂವಿಗೆ ಲಭ್ಯವಾಗುತ್ತದೆ. ಅದು ಗಾಳಿಯ ಮೂಲಕ ಪರಾಗ ವರ್ಗಾವಣೆಯಾಗುತ್ತದೆ.
- ಆ ಸಮಯದಲ್ಲಿ ಘಾಢ ಪರಿಮಳ ಬರುತ್ತದೆ. ಬರೇ ಗಾಳಿಯಲ್ಲದೆ ಕೀಟಗಳು, ಇರುವೆಗಳೂ ಸಹ ಪರಾಗಸ್ಪರ್ಶಕ್ಕೆ ಹೆಚ್ಚಾಗಿ ಸಹಕರಿಸುತ್ತವೆ.
- ಇದೇ ಕಾರಣಕ್ಕೆ ಹಲಸು ಬೀಜದಿಂದ ಸಸ್ಯಾಭಿವೃದ್ದಿಯಾದಾಗ ತನ್ನ ಮಾತೃ ಗುಣದಿಂದ ಭಿನ್ನವಾದ ಕಾಯಿ ಬಿಡುವುದು.
- ಇಂದೇ ನಿಮ್ಮ ಹಲಸಿನ ಮರ ಹೂ ಬಿಡುವ ಸಮಯದಲ್ಲಿ ಇದನ್ನು ಗಮನಿಸಿ.ಹಲಸಿನ ಮರದಲ್ಲಿ 95-96 % ಗಂಡು ಹೂ ಮಿಡಿಗಳೇ ಇರುತ್ತದೆ.
- ಹೆಣ್ಣು ಮಿಡಿ ಇರುವ ಸಮಯದುದ್ದಕ್ಕೂ ಇದು ಇರುತ್ತದೆ.
ಅಪರೂಪದಲ್ಲಿ ಕೆಲವು ಮರಗಳಲ್ಲಿ ಹೆಣ್ಣು ಹೂ ಮಿಡಿಗಳು ಜಾಸ್ತಿ ಇರುತ್ತವೆ. ಅಂತವುಗಳಲ್ಲಿ ಅಧಿಕ ಸಂಖ್ಯೆಯ ಕಾಯಿಯಾಗುತ್ತದೆ.ಸಮರ್ಪಕವಾಗಿ ಪರಾಗ ಸ್ಪರ್ಷ ಆಗದೇ ಇದ್ದ ಕಾಯಿ ಅಲ್ಲಲ್ಲಿ ಪೊಳ್ಳು ಆಗುವುದನ್ನು ಕಾಣಬಹುದು.