ಈ ಗಡ್ದೆ ಗೆಣಸು ತರಕಾರಿ ಬೆಳೆಗೆ ಅತೀ ಕಡಿಮೆ ನೀರು ಸಾಕು.

ಎಲ್ಲಾ ತರಕಾರಿಗಳನ್ನು ಕೆಲವು ಋತುಮಾನಗಳಲ್ಲಿ ಬೆಳೆಸುವುದು ಕ್ರಮ. ಸುವರ್ಣ ಗಡ್ಡೆ ಎಂಬ ತರಕಾರಿಯನ್ನು ನಾಟಿ ಮಾಡುವ ಸಮಯ ಈಗ. ಈ ಬೆಳೆಗೆ  ಮಳೆಗಾಲ ಬರುವ ತನಕ ಅಲ್ಪ ಸ್ವಲ್ಪ ನೀರು ಕೊಟ್ಟರೆ ಸಾಕು ಮಳೆಗಾಲ ಮುಗಿಯುವ ಸಮಯದಲ್ಲಿ ದೊಡ್ಡ ಗಡ್ಡೆಯಾಗಿ ಪ್ರತಿಫಲ ಕೊಡುತ್ತದೆ.  ಇದು ಅತೀ ಕಡಿಮೆ ನೀರಿನಲ್ಲಿ ಬೆಳೆಯಬಹುದುದಾದ  ಗಡ್ದೆ ಗೆಣಸು  ತರಕಾರಿ ಎಂದರೂ ತಪ್ಪಾಗಲಾರದು.

ಕೇರಳದವರು ಎಲ್ಲೇ ಹೋದರೂ ಮರಗೆಣಸು, ಸುವರ್ಣಗಡ್ಡೇ ಬೆಳೆಯುವುದನ್ನು ಬಿಡುವುದಿಲ್ಲ. ಅವರು ಸುವರ್ಣ ಗಡ್ಡೆ ನೆಡುವುದು ಮಾರ್ಚ್ ತಿಂಗಳಲ್ಲಿ,(ಕುಂಭ ಮಾಸ)  ನೆಡುವ ವಿಷೇಶ ಕ್ರಮ ಮತ್ತು ವಾತಾವರಣದ ಅನುಕೂಲದಿಂದ ಅದು ಚೆನ್ನಾಗಿ ಬದುಕಿಕೊಳ್ಳುತ್ತದೆ.ಕೇರಳವಲ್ಲದೆ ಸುವರ್ಣಗಡ್ಡೆ ಬೆಳೆಯುವ  ತಮಿಳುನಾಡು ಆಂದ್ರ ಪ್ರದೇಶಗಳಲ್ಲೂ ಇದೇ ಸಮಯದಲ್ಲಿ ನಾಟಿ ಮಾಡಲಾಗುತ್ತದೆ.ಸುವರ್ಣ ಗಡ್ಡೆ ಅಥವಾ ಇನ್ಯಾವುದೇ ಗಡ್ಡೆ ಗೆಣಸುಗಳನ್ನು ನಾಟಿ ಮಾಡುವ ಸೂಕ್ತ ಸಮಯ ಕುಂಭ ಮಾಸ. ಅಂದರೆ ಮಾರ್ಚ್ ತಿಂಗಳ ನಂತರ.ಈ ಸಮಯದಲ್ಲಿ ನೆಟ್ಟರೆ ಅನುಕೂಲ ಏನು, ನೀರಾವರಿ ಇಲ್ಲದೆಯೂ ಅದು ಹೇಗೆ ಬದುಕುತ್ತದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಸುವರ್ಣ ಗಡ್ಡೆ ಗಿಡ

ಸುವರ್ಣ ಗಡ್ಡೆ ನೆಡುವ ವಿಧಾನ:

 • ಸುವರ್ಣಗಡ್ಡೆ ನಾಟಿ ಮಾಡಲು ಗಡ್ಡೆ ಸುಮಾರಾಗಿ ½ ಕಿಲೊ ದಿಂದ 1 ಕಿಲೋ ತನಕ ಇದ್ದರೆ ಸಾಕು.
 • ದೊಡ್ಡ ಗಡ್ಡೆ ಆಗಿದ್ದರೆ ಅದನ್ನು ಮೇಲೆ ತಿಳಿಸಿದ ಆಕಾರಕ್ಕೆ ತುಂಡು ಮಾಡಿ  ಸಗಣಿಯನ್ನು ಲೇಪಿಸಿ ನಾಟಿ ಮಾಡಬಹುದು.
 • ಸಗಣಿಯು ಕೊಳೆಯದಂತೆ ರಕ್ಷಿಸುತ್ತದೆ ಮತ್ತು ಮೊಳಕೆ ಬರಲು ಅನುಕೂಲವಾಗುತ್ತದೆ.
 • ನಾಟಿ ಮಾಡುವಾಗ ಏರು ಮಡಿಯಲ್ಲಿ ನೆಡುವುದಾದರೆ ಸುಮಾರು ಎರಡು ಅಡಿ ಎತ್ತರಕ್ಕೆ  3-4 ಅಡಿ ಅಗಲಕ್ಕೆ ಇರುವಂತೆ  ಗುಪ್ಪೆಗಳನ್ನು ಮಾಡಿ.
 • ಮಣ್ಣನ್ನು ಪೂರ್ತಿಯಾಗಿ ಒಮ್ಮೆ ಒದ್ದೆ ಮಾಡಿ. ಅದರಲ್ಲಿ ತಳದಲ್ಲಿ ಗಡ್ಡೆ ಇಟ್ಟು ಮೇಲ್ಭಾಗಮತ್ತು ಸುತ್ತಲೂ ಸ್ವಲ್ಪ ಕಾಂಪೋಸ್ಟು ಹಾಕಿ ಮಣ್ಣು ಮುಚ್ಚಬೇಕು.
 • ಗಡ್ಡೆಯ ಮೇಲ್ಬ್ಗಾಗಕ್ಕೆ ಹೆಚ್ಚು ಮಣ್ಣು ಹಾಕಬಾರದು.
 • ಸುಮಾರು 3-4 ಇಂಚಿನಷ್ಟು ಮಣ್ಣು ಹಾಕಿ ಅದರ ಮೇಲೆ ಸಾವಯವ ತ್ಯಜ್ಯಗಳಾದ ಒಣ ಹುಲ್ಲು, ತರಗೆಲೆ ಅಥವಾ ಬೇರೇನಾದರೂ ಸಾವಯವ ತ್ಯಾಜ್ಯಗಳನ್ನು ಹಾಕಬೇಕು.

ಕುಂಭ ಮಾಸದಲ್ಲಿ ನೆಟ್ಟಾಗ ಮೊಳಕೆ ಬರುವುದು.

 • ಹೀಗೆ ಮಾಡಿದರೆ  ಮೊಳೆಕೆ ಮೇಲೆ ಬರಲು ಅನುಕೂಲವಾಗುತ್ತದೆ.
 • ನಾಟಿ ಮಾಡಲು ಸಡಿಲವಾದ ಮಣ್ಣು ಆಗಿರಬೇಕು.
 • ಮರಳು ಮಿಶ್ರಿತ ಕಲ್ಲು ರಹಿತ ಮಣ್ಣು ಆಗಿದ್ದರೆ ಉತ್ತಮ.
 • ಮರಳು ಅಥವಾ ಮೆಕ್ಕಲು ಮಣ್ಣು ಆದರೆ ಗಡ್ಡೆಗೆ ಸಡಿಲ ಮಣ್ಣು ದೊರೆತು ಅವು ದೊಡ್ಡ ದಾಗಿ ಬೆಳೆಯುತ್ತವೆ.
 • ಅದರ ಗಡ್ಡೆಯ ಮೇಲ್ಮೈ ನೋಟ ಚೆನ್ನಾಗಿರುತ್ತದೆ. ಕಲ್ಲು ಇತ್ಯಾದಿ ಇದ್ದರೆ ಅದು ಒತ್ತಲ್ಪಟ್ಟ ಜಾಗದಲ್ಲಿ  ಗಡ್ಡೆಯಲ್ಲಿ ಕುಳಿ ಬೀಳುತ್ತದೆ.
 • ಫಲವತ್ತಾದ ಮಣ್ಣು ಇದ್ದರೆ ಗಡ್ಡೆ ಗಾತ್ರ ದೊಡ್ಡದಾಗಿ ಬರುತ್ತದೆ.
 • ಮಳೆಗಾಲದಲ್ಲಿ ನೀರು ನಿಲ್ಲದಂತಹ ಜಾಗ ಆಗಿದ್ದರೆ , ಹೊಂಡ ಮಾಡಿ ನೆಡುವುದು ಉತ್ತಮ.
 • ಈ ವಿಧಾನದಲ್ಲಿ ತೇವಾಂಶ ಸಂರಕ್ಷಣೆಗೆ ಅನುಕೂಲವಾಗುತ್ತದೆ.
 • ಹೆಚ್ಚಿನವರು ಖುಷ್ಕಿ ಭೂಮಿಯಲ್ಲಿ  ಬೆಳೆ ಬೆಳೆಯುವ ಕಾರಣ ಈ ಕ್ರಮದಲ್ಲಿ ನಾಟಿ ಮಾಡುವುದು ಸೂಕ್ತ.
 • ಸುಮಾರು 2X2X2 ಉದ್ದ, ಅಗಲ ಮತ್ತು ಆಳದ ಹೊಂಡ ಅಥವಾ ಕುಳಿಯನ್ನು ಮಾಡಿ.
 • ತಳಭಾಗಕ್ಕೆ ಅಗೆದು ತೆಗೆದ ಮಣ್ಣನ್ನು ಅರ್ಧ ಪಾಲು ತುಂಬಿ.

ಹುಲ್ಲು ಇತ್ಯಾದಿ ತ್ಯಾಜ್ಯಗಳನ್ನು ಮುಚ್ಚಿ ತೇವಾಂಶ ಸಂರಕ್ಷಣೆ ಮಾಡಬೇಕು.

 • ಅದರ ಮೇಲೆ ಗಡ್ಡೆಯನ್ನು ಇಟ್ಟು ತುದಿ ತನಕ ಮಣ್ಣು ಹಾಗೂ ಕಾಂಪೋಸ್ಟು ಗೊಬ್ಬರವನ್ನು ಹಾಕಿ.
 • ಮೊಳಕೆ ಇರುವ ಜಾಗಕ್ಕೆ ಹೆಚ್ಚು ಮಣ್ಣು ಹಾಕಬೇಡಿ.
 • ನಂತರ ಇಡೀ ಹೊಂಡ ತುಂಬುವಂತೆ ನೀರನ್ನು ಉಣಿಸಿರಿ.
 • ಆನಂತರ ಹೊಂಡ ಹಾಗು ಮೇಲ್ಭಾಗವೂ ಸೇರಿ ಪೂರ್ತಿ ಮುಚ್ಚುವಂತೆ ಸಾಧ್ಯವಾದಷ್ಟು ಸಾವಯವ ತ್ಯಾಜ್ಯಗಳನ್ನು ಹಾಕಿ ಮುಚ್ಚಿಬಿಡಿ.

ನೀರುಣಿಸುವುದು ಬೇಕಾಗಿಯೇ ಇಲ್ಲ:

ಸುವರ್ಣ ಗಡ್ಡೆ ಎಲ್ಲಿಯೇ ಇಡಿ, ಕುಂಭ ಮಾಸದಲ್ಲಿ ಅದು ಮೊಳಕೆ ಬಂದೇ ಬರುತ್ತದೆ. ಇದು ಪ್ರಕೃತಿ ನಿಯಮ.
ಸುವರ್ಣ ಗಡ್ಡೆ ಎಲ್ಲಿಯೇ ಇಡಿ, ಕುಂಭ ಮಾಸದಲ್ಲಿ ಅದು ಮೊಳಕೆ ಬಂದೇ ಬರುತ್ತದೆ. ಇದು ಪ್ರಕೃತಿ ನಿಯಮ.
 • ನೆಡುವಾಗ ಒಮ್ಮೆ ನೆಲವನ್ನು ಪೂರ್ತಿ ಒದ್ದೆ ಮಾಡಿದರೆ ನೀರಾವರಿ ಸಾಕು.
 • ಹಾಕಿದ ನೀರು ಆವಿಯಾಗದಂತೆ ತ್ಯಾಜ್ಯಗಳನ್ನು ಮುಚ್ಚಲೇ ಬೇಕು.
 • ಗಡ್ಡೆಯಲ್ಲಿರುವ ತೇವಾಂಶ ಮತ್ತು ಆಗಲೇ ಕೊಟ್ಟ ನೀರಿನ ಬಲದಲ್ಲಿ ನಾಟಿ ಮಾಡಿ 15 ದಿನಗಳ ಒಳಗೆ ಮೊಳಕೆ ಹೊಂಡದಿಂದ ಮೇಲೆ ಬರುತ್ತದೆ.
 • ಆಗಲೂ ಸಹ ನೀರಾವರಿ ಮಾಡಬೇಕಾಗಿಲ್ಲ. ವಾತಾವರಣದ ತೇವಾಂಶದಲ್ಲೇ ಬದುಕುವ ಶಕ್ತಿ  ಇದಕ್ಕೆ ಇರುತ್ತದೆ.
 • ಎಪ್ರೀಲ್ ತಿಂಗಳ ನಂತರ ಆಗಾಗ್ಗೆ ಬರುವ ಸಣ್ಣ ಪುಟ್ಟ ಮಳೆಗಳು ಸಸ್ಯವನ್ನು ಬದುಕಿಸಿ ಬೆಳೆಯಲು ಸಹಕರಿಸುತ್ತದೆ.
 • ಮಳೆ ಬಂದ ನಂತರ ಗಡ್ಡೆ ಕಠಾವು ಮಾಡುವ ತನಕ ನೀರಾವರಿ ಬೇಕಾಗುವುದೇ ಇಲ್ಲ.
 • ಸಸಿ ಬೆಳೆಯುತ್ತಾ ಬೇರುಗಳು ಬಿಟ್ಟು ಮಳೆ ಬಂದ ನಂತರ ಗಡ್ಡೆ ಬೆಳೆವಣಿಗೆ ತ್ವರಿತವಾಗಿ ಅಗುತ್ತದೆ.

ಲಾಭದ ಲೆಕ್ಕಾಚಾರ:

 • ಮಣ್ಣಿನಫಲವತ್ತತೆ, ಮತ್ತು ಮಣ್ಣಿನ ಸಡಿಲ ತನ ಹಾಗೂ ಕೊಡುವ ಪೋಷಕಾಂಶಗಳನ್ನು ಅವಲಂಭಿಸಿ ಗಡ್ಡೆ 10 ಕಿಲೋ ತನಕವೂ ತೂಕ ಬರುತ್ತದೆ.
 • ಸುವರ್ಣಗಡ್ಡೆಗೆ ಸಾರಜನಕ, ರಂಜಕ  ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಕೊಡುವುದರಿಂದ ಉತ್ತಮ ಗಾತ್ರದ ಗಡ್ಡೆ ಬರುತ್ತದೆ.
 • ನೆಡುವಾಗ ರಂಜಕ ಗೊಬ್ಬರವನ್ನು ಪೂರ್ತಿಯಾಗಿ ಕೊಡಬೇಕು.
 • ನಂತರ ಎರಡು ಕಂತುಗಳಲ್ಲಿ ಸಾರಜನಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಕೊಡಬೇಕು.
 • 120:60:80 ಪ್ರಮಾಣದಲ್ಲಿ NPK ಗೊಬ್ಬರ ಕೊಡುವುದು ಶಿಫಾರಿತ.
 • ಫಲವತ್ತಾದ ಮಣ್ಣು ಇದ್ದರೆ ಈ ಗೊಬ್ಬರದ ಅಗತ್ಯವೂ ಇರುವುದಿಲ್ಲ.

ಸುವರ್ಣ ಗಡ್ಡೆ ತರಕಾರಿಗಳಲ್ಲಿ ಧೀರ್ಘಾವಧಿಯ ತನಕ ದಾಸ್ತಾನು ಇಡಬಹುದಾದ ಬೆಳೆ. ಇದಕ್ಕೆ ಉತ್ತಮ ಬೇಡಿಕೆ ಇದೆ. 1:10 ಪ್ರಮಾಣದಲ್ಲಿ ಇಳುವರಿ ಕೊಡಬಲ್ಲ, ಆರೋಗ್ಯಕ್ಕೆ ಉತ್ತಮವಾದ ತರಕಾರಿ ಇದು. ಸುವರ್ಣ ಗಡ್ಡೆ ಗೆ ಬಹಳಷ್ಟು ಔಷದೀಯ ಗುಣಗಳಿದ್ದು, ಇದು ಗಾಯ ವಾಸಿ ಮಾಡುವ ತರಕಾರಿ ಎಂದೇ ಕರೆಯಲ್ಪಡುತ್ತದೆ.ತೆಂಗಿನ ತೋಟ, ಕೃಷಿ ಅರಣ್ಯ ಗಳ ಮಧ್ಯೆಯೂ ಬೆಳೆಯಬಹುದು.

error: Content is protected !!