ಹಸುಗಳನ್ನು ಕಟ್ಟಿ ಸಾಕುವುದರಿಂದ ಏನೆಲ್ಲಾ ಅನಾಹುತಗಳಾಗುತ್ತದೆ?

ಸ್ವಚ್ಚಂದ ಪರಿಸರದಲ್ಲಿ ಮೇಯುತ್ತಿರುವ ಗೀರ್ ಹಸು

ಬಹಳಷ್ಟು ಜನ ಹಸು ಸಾಕಾಣೆ ಮಾಡುತ್ತಾರೆ. ಆದರೆ ಆ ಹಸುಗಳು ಹಟ್ಟಿಯೆಂಬ ಜೈಲಿನಲ್ಲಿ ಎಲ್ಲಾ  ಆಹಾರಗಳ ಸಮೇತ ಬಂಧಿಯಾಗಿ ಇಡುತ್ತಾರೆ. ಇದರಿಂದ ಆಗುವ ಅತೀ ದೊಡ್ಡ ಸಮಸ್ಯೆ  ಕೇಳಿದರೆ ಹಸು ಸಾಕುವವರು ಆ ವೃತ್ತಿಯನ್ನು ಬಿಟ್ಟು ಬಿಡಬಹುದು. ಹಾಲು ಕುಡಿಯುವವರೂ ಬಳಕೆ ಕಡಿಮೆ ಮಾಡಬಹುದು.

ಮನುಷ್ಯರನ್ನು ದಿನವಿಡೀ ಒಂದು ಕೋಣೆಯಲ್ಲಿ ಹೊಟ್ಟೆಗೆ ಬೇಕಾದಷ್ಟು ತಿನ್ನಲು ಕೊಟ್ಟು ಕೂಡೀ ಹಾಕಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೆಲ್ಲಾ ಒಂದು ದಿನ ಎರಡೂ ದಿನ ಹೇಗಾದರೂ ನಡೆಯುತ್ತದೆ. ಅನುದಿನವೂ ಹೀಗೇ ಆದರೆ ಅವನ ಆಯುಸ್ಸು ತುಂಬಾ ಕಡಿಮೆಯಾಗುತ್ತದೆ.  ಅಸ್ವಾಸ್ತ್ಯಗಳೂ ಉಂಟಾಗುತ್ತದೆ. ಹಾಗೆಯೇ ಹಸುಗಳೂ ಸಹ. ನಾವು ಹಸುಗಳನ್ನು ದೇವರೆಂದು ಪ್ರೀತಿಸಿ ಸಾಕುತ್ತೇವೆ. ಗೋ ಮಾತೆ ಎನ್ನುತೇವೆ. ಆದರೆ ಅದಕ್ಕೆ ಇಂತಹ ಶಿಕ್ಷೆಯನ್ನು  ಕೊಡುತ್ತೇವೆ. ಇದರಿಂದಾಗಿ ಹಸುಗಳು ಗರ್ಭಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ರೋಗ ರುಜಿನಗಳಿಗೂ ತುತ್ತಾಗುತ್ತವೆ.

 • ಇತ್ತೀಚೆಗೆ ಹಸು ಸಾಕಾಣಿಕೆ ಮಾಡುವವರು ಅನುಭಸುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಹಸುಗಳ ಗಬ್ಬ ನಿಲ್ಲದಿರುವುದು.  
 • ಹೊಟ್ಟೆ ಸರಿ ಇಲ್ಲದೆ ಅಜೀರ್ಣ ಆಗುವುದು.
 • ಬಹುತೇಕ ಹಸುಗಳು ಬೆದೆಗೆ ಬಂದಾಗ ಯಾವ ಸಂಜ್ಞೆಯನ್ನೂ ತೋರಿಸುವುದಿಲ್ಲ. 
 • ಯಾವ ಸ್ರಾವವೂ ಇರುವುದಿಲ್ಲ. ಕೂಗುವುದೂ ಇಲ್ಲ.
 • ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಸಂಜ್ಞೆಗಳು  ಗೊತ್ತಾಗುತ್ತದೆ.
 • ಇಷ್ಟೇ ಅಲ್ಲ. ಬೆದೆಗೆ ಬಂದಿದ್ದು ತಿಳಿದು ಕೃತಕ ಗರ್ಭದಾರಣೆ ಮಾಡಿಸಿದರೂ ಸಹ ಅದಕ್ಕೆ ಗಬ್ಬ ನಿಲ್ಲುವುದಿಲ್ಲ.
 • ಒಂದು –ಎರಡು- ನಾಲ್ಕು- ಐದು  ಇಂಜೆಕ್ಷನ್ ಕೊಟ್ಟರೂ ಸಹ ಗಬ್ಬ ನಿಲ್ಲುವುದಿಲ್ಲ. 
 • ಇಷ್ಟೇ ಅಲ್ಲದೆ  ಹಟ್ಟಿಯಲ್ಲಿ ಸ್ವಲ್ಪ ಕಾಲು ಜಾರಿದರೂ ಸಹ ಕಾಲು ಮುರಿಯುತ್ತದೆ.
 • ಮೈ ಮೇಲೆ ತುರಿಕೆ ಕಜ್ಜಿ ಇತ್ಯಾದಿ ಮಾಮೂಲು.
 • ಇದೆಲ್ಲಾ ಆಗಲು ಕಾರಣ ಇಷ್ಟೇ ಅವುಗಳಿಗೆ ನಿಮ್ಮ ಹಟ್ಟಿ ಒಂದು ಹೈ ಟೆಕ್  ಬಂಧೀಸ್ಥಾನ.
ಹಸುಗಳು ಮೆಂದು ತಿಂದರೆ ಅವುಗಳ ಆರೋಗ್ಯ ಉತ್ತಮ
ಹಸುಗಳು ಮೆಂದು ತಿಂದರೆ ಅವುಗಳ ಆರೋಗ್ಯ ಉತ್ತಮ

 ಹಸುಗಳು ಮತ್ತು ಬೆಳೆಕು:

 • ನಮ್ಮಲ್ಲಿ ಹಿಂದೆ ಹಸು ಸಾಕಾಣೆ ಮಾಡುವವರು ಹಸುಗಳನ್ನು ರಾತ್ರೆ ಹೊತ್ತು ಮಾತ್ರ ಕಟ್ಟಿ ಸಾಕುತ್ತಿದ್ದರು.
 • ಹಗಲು ಹೊತ್ತು  ಮೇಯಲು ಬಿಡಲಾಗುತ್ತಿತ್ತು.
 • ಮೇಯುವ ಸ್ಥಳಗಳೂ ಇದ್ದವು. ಮೇಯಿಸಲು ಜನರೂ ಇದ್ದರು.
 • ಈಗ ಇದು ತಿರುವು ಮುರುವಾಗಿದೆ.
 • ಹಸು ಸಾಕಬೇಕಾದರೆ ಅವರ ಹೊಲದಲ್ಲೇ ಬಿಟ್ಟು ಸಾಕಬೇಕು.
 • ಹೊಲದಲ್ಲಿ ಕೃಷಿಯನ್ನೂ ಮಾಡಬೇಕು.
 • ದನವನ್ನೂ ಮೇಯಿಸಬೇಕು. 
 • ಈ ಪರಿಸ್ಥಿತಿಯಲ್ಲಿ ರೈತರು ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಸಾಕಿ, ಕೃಷಿ ಮಾಡುತ್ತಾರೆ.

ಹಸು ಸಾಕಬೇಕೆಂಬ ಆಸೆ:

ಹಸುಗಳನ್ನು ಕಟ್ಟಿ ಸಾಕುವುದು ಸೂಕ್ತವಲ್ಲ
ಹಸುಗಳನ್ನು ಕಟ್ಟಿ ಸಾಕುವುದು ಸೂಕ್ತವಲ್ಲ
 • ಇಂದು ಒಂದಷ್ಟು ಜನರಿಗೆ ನಾವೇ ಹಸು ಕಟ್ಟಿ ಅದರ ಹಾಲು ಕರೆದು ನಮ್ಮ ಮನೆಯ  ಕೈತೋಟಕ್ಕೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ತಾವೇ ಮಾಡಿಕೊಳ್ಳಬೇಕು ಎಂಬ  ಉತ್ಸಾಹ.
 • ಅದರ ಜೊತೆಗೆ ಕೆಲವರಿಗೆ ಒಂದಷ್ಟು  ಹಸು ಸಾಕಿ ಅದರ ಹಾಲು ಮಾರಾಟ ಮಾಡಿ ಅದರಿಂದ ದೈನಂದಿನ ಖರ್ಚಿಗೆ  ಬೇಕಾಗುವ ಒಂದಷ್ಟು ಚಲಾವಣೆಯ ಹಣವನ್ನು ಸಂಪಾದಿಸುವ ಆಸೆ. 
 • ಕೆಲವರಿಗೆ ದೇಸೀ ಹಸುಗಳಾದ ಗೀರ್ . ಮಲೆನಾಡು ಗಿಡ್ಡ ಮುಂತಾದ ಹಸುಗಳನ್ನು ಸಾಕಿ ಸ್ವಚ್ಚ ಹಾಲು ಪಡೆಯುವ ಆಸೆ.
 • ಹೀಗೆಲ್ಲಾ ಹಸು ಸಾಕುವವರಿಗೆ  ಹೊಲ  ಇರಲೂ ಬಹುದು.
 • ಇಲ್ಲದೆಯೂ ಇರಬಹುದು. ಕೆಲವರು  ಹೊಲ ಇದ್ದರೂ ಅವುಗಳನ್ನು ಮೇಯಲು ಬಿಡುವ ಕಷ್ಟ ಬೇಡ ಎಂದು ಕಟ್ಟಿಯೇ ಸಾಕುತ್ತಾರೆ.
 • ಹಸುಗಳಿಗೆ ಮೇಯಲು ಈಗ ಸ್ಥಳ ಇಲ್ಲ.
 • ಇರುವ ಸ್ಥಳಗಳು ರಸ್ತೆ ಬದಿಗಳು ಮಾತ್ರ. ಇಲ್ಲಿ ಬಿಟ್ಟರೆ ಕದ್ದು ಹೋದರೂ ಹೋಗಬಹುದು. ಈ ಪರಿಸ್ಥಿತಿ ಇದೆ.

ಕಟ್ಟಿ ಸಾಕುವುದರಿಂದ ಆಗುವ ತೊಂದರೆ:

ಗಾಳಿ ಬೆಳೆಕು ಅಡುವ ಜಾಗದಲ್ಲಿ ಕಟ್ಟಿ ಸಾಕುವುದನ್ನಾದರೂ ಮಾಡಬೇಕು
ಗಾಳಿ ಬೆಳೆಕು ಅಡುವ ಜಾಗದಲ್ಲಿ ಕಟ್ಟಿ ಸಾಕುವುದನ್ನಾದರೂ ಮಾಡಬೇಕು
 • ಹಸುಗಳನ್ನು ಕಟ್ಟಿ ಸಾಕಿದರೆ ಆವು  ಗರ್ಭ ಧರಿಸಿದೇ ಇರುವುದು ಸಾಮಾನ್ಯ ಸಮಸ್ಯೆ.
 • ಕಟ್ಟಿ ಹಾಕಿದಾಗ ಅಲ್ಲಿ ಅವುಗಳ ಮೇಲಿನ ಪ್ರೀತಿಯಿಂದ  ಅವು ಕೂಗುವಾಗೆಲ್ಲಾ ಹುಲ್ಲು, ತಿನಿಸು ಕೊಟ್ಟೇ ಕೊಡುತ್ತಾರೆ. 
 • ಅವು  ಕಟ್ಟಿದಲ್ಲಿಯೇ ಆಹಾರ ಸೇವನೆ ಮಾಡುತ್ತವೆ ಅಲ್ಲೇ ಸಗಣಿಯನ್ನೂ ಹಾಕುತ್ತವೆ.
 • ನಮಗೆ ಸಗಣಿ ಹೆಕ್ಕುವುದೂ ಸುಲಭವಾಗುತ್ತದೆ. ಸಗಣಿಗಾಗಿಯೇ ಹಸು ಸಾಕುವವರಿಗೆ ಸಗಣಿಯ ಗರಿಷ್ಟ ಲಾಭವೂ ಆಗುತ್ತದೆ.
 • ಹಾಲೂಡದಿದ್ದರೂ  ದನಗಳಿಗೆ  ಹಿಂಡಿ ಹುಲ್ಲು ಹಾಕುತ್ತೇವೆ. 
 • ಇವೆಲ್ಲಾ ಅಜೀರ್ಣವಾಗುತ್ತದೆ.  ಅವುಗಳ ಶಕ್ತಿ ವ್ಯಯವಾಗದೆ ಇರುವ ಕಾರಣ  ಅದು ಕೊಬ್ಬಾಗಿ ಇಡೀ ಶರೀರದ ಅಂಗಾಂಗಗಳಲ್ಲಿ  ಶೇಖರವಾಗುತ್ತದೆ.  
 • ಗರ್ಭ ಕೋಶ, ಅಂಡಾಶಯ ಗಳಲ್ಲೂ ಕೊಬ್ಬು,  ಹೊಟ್ಟೆಯಲ್ಲೂ  ಕೊಬ್ಬಿನ ಅಂಶ  ಸೇರಿಕೊಂಡು  ಅವು ಬಂಜೆಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತರೆ ಪಶು ವೈದ್ಯರು.  
 • ಯಾವುದೇ ಪ್ರಾಣಿಯಾದರೂ ತಾವು ತಿಂದ ಆಹಾರ  ಚೆನ್ನಾಗಿ ಜೀರ್ಣವಾಗಲು ಅಥವಾ ಅದು ಖರ್ಚು ಆಗಲು  ಕೈ ಕಾಲು ಆಡಬೇಕು.
 • ದೇಹಕ್ಕೆ ಶಕ್ತಿ ಬರಲು ಮೈಗೆ ಸೂರ್ಯನ ಬೆಳಕು ಬೀಳಬೇಕು.
 • ಮೂಲತಹ ಇವೆಲ್ಲಾ ಮೆಂದು ಬದುಕುವ ಜೀವಿಗಳಾಗಿದ್ದು, ಅವುಗಳ ದಿನಚರಿಗೇ ಕುತ್ತು ಬಂದರೆ ಅವುಗಳ ಉತ್ಪಾದನಾ ಸಾಮರ್ಥ್ಯವೂ ಕ್ಷೀಣಿಸುತ್ತಾ ಬರುತ್ತದೆ.
 • ಇವಿಷ್ಟೇ ಅಲ್ಲದೆ ಕಟ್ಟಿ ಹಾಕಿದಲ್ಲೇ ಮಲ ಮೂತ್ರ ವಿಸರ್ಜಿಸಿ ಅದರ ಅಮೋನಿಯಾ ಅನಿಲವನ್ನು ಅವು ಸೇವಿಸಿ ಅನಾರೋಗ್ಯ ಉಂಟಾಗುವುದು ಸಾಮಾನ್ಯ.
ಸ್ವಚ್ಚಂದ ಪರಿಸರದಲ್ಲಿ ಮೇಯುವ ಹಸು
ಸ್ವಚ್ಚಂದ ಪರಿಸರದಲ್ಲಿ ಮೇಯುವ ಹಸು

ಮೆಂದು ತಿಂದ ಹಸುಗಳ ಹಾಲು ಶ್ರೇಷ್ಟ:

 • ಹಸುವಿನ ಹಾಲಿನಲ್ಲಿ ಇರಬೇಕಾದ ಎಲ್ಲಾ ಅಂಶಗಳೂ  ಇರುವುದು ಮೆಂದು ತಿಂದ ಹಸುಗಳ ಹಾಲಿನಲ್ಲಿ ಮಾತ್ರ.
 • ತಳಿ ಗುಣದಲ್ಲಿ  ಹಾಲಿನ ಶ್ರೇಷ್ಟತೆ ಬರುವುದೂ ಸಹ  ಹೀಗೆಯೇ.
 • ಅವು ಬಂಧಿಯಾಗಿದ್ದರೆ ಅವುಗಳ ದೇಹದಲ್ಲಿ ಬಿಡುಗಡೆಯಾಗಬೇಕಾದ ಹಾರ್ಮೋನುಗಳು ಸರಿಯಾಗಿ ಬಿಡುಗಡೆ ಆಗಲಾರದು.
 • ತಳಿ ಗುಣದಲ್ಲಿ ಹಾಲಿಗೆ ಉತ್ಕೃಷ್ಟತೆ ಬರಬೇಕಾದರೆ ಹಾರ್ಮೋನುಗಳ ಉತ್ಪಾದನೆ ಆಗಲೇ ಬೇಕು.
 • ದೇಹಕ್ಕೆ ಬಿಸಿಲು ಬಿದ್ದರೆ ಮಾತ್ರ ನೈಸರ್ಗಿಕವಾಗಿ ಅವುಗಳ ದೇಹದ ಚಟುವಳಿಕೆ ಚಾಲನೆಗೊಳ್ಳುತ್ತದೆ.
 • ಇಲ್ಲವಾದರೆ ಅದು ಸುಪ್ತವಾಗಿರುತ್ತದೆ. ನಾವು ಕೊಡುವ ಕೃತಕ ಆಹಾರಗಳು ಹೇಗಿರುತ್ತದೆಯೋ ಅದರ ಮೇಲೆ  ಹಾಲಿನ ಗುಣ ಇರುತ್ತದೆ.
 • ಈ ಹಾಲು ಹಸು ನಾಟಿ ಇರಲಿ. ಎಚ್ ಎಫ್ ಇರಲಿ, ಜರ್ಸಿ ಇರಲಿ ಹಾಲು ಒಂದೇ ಆಗಿರುತ್ತದೆ.
 • ಬರೇ ಹೆಣ್ಣು ಹಸುಗಳು  ಮಾತ್ರ ಹೀಗೆ ಎಂದೆಣಿಸದಿರಿ. ಗಂಡು ಕರುಗಳೂ ಸಹ ತಮ್ಮ ಕರ್ತವ್ಯವನ್ನು  ಮರೆಯುತ್ತವೆ.
 • ನಮ್ಮಲ್ಲಿ ಒಂದು ನಾಯಿ ಸಾಕಿದ್ದೆವು. ಸುಮಾರು 16 ವರ್ಷ ಬದುಕಿತ್ತು.
 • ತನ್ನ ಜೀವಮಾನ ಪರ್ಯಂತ ಅದಕ್ಕೆ ಹೆಣ್ಣು ನಾಯಿ ಯಾವುದು ಎಂದು ತಿಳಿಯದೇ ಅದು ಸತ್ತೇ ಹೋಯಿತು.
 • ಕಾರಣ ಆ  ನಾಯಿಯನ್ನು ನಾವು ಕಟ್ಟಿ ಸಾಕಿದ್ದೆವು.
 • ರಾತ್ರೆ ಮಾತ್ರ ಬಿಟ್ಟು ಅವುಗಳು ನಾಯಿ ಪ್ರಪಂಚದ ಯಾವ ವಿಷಯವನ್ನೂ ಅರಿಯದೇ ಉಳಿಯಿತು.
 • ಹೀಗೆ ನಮ್ಮ ಹಸು ಸಾಕಾಣಿಕೆಯೂ ಆಗುತ್ತಿದೆ.

ಹಾಲಿನಲ್ಲಿ ಏನೆಲ್ಲಾ ಸತ್ವಾಂಶಗಳು ಇರಬೇಕು, ಅದೆಲ್ಲಾ ಹಸುವಿನ ಶರೀರದಲ್ಲಿ ಉತ್ಪಾದನೆಯಾಗಬೇಕಿದ್ದರೆ ಅದರ ಶರೀರಕ್ಕೆ ಬಿಸಿಲು ತಾಗಬೇಕು. ಬಿಸಿಲು ತಾಗದ ಹಸುಗಳ ಶರೀರದಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಸಹಜವಾಗಿ ಉತ್ಪಾದನೆಯಾಗುವುದಿಲ್ಲ. ನಾವು ಆಹಾರದ ಜೊತೆಗೆ ಕೊಡುವ ಖನೀಜ ಮಿಶ್ರಣದ ಉಳಿಕೆಗಳು ಮಾತ್ರ ಹಾಲಿನಲ್ಲಿ ಸೇರಿರುತ್ತವೆ. ನೈಸರ್ಗಿಕವಾಗಿ ಅವು ಉತ್ಪಾದನೆಯಾಗಬೇಕಿದ್ದರೆ ಹಸು , ಎಮ್ಮೆಗಳನ್ನು ಒಂದು ಹೊತ್ತು ಆದರೂ ಬಿಸಿಲಿಗೆ ಮೈಯೊಡ್ಡಲು ಹೊರಗೆ ಬಿಡಬೇಕು. ಇದು ಬರೇ ಸ್ಥಳೀಯ ತಳಿಗೆ ಮಾತ್ರವಲ್ಲ. ಎಲ್ಲಾ ತಳಿಯ ಹಸುಗಳಿಗೂ ಅಗತ್ಯ.

ಹಸು ಸಾಕುವವರು ಸ್ವಲ್ಪ ಜಾಗ ಖಾಲಿ ಬಿಡಿ:

 • ಹಸು ಸಾಕಿ ಹಾಲು ಉತ್ಪಾದನೆ ಮಾಡುವವರು ತಮ್ಮ ಹೊಲದಲೇ  ಹಸುಗಳನ್ನು ದಿನಕ್ಕೆ ಕನಿಶ್ಟ 1  ಗಂಟೆ ಕಾಲಾವಧಿಯ ತನಕವಾದರೂ ಕೈ ಕಾಲು ಆಡಿಸಲು ಅನುಕೂಲವಾಗುವಂತೆ  10 ಸೆಂಟ್ಸ್ ಆದರೂ ಜಾಗ ಖಾಲಿ ಬಿಡಿ.
 • ಹಟ್ಟಿಯ ಪಕ್ಕದಲೇ  ಈ ಸ್ಥಳವನ್ನು ಬಿಟ್ಟು ಅಲ್ಲೇ ಅವುಗಳಿಗೆ ಆಹಾರ ಕೊಡಿ.
 • ಹೊರ ಪರಿಸರದಲ್ಲಿ ಅವು ಆಹಾರ ತಿನ್ನುವುದರಿಂದ  ಅವುಗಳ ಹೇಹದಲ್ಲಿ ಹಾರ್ಮೋನುಗಳ ಉತ್ಪಾದನೆ ಚೆನ್ನಾಗಿ ಆಗುತ್ತದೆ.
 • ಅವುಗಳ ದೇಹಾರೋಗ್ಯ ಸುಧಾರಿಸುತ್ತದೆ.
 • ದೈಹಿಕ ಕಾರ್ಯ ಚಟುವಟಿಕೆ  ಚೆನ್ನಾಗಿ ಆಗುತ್ತದೆ. ಮೈ ಮೇಲೆ ಗುಳ್ಳೆ ಬರುವುದು, ತುರಿಕೆ, ಅಲರ್ಜಿ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ.

ಹಸು, ಎಮ್ಮೆ ಮುಂತಾದ ಪ್ರಾಣಿಗಳನ್ನು  ಸಾಕುವಾಗ ಎಲ್ಲದಕ್ಕಿಂತಲೂ ಮುಖ್ಯವಾಗಿ ನಾವು ಮೂಕ ಪ್ರಾಣಿಗಳನ್ನು ಬಂಧಿಸಿದ ಪಾಪದಿಂದ ಮುಕ್ತರಾಗುತ್ತೇವೆ. ಇದರಿಂದ ಹೈನುಗಾರಿಕೆಯಲ್ಲಿ ಖರ್ಚು ಕಡಿಮೆಯಾಗಿ  ಲಾಭ ಸ್ವಲ್ಪ ಹೆಚ್ಚಾಗುತ್ತದೆ.ಹಸುಗಳನ್ನು ಕಟ್ಟಿ ಸಾಕಿದರೆ ಮುಂದೆ ಅವು ಗರ್ಭ ಧರಿಸದೆ, ಹಾರ್ಮೋನು ಚಿಕಿತ್ಸೆಯ ಮೂಲಕ ಹಾಲು ಕೊಡುವ ಜೀವಿಗಳಾದರೂ ಅಚ್ಚರಿ ಇಲ್ಲ.

Leave a Reply

Your email address will not be published. Required fields are marked *

error: Content is protected !!