ಸೀಬೆ (ಪೇರಳೆ) ಹಣ್ಣು ಹಂಪಲು ಬೆಳೆಗಳಲ್ಲಿ ಲಾಭದಾಯಕ ಹಣ್ಣಿನ ಬೆಳೆಯಾಗಿದೆ. ಇದು ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ಹಣ್ಣಿನ ಬೆಳೆ. ಕೆಲವು ಪ್ರದೇಶಗಳಲ್ಲಿ ಸೀಬೆ ಸಸ್ಯ ಏನೇ ಮಾಡಿದರೂ ಏಳಿಗೆ ಆಗುವುದಿಲ್ಲ. ಸಸ್ಯದ ಎಲೆಗಳು ತಿಳಿ ಹಳದಿ ಬಣ್ಣ ಮತ್ತು ತಾಮ್ರದ ಬಣ್ಣದ ಮೂಲಕ ತನ್ನ ಅನಾರೋಗ್ಯವನ್ನು ತೋರಿಸುತ್ತದೆ. ಸೀಬೆ ಸಸ್ಯದ ಎಲೆಗಳು ಹೀಗೆ ಆದರೆ ಅವು ಒಂದು ರೀತಿಯ ಪರಾವಲಂಭಿ ಜಂತು ಹುಳದ ಬಾಧೆ ಎನ್ನಬಹುದು. ಇದನ್ನು ಕರಾರುವಕ್ಕಾಗಿ ತಿಳಿಯಲು ಒಂದು ಬೇರನ್ನು ಅಗೆದು ನೋಡಿ.
ನಮ್ಮ ರಾಜ್ಯದಲ್ಲಿ ಮಣ್ಣು ಜನ್ಯ ಜಂತು ಹುಳದ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ವಿಜ್ಞಾನಿಗಳು ಪತ್ತೆಮಾಡಿದ್ದಾರೆ. ಹಣ್ಣು ಹಂಪಲು, ತರಕಾರಿ, ವಾಣಿಜ್ಯ ಬೆಳೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಕಣ್ಣಿಗೆ ಕಾಣದ ಒಂದು ಜೀವ ಹಿಂಡುವ ಜಂತು ಹುಳು ಬೇರನ್ನು ಹಾನಿ ಮಾಡಿ ಸಸ್ಯಗಳ ಬೆಳವಣಿಗೆಯನ್ನು ಹತ್ತಿಕ್ಕುತ್ತವೆ. ಮನುಷ್ಯರಿಗೆ ಜಂತು ಹುಳದ ಕಾಟ ಇದ್ದರೆ ಏನಾಗುತ್ತದೆಯೋ ಹಾಗೆಯೇ ಸಸ್ಯಗಳಿಗೂ ಜಂತು ಹುಳ ಬಾಧೆ ಪ್ರಾರಂಭವಾದರೆ ಬೆಳವಣಿಗೆ ಆಗುವುದೇ ಇಲ್ಲ. ಅತ್ತ ಗಿಡ ಸಾಯುವುದೂ ಇಲ್ಲ. ಚೆನ್ನಾಗಿ ಬದುಕಿ ಫಲಕೊಡುವುದೂ ಇಲ್ಲ. ಈ ಜಂತು ಹುಳ ಏನು? ಇದರಿಂದ ತೊಂದರೆ ಏನು, ಪತ್ತೆ ಹೇಗೆ ಎಂಬುದರ ಪೂರ್ಣ ಚಿತ್ರಣ ಇಲ್ಲಿದೆ.
- ಸಸ್ಯಗಳ ಬೆಳೆವಣಿಗೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪೀಡೆಗಳಲ್ಲಿ ನಮಟೋಡುಗಳು ಅಥವಾ ಜಂತು ಹುಳಗಳು.
- ಎಷ್ಟೇ ಆಹಾರ ಕೊಟ್ಟರೂ ಸಹ ಜಂತು ಹುಳಗಳ ಬಾಧೆಯಿಂದಾಗಿ ಅದು ತನಗಲ್ಲ ಎಂಬ ಸ್ಥಿತಿ ಉಂಟಾಗುತ್ತದೆ.
- ಮನುಷ್ಯ , ಸಾಕು ಪ್ರಾಣಿಗಳಿಗೆ ಹೊಟ್ಟೆ ಹುಳ ಅಥವಾ ಜಂತು ಹುಳ ಎಂಬ ಪರೋಪ ಜೀವಿ ತೊಂದರೆ ಮಾಡಿದಂತೆ ಸಸ್ಯಗಳಿಗೂ ಜಂತು ಹುಳಗಳು ತೊಂದರೆ ಮಾಡುತ್ತವೆ.
- ಇದು ಬೇಗ ಗಮನಕ್ಕೆ ಬರುವುದೇ ಇಲ್ಲ.
- ಬಹಳ ಹಾನಿ ಆದ ತರುವಾಯ ಈ ಬಗ್ಗೆ ಸಂಶಯ ಬರುತ್ತದೆ.
ನಮಟೋಡು ಏನು:
- ನಮಟೊಡುಗಳು ಎಂದರೆ ಅದು ಒಂದು ಪರಾವಲಂಭಿ ಜೀವಿ( plant parasite nematode) ಎಂದೇ ಹೇಳಬಹುದು.
- ಇವು ಬಹು ಕೋಶೀಯ ಜೀವಿಗಳು. ಇವು ಕೀಟಗಳಲ್ಲ ಹುಳುಗಳು.
- ಭೂಮಿಯ ಮೇಲಿನ ಅತೀ ಪುರಾತನ ಜೀವಿಗಳಲ್ಲಿ ಒಂದು.
- ಇದು ಅನ್ಯ ಶರೀರದಲ್ಲಿ ಬೆಳೆದು ಬದುಕುವವುಗಳು.
- ಸಾಮಾನ್ಯವಾಗಿ ರೈತರು ಬೆಳೆಯುವ ಬಹುತೇಕ ಬೆಳೆಗಳಿಗೆ ಇದು ಬೇರಿಗೆ ಹಾನಿ ಮಾಡುತ್ತದೆ.
- ಬೇರಿನ ಮೇಲ್ಮೈಯಲ್ಲಿ, ಒಳ ಭಾಗದಲ್ಲಿ ಸೇರಿಕೊಂಡು ಸಸ್ಯಕ್ಕೆ ಸರಬರಾಜು ಆಗುವ ಆಹಾರವನ್ನು ತಾನು ಕಬಳಿಸಿ ಬಳಸಿಕೊಳ್ಳುತ್ತದೆ.
- ಆಶ್ರಯದಾತ ಸಸ್ಯ ಬೇರಿಗೆ ಹಾನಿಯಾಗಿ (ಆಹಾರ ಕೊರತೆ ಉಂಟಾಗಿ ಸತ್ತು ಬದುಕಿದಂತೆ ನಿತ್ರಾಣವಾಗುತ್ತಾ ಬರುತ್ತದೆ.
- ನಮಟೋಡುಗಳು ಸಸ್ಯದ ಬೇರು ಅಲ್ಲದೆ, ಕಾಂಡ,ಎಲೆ ಹೂವುಗಳಿಗೂ ಬಾಧಿಸುತ್ತದೆ.
ಸೀಬೆ ಗಿಡದ ಹಾನಿಯ ಪತ್ತೆ:
- ನಿಮ್ಮ ಸೀಬೆ ಗಿಡಗಳಲ್ಲಿ ಎಲೆಗಳು ಕಡಿಮೆಯಾಗಿದೆಯೇ?
- ಬೇಸಿಗೆಯಲ್ಲಿ ಒಣಗುತ್ತದೆಯೇ, ಉದುರುತ್ತದೆಯೇ ?
- ಎಲೆಗಳ ಬಣ್ಣ ಸ್ವಲ್ಪ ಕೆಂಪಗಾಗಿದೆಯೇ , ತುಂಬಾ ಸೊರಗಿದಂತೆ ಇದೆಯೇ ?
- ಕಾಯಿಗಳು ಸಣ್ಣದಾಗಿ ಅಥವಾ ತುಂಬಾ ಕಡಿಮೆ ಪ್ರಮಾಣದಲ್ಲಿ ಕಾಯಿ ಬಿಡುತ್ತದೆಯೇ?
- ಹಾಗಿದ್ದರೆ ಅದಕ್ಕೆ ಜಂತು ಹುಳ ಬಾಧಿಸಿರುವ ಸಾಧ್ಯತೆ ಇದೆ.
ಇಂತಹ ಚಿನ್ಹೆಗಳಿದ್ದರೆ ಸಸ್ಯದ ಬುಡಭಾಗವನ್ನು ಸ್ವಲ್ಪ ಕೆರೆದು ಬೇರನ್ನು ಒಮ್ಮೆ ಪರೀಕ್ಷಿಸಿರಿ. ಆರೋಗ್ಯವಂತ ಸಸ್ಯದಲ್ಲಿ ದಪ್ಪ ಬೇರಿನಲ್ಲಿ ಕವಲು ಬೇರುಗಳಿರಬೇಕು.( ಚಿತ್ರದಲ್ಲಿ ತೋರಿಸಿದಂತೆ) ಮುಖ್ಯ ಬೇರುಗಳು ಮತ್ತು ಕವಲು ಬೇರುಗಳ ಬಣ್ಣ ಬಿಳಿ ಅಥವಾ ಕೆನೆ ಬಣ್ಣದಲ್ಲಿರಬೇಕು. ಬೇರಿನ ಮೇಲ್ಮೈಯಲ್ಲಿ ಯಾವುದೇ ಗಾಯಗಳಿರಬಾರದು.
- ಒಂದು ವೇಳೆ ನೀವು ಅಗೆದು ನೋಡಿದ ಬೇರಿನಲ್ಲಿ, ಅದರ ತೊಗಟೆ ಭಾಗಕ್ಕೆ ಗಾಯವಾಗಿದ್ದರೆ ,
- ಅಲ್ಲಲ್ಲಿ ಉಬ್ಬಿದ ಗಂಟು ರಚನೆ ಇದ್ದರೆ, ಕವಲು ಬೇರುಗಳೇ ಇಲ್ಲದಿದ್ದರೆ,
- ಕವಲು ಬೇರುಗಳು ಕಪ್ಪಗಾಗಿದ್ದರೆ, ಬೇರಿನಲ್ಲಿ ಅಲ್ಲಲ್ಲಿ ಗಂಟು ಗಂಟು ರಚನೆ ಇದ್ದರೆ.
- ಅದು ಅದಕ್ಕೆ ಜಂತು ಹುಳ ಬಾಧಿಸಿದೆ ಎಂಬುದು ಖಾತ್ರಿ.
- ಮೇಲೆ ತಿಳಿಸಲಾದ ಚಿನ್ಹೆಗಳಿರುವ ಸಸಿಯನ್ನು ಆಯ್ಕೆ ಮಾಡಿ ಬೇರನ್ನು ತೆಗೆದು ಪರೀಕ್ಷಿಸಬೇಕು.
ನಿಯಂತ್ರಣ:
- ನಮಟೋಡು ಅಥವಾ ಜಂತು ಹುಳದ ನಿಯಂತ್ರಣ ಅಷ್ಟು ಸುಲಭದ ಸಂಗತಿ ಅಲ್ಲ.
- ಈ ಜಂತು ಹುಳಗಳು ಇಂದು ಒಂದು ಗಿಡಕ್ಕೆ, ಕ್ರಮೇಣ ಇತರ ಗಿಡ ಮರಗಳಿಗೂ ಬಾಧಿಸುತ್ತದೆ. ಇದು
- ಮಣ್ಣಿನಲ್ಲಿ ಸ್ವಲ್ಪವಾದರೂ ಉಳಿದುಕೊಂಡು ಮತ್ತೆ ತೊಂದರೆ ಮಾಡುತ್ತದೆ.
ಪ್ರಪಂಚದಾದ್ಯಂತ ಸಸ್ಯ ವಿಜ್ಞಾನಿಗಳಿಗೆ ಈ ಜಂತು ಹುಳು ಒಂದು ಸವಾಲಾಗಿ ಪರಿಣಮಿಸಿದೆ. ಇದರಿಂದ ಜಾಗತಿಕವಾಗಿ ಸುಮಾರು 60 ಮಿಲಿಯನ್ ಡಾಲರ್ ಗಳಷ್ಟು ಮೊತ್ತದ ಬೆಳೆ ಹಾನಿ ಉಂಟಾಗುತ್ತದೆ ಎಂಬ ಅಂದಾಜು ಇದೆ.
- ಸದ್ಯಕ್ಕೆ ಜಂತು ಹುಳ ನಿವಾರಣೆಗೆ ಇರುವ ರಾಸಾಯನಿಕ ಉಪಚಾರಗಳಲ್ಲಿ Nimitez ಎಂಬ ಕೀಟನಾಶಕ ಮತ್ತು Vilium Prime ಎಂಬ ಕೀಟನಾಶಕಗಳು.
- Nimitez ಅನ್ನು 40 ಗ್ರಾಂ 10 ಲೀ. ನೀರಿನಲ್ಲಿ ಬೆರೆಸಿ ಒಂದು ಗಿಡದ ಬುಡಕ್ಕೆ 5 ಲೀ. ಪ್ರಮಾಣದಲ್ಲಿ 3 ತಿಂಗಳಿಗೆ ಒಮ್ಮೆಯಂತೆ ಡ್ರೆಂಚಿಂಗ್ ಮಾಡಿದರೆ ಎರಡು ಮೂರು ಸಲ ಮಾಡಿದಾಗ ಸ್ವಲ್ಪ ಕಡಿಮೆಯಾಗುತ್ತದೆ.
- ಆದಾಗ್ಯೂ ನಂತರವೂ ವರ್ಷಕ್ಕೊಮ್ಮೆ ಇದನ್ನು ಮಾಡಬೇಕು.
- ನಮಟೋಡು ಬಾಧೆ ಇರುವಲ್ಲಿ ಸೀಬೆ ಬೆಳೆ ಬೆಳೆಯುವುದು ತುಂಬಾ ಕಷ್ಟ ಮತ್ತು ದುಬಾರಿಯಾಗುತ್ತದೆ.
- ಜೈವಿಕವಾಗಿ ಪೆಸಿಲೋಮೈಸಿಸ್ Passilomysis lilacinus) ಎಂಬ ಶಿಲೀಂದ್ರವು ಜಂತು ಹುಳ ನಾಶಕವಾಗಿ ಕೆಲಸ ಮಾಡುತ್ತದೆ.
- ಇದನ್ನು ಬಳಸಿ ನಿಯಂತ್ರಣ ಮಾಡಬಹುದು. ಆದರೆ ತೀವ್ರವಾದಾಗ ಕೆಲವೊಮ್ಮೆ ಫಲಿತಾಂಶ ನೀಡುವುದಿಲ್ಲ,
ಇದು ನಿಧಾನವಾಗಿ ಗಿಡವನ್ನು ಕೊಲ್ಲುವ ಜೀವಿಯಾಗಿದ್ದು, ಕಣ್ಣಿಗೆ ಕಾಣಿಸದೆ, ಬಾಧೆ ಪ್ರಾರಂಭವಾದಾಗ ಗೊತ್ತಾಗದೆ ಇರುವಂತದ್ದು. ತೀವ್ರ ಆದಾಗ ಮಾತ್ರ ಗೊತ್ತಾಗುವ ಕಾರಣ ಇದಕ್ಕೆ ಮುನ್ನೆಚ್ಚರಿಕೆಯೇ ಪ್ರಧಾನ.