ಸೀಬೆ ಬೆಳೆಯಲ್ಲಿ ಅಧಿಕ ಇಳುವರಿಗೆ ಪ್ರೂನಿಂಗ್ ಮಾಡಿ.

pruned plant and yield

ಹಣ್ಣಿನ ಸಸ್ಯಗಳಿಗೆ  ಟೊಂಗೆ ಪ್ರೂನಿಂಗ್  ಮಾಡುವುದರಿಂದ ಇಳುವರಿ ಹೆಚ್ಚಳವಾಗುತ್ತದೆ. ದ್ರಾಕ್ಷಿ , ದಾಳಿಂಬೆ, ಅಂಜೂರ ಮುಂತಾದ ಬೆಳೆಗಳನ್ನು ಬೆಳೆಸುವ ರೈತರು ಇದನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಈಗ ಮಾವು, ಗೇರು, ಸೀತಾಫಲ, ಸೀಬೆ ಮುಂತಾದ ಬೆಳೆಗಳನ್ನು ಬೆಳೆಸುವವರೂ ಪ್ರೂನಿಂಗ್ ಮಾಡಿ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.

Guava yileld

ಯಾಕೆ ಸೀಬೆಗೆ ಪ್ರೂನಿಂಗ್:

 • ಫಲ ಬಿಡುವ ಹಣ್ಣು ಹಂಪಲಿನ ಸಸ್ಯಗಳನ್ನು  ಅದರಷ್ಟಕ್ಕೇ  ಬೆಳೆಯಲು ಬಿಟ್ಟರೆ ಅದರಲ್ಲಿ ಸಸ್ಯ ಬೆಳವಣಿಗೆಯೇ ಹೆಚ್ಚಳವಾಗುತ್ತದೆ.
 • ಸಸ್ಯ ಬೆಳವಣಿಗೆಯನ್ನು ಟೊಂಗೆ ಸವರುವ ಮೂಲಕ ನಿಯಂತ್ರಿಸಿದಾಗ ಸಸ್ಯ ಬೆಳವಣಿಗೆಗೆ ಒಮ್ಮೆ ತಡೆ ಉಂಟಾಗಿ ಅಲ್ಲಿ ಹೂ ಮೊಗ್ಗುಗಳು ಅಧಿಕವಾಗಿ ಬಂದು ಇಳುವರಿ ಹೆಚ್ಚಳವಾಗುತ್ತದೆ.
 • ಬೆಂಗಳೂರಿನ ಯಲಹಂಕದ ಪ್ರಗತಿಪರ ಕೃಷಿಕ ಎನ್ ಸಿ ಪಟೇಲರು ಸೀಬೆ ಸಸ್ಯದಲ್ಲಿ ಪ್ರೂನಿಂಗ್ ತಾಂತ್ರಿಕತೆಯನ್ನು ಅಳವಡಿಸಿಕೊಂಡು 5 ವರ್ಷದ ಸೀಬೆ ಸಸ್ಯದಲ್ಲಿ ಗಮನಾರ್ಹವಾದ ಇಳುವರಿಯನ್ನು ಪಡೆದಿದ್ದಾರೆ.

ಎನ್ ಸಿ ಪಟೇಲರು ಮಾವು, ದ್ರಾಕ್ಷಿ, ನೇರಳೆ, ದಾಳಿಂಬೆ ಮುಂತಾದ ಹಣ್ಣಿನೆ ಬೆಳೆ ಬೆಳೆಸುವ ಪ್ರಗತಿಪರ ರೈತರು. ಸಂಶೋಧನಾ ಸಂಸ್ಥೆಗಳ ತಂತ್ರಜ್ಞಾನ ಮತ್ತು ತಮ್ಮ ಯೋಚನೆಗಳನ್ನೂ ಸೇರಿಸಿ ಅಳವಡಿಸಿಕೊಳ್ಳುವವರು.  ಇವರು ಸುಮಾರು 1 ಎಕ್ರೆಯಷ್ಟು  ಪ್ರದೇಶದಲ್ಲಿ  ಸೀಬೆ ಸಸಿ ನೆಟ್ಟಿದ್ದಾರೆ. ಸಸಿಯಿಂದ ಸಸಿಗೆ 6 ಅಡಿ ಅಂತರ,  ಸಾಲಿನಿಂದ ಸಾಲಿಗೆ 10 ಅಡಿ ಅಂತರ ಇಟ್ಟು ಎಕ್ರೆಗೆ 700 ಗಿಡ ಹಿಡಿಸಿದ್ದಾರೆ. ಅಲಹಾಬಾದ್ ಸಪೇದ್  ತಳಿಯ ಈ ಪೇರಳೆ  ತೋಟವನ್ನು ಸಾಂಪ್ರದಾಯಿಕ ವಿಧಾನಕ್ಕಿಂತ ಭಿನ್ನವಾಗಿ ಹೊಸ ವಿಧಾನದಲ್ಲಿ ಬೆಳೆಸಬೇಕು ಎಂದು ಅಧಿಕ ಸಾಂದ್ರ ಬೇಸಾಯವನ್ನು  ಆಯ್ಕೆ  ಮಾಡಿಕೊಂಡಿದ್ದಾರೆ. ಹನಿ ನೀರಾವರಿ  ವ್ಯವಸ್ಥೆಯನ್ನು  ಮಾಡಿಕೊಂಡು ನೆಟ್ಟ ಮೊದಲ ವರ್ಷ ಫಸಲು ಪಡೆದಿದ್ದಾರೆ.  

Farmer N C Patel

ಯಾವಾಗ ಪ್ರೂನಿಂಗ್ ಮಾಡಬೇಕು:

 • ಮಳೆಗಾಲ ಕಳೆದು ಚಳಿ ಪ್ರಾರಂಭವಾಗುವಾಗ  ಕೆಲವು ಸಸ್ಯಗಳ ಆಯ್ಕೆ ಮಾಡಿದ ನೇರ ಗೆಲ್ಲುಗಳನ್ನು (ಹೆಬ್ಬೆರಳು ದಪ್ಪದ) ಕತ್ತರಿಸಿ ತೆಗೆದರು.
 • ನವೆಂಬರ್ ತಿಂಗಳ ಪ್ರಾರಂಭದಲ್ಲಿ ಕತ್ತರಿಸಿದ ಗೆಲ್ಲುಗಳ ಭಾಗದಲ್ಲಿ ಡಿಸೆಂಬರ್ ಕೊನೆಗೆ ಸಾಮಾನ್ಯವಾಗಿ ಬರುವ ಹೂ ಮೊಗ್ಗುಗಳಿಗಿಂತ ದುಪ್ಪಟ್ಟು ಹೂ ಮೊಗ್ಗುಗಳು  ಬಂದವು.
 • ಮಿಡಿ ಕಾಯಿಗಳಾದವು. ಇದರಿಂದ ಪ್ರೇರಿತರಾಗಿ ಮತ್ತೂ ಕೆಲವು ಸಸ್ಯಗಳ ಗೆಲ್ಲುಗಳನ್ನು  ಸವರಿದ್ದಾರೆ. ಅದರಲ್ಲೂ ಹೂ ಮೊಗ್ಗುಗಳು ಬರುತ್ತಿವೆ.

.Flowering

ಎಲ್ಲಾ ನಮೂನೆಯ ಸಸ್ಯಗಳಲ್ಲಿ ಬೆಳವಣಿಗೆಯ ಹಂತ, ಸುಪ್ತಾವಸ್ಥೆಯ ಹಂತಗಳೆಂಬ ಎರಡು ಹಂತಗಳಿವೆ. ಫಲ ಬಿಡುವ ಸಮಯಗಳಲ್ಲಿ ಸುಪ್ತಾವಸ್ಥೆಯ  ಹಂತದಲ್ಲಿ  ಪ್ರೂನಿಂಗ್ ಮಾಡಿ  ಬೆಳವಣಿಗೆ ಪ್ರಚೋದನೆಗೆ  ನೀರು – ಗೊಬ್ಬರ  ಕೊಟ್ಟರೆ ಆಗ ಅದರಲ್ಲಿ ಪುನರುತ್ಪಾದನೆ  ಪ್ರಾರಂಭವಾಗುತ್ತದೆ.

 • ಪುನರುತ್ಪಾದನೆ ಎಂದರೆ ಹೂ ಬಿಟ್ಟು ಕಾಯಿಯಾಗುವಿಕೆ.
 • ಹಾಗೆಂದು ಎಲ್ಲಾ ಗೆಲ್ಲುಗಳನ್ನೂ  ಕತ್ತರಿಸಲಿಕ್ಕಿಲ್ಲ.
 • ಇದನ್ನೇ ಚಾಟನಿ ಮಾಡುವಿಕೆ ಎನ್ನುತ್ತಾರೆ.
 • ಸಸ್ಯಕ್ಕೆ ಆಹಾರ ಸಂಗ್ರಹಿಸಲು, ಕಾಯಿಯ ಬೆಳವಣಿಗೆಗೆ ಅನುಕೂಲವಾಗಲು ಅರ್ಧಕ್ಕೂ ಹೆಚ್ಚು ಗೆಲ್ಲುಗಳು, ಎಲೆಗಳು ಬೇಕಾಗುತ್ತದೆ. ಅದನ್ನು  ಉಳಿಸಿಕೊಂಡು ಕತ್ತರಿಸಬೇಕು.

Pruning method

 ಅನುಕೂಲಗಳು:

 • ಈ ತಂತ್ರಜ್ಞಾನದಿಂದ ಕಡಿಮೆ ಪ್ರದೇಶದಲ್ಲಿ ಹೆಚ್ಚು ಸಸ್ಯಗಳನ್ನು  ನಾಟಿ ಮಾಡಬಹುದು.
 • ಬೇಗ ಅಧಿಕ  ಇಳುವರಿ ಪಡೆಯಬಹುದು.
 • ಟೊಂಗೆಗಳು ಅದರಷ್ಟಕ್ಕೇ ಬೆಳವಣಿಗೆ  ಹೊಂದಲು ಬಿಟ್ಟರೆ ಅದು ಎತ್ತರ ಎತ್ತರ  ಬೆಳೆಯುತ್ತಲೇ ಇರುತ್ತದೆ.
 • ಅದರಲ್ಲಿ ಹೂ ಮೊಗ್ಗುಗಳು ಬರುವಿಕೆ  ವಿರಳವಾಗುತ್ತದೆ.
 • ಕ್ರಮೇಣ ಮರವಾಗಿ ಕೊಯಿಲು ಕಷ್ಟವಾಗಬಹುದು.
 • ಗೆಲ್ಲುಗಳನ್ನು ಕತ್ತರಿಸುತ್ತಿದ್ದರೆ (Shoot pruning) ಸಸ್ಯಕ್ಕೆ ಆಕಾರ ದೊರೆಯುತ್ತದೆ. ಕಟಾವು, ನಿರ್ವಹಣೆ ಸುಲಭವಾಗುತ್ತದೆ.
 • ಕೆಲವು ಸಮಯದಲ್ಲಿ ಗೆಲ್ಲು ಕತ್ತರಿಸಿದ ಭಾಗದಲ್ಲಿ ಮತ್ತೆ ಚಿಗುರುಗಳೂ  ಬರಬಹುದು,  ಕೆಲವು ಸಮಯದಲ್ಲಿ  ಹೂ ಮೊಗ್ಗುಗಳು  ಬರುತ್ತವೆ.
 • ಹೊಸ ಚಿಗುರು ಮತ್ತು ಅದರಲ್ಲಿ ಬರುವ ಹೂವಿಗೆ ಮತ್ತು ನಂತರ ಬೆಳೆಯುವ ಕಾಯಿಗೆ ಇರುವಷ್ಟು ಶಕ್ತಿ ಬಲಿತ ಗೆಲ್ಲುಗಳಿಗೆ  ಇರುವುದಿಲ್ಲ.

Yield after pruning
ಗೆಲ್ಲು ಕತ್ತರಿಸಿದ ಭಾಗದಲ್ಲಿ  20 ಕ್ಕೂ ಹೆಚ್ಚು ಮಿಡಿಗಳು  ಬರುತ್ತವೆ. ಇದಕ್ಕೆ ಆಹಾರ ಸರಬರಾಜು ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ಸಣಕಲು ಮಿಡಿಗಳನ್ನು  ತೆಗೆಯಬೇಕಾಗಬಹುದು. ಇದರಿಂದ ಇರುವ ಕಾಯಿಗಳ  ಗುಣಮಟ್ಟ  ಉತ್ತಮವಾಗುತ್ತದೆ.
ಈ ಕ್ರಮದಲ್ಲಿ ಪ್ರಕಾರ  ನಮ್ಮ ಸಾಂಪ್ರದಾಯಿಕ ಬೆಳೆ ವಿಧಾನದಿಂದ ಇದರಲ್ಲಿ  ಎರಡು ಪಟ್ಟು ಇಳುವರಿ  ಪಡೆಯಬಹುದು. ಇದನ್ನು ಮಳೆಯಾಶ್ರಿತ ಬೆಳೆಯಾಗಿ ಬೆಳೆಯಬಾರದು. ಹನಿ ನೀರಾವರಿ ಮಾಡುವ ಮೂಲಕ ಸಸ್ಯ ಬೆಳವಣಿಗೆಯನ್ನು  ನಿಯಂತ್ರಿಸಿಕೊಳ್ಳಬಹುದು. ಕಾಯಿ ಬೆಳೆಯುವ ಹಂತದಲ್ಲಿ  ಸಾಕಷ್ಟು ಪೋಷಕಾಂಶಗಳು, ನೀರು ಬೇಕಾಗುವ ಕಾರಣ  ಇದನ್ನು  ಕಡಿಮೆಯಾಗದಂತೆ ಒದಗಿಸಲು  ಹನಿ ನೀರಾವರಿ ಸಹಕಾರಿಯಾಗುತ್ತದೆ.
ಸೀಬೆ ಕೃಷಿಗೆ ಉತ್ತಮ ಭವಿಷ್ಯವಿದೆ. ಎಲ್ಲದಕ್ಕಿಂತ  ಪೋಷಕಾಂಶ ಸಮೃದ್ಧವಾಗಿರುವ ಹಣ್ಣು ಇದು. ಇದನ್ನು  ಓರಣವಾಗಿ ಪ್ಯಾಕ್ ಮಾಡಿ  ಮಾರಾಟ ಮಾಡಬೇಕು. ರಸ್ತೆ ಬದಿ ವ್ಯಾಪಾರಕ್ಕೆ ಕೊಟ್ಟರೆ ಅದು ಲಾಭದಾಯಕವಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!