ಭತ್ತದ ಬೆಳೆಯಲ್ಲಿ ಗರಿಯ ತುದಿಯ ಪತ್ರಹರಿತ್ತನ್ನು ತಿಂದು ಪೈರನ್ನೇ ಹಾಳುಗೆಡಹುವ ಒಂದು ಹುಳ ಇದೆ. ಅದನ್ನು ಭತ್ತದ ಗರಿ ತಿನ್ನುವ ಕೀಟ Paddy Leaf folder, leaf roller Cnaphalocrocis medinalis / marasmia patnalis ಎನ್ನುತ್ತಾರೆ. ಇದು ಎಳೆಯ ಸಸಿ ಹಂತದಿಂದ ಪೈರು ತೆನೆ ಕೂಡುವ ತನಕವೂ ಹಾನಿ ಮಾಡುತ್ತಿರುತ್ತದೆ. ಇದರಿಂದ ಬೆಳೆಯಲ್ಲಿ ಬಹಳಷ್ಟು ಹಾನಿ ಉಂಟಾಗುತ್ತದೆ. ಕೆಲವೊಮ್ಮೆ ಭತ್ತದ ಹೊಲದಲ್ಲಿ ಪೈರೇ ಇಲ್ಲದ ಸ್ಥಿತಿ ಉಂಟಾಗುವುದೂ ಇದೆ.
ಇಲ್ಲಿ ಒಂದು ಗದ್ದೆಯನ್ನು ಗಮನಿಸಿ. ಇದರಲ್ಲಿ ಅಲ್ಲಲ್ಲಿ ಪೈರೇ ಇಲ್ಲದೆ ಖಾಲಿಯಾದ ಸ್ಥಳವನ್ನೂ ಗಮನಿಸಬಹುದು. ಇದು ಯಾಕೆ ಆಗಿದೆ ಎಂಬುದು ಹಾನಿ ತೀವ್ರವಾದ ನಂತರವೇ ಗೊತ್ತಾಗುವುದು. ನಮ್ಮ ಹಿರಿಯರು ಹೇಳುವುದುಂಟು. ಯಾವುದೇ ಕೃಷಿ ಮಾಡಲಿ, ಅದರ ಜೊತೆಗೆ ದಿನಾಲೂ ಮಾತಾಡುತ್ತಾ ಇದ್ದರೆ ಅದಕ್ಕೆ ಸಮಾಧಾನ ಆಗಿ ಬೆಳೆ ಚೆನ್ನಾಗಿ ಬರುತ್ತದೆ ಎಂದು. ಇದು ಒಂದು ಮಾತು ಅಷ್ಟೇ.ಇದರ ಸೂಚ್ಯಾರ್ಥ ಯಾವುದೇ ಬೆಳೆ ಬೆಳೆದರೂ ಅದರ ಸುತ್ತ ದಿನಾಲೂ ಗಮನಿಸುತ್ತಾ ತಿರುಗಾಡಿದರೆ ಅದಕ್ಕೆ ಏನು ತೊಂದರೆ ಆಗಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಬೆಳೆಯ ಸುತ್ತ ಸುತ್ತಾಡಿ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ನೀವೂ ಒಬ್ಬ ಕೃಷಿ ತಜ್ಞರೇ ಆಗುತ್ತೀರಿ. ಹಲವಾರು ಸಂಗತಿಗಳು ನಮಗೆ ಗಮನಕ್ಕೆ ಬರುತ್ತದೆ. ಅದಕ್ಕೆ ಕಾರಣಗಳೂ ಗೊತ್ತಾಗುತ್ತದೆ. ಈ ಗದ್ದೆಯನ್ನು ರೈತರು ಬಿತ್ತನೆ ಮಾಡಿದ್ದಾರೆ. ಆಗಾಗ ಗದ್ದೆಗೆ ಸುತ್ತು ಹೊಡೆಯುತ್ತಿದ್ದರೂ ಈ ಚಿನ್ಹೆಗಳು ಗಮನಕ್ಕೆ ಬರುವಾಗ ತ್ವಲ್ಪ ತಡವಾಗಿದೆ. ಹಾಗೆಯೇ ಗಮನಕ್ಕೆ ಬಂದಿತ್ತಾದರೂ ಇದಕ್ಕೆ ನೈಜ ಕಾರಣ ಏನು, ಸೂಕ್ತ ಪರಿಹಾರ ಏನು ಎಂದು ತಿಳಿಯದೆ ಉಪಚಾರ ಮಾಡಿದ ಕಾರಣ ಅದು ಫಲಕಾರಿಯಾಗಲಿಲ್ಲ. ಈಗ ಭತ್ತದ ಹೊಲದಲ್ಲಿ ಅಲ್ಲಲ್ಲಿ ಪೈರೆಲ್ಲಾ ಖಾಲಿ ಖಾಲಿಯಾಗಿದೆ.
ಯಾವ ಕಾರಣಕ್ಕೆ ಹೀಗಾಗಿದೆ?
- ಯಾವಾಗಲೂ ಮಳೆ ಕಡಿಮೆಯಾಗುವ ಕಾಲದಲ್ಲಿ ಹುಳಗಳು ಪತಂಗಗಳಾಗಿ ಮೊಟ್ಟೆ ಇಡುವ ಸಮಯ.
- ಮಳೆ ಇರುವಾಗ ಎಲ್ಲಾ ಗಿಡಗಳಲ್ಲಿ ಹಸುರು ಬೆಳವಣಿಗೆ ಹೆಚ್ಚಾಗಿದ್ದು, ಆಹಾರದ ಲಭ್ಯತೆ ಚೆನ್ನಾಗಿರುವುದರಿಂದ ಲಾರ್ವೆ ಸ್ಥಿತಿಯಲ್ಲಿ ಹುಳುಗಳು ಬೆಳೆಯುತ್ತಿರುತ್ತವೆ.
- ಮಳೆ ಕಡಿಮೆಯಾಗುವಾಗ ಆ ಎಲ್ಲಾ ಲಾರ್ವೆಗಳು ಪತಂಗಗಳಾಗುತ್ತವೆ.
- ಮತ್ತೆ ತಮ್ಮ ಸಂತಾನಾಭಿವೃದ್ದಿಗೆ ಮೊಟ್ಟೆ ಇಡಲಾರಂಭಿಸುತ್ತವೆ.
- ಬಹುತೇಕ ಎಲ್ಲಾ ಗಿಡಗಳಲ್ಲೂ ಈ ಸಮಯದಲ್ಲಿ ಎಲೆ ಮಡಚಿಕೊಂಡಿರುವುದು, ಎಲೆಗಳು ಅರ್ಧ ಹರಿದ ಸ್ಥಿತಿಯಲ್ಲಿರುವುದನ್ನು ನಾವೆಲ್ಲರೂ ಗಮನಿಸಬಹುದು.
- ಇದು ಪ್ರಕೃತಿ ನಿಯಮ. ಭತ್ತದ ಹೊಲವೂ ಇದಕ್ಕೆ ಹೊರತಲ್ಲ.
- ಭತ್ತದ ಹೊಲದಲ್ಲಿ ಪೈರು ಕಾಳು ಕಟ್ಟಿ ಹಾಲೂಡುವ ಸಮಯದಲ್ಲಿ ಬರುವ ಬಂಬು ಕೀಟವೂ ಸಹ ಹೆಚ್ಚು ತೊಂದರೆ ಮಾಡುವುದಕ್ಕೆ ಕಾರಣ ಅವುಗಳ ಸಂತತಿ ಹೆಚ್ಚಳದಿಂದ.
- ಹುಲ್ಲು ಇತ್ಯಾದಿಗಳಲ್ಲಿ ಸಂತಾನಾಭಿವೃದ್ದಿಯಾಗಿ ಆಹಾರಕ್ಕಾಗಿ ಭತ್ತದ ಕಾಳುಗಳಿಗೆ ಧಾಳಿ ಮಾಡುತ್ತವೆ.
- ಭತ್ತದ ಗರಿ ತಿನ್ನುವ ಹುಳ ಸಹ ಹೀಗೆಯೇ ಆಗುವುದು.
- ಮಳೆ ಮುಕ್ತಾಯದ ಸಮಯದಲ್ಲಿ ಬಿತ್ತನೆ ಮಾಡುವ ಸುಗ್ಗಿ ಬೇಸಾಯಕ್ಕೆ ತಲೆ ಹುಳದ ಕಾಟ ಹೆಚ್ಚು.
- ಇದು ಹಾನಿ ಮಾಡುವ ಲಕ್ಷಣಕ್ಕೆ ಅನ್ವರ್ಥವಾಗುವಂತೆ ಇದನ್ನು ಕೊಕ್ಕರೆ ಹುಳದ ಕಾಟ ಎಂದು ಕರೆಯುತ್ತಾರೆ.
- ಗರಿಯ ಮೇಲಿನ ಭಾಗ ಹರಿತ್ತು ನಾಶವಾಗಿ ಬಿಳಿ ಬಿಳಿಯಾಗಿ ಕೊಕ್ಕರೆ ತರಹ ತೋರುವ ಕಾರಣಕ್ಕೆ ಹೀಗೆ ಕರೆಯುತ್ತಾರೆ.
- ಬಹಳ ಹಿಂದಿನಿಂದಲೂ ಇದ್ದಂತ ಕೀಟ ಸಮಸ್ಯೆ. ಇತ್ತೀಚೆಗೆ ಇದು ಸ್ವಲ್ಪ ಹೆಚ್ಚಾದಂತೆ ಭಾಸವಾಗುತ್ತದೆ.
ಮಣ್ಣು ಹೆಚ್ಚು ಕೊಳೆತ ಸ್ಥಿತಿ ಉಂಟಾದರೆ ಅಲ್ಲಿ ಈ ಕೀಟ ಸಮಸ್ಯೆ ಹೆಚ್ಚು ಎನ್ನಲಾಗುತ್ತದೆ. ಅರ್ಧ ಕಳಿತ ಕೊಟ್ಟಿಗೆ ಗೊಬ್ಬರ ಹಾಕಿದಾದ ಅದು ಗದ್ದೆಯಲ್ಲಿ ಕೊಳೆಯುವ ಸ್ಥಿತಿ ಉಂಟಾದರೆ ಹೀಗಾಗುತ್ತದೆ. ಗದ್ದೆಯಲ್ಲಿ ಕಳೆ ಹೆಚ್ಚಾಗಿ ಅದೆಲ್ಲಾ ಉಳುಮೆ ಮಾಡುವಾಗ ಮಣ್ಣಿಗೆ ಸೇರಿಸಿ ಅದು ಕೊಳೆಯುವ ಮುನ್ನ ಬಿತ್ತನೆ ಮಾಡಿದರೆ ಸಹ ಕೀಟ ಸಮಸ್ಯೆ ಹೆಚ್ಚಾಗುತ್ತದೆ. ಬಹುತೇಕ ಪತಂಗಗಳು ಕೊಳೆ ತಿನಿ ಭಕ್ಷಕಗಳಾಗಿದ್ದು, ಕೊಳೆಯುವ ವಸ್ತು ಇರುವ ಕಡೆ ಆಕರ್ಷಿತವಾಗುತ್ತದೆ.
ಹುಳದ ಜೀವನ ಚಕ್ರ:
- ಈ ಕೀಟದ ಜಿವನ ಚಕ್ರ 35-40 ದಿನಗಳು. ವರ್ಷವಿಡೀ ಇವು ಬೆಳೆಯುತ್ತಲೇ ಇರುತ್ತವೆ.
- ಕೆಲವು ಋತುಮಾನಗಳಲ್ಲಿ ಇವುಗಳ ಹಾನಿ ಮತ್ತು ಸಂತತಿಯನ್ನು ಪರಿಸರವೇ ನಿಯಂತ್ರಿಸುತ್ತಿರುತ್ತದೆ.
- ಕೀಟದ ಬೆಳವಣಿಗೆ ನಾಲ್ಕು ಹಂತದಲ್ಲಿರುತ್ತದೆ.
- ಮೊಟ್ಟೆ, ಮರಿ, ಕೋಶ ಮತ್ತು ಪ್ರೌಡಾವಸ್ಥೆ ಎಂಬ ಈ ನಾಲ್ಕು ಹಂತಗಳಲ್ಲಿ ಮರಿ ಹುಳಗಳು ಭತ್ತದ ಎಳೆಯ ಗರಿಗಳ ತುದಿ ಭಾಗದಿಂದ ತಿನ್ನಲು ಪ್ರಾರಂಭಿಸಿ ಪೂರ್ತಿಯಾಗಿ ತಿನ್ನಲಾರಂಭಿಸುತ್ತವೆ.
- ತಿಳಿ ಹಸುರು ಬಣ್ಣದ ಮರಿ ಹುಳಗಳು ಎಲೆಯಲ್ಲಿ ಎಲೆಯನ್ನು ಮಡಚಿಕೊಂಡು ಹರಿತ್ತನ್ನು ಕೆರೆದು ತಿನ್ನುತ್ತವೆ.
- ಕೆರೆದು ತಿಂದ ಎಲೆಯಲ್ಲಿ ಹರಿತ್ತು ನಾಶವಾಗಿ ಅದು ಒಣಗಿ ಪೈರೇ ನಾಶವಾಗುವುದುಂಟು.
- ಮರಿ ಹುಳಗಳು 17ಮಿಲಿ ಮೀಟರು ಉದ್ದ ಇರುತ್ತವೆ.
- ಸುಮಾರು 20 ದಿನಗಳ ಕಾಲ ಹರಿತ್ತು ತಿನ್ನುತ್ತಿರುತ್ತವೆ.
- ಸಾಕಷ್ಟು ತಿಂದು ನಂತರ ಎಲೆಯನ್ನು ಮಡಚಿಕೊಂಡು ತನ್ನ ತನ್ನ ಕೋಶಾವಸ್ಥೆಯನ್ನು ತಲುಪುತ್ತವೆ.
- ಕೋಶಾವಸ್ಥೆಯ ಹುಳಗಳು ಕಂದು ಬಣ್ಣದಲ್ಲಿ ಮಡಚಿದ ಎಲೆಯ ಒಳಗೆ ಕಾಣಸಿಗುತ್ತವೆ.
- ಕೊಶಾವಸ್ಥೆಯಲ್ಲಿ 8-10 ದಿನಗಳ ಕಾಲ ಇದ್ದು ಸಣ್ಣದಾಗಿ ಬಿಳಿ ಬಣ್ಣದ ಪತಂಗಗಳಾಗಿ ಹೊರಗೆ ಬಂದು ಹಾರಾಡುತ್ತವೆ.
- ಗಂಡು ಹೆಣ್ಣಿನ ಮಿಲನವಾಗಿ ಒಂದು ಹೆಣ್ಣು ಪತಂಗ 50-150 ಮೊಟ್ಟೆಗಳನ್ನು ಇಡುತ್ತವೆ.
- ಮೊಟ್ಟೆಗಳು 3-5 ದಿನದಲ್ಲಿ ಮತ್ತೆ ಹುಳುಗಳಾಗಿ ಹೊರಬಂದು ಎಲೆ ಭಕ್ಷಣೆ ಪ್ರಾರಂಭಿಸುತ್ತವೆ.
- ಹಾನಿ ಹೆಚ್ಚಾಗಿರುವ ಭತ್ತದ ಹೊಲದಲ್ಲಿ ಪತಂಗಗಳು, ಮರಿಗಳು ಕೊಶಗಳು , ಮೊಟ್ಟೆಗಳು ಎಲ್ಲವನ್ನೂ ಕಾಣಬಹುದು.
- ಪತಂಗಗಳು ಸಂಜೆ ಹೊತ್ತು ಮಂದ ಬೆಳಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರಾಡುತ್ತಿರುವುದನ್ನು ಗಮನಿಸಬಹುದು.
ನಿಯಂತ್ರಣ ವಿಧಾನ:
- ನಾಟಿ ಮಾಡುವ ಭತ್ತದ ಬೇಸಾಯದಲ್ಲಿ ಈ ಕೀಟದ ಹಾವಳಿ ಸ್ವಲ್ಪ ಕಡಿಮೆ ಇರುತ್ತದೆ.
- ಸಸಿ ಮಡಿಯಲ್ಲಿ ಹೆಚ್ಚು ಇರುತ್ತದೆ. ಬಿತ್ತನೆ ಮಾಡಿದಾಗ ಸ್ವಲ್ಪ ಹೆಚ್ಚು.
- ಕಾರಣ ಇಲ್ಲಿ ಸಸಿಗಳ ಅಂತರ ಹೆಚ್ಚು ಇರುತ್ತದೆ. ಸಸಿಗಳು ದಪ್ಪ ಆಗಿರುವಲ್ಲಿ ಈ ಕೀಟದ ಹಾವಳಿ ಅಧಿಕ.
- ಸಸಿಯಿಂದ ಸಸಿಗೆ ಸುಮಾರು 15-20 ಸೆಂ ಮೀ. ಅಂತರ ಇರಬೇಕು.
- ಸಸಿ ಮಡಿಯಲ್ಲಿ ಸಸಿಗಳನ್ನು 22-30 ದಿನಕ್ಕಿಂತ ಹೆಚ್ಚು ಸಮಯ ಉಳಿಸಬಾರದು.
- ಪೈರು ಹಚ್ಚ ಹಸುರಾಗಿ ಬರಬೇಕು ಎಂದು ಹೆಚ್ಚು ಸಾರಜನಕ ಗೊಬ್ಬರವನ್ನು ಒದಗಿಸಬಾರದು.
- ಬಿತ್ತನೆ ಅಥವಾ ನಾಟಿಗೆ ಮುಂಚೆ ಗದ್ದೆ ಬದುಗಳ ಕಳೆಯನ್ನು ತೆಗೆದು ಸ್ವಚ್ಚ ಮಾಡಿರಬೇಕು.
- ಹಿಂದಿನವರು ಸುಗ್ಗಿ ಬೇಸಾಯಕ್ಕೆ ಗದ್ದೆ ಹುಣಿಗೆ ಮಣ್ಣು ಲೇಪನ ಮಾಡಿ ಕೆಲಕಾಲ ಕಳೆ ಬೆಳವಣಿಗೆ ನಿಯಂತ್ರಿಸುತ್ತಿದ್ದುದು ಇದೇ ಕಾರಣಕ್ಕೆ.
- ಪೈರು ಸ್ವಲ್ಪ ಬೆಳೆದಿದ್ದರೆ ಹಗ್ಗವನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆ ತನಕ ಹಿಡಿದು ಅದನ್ನು ಪೈರಿನ ಮೇಲೆ ಎರಡೂ ಬದಿಯಿಂದ ಎಳೆಯುತ್ತಾ ಬಂದರೆ ಪತಂಗಗಳು ದೂರ ಹೋಗುತ್ತವೆ.
- ಸೀಮೆ ಎಣ್ಣೆ ಅಥವಾ ಕೆರೋಸಿನ್ ಎಣ್ಣೆಯನ್ನು ನೀರು ಇರುವಾಗ ಸ್ವಲ್ಪ ಗದ್ದೆಗೆ ಚೆಲ್ಲಿದರೆ ಅದರ ಎಣ್ಣೆ ಅಂಶ ಪಸರಿಸುವ ಕಾರಣ ಅಲ್ಲಿ ಮೊಟ್ಟೆಗಳು, ಕೋಶಗಳು ನಾಶವಾಗುತ್ತವೆ.
- ವಾಸನೆಗೆ ಕೆಲವು ಸಾಯುತ್ತದೆ ಮತ್ತೆ ಕೆಲವು ದೂರ ಹೋಗುತ್ತವೆ.
- ಈಗಿನ ಬೆಳಕಿನ ದೀಪ (ಸೋಲಾರ್ ಟ್ರಾಪ್ ) ಹಾಕಿದರೆ ಪತಂಗಗಳನ್ನು ಕೊಲ್ಲಬಹುದು.
- ಇವೆಲ್ಲಾ ಕೆಲವು ಸುರಕ್ಷಿತ ಕೀಟ ನಿಯಂತ್ರಕ ವಿಧಾನಗಳು ಇವೆಯಾದರೂ ಅದನ್ನು ಈಗಿನ ಕಾಲದಲ್ಲಿ ಪಾಲಿಸಲು ಬಹಳ ಕಷ್ಟವಾಗುತ್ತದೆ.
- ಹಾಗಾಗಿ ರೈತರು ಕೀಟನಾಶಕದ ಮೊರೆ ಹೋಗುತ್ತಾರೆ.
- ರಾಸಾಯನಿಕ ಕೀಟ ನಾಶಕಗಳಾದ ಡೈಮಿಥೋಯೇಟ್ ಅಥವಾ ಕ್ವಿನಾಲ್ಫೋಸ್ ಅಥವಾ ಕ್ಲೋರೋಫೆರಿಫೋಸ್ ಕೀಟನಾಶವನ್ನು ಒಂದು ಲೀ. ನೀರಿಗೆ 2 ಮಿಲಿ ಯಂತೆ ಬೆರೆಸಿ ಸಿಂಪಡಿಸಬೇಕು.
- ಸಂಜೆ ಹೊತ್ತು ಸಿಂಪಡಿಸಿದರೆ ಫಲಿತಾಂಶ ಹೆಚ್ಚು. ಹೆಚ್ಚು ಬಿಸಿಲು ಇರುವ ಮಧ್ಯಾನ್ಹ ಹೊತ್ತು ಸಿಂಪರಣೆ ಸೂಕ್ತವಲ್ಲ.
- ಸುತ್ತು ಬರುತ್ತಾ ಸಿಂಪರಣೆ ಮಾಡಿದರೆ ಕೀಟಗಳು ತಪ್ಪಿಸಿಕೊಳ್ಳಲಾರವು.
ಭತ್ತದ ಬೆಳೆಗಾರ ಪಾಲಿಗೆ ಈಗ ಈ ಕೀಟದ ಹಾವಳಿ ಬಹಳ ಹೆಚ್ಚಾಗುತ್ತಿದೆ. ಇದರಿಂದ ಭಾರೀ ಫಸಲು ನಷ್ಟವೂ ಆಗುತ್ತಿ಼ದೆ. ಬೆಳೆಗಾರರು ಬಿತ್ತನೆ ಅಥವಾ ನಾಟಿ ಮಾಡಿ ಪೈರು ತೆನೆ ಕೂಡುವ ತನಕ ಗದ್ದೆಯನ್ನು ಸೂಕ್ಷ್ಮ ವಾಗಿ ಗಮನಿಸುತ್ತಾ ಇರಬೇಕು, ಪ್ರಾರಂಭಿಕ ಹಂತದಲ್ಲಿ ಇದರ ನಿಯಂತ್ರಣ ಕೈಗೊಂಡರೆ ಫಲ ಹೆಚ್ಚು.
ಲೇಖನ :ಡಾ. ರೇವಣ್ಣ ರೇವಣ್ಣವರ್,ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬ್ರಹ್ಮಾವರ, ಮತ್ತು ಡಾ. ಬಿ. ಧನಂಜಯ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ.