ಬಂಬು ಅಥವಾ ಗುಂಧೀ ಬಗ್ (Gundhi bug Leptocorisa oratorius Fabr) ಹೆಸರಿನ ಈ ಕೀಟ ಭತ್ತ ತೆನೆಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ ರಸ ಕುಡಿದು ಭಾರೀ ಬೆಳೆ ನಷ್ಟವನ್ನು ಉಂಟು ಮಾಡುತ್ತದೆ. ಇದನ್ನು ಯಾವ ಬೆಳೆಗಾರರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಂದರೆ ತಕ್ಷಣ ನಿಯಂತ್ರಣೋಪಾಯ ಕೈಗೊಳ್ಳಬೇಕು.
- ಯಾರಾದರೂ ರಾಸಾಯನಿಕ ಕೀಟನಾಶಕ ಬಳಸದೆ ಭತ್ತ ಬೆಳೆಯುತ್ತಾರೆಂದರೆ ಅವರ ಶ್ರಮವನ್ನು ಭಂಗ ಮಾಡುವ ಕೀಟ ಇದ್ದರೆ ಅದು ಬಂಬು.
- ಬರೇ ಭತ್ತ ಮಾತ್ರವಲ್ಲ, ಅಸಂದೆ ಬೆಳೆಗೂ ಇದು ಕಾಟ ಕೊಡುತ್ತದೆ.
ನಿಮ್ಮ ಹೊಲದಲ್ಲಿ ಹುಲ್ಲು, ಕಳೆ ಎಲ್ಲೆಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆಯೋ ಅಲ್ಲಿ ಈ ಬಂಬು ಕೀಟದ ವಂಶಾಭಿವೃದ್ದಿಯಾಗುತ್ತದೆ.
ಬಂಬು ಕೀಟ ಎಲ್ಲಿಂದ ಬರುತ್ತದೆ:
- ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹುಲ್ಲು ಬೆಳೆಯುತ್ತದೆ. ಕಳೆಗಳು ಬೆಳೆದಿರುತ್ತದೆ.
- ಕಳೆಗಳ ಎಡೆಯಲ್ಲಿ ಈ ಕೀಟದ ಉಗಮವಾಗುತ್ತದೆ.
- ಬಿಸಿಲು, ಆಗಾಗ ಬರುವ ಮಳೆ, ಮೋಡ ಕವಿದ ವಾತಾವರಣದಲ್ಲಿ ಈ ಕೀಟದ ಹಾವಳಿ ಹೆಚ್ಚಾಗುತ್ತದೆ.
- ಭತ್ತದ ಗದ್ದೆಯ ಸುತ್ತಮುತ್ತ ಹೆಚ್ಚು ಹೆಚ್ಚು ಕಳೆಗಳಿದ್ದರೆ ಇದರ ಹಾವಳಿ ಜಾಸ್ತಿ.
- ಇದು ಭತ್ತದ ಹೂ ತೆನೆಯಲ್ಲಿ ತಪಸ್ಸಿಗೆ ಕುಳಿತಂತೆ ರಸ ಹೀರುತ್ತಿರುತ್ತದೆ.
- ಇದು ಮಧ್ಯಾನ್ಹದ ಸುಡು ಬಿಸಿಲಿಗೆ ಕಳೆಗಳ ಎಡೆಯಲ್ಲಿ ಅವಿತುಕೊಳ್ಳುತ್ತದೆ.
- ಬೆಳಗ್ಗಿನ ಹೊತ್ತು ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚಿನ ಚಟುವಟಿಕೆಯಲ್ಲಿರುತ್ತದೆ.
- ಭತ್ತದ ಗದ್ದೆಗೆ ಇವು ಬರುವ ಮುಂಚೆ ನಿಮ್ಮ ಅಥವಾ ನಿಮ್ಮ ಸಮೀಪದ ಕಳೆಗಳು ಹೆಚ್ಚು ಇರುವ ಕಡೆ ಎರಡು ತಲೆಮಾರನ್ನು ಮುಗಿಸಿರುತ್ತವೆ.
ಹುಲ್ಲು ಬೆಳೆದ ಜಾಗದಲ್ಲಿ ಕಾಲಾಡಿಸುತ್ತಾ ಹೋಗುವಾಗ ಹಾರಾಡುವ ಕೀಟ ಇದೇ ಆಗಿರುತ್ತದೆ. ಒಣ ವಾತಾವರಣದಲ್ಲಿ ಇವು ಹೆಚ್ಚು ಕ್ರಿಯಾತ್ಮಕವಾಗಿರುವುದಿಲ್ಲ. ಇದರ ಅಪ್ಸರೆಗಳು ಭತ್ತದ ಪೈರಿನಲ್ಲಿ ಕೆಳಭಾಗದಲ್ಲಿ ಇರುತ್ತವೆ. ಆದರೆ ನಾವು ಗಮನಿಸಿರುವುದಿಲ್ಲ. ಎಲೆಯ ಅಡಿ ಭಾಗದಲ್ಲಿ ಸಾಲಾಗಿ ಕಪ್ಪು ಬಣ್ಣದ ಮೊಟ್ಟೆ ಇರುತ್ತದೆ ಇದು 3-5 ದಿನಗಳಲ್ಲಿ ಮರಿ ಅಪ್ಸರೆಯಾಗುತ್ತದೆ, ಆಪ್ಸರೆಗಳು 5 ಹಂತಗಳನ್ನು ಪೂರೈಸುತ್ತಾ ಪ್ರೌಢ ಕೀಟವಾಗುತ್ತದೆ.
ನಿಯಂತ್ರಣ:
- ಭತ್ತದ ಬೇಸಾಯ ಮಾಡುವ ಬದುಗಳಲ್ಲಿ, ಬೇರೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಹುಲ್ಲುಗಳು, ಕಳೆ ಬೆಳೆಯದಂತೆ ನೊಡಿಕೊಳ್ಳಬೇಕು.
- ಬೆಳೆದ ಹುಲ್ಲುಗಳನ್ನು ತೆಗೆಯಬೇಕು. ಒಂದು ಎರಡು ಗದ್ದೆ ಬೇಸಾಯ ಮಾಡುವವರಿಗೆ ಇದರ ಉಪಟಳ ಹೆಚ್ಚು.
- ಎಲ್ಲರೂ ಬೇಸಾಯ ಮಾಡುವಾಗ ಇದು ಹಂಚಿ ಹೋಗಿ ಹಾನಿ ಕಡಿಮೆಯಾಗುತ್ತದೆ.
- ಎಲ್ಲರೂ ಒಂದೇ ಸಮಯದಲ್ಲಿ ಬಿತ್ತನೆ ಮಾಡಬೇಕು. ಏಕಪ್ರಕಾರದ ಅವಧಿಯ ತಳಿಗಳನ್ನು ಆಯ್ಕೆ ಮಾಡಬೇಕು.
- ಕೀಟನಾಶಕವನ್ನು ಸಿಂಪಡಿಸುವಾಗ ಕಡಿಮೆ ಅವಧಿಯ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.
- ಇಲ್ಲವಾದರೆ ಅದರ ಉಳಿಕೆ ಅಂಶ ಇರುತ್ತದೆ. ಮೆಲಾಥಿಯಾನ್ ಕೀಟನಾಶಕ ಕ್ಕೆ 2 ದಿನಗಳ ತನಕ ವಾಯಿದೆ ಇದ್ದು, ಅದನ್ನು ಬಳಕೆ ಮಾಡಬಹುದು.
- ಫೋಸ್ಫೋಮಿಡಾನ್ ಕೀಟನಾಶಕವನ್ನೂ ಬಳಕೆ ಮಾಡಬಹುದು.
- ಕೀಟನಾಶಕ ಸಿಂಪರಣೆಯನ್ನು ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಹೊತ್ತು ಸಿಂಪರಣೆ ಮಾಡಬೇಕು.
- ಭತ್ತದ ಗದ್ದೆಯಲ್ಲಿ ಪರಭಕ್ಷಕಗಳಾದ ಜೇಡಗಳು, ಡ್ರಾಗನ್ ಪ್ಲೈ, ಕಣಜದ ಕೀಟಗಳನ್ನು ಆಕರ್ಷಿಸಬೇಕು.
- ಕೀಟನಾಶಕ ಸಿಂಪಡಿಸುವಾಗ ವರ್ತುಲಾಕಾರದಲ್ಲಿ ಸುತ್ತು ಬಂದು ಸಿಂಪರಣೆ ಮಾಡಿ ಮಧ್ಯದಲ್ಲಿದಲ್ಲಿ ಎಲ್ಲವೂ ಬಂಧಿಯಾಗುವಂತೆ ಮಾಡಬೇಕು.
- ಎರಡೂ ಜನ ಬೆಳಗ್ಗಿನ ಹೊತ್ತು ಮತ್ತು ಸಂಜೆ ಹೊತ್ತು ಗದ್ದೆಯ ಎರಡೂ ಬದಿ ತನಕ ಹಗ್ಗ ಹಾಕಿ ಇಬ್ಬರು ಎಳೆಯುತ್ತಾ ಬಂದರೆ ಕೀಟಗಳು ಮೇಲೇಳುತ್ತಾ ಹಾರಾಡುತ್ತವೆ.
- ಇದನ್ನು ಹೊಗೆ ಹಾಕುವ ಮೂಲಕ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ರಾಸಾಯನಿಕ ಮುಕ್ತ ಭತ್ತ ಬೆಳೆಯುವವರು.
ಭತ್ತದ ಬೆಳೆಯಲ್ಲಿ ಬಂಬು ಕೀಟವನ್ನು ಪರಿಣಾಮಕಾರಿಯಾಗಿ ನಿಯಂತಿಸಿದ್ದೇ ಆದರೆ ಬೆಳೆ ಪಾಸ್. ರೈತರು ಪ್ರಭಲ ಕೀಟನಾಶಕವನ್ನು ಬಳಕೆ ಮಾಡಬೇಡಿ. ಇದು ನಂತರ ಪಶುಗಳು ತಿನ್ನುವ ಹುಲ್ಲಿನಲ್ಲಿ,ನಮಗೆ ವಾಪಾಸು ಬರುತ್ತವೆ. ಬಲೆ ಬೆಳೆಯಾಗಿ ಅಲಸಂಡೆಯನ್ನು ಸಮೀಪದಲ್ಲಿ ಬೆಳೆಸಿ ಅದರ ಕಾಯಿಗಳಿಗೆ ತಪ್ಪದೆ ಬರುವ ಕಾರಣ ಅಲ್ಲಿ ಕೀಟನಾಶಕ ಸಿಂಪಡಿಸಿ ನಾಶ ಮಾಡಬಹುದು.
end of the article:——————————————————————
search words: paddy pest# paddy crop# paddy cultivation# paddy sap sucker # Gundhi bug# Bambu# safe method of paddy gundhi bug control#