ಎಲ್ಲಾ ಬೆಳೆಗಳಿಗೂ ಈ ಸಮಯದಲ್ಲಿ ಅಗತ್ಯವಾಗಿ ಬೇಕಾಗುವ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರ ಈಗ ಮಾರುಕಟ್ಟೆಯಲ್ಲಿ ಯಾಕೆ ಸಿಗುತ್ತಿಲ್ಲ ? ಕಾರಣ ಮತ್ತೇನೂ ಅಲ್ಲ. ವಿದೇಶದಿಂದ ತರಿಸಲು ಅವರು ಹಣ ಹೆಚ್ಚು ಕೇಳುತ್ತಿದ್ದಾರೆ. ಅವರ ದರವನ್ನು ಕೊಟ್ಟು ಖರೀದಿಸಿದರೆ ಇಲ್ಲಿ ಈಗಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಬೇಕಾಗುತ್ತದೆಯಂತೆ. ಹಾಗಾಗಿ ಪೊಟ್ಯಾಶ್ ಮುಂದಿನ ವಾರ ಬರುತ್ತದೆ ಎನ್ನುತ್ತಾ ಈಗಾಲೇ ಒಂದು ತಿಂಗಳು ಮುಂದೂಡಿ ಆಗಿದೆ. ಇನ್ನೆಷ್ಟು ಕಾಯಬೇಕೊ ತಿಳಿಯದು.
ಮ್ಯುರೇಟ್ ಅಫ್ ಪೊಟ್ಯಾಶ್ ಗೊಬ್ಬರ ಕೆನಡಾ, ರಶಿಯಾ, ಪೋಲಾಂಡ್, ಚೀನಾ, ಜರ್ಮನಿ, ಇಸ್ರೇಲ್ ಜೋರ್ಡಾನ್ ಮುಂತಾದ ದೇಶಗಳಲ್ಲಿ ಖನಿಜ ರೂಪದಲ್ಲಿ ದೊರೆಯುವ ವಸ್ತು. ಈ ಖನಿಜವನ್ನು ಅಗೆದು, ಹುಡಿ ಮಾಡಿ ಗೊಬ್ಬರವಾಗಿ ಬಳಸಲಾಗುತ್ತದೆ. ನಮ್ಮಲ್ಲಿ ಇರುವ ಶಿಲೆಗಳಂತೆ ಇದೂ ಒಂದು ಶಿಲೆಯಾಗಿದೆ. ಆದರೆ ಅದು ನೀರಿನಲ್ಲಿ ಕರಗುತ್ತದೆ. ಪ್ರಪಂಚದಾದ್ಯಂತ ಕೃಷಿಗೆ ಪೊಟ್ಯಾಶ್ ಮೂಲವಾಗಿ ಇದನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಬೇಡಿಕೆ ಹೊಂದಿಕೊಂಡು ಖನಿಜ ಇರುವ ದೇಶಗಳು ಬೆಲೆ ಹೆಚ್ಚಿಸುತ್ತವೆ ಅದು ಸಹಜ. ಈಗ ಆಗಿರುವುದು ಅದೇ.ಪೊಟ್ಯಾಶ್ ನ ಕೊರತೆ ಇಲ್ಲ. ಆದರೆ ತರಿಸಲು ದರ ಹೆಚ್ಚಾಗಿರುವುದೇ ಸಮಸ್ಯೆ. ಇದು ನಮ್ಮ ದೇಶದ ಪ್ರಮುಖ ಪೊಟ್ಯಾಶ್ ಆಮದು ಮಾಡುವ ಸಂಸ್ಥೆಯೊಂದರ ಪ್ರತಿನಿಧಿಗಳು ಹೇಳಿದ ವಿಚಾರ.
ಪೊಟ್ಯಾಶ್ ಗೊಬ್ಬರ ಎಲ್ಲಾ ಬೆಳೆಗಳಿಗೂ ಅಗತ್ಯವಾದ ಪೋಷಕವಾಗಿದ್ದು, ಬೆಳೆ ಇಳುವರಿ ಮತ್ತು ಬೆಳೆಯ ಗುಣಮಟ್ಟದ ಮೇಲೆ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಪೋಷಕವನ್ನು ಬೆಳೆಯ ನಿರ್ಧಿಷ್ಟ ಬೆಳವಣಿಗೆ ಹಂತದಲ್ಲಿ ಕೊಡದೆ ಇರುವುದರಿಂದ ಗಣನೀಯ ನಷ್ಟ ಉಂಟಾಗುತ್ತದೆ.
ಪೊಟ್ಯಾಶ್ ಬರುತ್ತದೆ ಆದರೆ ಲೆಕ್ಕದ್ದು ಮಾತ್ರ:
- ಪೊಟ್ಯಾಶ್ ಗೊಬ್ಬರ ಆಮದು ನಿಂತಿಲ್ಲ.
- ಉತ್ಪಾದಕ ದೇಶಗಳು ಹೇಳುವ ದರವನ್ನು ಕೊಡುವುದೇ ಆದರೆ ಎಷ್ಟು ಬೇಕಾದರೂ ಪೊಟ್ಯಾಶ್ ತರಿಸಬಹುದು.
- ನಮ್ಮಲ್ಲಿ ಅದರ ಕೊರತೆಯೇ ಗೊತ್ತಾಗಲಿಕ್ಕಿಲ್ಲ.
- ಅಲ್ಪ ಸ್ವಲ್ಪ ಅಂದರೆ ಹಿಂದೆ ಆಮದು ಆಗುತ್ತಿದ್ದ ಪ್ರಮಾಣದ -10-20% ಮಾತ್ರ ಆಮದು ಆಗುತ್ತದೆ.
- ಅದನ್ನು ಆದ್ಯತೆಯ ನೆಲೆಯಲ್ಲಿ ಕೆಲವು ರಾಜಕೀಯ ಒತ್ತಡ ಹೆಚ್ಚು ಇರುವಲ್ಲಿ ವಿತರಣೆ ಮಾಡಲಾಗುತ್ತಿದೆ.
- ಕೆಲವು ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಅಗುತ್ತಿದೆ.
- ಕೆಲವು ಕಡೆಗೆ ಇಲ್ಲವೇ ಇಲ್ಲ. ಕಡಿಮೆ ಇರುವ ಕಾರಣ ಒಂದೆರಡು ದಿನಗಳಲ್ಲಿ ಖಾಲಿಯಾಗುತ್ತಿದೆ.
- ರಾಜಕೀಯ ಒತ್ತಡ ಹಾಕಲು ಸಾಧ್ಯವಿದ್ದರೆ ಪೊಟ್ಯಾಶ್ ಕೆಲವೇ ದಿನಗಳಲ್ಲಿ ತರಿಸಲು ಸಾಧ್ಯವಿದೆ.
ಪೊಟ್ಯಾಶ್ ಬಂದರೂ ದರ ಹೆಚ್ಚಾಗುತ್ತದೆ:
- ತಕ್ಷಣಕ್ಕೆ ಪೊಟ್ಯಾಶ್ ಬರುವ ಸಾಧ್ಯತೆ ಕಡಿಮೆ.
- ಇನ್ನೂ ಒಂದು ತಿಂಗಳ ಸಮಯ ಬೇಕಾಗಬಹುದು ಎಂಬ ಮಾಹಿತಿ ಇದೆ.
- ಬರುವ ಪೊಟ್ಯಾಶ್ ನ MOP ಬೆಲೆ ಸುಮಾರು 30-40 % ಹೆಚ್ಚಳವಾಗಬಹುದು ಎಂಬ ಸೂಚನೆ ಇದೆ.
- ಸರಕಾರ ರಸ ಗೊಬ್ಬರದ ಮೇಲೆ ಕೊಡುತ್ತಿದ್ದ ಸಬ್ಸಿಡಿಯನ್ನು ಹೆಚ್ಚು ಮಾಡಿ ರೈತರಿಗೆ ಹೊರ ಆಗದಂತೆ ನಿರ್ವಹಣೆ ಮಾಡುವ ಸಾಧ್ಯತೆಯೂ ಇದೆ.
- ಒಟ್ಟಿನಲ್ಲಿ ಪೊಟ್ಯಾಶ್ ಉತ್ಪಾದಕ ದೇಶಗಳ ವ್ಯವಹಾರ ನಮಗೆ ಪೊಟ್ಯಾಶ್ ನ ಕೊರತೆಯನ್ನು ಸೃಷ್ಟಿಸಿದೆ.
ಬದಲಾವಣೆಯ ಸಂಚೂ ಇಲ್ಲದಿಲ್ಲ:
- ಮ್ಯುರೇಟ್ ಆಫ್ ಪೊಟ್ಯಾಶ್ ಮಾತ್ರ ಕೊರತೆಯಾಗಿದೆಯೇ ಹೊರತು ಪೊಟ್ಯಾಶ್ ನ ಇನ್ನೊಂದು ಪ್ರಕಾರ ಸಲ್ಫೇಟ್ ಆಫ್ ಪೊಟ್ಯಾಶ್ ಗೆ ಯಾವ ಕೊರತೆಯೂ ಇಲ್ಲ.
- ಆಮದಿಗೆ ಯಾವ ಕಷ್ಟವೂ ಇಲ್ಲ.
- ನೀರಿನಲ್ಲಿ ಕರಗುವ SOP ಚೀನಾ ತಯಾರಿಕೆ ಸುಮಾರು 55-60 ರೂ. ಗಳಿಗೂ. ಬೇರೆ ದೇಶಗಳ ತಯಾರಿಕೆಗೆ ರೂ. 75 ತನಕವೂ ಇದೆ.
- ಮಣ್ಣಿಗೆ ಸೇರಿಸುವ SOP ಗೆ ಸುಮಾರು 50-55 ರೂ ತನಕ ಇದೆ.
- ದೀರ್ಘ ಕಾಲದ ತನಕ ಕಡಿಮೆ ದರದ, ಸರಕಾರದ ಸಬ್ಸಿಡಿ ಇರುವ ಮ್ಯುರೇಟ್ ಆಫ್ ಪೊಟ್ಯಾಶ್ ಕೊರತೆಯನ್ನು ಸೃಷ್ಟಿಸುವುದರಿಂದ, ಈ ಪ್ರಕಾರದ ಗೊಬ್ಬರಗಳಿಗೆ ವ್ಯವಹಾರ ಚಿಗುರಲಿದೆ.
- ಇತ್ತೀಚೆಗಿನ ದಿನಗಳಲ್ಲಿ ಈ ಪ್ರಕಾರದ ಗೊಬ್ಬರದ ಮಾರಾಟಗಾರರು ಹಳ್ಳಿ ಹಳ್ಳಿಗಳಲ್ಲೂ ಹೆಚ್ಚಾಗುತ್ತಿದ್ದು, ಇದು ಒಂದು ಸಂಚು ಎಂಬುದಾಗಿ ಕೆಲವರು ಅಭಿಪ್ರಾಯಪಡುತ್ತಾರೆ.
- ಜನ SOP ಗೊಬ್ಬರಕ್ಕೆ ಅಥವಾ ಸಬ್ಸಿಡಿ ರಹಿತ ಪೊಟ್ಯಾಶ್ ಒಳಗೊಂಡ ಗೊಬ್ಬರಕ್ಕೆ ಬದಲಾವಣೆ ಆಗುವುದರಿಂದ ಖಾಸಗಿಯವರಿಗೆ ಲಾಭವಾಗಲಿದೆ.
- ಸರಕಾರಕ್ಕೆ ಸಬ್ಸಿಡಿ ಕೊಡುವ ಹೊರೆಯೂ ಕಡಿಮೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬದಲಿ ಪೊಟ್ಯಾಶ್ ಮೂಲಗಳ ಹುಡುಕಾಟ ಅಗತ್ಯ:
- ವಿದೇಶಗಳಿಂದ ಮ್ಯುರೇಟ್ ಆಫ್ ಪೊಟ್ಯಾಶ್ ತರಿಸುವುದು, ಇಲ್ಲಿ ಬಳಸುವುದು ಇದು ನಿತ್ಯ ರಗಳೆಯ ವ್ಯವಹಾರವಾಗಿಯೇ ಉಳಿಯಲಿದೆ.
- ಇಷ್ಟಕ್ಕೂ ಇದು ಮುಗಿದು ಹೋಗುವ ಸಂಪನ್ಮೂಲವಾಗಿರುತ್ತದೆ.
- ಸ್ವಾವಲಂಭಿ ಕೃಷಿಗೆ ದೇಶೀಯವಾಗಿಯೇ ಯಾವುದಾದರೂ ನೈಸರ್ಗಿಕ ಮೂಲದ ಪೊಟ್ಯಾಶ್ ಸತ್ವ ಉಳ್ಳ ಉತ್ಪನ್ನವನ್ನು ಹುಡುಕಬೇಕಾದ ತುರ್ತು ಅಗತ್ಯ ಇದೆ.
- ನಮ್ಮ ದೇಶದಲ್ಲಿ ಇರುವ ವಿವಿಧ ನೈಸರ್ಗಿಕ ಖನಿಜ, ಶಿಲೆ ಮೂಲಗಳಲ್ಲಿ ಪೊಟ್ಯಾಶ್ ಅಂಶದ ಇರುವಿಕೆಯ ಪತ್ತೆಗೆ ರೈತರು ಒತ್ತಾಯಿಸಬೇಕಾಗಿದೆ.
- ತಜ್ಞರು, ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.
ಪೊಟ್ಯಾಶ್ ಒಂದೆರಡು ತಿಂಗಳ ಒಳಗೆ ಬರುತ್ತದೆ. ಆದರೆ ಬೆಲೆ ಹೆಚ್ಚಾಗುತ್ತದೆ. ಆದ ಕಾರಣ ಬೆಳೆಗಾರರು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮಿತವಾಗಿ ನೀರಿನಲ್ಲಿ ಕರಗಿಸಿ ಎರೆಯುವ ಮೂಲಕ ಕಡಿಮೆ ಪ್ರಮಾಣದಲ್ಲಿ ಬಳಸಿ ಉಳಿತಾಯ ಮಾಡಬಹುದು. ನಾವು ಒಂದು ಎರಡು ಕಂತಿನಲ್ಲಿ ಕೊಡುವ ಗೊಬ್ಬರ ನಶ್ಟವಾಗುವುದೇ ಹೆಚ್ಚು. ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಕೊಡುತ್ತಾ ಇದ್ದರೆ ಜೋಬಿಗೂ ಹೊರೆಯಾಗದು. ಬೆಳೆಗೂ ಕೊರತೆ ಆಗದು.