ಕಬ್ಬಿನ ಬೆಳೆಗೆ ಪೊಟ್ಯಾಶಿಯಂನ ಅವಶ್ಯಕತೆ ಹೆಚ್ಚು. ಪೊಟ್ಯಾಶಿಯಂ ಸತ್ವ ಕೊರತೆಯಾದ ಕಬ್ಬಿನ ಬೆಳೆಗೆ ಬೆಲೆ ಇಲ್ಲ.ಅದು ಕಬ್ಬು ಎನ್ನಿಸಿಕೊಳ್ಳಲಾರದು.ಸಾರಜನಕ ಕೊಡಿ. ರಂಜಕ ಕೊಡಿ ಆದರೆ ಪೊಟ್ಯಾಶಿಯಂ ಕೊಟ್ಟಾಗ ಮಾತ್ರ ಅದರ ಪ್ರತಿಫಲ ಲಭ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಪೊಷಕಾಂಶ.
- ಹಿಂದೆ ನಮ್ಮಲ್ಲಿ ಸಕ್ಕರೆ ತಯಾರಿಕೆ ಇರಲಿಲ್ಲ. ಬೆಲ್ಲವೇ ಹೆಚ್ಚು.
- ಉತ್ತಮ ಬೆಲ್ಲ ದೊರೆಯಬೇಕಾದರೆ ಮಣ್ಣಿಗೆ ಬೂದಿ ಅಂಶ ಯಥೇಚ್ಚವಾಗಿ ಬೇಕು ಎಂದು ಹೊಲಕ್ಕೆ ರವದಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ಹಾಕಿ ಅದನ್ನು ಸುಟ್ಟು ಪೊಟ್ಯಾಶಿಯಂ ಸತ್ವವನ್ನು ಹೊಂದಿಸಿಕೊಳ್ಳುತ್ತಿದ್ದರು.
- ಕ್ರಮೇಣ ಪೊಟ್ಯಾಶ್ ಸತ್ವವನ್ನು ಒದಗಿಸುವ ರಾಸಾಯನಿಕ ಪೋಷಕ ಬಂತು.
- ಅದನ್ನು ಕೆಲವು ನಿರ್ದಿಷ್ಟ ಹಂತದಲ್ಲಿ ಬೆಳೆಗಳಿಗೆ ಬಳಸಿದಾಗ ಕಬ್ಬಿನಲ್ಲಿ ಸಕ್ಕರೆ ರಿಕವರಿ ಉತ್ತಮವಾಗುತ್ತದೆ.
ಪೊಟ್ಯಾಶಿಯಂ ನ ಪಾತ್ರ:
- ಒಂದು ಎಕ್ರೆ ಕಬ್ಬು ಬೆಳೆಸಿ 100 ಟನ್ ಇಳುವರಿ ಪಡೆಯುವ ಗುರಿ ಇದ್ದರೆ ಆ ಹೊಲಕ್ಕೆ ಸುಮಾರು 80 ಕಿಲೋ ಪೊಟ್ಯಾಶ್ ಬೇಕಾಗುತ್ತದೆ.
- ಯಾವ ಹೊಲದಲ್ಲಿ ಕಬ್ಬನ್ನು ಮತ್ತೆ ಮತ್ತೆ ಬೆಳೆಯಲಾಗುತ್ತದೆಯೋ ಅಂತಹ ಹೊಲಕ್ಕೆ ಪೊಟ್ಯಾಶಿಯಂ ಪೋಷಕದ ಕೊರತೆ ಉಂಟಾಗುತ್ತದೆ.
- 40:30:80 ಕಬ್ಬಿನ ಬೆಳೆಗೆ ಅಗತ್ಯವಾಗಿ ಬೇಕಾಗುವ NPK ಪ್ರಮಾಣ.
ಜೀವ ಕೋಶದ ರಚನೆ, ಆಹಾರ ಜೀರ್ಣವಾಗುವುದು, ದ್ಯುತಿ ಸಂಶ್ಲೇಷಣೆ ಕ್ರಿಯೆ, ಸಸಾರಜನಕದ ಸಂಯೋಜನೆ , ಸಕ್ಕರೆಯ ಚಲನೆ, ನೀರಿನ ಬಳಕೆ, ಸಮರ್ಪಕ ಬೇರು ವೃದ್ದಿ ಮತ್ತು ಇನ್ನೂ ಹಲವಾರು ಅಗತ್ಯ ಸಸ್ಯ ಚಟುವಟಿಕೆಗೆ ಪೊಟ್ಯಾಶಿಯಂ ಅವಶ್ಯಕವಾಗಿ ಬೇಕು.
- ಕಬ್ಬಿನ ಸಸ್ಯದಲ್ಲಿ ಬೇರೆ ಬೇರೆ ಭಾಗಗಳಲಿ ಪೊಟ್ಯಾಶಿಯಂ ನ ಸತ್ವ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
- ನಾಟಿ ಮಾಡುವ ಸಮಯದಲ್ಲಿ ಮೊದಲ 6 ತಿಂಗಳ ತನಕ ಪೊಟ್ಯಾಶ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
- ಆ ನಂತರ ಅದು ಎಲ್ಲಿ ಬೇಕೋ ಅಲ್ಲೆಲ್ಲಾ ಉಳಿದು ಸಕ್ಕರೆ ಪ್ರಮಾಣ ಹೆಚ್ಚಲು ನೆರವಾಗುತ್ತದೆ.
- ಪೊಟ್ಯಾಶಿಯಂ ಒಂದು ಎಲೆ ಬೆಳೆದು ಹಣ್ಣಾಗುವಾಗ ನಂತರದ ಎಲೆಗೆ ಬಂದು ಸೇರುತ್ತದೆ.
- ಕಬ್ಬಿನಲ್ಲಿ ತುದಿ ಭಾಗದ ಎಲೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚು ಇರುತ್ತದೆ.
- ಅದಕ್ಕಾಗಿಯೇ ಕಬ್ಬು ಕಠಾವು ಮಾಡುವಾಗ ತುದಿ ಭಾಗವನ್ನು ಕತ್ತರಿಸಿ ಹೊಲಕ್ಕೆ ಹಾಕಿ, ಅದನ್ನು ಸರಿಯಾಗಿ ಕಳಿಯಿಸಿ ಕಾಂಪೋಸ್ಟು ಮಾಡಿದರೆ ಬೆಳೆಗೆ ಸಾಕಷ್ಟು ಪೊಟ್ಯಾಶಿಯಂ ಲಭ್ಯವಾಗುತ್ತದೆ.
- ಇದರಲ್ಲಿ 5.10% ತನಕ ಪೊಟಾಶಿಯಂ ಸತ್ವ ಇರುತ್ತದೆ.
ಕಬ್ಬಿನಲ್ಲಿ ಎಲ್ಲೆಲ್ಲಿ ಪೊಟ್ಯಾಶಿಯಂ ಇದೆ:
- ಕಬ್ಬಿನ ಚಿಗುರು ಮತ್ತು ವಿಭಜ್ಯೋತಕಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
- ಬೆಳೆಯುವ ಎಲೆಗಳ ಕವಚದಲ್ಲಿ ಮತ್ತು ಮುದುಡಿಕೊಂಡ ಕವಚದಲ್ಲಿ ಮತ್ತು ಬೆಳೆದ ಎಲೆಗಳಲ್ಲೂ ಪೊಟ್ಯಾಶ್ ಅಂಶ ಶೇಖರಣೆಯಾಗಿರುತ್ತದೆ.
ಗುಣಮಟ್ಟದ ಕಬ್ಬಿಗೆ ಪೊಟ್ಯಾಶಿಯಂ:
- ಪೊಟ್ಯಾಶಿಯಂ ಸತ್ವವು ಕೋಶಗಳನ್ನು ಗಟ್ಟಿ ಮಾಡುತ್ತದೆ.
- ಸಸಿಗಳ ಊತಕಗಳ ಹೊರಚರ್ಮವನ್ನು ಗಟ್ಟಿಗೊಳಿಸಿ ಸಸ್ಯಗಳು ರೋಗಕ್ಕೆ ತುತ್ತಾಗದಂತೆ ತಡೆಯುತ್ತದೆ.
- ಬೇರು ಹೆಚ್ಚುತ್ತದೆ.ನೀರನ್ನು ಆಳದಿಂದಲೂ ತೆಗೆದುಕೊಳ್ಳುತ್ತದೆ.
- ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುತ್ತದೆ.
- ನೀರು ಕಡಿಮೆ ಸಾಕಾಗುತ್ತದೆ.
ಕೊರತೆ ಆದಾಗ:
- ಕಬ್ಬಿನ ಬೆಳೆಗೆ ಪೊಟ್ಯಾಶ್ಯಂ ಯಾವುದೇ ಕಾರಣಕ್ಕೂ ಕೊರತೆ ಆಗ ಕೂಡದು.
- ಆಗ ದ್ಯುತಿಸಶ್ಲೇಷಣ ಕ್ರಿಯೆಗೆ ಅಡ್ಡಿಯಾಗುತ್ತದೆ.
- ಎಲೆಗಳ ಗಾತ್ರ ಮತ್ತು ಸಂಖ್ಯೆ ಕಡಿಮೆಯಾಗುತ್ತದೆ.
- ಬೇಗ ಮಾಗುತ್ತದೆ. ಕಡಿಮೆ ಬೆಳೆವಣಿಗೆಯನ್ನು ಹೊಂದಿ, ಹಳದಿ ಬಣ್ಣಕ್ಕೆ ತಿರುಗುತ್ತದೆ.
- ವಯಸ್ಸಾದ ಎಲೆಗಳು ಕಿತ್ತಳೆ ಹಳದಿ ಬಣ್ಣದಲ್ಲಿ ಇರುತ್ತವೆ. ಎಲೆಗಳು ಸರಿಯಾಗಿ ಬಿಡಿಸಿಕೊಳ್ಳದೆ ಇರುತ್ತವೆ.
ಎಷ್ಟು ಪೊಟ್ಯಾಶ್ ಬೇಕು:
- ಕಬ್ಬಿನ ಬೆಳೆಯ ಬಹುತೇಕ ತ್ಯಾಜ್ಯಗಳನ್ನು ಮರು ಬಳಕೆ ಮಾಡಿದರೆ 25 ರಿಂದ40% ಪೊಟ್ಯಾಶಿಯಂ ಕಡಿಮೆ ಮಾಡಬಹುದು.
- ಕಾಕಂಬಿಯನ್ನು ಬಳಸಿದರೂ ಸಹ ಇಷ್ಟೇ ಪ್ರಮಾಣ ಕಡಿಮೆ ಮಾಡಬಹುದು.
- ಪೊಟ್ಯಾಶಿಯಂ ನೀರಿನಲ್ಲಿ ಕರಗುವುದರಿಂದ ಕಾಕಂಬಿಯಲ್ಲಿ ಉಳಿಯುತ್ತದೆ.
- ಆದ ಕಾರಣ ಕಾಕಂಬಿಯನ್ನು ಸಾಧ್ಯವಾದಷ್ಟು ಬಳಸಿ.
- ಇದನ್ನು ಬಳಸದೇ ಇದ್ದರೆ ಎಕ್ರೆಗೆ 75-80 ಕಿಲೋ ಗ್ರಾಂ ಪೊಟ್ಯಾಶಿಯಂ ಶಿಫಾರಸು ಮಾಡಲಾಗಿದೆ.
- ಸಾಕಷ್ಟು ಪ್ರಮಾಣದಲ್ಲಿ ಸಾರಜನಕ ಇದ್ದಾಗ ಮಾತ್ರ ಪೊಟ್ಯಾಶಿಯಂ ನ ಸದುಪಯೋಗ ಆಗುತ್ತದೆ.
- ಸಾರಜನಕದ ಜೊತೆಗೆ ಪೊಟ್ಯಾಶ್ ಕೊಡಬೇಕು.
- ಕಬ್ಬಿನ ಸಸ್ಯದಲ್ಲಿ 7 ನೇ ಎಲೆಯ ಕೆಳಗಿನ ಎಲೆಗಳು ಬಾಡಿದಂತಿದ್ದರೆ ಪೊಟ್ಯಾಶ್ ಕಡಿಮೆಯಿದೆ ಎಂದರ್ಥ.
- ಪೊಟ್ಯಾಷ್ ಕಡಿಮೆಯಾದಾಗ ನೀರು ಎಷ್ಟು ಪೂರೈಕೆ ಮಾಡಿದರೂ ಎಲೆಗಳಲ್ಲಿ ಕೊರತೆಯಾದಂತೆ ಕಾಣಿಸುತ್ತದೆ.
- ಸೂಕ್ತ ಪ್ರಮಾಣದಲ್ಲಿ ಪೊಟ್ಯಾಷ್ ಪೂರೈಸಿದಲ್ಲಿ ಕಬ್ಬಿನ ಸಕ್ಕರೆ ಪ್ರಮಾಣ ಉತ್ತಮವಾಗಿರುತ್ತದೆ.
- ತೂಕ ಬರುತ್ತದೆ. ಉತ್ತಮ ಬೆಲೆಯೂ ಬರುತ್ತದೆ.
ಯಾವ ಪೊಟ್ಯಾಶ್ ಉತ್ತಮ :
- ಪ್ರಾರಂಭಿಕ ಹಂತದಲ್ಲಿ ಮ್ಯುರೇಟ್ ಆಫ್ ಪೊಟ್ಯಾಷ್ ಗೊಬ್ಬರವನ್ನು ಕೊಡುವುದು ಅಗ್ಗವಾಗುತ್ತದೆ.
- ಆದರೆ ಪೊಟ್ಯಾಶ್ ಇಳಿದು ಹೋಗಿ ನಷ್ಟವಾಗುವ ಕಾರಣ ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ.
- ಬೆಳೆ ಮಾಗಲು 2- 3 ತಿಂಗಳು ಇರುವ ತನಕವೂ ಪೊಟ್ಯಾಷ್ ಗೊಬ್ಬರವನ್ನು ಕೊಡುತ್ತಿರಬೇಕು.
- ಕೊನೆಯ ಹಂತದಲ್ಲಿ ಸಲ್ಫೇಟ್ ಆಫ್ ಪೊಟ್ಯಾಷ್ SOP ಗೊಬ್ಬರವನ್ನು ಕೊಡಿ.
- ಎರಡೂ ಗೊಬ್ಬರವನ್ನು ಹನಿ ನೀರಾವರಿಯ ಮೂಲಕ ಒದಗಿಸಬಹುದು.
ಪೊಟ್ಯಾಶಿಯಂ ಪೋಷಕವನ್ನು ಕೊಟ್ಟ ಕಬ್ಬಿನಲ್ಲಿ ಇಳುವರಿ ಹೆಚ್ಚಿ, ಬೆಳೆದ ರೈತರಿಗೆ ಲಾಭವನ್ನು ತಂದು ಕೊಡುತ್ತದೆ.