ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ

ಬೇರು ಹುಳ ಬಾಧಿತ ತೆಂಗು

ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ  ಇರುವುದೇ ಆಗಿದ್ದರೆ   ಅಂತಹ ಮರಕ್ಕೆ ಬೇರು ಹುಳದ ತೊಂದರೆ  ಇದೆ ಎಂದು ಸಂಶಯ ಪಡಬಹುದು.

 • ತೆಂಗಿನ ಮರಕ್ಕೆ  ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ.
 • ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು.

ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ  ಪ್ರಮಾಣದಲ್ಲಿ ಬೇರು ಹುಳದ ಬಾಧೆ  ಇದೇ ಇದೆ.

 • ತೀರಾ ಜಿಗುಟು ಮಣ್ಣು, ಮತ್ತು  ಜಂಬಿಟ್ಟಿಗೆ ಮಣ್ಣು ಇರುವಲ್ಲಿ  ಇದರ ಸಮಸ್ಯೆ ಸ್ವಲ್ಪ ಕಡಿಮೆ  ಇರಬಹುದಾದದರೂ ಮರಳು ಮಿಶ್ರ ಮಣ್ಣು  ಇರುವಲ್ಲಿ  ಬೇರು ಹುಳ ಇಲ್ಲ ಎಂದು ಯಾರೂ ಹೇಳುವಂತಿಲ್ಲ.
 • ಸ್ವಲ್ಪ ಪ್ರಮಾಣ ಕಡಿಮೆ ಇರಬಹುದು ಅಷ್ಟೇ .
 • ಈ ಬೇರು ಹುಳಗಳು ಬರೇ ಅಡಿಕೆಗೆ ಮಾತ್ರವಲ್ಲ, ತೆಂಗಿಗೂ ಬಾಧಿಸುತ್ತದೆ.
 • ತೆಂಗಿನ ಮರದ ಎಳೆ ಬೇರುಗಳನ್ನು ತಿನ್ನುತ್ತದೆ.
 • ಮರ ಅತ್ತ ಸಾಯದೆಯೂ ಇದ್ದೂ ಫಲವಿಲ್ಲದಂತೆ  ಇರುತ್ತದೆ.

ಸಾಮನ್ಯವಾಗಿ ಕರಾವಳಿ, ಮಲೆನಾಡು ಮತ್ತು ಅಡಿಕೆ ಬೆಳೆಯುವ ಬಯಲು ಸೀಮೆಯಲ್ಲೆಲ್ಲಾ ತೆಂಗು ಮತ್ತು ಅಡಿಕೆಯನ್ನು ಬೆಳೆಯುವ ರೈತರೇ ಹೆಚ್ಚು. ಇಲ್ಲೆಲ್ಲಾ ಬೇರು ಹುಳ ಹೆಚ್ಚು ಕಡಿಮೆ  ತೆಂಗಿನ ಮರದ ಬೇರುಗಳಿಗೆ ಹಾನಿ ಮಾಡಿದ ಕಾರಣವೇ ತೆಂಗಿನಲ್ಲಿ ಇಳುವರಿ ತುಂಬಾ ಕಡಿಮೆಯಾಗುತ್ತಿದೆ.

ಯಾವ ಬೇರು ಹುಳ:

 • ಬೇರು ಹುಳದಲ್ಲಿ ದಲ್ಲಿ ಮೂರು ಬಗೆಯ ವರ್ಗೀಕರಣ ಮಾಡಲಾಗಿದೆ. ಕರಾವಳಿಯ ಮರಳು ಮಣ್ಣಿನಲ್ಲಿ Leucupholis coneophora Burm., ಎಂಬವರ್ಗದ ಬೇರು ಹುಳ ಸಾಮಾನ್ಯವಾಗಿ ಕಂಡು ಬರುತ್ತದೆ.
 • ಮಲೆನಾಡಿನ ಕೊಪ್ಪ, ಶ್ರಿಂಗೇರಿ, ಶಿವಮೊಗ್ಗ, ಬೆಳ್ತಂಗಡಿ, ಚಿಕ್ಕಮಗಳೂರು , ಕರಾವಳಿಯ ಒಳನಾನಲ್ಲಿ Leucupholis burmeisteri ಎಂಬ ವರ್ಗದ ಬೇರು ಹುಳ ಕಂಡು ಬರುತ್ತದೆ.
 • ಎತ್ತರದ ಪರ್ವತ ಶ್ರೇಣಿ ಮತ್ತು ಜೇಡಿ ಮಣ್ಣು ಉಳ್ಳ ಪ್ರದೇಶಗಳಲ್ಲಿ ( ಮಹಾರಾಷ್ಟ್ರ, ಕರ್ನಾಟಕದ ಘಟ್ಟ ಪ್ರದೇಶಗಳು ಪೂರ್ವೋತ್ತರ  ರಾಜ್ಯಗಳ ಘಟ್ಟ ಪ್ರದೇಶಗಳಲ್ಲಿ Leucupholis lepidophora   ವರ್ಗದ ಬೇರು  ಹುಳ ಕಂಡು ಬರುತ್ತದೆ.

ಯಾವಾಗ ಹೆಚ್ಚು ಹಾನಿ ಮಾಡುತ್ತದೆ:

 • ಬೇರು ಹುಳ ಮೇ ತಿಂಗಳಿನಿಂದ ಜೂನ್ ಕೊನೆ ತನಕ ದುಂಬಿಗಳಾಗಿದ್ದು ನೆಲದಿಂದ ಹೊರಕ್ಕೆ  ಬಂದು ಜೋಡಿಯಾಗಿ ಮತ್ತೆ ನೆಲವನ್ನು ಸೇರುತ್ತವೆ.
 • ಜುಲಾಯಿ ನಂತರ ಅವು ಮೊಟ್ಟೆ ಇಡುತ್ತವೆ. ಮೊಟ್ಟೆಯು ಸುಮಾರು 1 ವಾರದಲ್ಲಿ  ಮರಿಯಾಗುತ್ತದೆ. ಮರಿಯಾಗಿರುವಾಗ ಇವು ಮೂರು ಹಂತಗಳನ್ನು ಪೂರೈಸುತ್ತವೆ.
 • ಎರಡು ಹಂತದವರೆಗೆ ಅಂತಹ ಹಾನಿ ಇರುವುದಿಲ್ಲ.
 • ಮೂರನೇ ಹಂತದಲ್ಲಿ ಹುಳ ಸುಮಾರು 2 ಇಂಚಿಗೂ ದೊಡ್ದದಾಗುತ್ತದೆ.
 • ಈ ಸಮಯದಲ್ಲಿ ಅವುಗಳಿಗೆ ಆಹಾರವೇ ಬೇರು.
 • ಅವು ಎಲ್ಲಿ ಇರುತ್ತವೆಯೋ ಅಲ್ಲಿ ಇರುವ ಬೇರನ್ನು ಅವು ತಿನ್ನುತ್ತವೆ.
 • ಅಡಿಕೆ, ತೆಂಗು ಮರದ ಬೇರುಗಳೆಂದರೆ ಅವುಗಳಿಗೆ ಹೆಚ್ಚು ರುಚಿಯಾಗಿರಬೇಕು.
 • ಮೂರನೇ ಹಂತವು ಸಪ್ಟೆಂಬರ್ ತಿಂಗಳಿನಿಂದ ಪ್ರಾರಂಭವಾಗಿ ಫೆಭ್ರವರಿ ಕೊನೆ ತನಕ ಇರುತ್ತದೆ.
 • ಈ ಸಮಯದಲ್ಲಿ ಅವು ಸಾಕಷ್ಟು ಬೇರನ್ನು ತಿನ್ನುತ್ತವೆ.
 • ಮಳೆಗಾಲ ಕಳೆದು ಚಳಿ ಬಿದ್ದಾಗ ಶುಶ್ಕ ವಾತಾವರಣ ಉಂಟಾದಾಗ ಸಸ್ಯಗಳಿಗೆ ಬೇರುಗಳ ಸಂಖ್ಯೆ ಕಡಿಮೆಯಾಗುವುದೇ ಅಲ್ಲದೆ ತೇವಾಂಶದ ಕೊರತೆಯೂ ಉಂಟಾಗಿ ಮರಸೊರಗಲಾರಂಭಿಸುತ್ತದೆ.

ಬರೇ ಮರಕ್ಕೆ ಮಾತ್ರವಲ್ಲ. ಸಸಿಗಳಿಗೂ ಬಾಧಿಸುತ್ತದೆ. ಸಸಿಯ ಬೇರುಗಳನ್ನು ತಿಂದು ಅದರ ಬುಡ ಭಾಗ( ಕಾಲರ್  ಭಾಗ)ದ ವರೆಗೂ ತಿನ್ನುತ್ತಾ ಸಸಿ ಸಾಯಲೂ ಬಹುದು.

ಬರೇ ತೆಂಗಿನ ಬೇರು ಒಂದೇ ಅಲ್ಲ. ಕೊಕ್ಕೋ, ಮರಗೆಣಸು, ಬಾಳೆ ತರಕಾರಿಗಳ ಬೇರನ್ನೂ ಇವು ತಿನ್ನುತ್ತವೆ.

ಪರಿಹಾರ:

 • ಬೇರು ಹುಳವನ್ನು ರಾಸಾಯನಿಕ ಮತ್ತು ಜೈವಿಕ ವಿಧಾನಗಳ ಮೂಲಕ ನಿಯಂತ್ರಣ ಮಾಡಬಹುದು.
 • ರಾಸಾಯನಿಕ ವಿಧಾನ ಬುಡ ಭಾಗದಲ್ಲಿ ಮರದ ನಾಲ್ಕೂ ದಿಕ್ಕಿನಲ್ಲಿ ಸುಮಾರು ½ ಅಡಿ ಸುತ್ತಳೆತೆ ಮತ್ತು 1 ಅಡಿ ಆಳದ ಹೊಂಡವನ್ನು ಮಾಡಿ ಅದಕ್ಕೆ ಕ್ಲೋರೋಫ್ಹೆರಿಫೋಸ್ 50EC , 3 ಮಿಲಿ/1ಲೀ ನೀರು , ಅಥವಾ ಇಮಿಡಾಕ್ಲೋಫ್ರಿಡ್ 1 ಮಿಲಿ/1 ಲೀ ನೀರು ಅಥವಾ ಬೈಫೆಂಥ್ರಿನ್ 1೦ EC 2 ಗ್ರಾಂ/1 ಲೀ. ನೀರು  ದ್ರಾವಣ ಮಾಡಿ ಆ ಹೊಂಡಕ್ಕೆ ಪ್ರತೀ ಹೊಂಡಕ್ಕೆ 4 ಲೀ.ನಂತೆ  ಹೊಯ್ದು ಅದರ ಗಾಳಿ ಹೊರ ಹೋಗದಂತೆ ಏದಾರೂ ಇಟ್ಟು ಮಣ್ಣು ಮುಚ್ಚಬೇಕು.
 • ಇದು ನೆಲದಲ್ಲಿ ಫ್ಯುಮಿಗೆಶನ್ ಮಾದರಿಯಲ್ಲಿ ಪಸರಿಸಿ ಹುಳದ ನಾಶಮಾಡುತ್ತದೆ.
 • ಜೈವಿಕವಾಗಿ ಒಂದು ಜಾತಿಯ ನಮಟೋಡು ಇದ್ದು, ಸ್ಪಿನರ್ ನಿಮಾ  ಎಂಬ ಹೆಸರಿನ  ಜೈವಿಕ ಉತ್ಪನ್ನವನ್ನು( 40-50 ಲಕ್ಷ ಸಂಖ್ಯೆಯಲ್ಲಿ  ಇರುವುದನ್ನು  5 ಲೀ. ನೀರಿನಲ್ಲಿ ಬೆರೆಸಿ) ನೀರಿನಲ್ಲಿ  ಮಣ್ಣಿಗೆ  ಸುರಿಯಬೇಕು.
 • ಮೆಟರೈಜಿಯಂ , ಪೆಸಿಲೋಮೈಸಿಸ್ ಜೈವಿಕ ಕೀಟನಾಶಕವನ್ನೂ ಬಳಸಬಹುದು. ಜಂತು ಹುಳ (ನಮಟೋಡುಗಳು) ಹೆಚ್ಚಿನ ಫಲಿತಾಂಶ ಕೊಡುತ್ತವೆ.

ತೆಂಗು ಬೆಳೆಗಾರರು ತೆಂಗಿನ ಮರದಲ್ಲಿ ಯಾಕೆ ಇಳುವರಿ ಕಡಿಮೆಯಾಗುತ್ತಿದೆ ಎಂದು ಹೆಚ್ಚು ಹೆಚ್ಚು ಗೊಬ್ಬರ ಕೊಡುವ ಬದಲು ಒಮ್ಮೆ  ಈ ಸಮಯದಲ್ಲಿ ಬುಡ ಭಾಗವನ್ನು  ಅಗೆದು ಬೇರನ್ನು ಗಮನಿಸಿರಿ. ಬೇರು ಹುಳ ಇದ್ದರೆ  ಈಗ ಕಾಣಲು ಸಿಗುತ್ತದೆ.

Leave a Reply

Your email address will not be published. Required fields are marked *

error: Content is protected !!