ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ .

ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ

ಮಣ್ಣು ಅದರಷ್ಟಕ್ಕೇ ಇದ್ದರೆ ಅಂದರೆ ಕಾಡು , ಮರಮಟ್ಟು ಬೆಳೆಯುತ್ತಾ ಇದ್ದರೆ ಅದರ ಆರೋಗ್ಯ ಸ್ಥಿತಿ ವ್ಯತ್ಯಾಸ ಆಗುವುದಿಲ್ಲ. ಬೆಳೆ ಬೆಳೆಸುವಾಗ ಬಳಸುವ ಬೆಳೆ ಪೋಷಕಗಳು ಮಣ್ಣಿನ ಗುಣವನ್ನು ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಮಾಡುತ್ತವೆ. ಇದನ್ನು ಮಣ್ಣಿನ ಆರೋಗ್ಯ ಕೆಡುವುದು ಎಂದು ಹೇಳಬಹುದು. ಮಣ್ಣಿನ ಆರೋಗ್ಯ ಗುಣದ ಮೇಲೆ ನಾವು ಬೆಳೆಸುವ ಬೆಳೆಯ ಪ್ರತಿಫಲ ಇರುತ್ತದೆ. ಇದನ್ನು ತಿಳಿದು ಕೃಷಿ ಮಾಡಿದರೆ ನಿರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ.

 • ಮಣ್ಣು ಸೃಷ್ಠಿಯ ಅತ್ಯದ್ಬುತ ಕೊಡುಗೆ.
 • ಮಣ್ಣಿಲ್ಲದೆ ಯಾವಜೀವಿಯೂ ಬದುಕಲಾರದು, ಮಣ್ಣಿನಿಂದ ಮಾನವ ಅಪಾರ ಪ್ರಮಾಣದ ಪ್ರಯೋಜನವನ್ನು ಪಡೆಯುತ್ತಿದ್ದಾನೆ.
 • ಇಂತಹ ಒಂದು ನೈಸರ್ಗಿಕ ಸಂಪತ್ತನ್ನು ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

ಮಣ್ಣು ಪರೀಕ್ಷೆಗೆ ಮಾದರಿ ಸಂಗ್ರಹಣೆ

ಕೃಷಿಮಾಡುವಾಗ ರಾಸಾಯನಿಕ ಗೊಬ್ಬರಗಳ, ಪೀಡೆ ಮತ್ತು ಕೀಟನಾಶಕಗಳನ್ನು   ಬಳಸಿದಾಗ ರಾಸಾಯಿನಿಕ ಮತ್ತು ಜೈವಿಕ ಗುಣಧರ್ಮಗಳಲ್ಲಿ ವ್ಯತ್ಯಾಸವಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು ಬೆಳೆ ಇಳುವರಿಯ ಮೇಲೆ  ಇದು ದುಶ್ಪರಿಣಾಮ ಬೀರುತ್ತದೆ. ಮಣ್ಣಿಗೆ ಏನಾಗಿದೆ,ಯಾಕೆ ಇಳುವರಿ ಬರುತ್ತಿಲ್ಲ ಎಂದು ತಿಳಿಯಲು ಮಣ್ಣು ಪರೀಕ್ಷೆ ಎಂಬುದು ಒಂದು ಆರೋಗ್ಯ ತಪಾಸಣೆ.

ಮಣ್ಣು ಪರೀಕ್ಷೆ ಎಂದರೆ  ಏನು?

 •  ಮಣ್ಣು ಪರೀಕ್ಷೆ ಎಂದರೆ, ಮಣ್ಣಿನ ಮಾದರಿಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಆ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು.
 •  ಮಣ್ಣಿನ ವೈಜ್ಞಾನಿಕ ಪರೀಕ್ಷೆಯಿಂದ ಮಣ್ಣಿನ ಆರೋಗ್ಯ ಹೇಗಿದೆ ಎಂದು ತಿಳಿಯಲಿಕ್ಕೆ ಆಗುತ್ತದೆ.
 • ಮಣ್ಣಿನಲ್ಲಿರುವ  ಪೋಷಕಾಂಶಗಳ ಪ್ರಮಾಣ, ನೀರು ಹಿಡಿದಿಟ್ಟುಕೊಳ್ಳುವ ಮತ್ತು ಗಾಳಿಯಾಡುವ ಸಾಮರ್ಥ್ಯವೇನು ಎಂಬುದನ್ನು ಸಹ ಇದು ತಿಳಿಸಿಕೊಡುತ್ತದೆ.

ಮಣ್ಣು ಪರೀಕ್ಷೆ ಮಾಡದೆ ರಸಗೊಬ್ಬರಗಳನ್ನು ಹಾಕುವುದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಬೆಳೆಯ ಬೆಳವಣಿಗೆ ಮತ್ತು ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ ರೈತರು ಯಾವುದೇ ಬೆಳೆಯನ್ನು ಬೆಳೆಯುವುದಕ್ಕೂ ಮುನ್ನ ಮಣ್ಣು ಪರೀಕ್ಷೆ ಮಾಡಿಸಬೇಕಾಗುತ್ತದೆ.

ಮಣ್ಣು ಪರೀಕ್ಷೆ ಮುನ್ನ ಇದನ್ನು ಮಾಡಿ:

 • ಪರೀಕ್ಷೆಗೆ ಮಣ್ಣನ್ನು ಸಂಗ್ರಹಿಸುವ ಮೊದಲು ರೈತರು ನಮ್ಮ ಜಮೀನಿನ ಸುತ್ತ ಸುತ್ತಾಡಿ ಭೂಮಿಯ ಇಳಿಜಾರು, ಬಣ್ಣ, ಕಣ ವಿನ್ಯಾಸ, ಬೆಳೆ ಪದ್ಧತಿ ಇತ್ಯಾದಿಗಳನ್ನು ಪರಿಶೀಲಿಸಿ ಜಮೀನನ್ನು ಏಕರೀತಿಯ ವಿಭಾಗಗಳನ್ನಾಗಿ ವಿಂಗಡಿಸಬೇಕು.
 • ಪ್ರತಿ ಎಕರೆಗೆ ಸುಮಾರು 8-10 ಜಾಗಗಳಲ್ಲಿ ಉಪ ಮಾದರಿ ಮಣ್ಣನ್ನು ತೆಗೆಯುವ ಸ್ಥಳಗಳನ್ನು ಗುರುತಿಸಬೇಕು.
 • ಗುರುತಿಸಿದ ಜಾಗದಲ್ಲಿ, “ವಿ” ಆಕಾರದ ಗುಂಡಿಯನ್ನು 1/2 ಅಡಿ ಆಳದವರೆಗೂ ತೆಗೆಯಬೇಕು.
 • ಈ ಅಳತೆಯು ಸಸ್ಯಗಳ ಬೇರಿನ ಆಳದ ಮೇಲೆ ನಿರ್ಧರಿಸಲ್ಪಟ್ಟಿರುತ್ತದೆ.
 • ಆಹಾರ ಧಾನ್ಯಗಳನ್ನು ಬೆಳೆಯಬೇಕಾದ ಪ್ರದೇಶದಲ್ಲಿ 15 ಸೆಂ.ಮೀ. (ಒಂದು ಗೇಣು) ಆಳದವರೆಗೆ ಸಾಕು.
 • ಹೆಚ್ಚು ಆಳಕ್ಕೆ ಇಳಿಯುವ ಬೇರುಗಳನ್ನು ಹೊಂದಿರುವ ಬೆಳೆಗಳಲ್ಲಿ ಅಥವಾ ತೋಟಗಾರಿಕಾ ಬೇಳೆಗಳಲ್ಲಿ 15 ಹಾಗೂ 30  ಸೆಂ.ಮೀ. ವರೆಗೆ ಒಂದು ಅಡಿ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.
 • V ಆಕಾರದ ಗುಂಡಿಯಲ್ಲಿರುವ ಮಣ್ಣನ್ನು ಹೊರ ಹಾಕಿ, ಸೂರ್ಯನ ದಿಕ್ಕಿನ ವಿರುದ್ದವಾಗಿ ಗುಂಡಿಯ ಒಂದು ಬದಿಯಲ್ಲಿ ಎರಡು ಅಂಗುಲ ದಪ್ಪದ ಮಣ್ಣಿನ ಪದರವನ್ನು ಮೇಲಿನಿಂದ ಗುಂಡಿಯ ತಳ ಭಾಗದವರೆಗೂ ಕತ್ತರಿಸಿ ತೆಗೆಯಬೇಕು.

 ಕ್ಷಾರಯುಕ್ತ ಚೌಳು ಮಣ್ಣಿನಲ್ಲಿ ಕಾಣಿಸುವ ಲವಣದ ಪದರವನ್ನು ತೆಗದು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಮಣ್ಣು ಬಹಳ ಹಸಿಯಾಗಿದ್ದಲ್ಲಿ, ಮಣ್ಣನ್ನು ನೆರಳಿನಲ್ಲಿ ಆರಲು ಬಿಟ್ಟು ಅದು ಒಣಗಿದ ಮೇಲೆ ಮಿಶ್ರಣ ಮಾಡಬೇಕು. ಹೀಗೆ ತಾಕಿನಿಂದ ಸಂಗ್ರಹಿಸಿದ ಮಣ್ಣನ್ನು ಸ್ವಚ್ಚವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಸುರಿದು, ಹೆಂಟೆಗಳನ್ನು ಪುಡಿ ಮಾಡಿ, ಕಲ್ಲು, ಗಾಜಿನ ಚೂರು, ಹುಲ್ಲು ಮುಂತಾದ ವಸ್ತುಗಳನ್ನು ಆರಿಸಿ ತೆಗೆದು ಚೆನ್ನಾಗಿ ಮಿಶ್ರಣ ಮಾಡಬೇಕು. ಅದನ್ನು ಗೋಲಾಕಾರದಲ್ಲಿ ಹರಡಬೇಕು.

 • ನಂತರ ಮಣ್ಣನ್ನು ನಾಲ್ಕು ಭಾಗವನ್ನಾಗಿಸಿ ವಿರುದ್ಧ ದಿಕ್ಕಿನ ಮಣ್ಣನ್ನು ತೆಗೆದುಹಾಕಿ ನಂತರ ಉಳಿದ ಮಣ್ಣನ್ನು ಮಿಶ್ರಣ ಮಾಡಿ ಪುನಃ ಮೊದಲಿನಂತೆ ನಾಲ್ಕು ಭಾಗವನ್ನಾಗಿಸಿ ವಿರುದ್ಧ ಬಾಗದ ಮಣ್ಣನ್ನು ತೆಗೆದುಕೊಳ್ಳಬೇಕು.
 • ಈ ವಿಧಾನವನ್ನು ಸುಮಾರು ಅರ್ಧ ಕಿಲೋ ಗ್ರಾಂ. ಮಣ್ಣು ಮಾದರಿ ಸಿಗುವವರೆಗೂ ಪುನರಾವರ್ತಿಸಬೇಕು.
 •  ಮಣ್ಣಿನ ಮಾದರಿಯ ಜೊತೆಗೆ, ರೈತರ ಹೆಸರು, ಜಮೀನಿನ ಸರ್ವೆ ನಂಬರ್, ಹಳ್ಳಿಯ ಹೆಸರು, ತಾಲ್ಲೂಕು ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಒಂದು ಚೀಟಿಯಲ್ಲಿ ಬರೆದು ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ತಮ್ಮ ಹತ್ತಿರವಿರುವ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕು.

ಎಷ್ಟು ಬಾರಿ ಮಣ್ಣು ಪರೀಕ್ಷೆ ಮಾಡಿಸಬೇಕು:

 • ಸಾಮಾನ್ಯವಾಗಿ ಒಣ ಬೇಸಾಯ ಪ್ರದೇಶಗಳಲ್ಲಿ 3 ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು.
 • ಆದರೆ ನೀರಾವರಿ ಪ್ರದೇಶಗಳಲ್ಲಿ ಪ್ರತಿ ಮಾಸದಲ್ಲಿಯೂ ಬೆಳೆಯುವುದರಿಂದ ಪ್ರತಿ ವರ್ಷವೂ ಮಣ್ಣು ಪರೀಕ್ಷೆ ಮಾಡಿಸುವುದು ಅವಶ್ಯ.

ಮಾದರಿ ಸಂಗ್ರಹಿಸು ವಿಧಾನ:

 •  ಮಣ್ಣು ಸಂಗ್ರಹಿಸುವಾಗ ಕೊಟ್ಟಿಗೆ ಗೊಬ್ಬರ, ಬೂದಿ, ಬೆಳೆಯ ತ್ಯಾಜ್ಯವಸ್ತು, ಗಿಡ-ಮರಗಳ ಬುಡ ಇಲ್ಲವೇ ಬದು ನೀರು ನಿಲ್ಲುವ ಸ್ಥಳ ಮತ್ತು ದಿಬ್ಬ ಪ್ರದೇಶಗಳನ್ನು ಹೊರತುಪಡಿಸಿ, ಬೇರೆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು.
 • ಈ ಮಣ್ಣಿನ ಮಾದರಿಯನ್ನು ಮೇಲೆತಿಳಿಸಿದ ವೈಜ್ಞಾನಿಕ ವಿಧಾನದಲ್ಲಿಯೇ ತೆಗೆಯಬೇಕು.

ಆರೋಗ್ಯಯುತ ಮಣ್ಣಿನ ಲಕ್ಷಣ:

 •  ರಸಸಾರ : 6.5 – 7.5
 •   ಲವಣಾಂಶ : <4.0 ಡೆ.ಸಿ. ಸೈಮನ್ / ಮೀ.
 •   ಇಂಗಾಲಾಂಶ : ಶೇ. >0.5
 •   ಕ್ಷಾರ ಪ್ರಮಾಣ : ವಿನಿಮಯ ಸೋಡಿಯಂ ಶೇ. <15
 •   ದೊರೆಯುವ ಪೋಷಕಾಂಶಗಳು (ಕನಿಷ್ಠ ಪ್ರಮಾಣ)
 •    ಸಾರಜನಕ – 280 ಕೆ.ಜಿ. / ಹೆ.
 •    ರಂಜಕ – 22 ಕೆ.ಜಿ. / ಹೆ.
 •    ಪೋಟ್ಯಾಷ್ – 130 ಕೆ.ಜಿ. / ಹೆ.
 •     ಗಂಧಕ – 20 ಕೆ.ಜಿ. / ಹೆ.
 •    ಸತು – 0.8 ಮಿ. ಗ್ರಾಂ. / ಕೆ.ಜಿ.
 •    ಕಬ್ಬಿಣ – 2.5 ಮಿ. ಗ್ರಾಂ. / ಕೆ.ಜಿ.
 •    ಬೋರಾನ್ – 0.1 ಮಿ. ಗ್ರಾಂ. / ಕೆ.ಜಿ.
 •     ತಾಮ್ರ – 0.2 ಮಿ. ಗ್ರಾಂ. / ಕೆ.ಜಿ.
 •     ಮ್ಯಾಂಗನೀಸ್ – 2.0 ಮಿ. ಗ್ರಾಂ. / ಕೆ.ಜಿ.
 •     ಮೊಲಿಬ್ಡಿ ನಂ -0.1 ಮಿ. ಗ್ರಾಂ. / ಕೆ.ಜಿ.

ಲೇಖಕರು : ಪೂಜಾ ಎಸ್.ಪಿ., ಪಿ.ಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗ., ಕೃ.ವಿ.ವಿ. ಬೆಂಗಳೂರು.      ಡಾ|| ಶ್ರೀನಿವಾಸ್ ಬಿ.ವಿ. ಮಣ್ಣು ವಿಜ್ಞಾನಿ., ಐ.ಸಿ.ಎ.ಆರ್., ಕೆ.ವಿ.ಕೆ., ಕಲಬುರ್ಗಿ.    ಮಾನಸ ಎಲ್.ಪಿ. ಮತ್ತು ಶೃತಿ ಎಂ.ಎಸ್., ಎಂ.ಎಸ್ಸಿ. (ಕೃಷಿ), ಕೃ.ವಿ.ವಿ. ಧಾರವಾಡ.

Leave a Reply

Your email address will not be published. Required fields are marked *

error: Content is protected !!