ಮಳೆ ಎಂದರೆ ಮಳೆ ಅದರಲ್ಲಿ ವಿಶೇಷ ಏನಿದೆ? ಖಂಡಿತವಾಗಿಯೂ ಇದೆ. ಮಳೆ ನೀರು ಸಾಮಾನ್ಯ ನೀರಿನಂತೆ ಕಂಡರೂ ಅದರ ಗುಣ ವ್ಯತ್ಯಾಸಗಳು ಸಸ್ಯಗಳು , ಮನುಷ್ಯರು, ಪ್ರಾಣಿ ಪಕ್ಷಿಗಳು ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಈ ವರ್ಷದ ಮಳೆ ಅಂತಹ ಸನ್ನಿವೇಶವನ್ನು ಉಂಟು ಮಾಡಿದೆ. ಮಳೆ ಎಂಬುದು ಮೇಘ ಸ್ಪೋಟ ಆದಂತೆ ಬರುತ್ತಿದ್ದು, ಕಣ್ಣಿಗೆ ಕಾಣುವಂತ ಕೆಲವು ತೊಂದರೆಗಳು ಮತ್ತು ಕಣ್ಣಿಗೆ ಕಾಣದ ಕೆಲವು ತೊಂದರೆಗಳು ಉಂಟಾಗಿವೆ. ಈ ವರ್ಷದ ಮಳೆ ಮತ್ತು ಇದರಿಂದಾಗಿ ಸಸ್ಯ ವರ್ಗಗಳ ಮೇಲೆ ಆದ ಪರಿಣಾಮ ನೋಡುವಾಗ ಇದು ಆಮ್ಲೀಯ ಮಳೆಯಾಗಿರಲೂಬಹುದು.
ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಪ್ರಮಾಣ ಬಹುಷಃ ಇಷ್ಟೂ ವರ್ಷಗಳ ದಾಖಲೆಯನ್ನು ಮುರಿದಿದೆ. ಜೂನ್ ತಿಂಗಳಲ್ಲಿ 26 ಇಂಚು ಬಂದಿದೆ. ಜುಲೈ ಮೊದಲ ಎರಡು (14-07-2022) ವಾರದಲ್ಲಿ 57.97 ಇಂಚು ಬಂದಿದೆ. ಕಳೆದ ವರ್ಷ (2021) ಜೂನ್ ತಿಂಗಳಲ್ಲಿ 32.2 ಇಂಚು, ಜುಲೈ ನಲ್ಲಿ 60.56 ಇಡೀ ತಿಂಗಳ ಮಳೆಯಾಗಿದೆ. ದಿನಾಂಕ 14 ರ ವರೆಗೆ ಆದ ಮಳೆ ಕೇವಲ 14.15 ಇಂಚು. ಈ ವರ್ಷ 43.82 ಇಂಚು ಹೆಚ್ಚು ಬಂದಿದೆ. 2020 ರಲ್ಲಿ ಜೂನ್ ತಿಂಗಳಲ್ಲಿ ಒಟ್ಟು 27.99 ಇಂಚು ಹಾಗೂ ಜುಲೈ ಪೂರ್ತಿ ತಿಂಗಳಲ್ಲಿ 36.4 ಇಂಚು ಬಂದಿದೆ. 2019 ಜೂನ ನಲ್ಲಿ 19.05 ಇಂಚು ಮಳೆ ಹಾಗೂ ಜುಲೈ 44.48 ಇಂಚು ಮಳೆಯಾಗಿದೆ. (ಮಾಹಿತಿ ಮೂಲ.ವಿನೋದ್ ಮೋನಿಸ್ ಹವ್ಯಾಸಿ ಮಳೆ ಮಾಪನ ಮಾಡುವವರು, ಬೆಳ್ತಂಗಡಿ ತಾಲೂಕು, ನಿಟ್ಟಡೆ ಗ್ರಾಮ) ಈ ವರ್ಷದಷ್ಟು ದಾಖಲೆಯ ಮಳೆ ಕಳೆದ ನಾಲ್ಕು ವರ್ಷಗಳಿಂದ ಆಗಿಲ್ಲ. ಅದಕ್ಕೂ ಹಿಂದೆಯೂ ಆಗಿಲ್ಲ. ಈ ವರ್ಷದ ಮಳೆ ಬಹುಷಃ ಮಳೆಯಲ್ಲ. ಮಳೆ ನೀರಿನ ರಸಸಾರ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗಿದೆಯೋ ಎಂಬ ಸಂದೇಹ ಉಂಟಾಗುತ್ತಿದೆ!
ನಿಮ್ಮ ಹೊಲದ ಮರ- ಗಿಡಗಳನ್ನು ಪರಿಶೀಲಿಸಿರಿ:
- ಮಳೆ ಹೆಚ್ಚಾಗಿದೆ ಹೊರಗೆ ತಲೆ ಹಾಕುವುದೂ ಕಷ್ಟ ಎಂದು ಬಹಳಷ್ಟು ಜನ ತಮ್ಮ ಹೊಲ ಸುತ್ತಾಡದೆ ಕೆಲವು ದಿನಗಳಾಗಿರಬಹುದು.
- ಅಡಿಕೆ ಬೆಳೆಗಾರರಂತೂ ಕೊಳೆ ರೋಗ ಬಂದಿದ್ದರೆ ನೋಡಿ ತಲೆ ಬಿಸಿ ಆಗುವುದು ಬೇಡ ಎಂದು ನೋಡಿ ಬರುವ ಗೋಜಿಗೇ ಹೋಗಿರಲಿಕ್ಕಿಲ್ಲ.
- ನಾಳೆಯಿಂದ ಸ್ವಲ್ಪ ಸ್ವಲ್ಪ ಮಳೆ ಕಡಿಯಾಗುತ್ತದೆ. ಒಮ್ಮೆ ತೋಟದೆಲ್ಲೆಡೆ ಸುತ್ತಾಡಿಕೊಂಡು ಬನ್ನಿ.
- ಮರಮಟ್ಟುಗಳು ಎಲೆ ಉದುರಿಸಿ ನೆಲದಲ್ಲಿ ಎಲೆ ಹಾಸು ಹೊದಿಸಿದ್ದನ್ನು ಗಮನಿಸಿ.
- ಸಾಗುವಾನಿ, ಜಾಯೀಕಾಯಿ, ಲವಂಗ, ಹಲಸು, ಮಾವು, ಕಾಫೀ, ರಬ್ಬರ್, ಕೊಕ್ಕೋ ಕಿರಾಲಬೋಗಿ ಹೀಗೆ ಬಹುತೇಕ ಎಲ್ಲಾ ಮರಮಟ್ಟುಗಳೂ ಗರಿಷ್ಟ ಪ್ರಮಾಣದಲ್ಲಿ ಎಲೆ ಉದುರಿಸಿವೆ.
- ಬುಡದಲ್ಲಿ ನೋಡಿದರೆ ಅಚ್ಚರಿ ಪಡಬಲ್ಲಿರಿ. ಹೀಗೆ ಮಳೆಗೆ ಎಲೆ ಉದುರುವುದು ಉಂಟೇ ಎಂದು.
- ಉದುರಿದೆ. ಕಾರಣ ಅಜ್ಞಾತ. ಆದರೂ ಊಹಿಸಬಹುದು ಮಳೆ ನೀರು ಬಹುಷಃ ಆಮ್ಲೀಯವಾಗಿರಬೇಕು.
- ಎಲೆ ಉದುರಿಸಿದ ಕಾರಣದಿಂದ ಸಸ್ಯಗಳಿಗೆ ಶಿಲೀಂದ್ರ ಸೋಂಕು ತಗಲುವ ಸಾಧ್ಯತೆ ಇದ್ದು, ಕೆಲವು ಮರಮಟ್ಟುಗಳು ನಿಧಾನವಾಗಿ ಸಾಯುವ ಸಾಧ್ಯತೆಯೂ ಇದೆ.
- ನೆಲದಲ್ಲಿ ಹಾವಸೆ ಕಡಿಮೆಯಾಗಿರುವುದೂ pH ವ್ಯತ್ಯಯದ ಒಂದು ಚಿನ್ಹೆ.
ಬೆಳೆಗಳಿಗೆ ಹಾನಿ:
- ಅಡಿಕೆ ತೋಟಗಳಲ್ಲಿ ಅಡಿಕೆ ಎಳೆ ಕಾಯಿ ಉದುರುವಿಕೆ, ಅಂಡೋಡಕ ಸಮಸ್ಯೆ ಹೆಚ್ಚಳವಾಗಿದ್ದು, ಭಾರೀ ಪ್ರಮಾಣದಲ್ಲಿ ಮಿಡಿ ಉದುರುತ್ತಿದೆ.
- ಮುಂಗಾರಿಗೆ ಮುನ್ನ ಕೊಳೆ ಔಷಧಿ ಸಿಂಪಡಿಸಿದ ರೈತರ ತೋಟದಲ್ಲಿ ಅದರ ವಾಯಿದೆ ಮುಗಿದಿದ್ದು, ಕೆಲವು ಕಡೆ ಕೊಳೆ ರೋಗ ಉಂಟಾಗಿದೆ.
- ತೋಟದಲ್ಲಿ ನೆಲವೆಲ್ಲ ಜೌಗು ಆಗಿದೆ. ಎಲ್ಲೆಂದರಲ್ಲಿ ಒರತೆ ಉಂಟಾಗಿದ್ದು, ಮರಮಟ್ಟುಗಳಲ್ಲಿ ಬೇರು ಕೊಳೆಯುವ ಸಾಧ್ಯತೆ ಹೆಚ್ಚಾಗಿದೆ.
- ಎಳೆ ಸಸಿಗಳು ಸಾಯುವ ಹಂತಕ್ಕೆ ತಲುಪಿವೆ.
- ಮಣ್ಣಿಗೆ ಈ ಹಿಂದೆ ಕೊಡಮಾಡಲ್ಪಟ್ಟ ಗೊಬ್ಬರಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿವೆ. ರಾಜ್ಯದಾದ್ಯಂತ ಭಾರೀ ಬೆಳೆ ನಷ್ಟವಾಗಿದೆ.
ಮಳೆ ಹೆಚ್ಚಾದರೆ ಪರಿಣಾಮ ಏನು?
- ಮಳೆ ಹೆಚ್ಚಾದಂತೆ ಸಸ್ಯಗಳಿಗೆ ಆಹಾರ ತಯಾರಿಸಲು ಕಷ್ಟವಾಗುತ್ತದೆ.
- ಬಿಸಿಲಿನ ವಾತಾವರಣ ಇದ್ದಾಗ ಸಸ್ಯಗಳು ಹೆಚ್ಚು ಹೆಚ್ಚು ಆಹಾರ ಬಳಸಿಕೊಂಡು ಚಟುವಟಿಕೆಯಲ್ಲಿರುತ್ತವೆ.
- ಹೆಚ್ಚಾದಾದ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ರುಜಿನಗಳಿಗೆ ತುತ್ತಾಗುತ್ತವೆ.
- ಎರಡು ವಾರಗಳಲ್ಲಿ ಮೇಘ ಸ್ಪೋಟವಾದಂತೆ ಬಿರುಸಾದ ಹನಿಗಳ ಮೂಲಕ ಬರುತ್ತಿರುವ ನಿರಂತರ ಮಳೆಯ ಪರಿಣಾಮ ಮುಂದಿನ ದಿನಗಳಲ್ಲಿ ಒಂದೊಂದಾಗಿ ಗೋಚರಿಸಲಿದ್ದು,
- ಕೃಷಿಕರಿಗೆ ಈ ವರ್ಷ,ಮುಂದಿನ ವರ್ಷಗಳಲ್ಲಿ ಬಹಳ ಕಷ್ಟದ ಪರಿಸ್ಥಿತಿ ಎದುರಾಗಲಿದೆ.
ಭತ್ತದ ಬೆಳೆ ಹಾಳಾಗಿದೆ:
- ಈ ಸಮಯದಲ್ಲಿ ಭತ್ತದ ಹೊಲದಲ್ಲಿ ಪೈರು ನಾಟಿ ಆಗಿ ಗಬ್ಬ ಕೂಡುವ ಹಂತಕ್ಕೆ ಬರಬೇಕಿತ್ತು.
- ಅದರೆ ಈ ವರ್ಷ 50% ಭತ್ತದ ಬೇಸಾಯ ಕಡಿಮೆಯಾಗಿದ್ದು, ಬೇಸಾಯ ಮಾಡಿದಲ್ಲಿ ಪೈರು ಕೊಳೆಯುವಿಕೆ ಪ್ರಾರಂಭವಾಗಿದೆ.
- ಮಳೆ ಭತ್ತದ ಪೈರನ್ನು ಬೆಳೆಯಲು ಬಿಡದ ಸ್ಥಿತಿ ಉಂಟಾಗಿದೆ.
ಕರಿಮೆಣಸಿನ ಆಸೆ ಬಿಡಬೇಕಾಗಬಹುದು:
- ಮಳೆ ಹಚ್ಚಾದರೆ ಕರಾವಳಿ ಮಲೆನಾಡಿನ ಪ್ರಮುಖ ಸಾಂಬಾರ ಬೆಳೆಯಾದ ಕರಿಮೆಣಸಿಗೆ ಬಹಳ ತೊಂದರೆ ಇದೆ.
- ಈಗಾಗಲೇ ಬಹುತೇಕ ಬೆಳೆಗಾರರ ತೋಟದಲ್ಲಿ ಮೆಣಸಿನ ಬಳ್ಳಿಯ ಎಲೆಗಳು, ಕರೆಗಳು ಉದುರಲು ಪ್ರಾರಂಭವಾಗಿವೆ.
- ಇನ್ನು ಮಳೆ ನಿಂತರೂ ಮುಂದುವರಿದರೂ ಒಮ್ಮೆ ರೋಗ ಸೋಂಕು ತಗಲಿದ್ದು ಕಡಿಮೆಯಾಗುವುದಿಲ್ಲ.
- ಸಿಂಪರಣೆ , ಡ್ರೆಂಚಿಂಗ್ ಇತ್ಯಾದಿಗಳ ಮೂಲಕ ನಿಯಂತ್ರಣ ಕೈಗೊಳ್ಳಬೇಕಾಗುತ್ತದೆ.
- ಕೆಲವು ಮೂಲಗಳ ಪ್ರಕಾರ ಇನ್ನೂ ಈ ತಿಂಗಳು ಪೂರ್ತಿ ಮಳೆ ಬರುವ ಸಾಧ್ಯತೆ ಇದ್ದು,
- ಇದರಿಂದ ನೀರಿಗೆ ಸೆನ್ಸಿಟಿವ್ ಬೆಳೆಯಾದ ಕರಿಮೆಣಸು ಭಾರೀ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ.
ಕಣ್ಣಿಗೆ ಕಾಣದ ಸಮಸ್ಯೆಗಳು:
- ಮಳೆಗೆ ಬೆಳೆ ನಷ್ಟವಾಗುವುದು, ಇತ್ಯಾದಿಗಳು ಗೋಚರ ನಷ್ಟಗಳಾದರೆ ನಮಗೆ ಗೊತ್ತೇ ಆಗದಂತೆ ಕೆಲವು ತೊಂದರೆಗಳುಂಟಾಗಿ, ಕೃಷಿಗೆ ಭಾರೀ ನಷ್ಟವನ್ನು ಉಂಟು ಮಾಡುತ್ತವೆ.
- ಹನಿಗಳ ರಭಸಕ್ಕೆ ಈಗಾಗಲೇ ಎರಡು ಮೂರು ವರ್ಷಗಳಲ್ಲಿ ಸಂಗ್ರಹವಾಗಿದ್ದ ಮೆಕ್ಕಲು ಮಣ್ಣು ಕೊಚ್ಚಣೆಯಾಗಿ ಹೋಗಿದೆ.
- ಮೇಲ್ಮಣ್ಣು ಅಥವಾ ಮೆಕ್ಕಲು ಮಣ್ಣು ಕೊಚ್ಚಣೆ ಆದರೆ ಫಲವತ್ತತೆ ನಷ್ಟವಾದಂತೆ.
- ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಬೆಳೆಗಳಿಗೆ ಕೊಡಬೇಕಾಗುವ ಸಾವಯವ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ.
- ಈಗಾಗಲೇ ನಮ್ಮಲ್ಲಿ ಮೇಲ್ಮಣ್ಣಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಇಂತಹ ಸ್ಥಿತಿ ಕೃಷಿಗೆ ಅತೀ ದೊಡ್ದ ನಷ್ಟ.
- ಈ ನಷ್ಟವನ್ನು ಭರ್ತಿ ಮಾಡಲು ಈಗ ಕೊಡುತ್ತಿರುವ ಸಾವಯವ ವಸ್ತುಗಳನ್ನು ದುಪ್ಪಟ್ಟು ಮಾಡಬೇಕಾಗಬಹುದು.
ಮೇಲ್ಮಣ್ಣು ಕೊಚ್ಚಣೆಯಾದರೆ ಅದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳೂ ಸಹ ನಷ್ಟವಾಗುತ್ತದೆ. ಮಣ್ಣಿನ ಜೌಗುತನವು ರೋಗಗಳನ್ನು ಹೆಚ್ಚು ಮಾಡುತ್ತವೆ. ಪೋಷಕಾಂಶಗಳಾದ ಸಾರಜನಕ, ಗಂಧಕ ಮತ್ತು ಕ್ಲೋರಿನ್ ಗಳು ಅತಿಯಾಗಿ ನಷ್ಟಕ್ಕೊಳಗಾಗಿ ಮರಗಳು ಹಳದಿ ಬಣ್ಣಕ್ಕೆ (Chlorosis) ತಿರುಗುತ್ತವೆ.
- ನೆಲದಲ್ಲಿ ಹೆಚ್ಚು ಒರತೆಗಳಾದಲ್ಲಿ ನೆಲದಿಂದ ನೀರು ಮೇಲಕ್ಕೆ ಉಕ್ಕಿ ಬರುತ್ತದೆ.
- ಜೊತೆಗೆ ಹಗುರವಾದ ಮಣ್ಣಿನ ಕಣಗಳನ್ನೂ ಮೇಲಕ್ಕೆ ತಂದು ಮಣ್ಣಿನಲ್ಲಿ ಮರಳು ಮತ್ತು ನೊರಜು ಕಲ್ಲುಗಳು ಮಾತ್ರ ಉಳಿಯುತ್ತವೆ.
- ಇದು ಕೃಷಿಗೆ ಅತೀ ದೊಡ್ಡ ನಷ್ಟವಾಗಿದ್ದು, ಈ ವರ್ಷ ಹೆಚ್ಚಿನ ಕಡೆಯಲ್ಲಿ ಈ ಸಮಸ್ಯೆ ಉಂಟಾಗಿದೆ.
- ಹೀಗೆ ಆದರೆ ಬೇಸಿಗೆಯಲ್ಲಿ ನೀರು ಬೇಗ ತಳಕ್ಕೆ ಇಳಿಯುತ್ತದೆ.
- ಈಗಾಗಲೇ ಕೆಲವು ನದಿಗಳಲ್ಲಿ ಈ ಸಮಸ್ಯೆ ಉಂಟಾಗಿದ್ದು, ಮಳೆ ನಿಂತು ಒಂದು ತಿಂಗಳಾಗಬೇಕಿದ್ದರೆ ನೀರಿನ ಹರಿವು ಅಂತರ್ ಮುಖಿಯಾಗಿರುವ ವರದಿಗಳಿವೆ.
ಕೆಲವು ಕಡೆಗಳಲ್ಲಿ ಕೆಂಪು ಮಳೆ ಬಂದಿದೆ ಎಂಬ ವರದಿಗಳಿವೆ. ಈ ಸಾಧ್ಯತೆಯೂ ಇದ್ದು, ವಾತಾವರಣದಲ್ಲಿ ಈಗಾಗಲೇ ಸಾಕಷ್ಟು ಮಾಲಿನ್ಯಗಳು ಸೇರಿಕೊಂಡಿವೆ. ಔಧ್ಯಮಿಕ ಮಾಲಿನ್ಯ ಹಾಗೆಯೇ ಇನ್ನಿತರ ಪ್ಲಾಸ್ಟಿಕ್ ಇತ್ಯಾದಿಗಳ ಸುಟ್ಟ ಹೊಗೆಯ ಮಾಲಿನ್ಯದಿಂದಾಗಿ ರಸಸಾರ ಬದಲಾಗಿ ಬಣ್ಣದ ನೀರಿನ ಮಳೆ ಬರುವ ಸಾಧ್ಯತೆಗಳಿವೆ.
ಭಾತರ ಸರಕಾರ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜ್ಯಾರಿಗೆ ತಂದಿದ್ದು, ಈ ವರ್ಷದ ಮಳೆಯಿಂದ ಅದ ಪ್ರತ್ಯಕ್ಷ ಹಾಗೂ ಪರೋಕ್ಷ ನಷ್ಟಕ್ಕೆ ಈ ವಿಮೆ ಕೈಮ್ ಆಗಲೇ ಬೇಕು. ರೈತರು ಈ ಹಣದ ಮೂಲದಲ್ಲಿ ಸಾಕಷ್ಟು ಸಾವಯವ ವಸ್ತುಗಳನ್ನು ಹೊಲಕ್ಕೆ ಮರು ಸೇರ್ಪಡೆ ಮಾಡಿ, ನೀರಿನ ಒರತೆ (ಜೌಗುತನ) ಆಗದಂತೆ ಶಾಶ್ವತ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅತೀ ಅಗತ್ಯ. ಮುಂದಿನ ದಿನಗಳಲ್ಲೂ ಭಾರೀ ಮಳೆಯ ಸಾಧ್ಯತೆ ಇದ್ದು, ತೋಟದಲ್ಲಿ ಕಳೆಗಿಡಗಳಿದ್ದರೆ ಕಳೆ ನಾಶಕ ಸಿಂಪಡಿಸಬೇಡಿ. ಇದು ಮಣ್ಣಿಗೆ ಹೊದಿಕೆಯಾಗಿ ರಕ್ಷಣೆ ಕೊಡುತ್ತದೆ. ಸ್ವಲ್ಪ ಮಟ್ಟಿಗೆ ಮಣ್ಣಿನ ಸವಕಳಿ ತಡೆಯಲ್ಪಡುತ್ತದೆ.