ಮಂಗ, ಹಂದಿ ಕಾಡು ಕೋಣ ಇವೆಲ್ಲದರ ಜೊತೆಗೆ ಈಗ ನವಿಲುಗಳೂ ರೈತರ ಹೊಲದಲ್ಲಿ ಠಿಕಾಣಿ ಹೂಡಿವೆ ಯಾಕೆ ಗೊತ್ತೇ? ಅಲ್ಲಿ ಅವುಗಳಿಗೆ ಜೀವ ಭಯ ಉಂಟಾಗಿದೆ !!
ಇದು ಯಾವ ಪರಿಸರವಾದಿಗಳೂ ಸುದ್ದಿ ಗದ್ದಲ ಎಬ್ಬಿಸದೇ ಇದ್ದ ಸಂಗತಿ. ಕಾಡು ನಾಶವಾಗಿದೆ ಎಂದು ಅದಕ್ಕೆ ಬೊಬ್ಬೆ ಹಾಕುತ್ತಾರೆ. ಕಾಡಿನ ಪ್ರಾಣಿಗಳಿಗೆ ಹಿಂಸೆಯಾದರೆ ಪ್ರಾಣಿ ದಯಾ ಹೋರಾಟಗಾರರು ಪ್ರವೇಶ ಮಾಡುತ್ತಾರೆ. ಅರಣ್ಯ ಪ್ರಾಣಿಗಳಾದ ಮಂಗ , ಕಾಡು ಹಂದಿ, ಕೋಣಗಳಿಂದ ಬೆಳೆ ಉಳಿಸಿಕೊಳ್ಳುವರೇ ರೈತರು ಭಾರೀ ಪ್ರಯಾಸ ಪಡುತ್ತಿದ್ದಾರೆ. ಇವುಗಳನ್ನು ಭೇಟೆಯಾಡಿದರೆ ಅರಣ್ಯ ಇಲಾಖೆಯಿಂದ ನೋಟೀಸು ಬರಬಹುದು. ಬಂಧನವೂ ಆಗಬಹುದು. ಇದಕ್ಕೆಲ್ಲಾ ರಕ್ಷಕರಿದ್ದಾರೆ. ರೈತರ ಬೆಳೆಗೆ ರಕ್ಷಣೆ ಇಲ್ಲದಾಗಿದೆ.
ಬೆಳೆಗಳಿಗೆ ಸಂಚಕಾರ:
- ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ರೈತರು ಭತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ.
- ಕಾರಣ ಏನೇ ಮಾಡಿದರೂ ನವಿಲುಗಳಿಂದ ಬೆಳೆ ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಬೆಳೆಯುತ್ತಿರುವ ಪೈರನ್ನೇ ಹಾಳು ಮಾಡುತ್ತಿವೆ.
- ತರಕಾರಿ ಬೆಳೆದರೆ ನವಿಲುಗಳ ಕಾಟ. ಬಾಳೆ ಕಾಯಿಗೂ ನವಿಲಿನ ಉಪಟಳ. ಮನೆ ಮಂದಿ ಏಳುವ ಮುನ್ನವೇ ನವಿಲುಗಳು ಮನೆ ಬಾಗಿಲಿನಲ್ಲಿ ಹಾಜರಾಗುತ್ತಿವೆ. ರಾತ್ರಿ ಇಡೀ ಕೂಗುತ್ತಲೇ ಇರುತ್ತವೆ.
- ಹಿಂದೆ ಜನ ಮನೆ ಮನೆಯಲ್ಲೂ ಕೋಳಿ ಸಾಕುತ್ತಿದ್ದರು. ಅವು ಬೆಳ್ಳಂಬೆಳಗ್ಗೆ ಕೂಗಿ ಎಬ್ಬಿಸುತ್ತಿದ್ದವು.
- ಈಗ ಕೋಳಿ ಸಾಕುವ ಮನೆಗಳಿಲ್ಲ, ಕೋಳಿಯ ಬದಲಿಗೆ ನವಿಲುಗಳು ಆ ಕೆಲಸವನ್ನು ಮಾಡುತ್ತಿವೆ. ಮನೆಯ ಒಳಗೆ ಮಾತ್ರ ಬರಲು ಬಾಕಿ ಇದೆ. ಹೊಲದಲ್ಲಿ ಹಿಂಡೂ ಹಿಂಡು ನವಿಲುಗಳಿವೆ.
ಇವು ಎಲ್ಲಿಂದ ಬಂದವು:
- ಹಿಂದೆ ನಾವು ಚಿಕ್ಕವರಿದ್ದಾಗ ನವಿಲುಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಮಾತ್ರ ನೋಡುತ್ತಿದ್ದೆವು.
- ಆಗ ಅವು ಕಾಡಿನಲ್ಲಿ ಮಾತ್ರ ಇರುತ್ತಿದ್ದವು.
- ಈಗ ಅವು ಕಾಡಿನಿಂದಲೇ ನಾಡಿಗೆ ಬಂದಿವೆ. ಕಾಡಿನಲ್ಲಿ ನವಿಲುಗಳು ನೋಡಲಿಕ್ಕೇ ಸಿಗುತ್ತಿಲ್ಲ.
- ಚಾರ್ಮಾಡಿ ಘಾಟಿ, ಆಗುಂಬೆ ಘಾಟಿ, ಶಿರಾಡಿ ಘಾಟಿ, ಬಾಳೆಬರೆ ಘಾಟಿ, ಹುಲೇಕಲ್ ಘಾಟಿ, ಅಂಕೋಲ, ದಾಂಡೇಲಿ ಮುಂತಾದ ಹಲವು ಕಾಡು ಪ್ರದೇಶಗಳಲ್ಲಿ ನವಿಲುಗಳು ಸ್ವಚ್ಚಂದವಾಗಿ ಬದುಕುತ್ತಿದ್ದವು.
- ಅಲ್ಲಿ ಅವುಗಳಿಗೆ ಜೀವ ಭಯ ಉಂಟಾಗಿದೆ. ಆ ಜೀವ ಭಯ ಮಾನವರಿಂದಲೇ ಆಗಿದೆ. ಆ ಕಾರಣ ಅವು ಸುರಕ್ಷಿತ ಜಾಗಕ್ಕೆ ಬಂದಿವೆ.
ಏನು ತೊಂದರೆ ಆಗಿದೆ?
ಕಳೆದ ಅಕ್ಟೋಬರ್ ತಿಂಗಳಲ್ಲಿ ಶಿರಸಿ , ದಾಂಡೇಲಿ, ಅಂಕೋಲ ಕಡೆಗೆ ಹೋಗಿದ್ದೆ. ಸಂಜೆ ಗಂಟೆ 7 ಆಗಿರಬಹುದು. ಅಂಕೋಲ ಸಮೀಪಿಸಲು ಇನ್ನೇನು ಕೆಲವೇ ಹೊತ್ತು ಇತ್ತು. ದಾರಿಯಲ್ಲಿ ಒಂದು ದೊಡ್ಡ ಸದ್ದು ಆಯಿತು. ಟ್ಯಾಂಕರ್ ಏನಾದರೂ ಒಡೆಯಿತೋ ಎನ್ನುವಷ್ಟು ಶಬ್ದ. ಅದೇ ರೀತಿ ಕಂಪನ. ವಿಚಾರಿಸಿದಾಗ ತಿಳಿಯಿತು. ಇದು ಕಲ್ಲು ಕೋರೆ ಒಡೆದ ಸದ್ದು ಎಂದು.
- ಇಂತಹ ಸದ್ದನ್ನು ಮೊದಲ ಬಾರಿಗೆ ಕೇಳಿದವನು ಖಂಡಿತವಾಗಿಯೂ ಭಯಪಡುವುದರಲ್ಲಿ ಅಚ್ಚರಿ ಇಲ್ಲ. ಸಮೀಪದ ಮನೆಗಳಲ್ಲಿ ಖಂಡಿತವಾಗಿಯೂ ಬಿರುಕು ಬೀಳಬಹುದು.
- ಇಂತಹ ಸದ್ದುಗಳನ್ನು ಮಾಡುವ ನೂರಾರು ಕಲ್ಲು ಕೋರೆಗಳು ನಮ್ಮ ದುರ್ಗಮ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿವೆ. ದಿನಕ್ಕೆ ಒಂದೆರಡು ಬಾರಿ ಇಂತಹ ಸದ್ದುಗಳು ಮೊಳಗಿದರೆ ಆ ಕಾಡಿನಲ್ಲಿ ಇರುವೆಗಳೂ ಸಹ ಬದುಕಲು ಹೆದರಬಹುದು.
- ಕಾಡು ಪ್ರಾಣಿಗಳ ಮೆದುಳಿನ ರಚನೆಯೇ ಹಾಗೆ. ಅವು ಶಬ್ಧಕ್ಕೆ ಅಂಜುತ್ತವೆ. ಹೀಗೆ ಅಂಜಿಕೆಯ ವಾತಾವರಣವನ್ನು ಸಹಿಸಲಾಗದೆ ನವಿಲು ಸೇರಿದಂತೆ ಹಲವಾರು ಕಾಡು ಪ್ರಾಣಿಗಳು ಕಾಡು ತೊರೆದು ನಾಡು ಅರಸಿವೆ.
- ನವಿಲುಗಳು ಈಗ ನಮ್ಮ ಹೊಲದಲ್ಲೇ ಸಂತಾನಾಭಿವೃದ್ದಿ ಮಾಡುತ್ತಿವೆ.
ಸಂತಾನೋತ್ಪತ್ತಿ ನಿರಾತಂಕ:
- ಇಲ್ಲಿ ಇವುಗಳಿಗೆ ವೈರಿಗಳು ಇಲ್ಲದ ಕಾರಣ, ಅವುಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನವಿಲುಗಳ ಸಂತತಿ ವಿಪರೀತ ಹೆಚ್ಚಳವಾಗಲಿದೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಲ್ಲೂ ಪಾಲು ಕೇಳಲಿವೆ.
- ಅರಣ್ಯ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಸಂರಕ್ಷಣೆಗೆ ಶ್ರಮಿಸುತ್ತಿರುವವರಿಗೆ ಈ ವಿಚಾರ ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿ.