ರಾಸಾಯನಿಕ ಗೊಬ್ಬರಗಳಿಂದ ನೈಜ ತೊಂದರೆ ಏನು?

by | Jan 9, 2020 | Organic Cultivation (ಸಾವಯವ ಕೃಷಿ) | 0 comments

ಕೆಲವು ರಾಸಾಯನಿಕ ಗೊಬ್ಬರಗಳ ವಿರೋಧಿಗಳು  ಹುಟ್ಟಿಕೊಂಡು  ಉಳಿದ ರೈತರಿಗೆ ತುಂಬಾ ದ್ವಂದ್ವ ಉಂಟಾಗಿದೆ. ಇದು ಒಂದು ರೈತ ಕಳಕಳಿ ವಿಚಾರವೊ ಅಥವಾ ಒಂದು ಅಪರೋಕ್ಷ  ವ್ಯವಹಾರ ದಂಧೆಯೋ ಗೊತ್ತಾಗುತ್ತಿಲ್ಲ. ಕೃಷಿಕ ಸಮುದಾಯದಲ್ಲಿ ರಾಸಾಯನಿಕ ಬಳಕೆ ಮಾಡುವವರನ್ನು ಅಸ್ಪೃಷ್ಯರ ತರಹ ಕಾಣುವವರೂ ಸೃಷ್ಟಿಯಾಗಿದ್ದಾರೆ.  

ರಾಸಾಯನಿಕ ಗೊಬ್ಬರ ಎಂದ ಮಾತ್ರಕ್ಕೆ ಅದರ ವಿರೋಧಿಗಳು ಮೈಮೇಲೆ ಬಂದವರಂತೆ ಮಾತನಾಡಬೇಕಾಗಿಲ್ಲ. ಇದು ಅವರರವರ ವೈಯಕ್ತಿಕ ಆಯ್ಕೆ. ಆದರೆ ಬರೇ ರಾಸಾಯನಿಕ ಮಾತ್ರ ಬಳಸುವುದರಿಂದ ಮಣ್ಣಿನ ರಚನೆ ಹಾಳಾಗುತ್ತದೆ. ಹಾಗಾಗಿ ರಸಗೊಬ್ಬರ ಹಾಕುವವರು ಸಾವಯವ ತ್ಯಾಜ್ಯಗಳನ್ನು ತಪ್ಪದೆ ಮಣ್ಣಿಗೆ ಸೇರಿಸುತ್ತಾ ಇರಬೇಕು. ಆಗ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ.

  • ಕೆಲವರಿಗೆ  ಪರ್ಯಾಯ ಕೃಷಿ ವಿಜ್ಞಾನವನ್ನು ಹುಟ್ಟು ಹಾಕಿ ಅದರಲ್ಲಿ ಪ್ರಚಾರ ಪಡೆಯುವ ಆಶೆ.
  • ಕೃಷಿ ವ್ಯಾಸಂಗ ಮಾಡಿ. ಅಲ್ಲಿ ಕಲಿತದ್ದಕ್ಕಿಂತ ಭಿನ್ನವಾಗಿ ಮಾತಾಡುವರಿಗೆ, ಇದು ಪ್ರಚಾರ ಗಿಟ್ಟಿಸಿಕೊಳ್ಳುವ ಚಟ ಎಂದರೂ ತಪ್ಪಾಗಲಾರದು.

ವಾಸ್ತವಿಕತೆ ಇದು:

  • ಒಂದು ಚದರ ಅಡಿಯ ಮಣ್ಣನ್ನು ತೆಗೆದು ತೂಕ ಮಾಡಿದರೆ ಅದರಲ್ಲಿ 50 ಕಿಲೋ ದಷ್ಟು ಮಣ್ಣು ಇರುತ್ತದೆ.
  • ಇದಕ್ಕೆ ಮಾನವ ಕೃಷಿ ಮಾಡುವಾಗ ಅಧಿಕ ಇಳುವರಿ ಪಡೆಯುವುದಕ್ಕಾಗಿ ಬಳಸುವ ರಾಸಾಯನಿಕ ಗೊಬ್ಬರ ಗರಿಷ್ಟ 50  ಗ್ರಾಂ ಗಳಷ್ಟು.
  • ಪ್ರಪಂಚದ ಯಾವ ರಾಷ್ಟ್ರವನ್ನು ತೆಗೆದುಕೊಂಡರೂ ಇದಕ್ಕಿಂತ ಹೆಚ್ಚು ಬಳಕೆ ಮಾಡುವವರಿಲ್ಲ.
  • ಇದು ಅಷ್ಟು ದೊಡ್ಡ ಪ್ರಮಾಣದ ಮಣ್ಣಿಗೆ ಏನೇನೂ ಅಲ್ಲ. ಅದರಲ್ಲಿ 90% ವನ್ನು ಸಸ್ಯಗಳು ತಮ್ಮ ಬೇರಿನ ಮೂಲಕ ಬಳಕೆ ಮಾಡುತ್ತವೆ.
  • ಉಳಿದವು ಇಳಿದು ಹೋಗಬಹುದು  ಅಥವಾ ಆವಿಯಾಗಬಹುದು. ಒಟ್ಟು ಮಣ್ಣಿನಲ್ಲಿ ಅವು  ಉಳಿಯುವುದಿದ್ದರೆ ಅದು 1 -2  ಗ್ರಾಂ ಗಿಂತಲೂ ಕಡಿಮೆ.
  • ಸಸ್ಯಗಳಿಗೆ ನಾವು ಬಳಸಿದ್ದು, ರಾಸಾಯನಿಕವೋ, ಸಾವಯವವೋ ಎಂದು ಗೊತ್ತೇ ಆಗುವುದಿಲ್ಲ. ಯಾವುದೇ ಗೊಬ್ಬರ ಆಗಿದ್ದರೂ ಅದನ್ನು ಮಣ್ಣಿನ ಸೂಕ್ಶ್ಮ ಜೀವಿಗಳು ಬಳಸಿ ನಂತರ ಅದು ಸಸ್ಯಕ್ಕೆ ದೊರೆಯುವುದು ಕ್ರಮ.
  • ಇದು ಮಣ್ಣಿನ ಯಾವ ಸ್ಥಿತಿಯನ್ನೂ ಹಾಳು ಮಾಡಲಾರದು. ಮಣ್ಣು ನಿಷ್ಪ್ರಯೋಜಕವೂ ಆಗದು.
  • ಈ ತನಕ ವರದಿಯಾದ ಒಂದೇ ಒಂದು  ತೊಂದರೆ ಎಂದರೆ ನಾವು ಅಸಮರ್ಪಕವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಶಿಯಂ  ಗೊಬ್ಬರವನ್ನು ಕೊಟ್ಟಾಗ ಸಾರಜನಕ ಅತಿಯಾಗಿ ಅದು ನೈಟ್ರೇಟ್ ರೂಪದಲ್ಲಿ  ಮಣ್ಣಿಗೆ ಸೇರಿ ಅದು ನೀರಿನ ಜೊತೆಗೆ ಮಿಶ್ರಣವಾಗಿ ನೀರಿನಲ್ಲಿ ನೈಟ್ರೇಟ್ ಅಂಶ ಹೆಚ್ಚಳವಾಗಬಹುದು.
  • ಅಂಥಹ ನೀರಿನಲ್ಲಿ ಹೆಚ್ಚಿನ ಹಾವಸೆ ಬರುತ್ತದೆ. ಅದು ಕುಡಿಯಲು ಅಷ್ಟು ಒಳ್ಳೆಯದಲ್ಲ.
  •  ಹಾಗೆಂದು ಈ ನೀರು ಕೃಷಿ ನೀರಾವರಿಗೆ ಉತ್ತಮವಾದುದು. ಇದಲ್ಲದೆ ಇನ್ನು ಯಾವ ಹಾನಿಯೂ ಅದ ಬಗ್ಗೆ ವರದಿಯಾಗಿಲ್ಲ.

ಏನು ಪ್ರಯೋಜನ:

  • ರಾಸಾಯನಿಕ ಗೊಬ್ಬರಗಳಲ್ಲಿ ಪೋಷಕಗಳ ಪ್ರಮಾಣ ಹೆಚ್ಚು ಇರುವ ಕಾರಣ ಅವು ತೀಷ್ಣ ಗೊಬ್ಬರಗಳು.
  • ಇತರ ಎಲ್ಲಾ ಗೊಬ್ಬರಗಳಿಗೆ ಹೋಲಿಸಿದರೆ ಇದು ಅಗ್ಗ. ಖರ್ಚು  ಕಡಿಮೆ.
  • ಇವುಗಳನ್ನು ಶಿಫಾರಿತ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬೇಕು.
  • ಸಾಧ್ಯವಾದಷ್ಟು  ಕಡಿಮೆ ಸಾಂದ್ರತೆಯಲ್ಲಿ ಬಳಕೆ ಮಾಡಬೇಕು.
  • ಕಡಿಮೆ ಸಾಂದ್ರತೆಯಲ್ಲಿ ಬಳಕೆ ಮಾಡಿದಾಗ ಅದು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಅಗತ್ಯವಾದ ಆಹಾರವಾಗುತ್ತದೆ.
  • ಅವುಗಳ ಚಟುವಟಿಕೆಗೆ ಅನುಕೂಲವಾಗುತ್ತದೆ. ರಾಸಾಯನಿಕ ಗೊಬ್ಬರಗಳು ಮಣ್ಣು ಜನ್ಯ ಕೀಟ ಮತ್ತು ರೋಗಕಾರಕಗಳನ್ನು ಉತ್ಪಾದನೆ ಮಾಡುವುದಿಲ್ಲ.
  • ಮಣ್ಣಿನಲ್ಲಿ ಯಾವುದೇ ಸ್ಥಿತ್ಯಂತರ ಉಂಟಾಗುವುದಿಲ್ಲ. ಮಣ್ಣಿನ ಜೈವಿಕತೆ ನಾಶವಾಗುವುದಿಲ್ಲ.

ರಸ ಗೊಬ್ಬರ ಬೇರೆ  – ಕೀಟ ನಾಶಕ ಬೇರೆ:

  • ನಾವು ರಾಸಾಯನಿಕ ಎಂದರೆ ಎಲ್ಲವನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ. ಆದರೆ ಹಾಗೆ ಮಾಡುವುದು ಸೂಕ್ತವಲ್ಲ.
  • ರಾಸಾಯನಿಕ  ಗೊಬ್ಬರಗಳು ಬೆಳೆ ಪೋಷಕಗಳಾದರೆ ಕೀಟ ರೋಗ ನಾಶಕಗಳು- ಬೆಳೆ ಸಂರಕ್ಷಕಗಳು.
  • ಬೆಳೆ ಸಂರಕ್ಷಕಗಳು ಸ್ವಲ್ಪ ಮಟ್ಟಿಗೆ  ಪರಿಸರಕ್ಕೆ ಮತ್ತು ಬಳಕೆ ಮಾಡುವವರ ಮೇಲೆ  ಪರಿಣಾಮ ಬೀರಬಹುದು.
  • ಇದನ್ನು ಬಾರೀ ವಿವೇಚನೆಯಿಂದ ಬಳಕೆ ಮಾಡಬೇಕು.
  • ವಿಷ ಎಂದು ನಮೂದಿಸಿದ ಮೇಲೆ ಅದನ್ನು ಬಹಳ ವಿವೇಚನೆಯಿಂದ ಬಳಕೆ ಮಾಡಿದರೆ ಹಾನಿ ಕಡಿಮೆ.

ಸಾವಯವ ಗೊಬ್ಬರಗಳೂ ಪೂರ್ಣ ಸುರಕ್ಷಿತ ಅಲ್ಲ;

  • ಸಾವಯವ ಗೊಬ್ಬರಗಳು ಸುರಕ್ಷಿತ ಎಂದೆಣಿಸದಿರಿ. ಬಹುತೇಕ ಮಣ್ಣು ಜನ್ಯ  ಹುಳಗಳ ಹುಟ್ಟಿಗೆ ಕೊಟ್ಟಿಗೆ ಗೊಬ್ಬರವೇ ಮೂಲ ಕಾರಣ.
  • ಸಾವಯವ ಗೊಬ್ಬರಗಳಲ್ಲಿ ಸಾರಜನಕದ ಅಂಶವೇ ಅತಿಯಾಗಿರುವ ಕಾರಣ  ಬೆಳೆಗಳು ಉತ್ತಮವಾಗಿ ಬೆಳೆದರೂ ಶಕ್ತಿ ಇಲ್ಲದೆ ಫಸಲು ಕಡಿಮೆಯಾಗುತ್ತದೆ. 
  • ಬೇರುಹುಳಗಳು, ಕೆಲವು ಪತಂಗಗಳು, ಕೊಳೆಯುವಿಕೆ ಮುಂತಾದ ಸಮಸ್ಯೆಗಳಿಗೆ  ಸಾವಯವ ಮೂಲದ ಕೊಟ್ಟಿಗೆ ಗೊಬ್ಬರ  ಆಸರೆ.
  • ಖರ್ಚು ವೆಚ್ಚಗಳ ಲೆಕ್ಕಾಚಾರ ಹಾಕಿದರೆ ಸಾವಯವ ಗೊಬ್ಬರ ಬಹಳ ದುಬಾರಿ. 
  • ಕೊಂಡು ತರುವ ಗೊಬ್ಬರಗಳ  ನಂಬಿಕಾರ್ಹತೆ ಕೊಳ್ಳುವವರಿಗೆ ಬಿಟ್ಟದ್ದು.

ಸಾವಯವ ಗೊಬ್ಬರಗಳೇ ಶ್ರೇಷ್ಟ ಮತ್ತು ರಾಸಾಯನಿಕ ಗೊಬ್ಬರ ಕೊಟ್ಟರೆ ಮಣ್ಣು ಹಾಳಾಗುತ್ತದೆ ಎಂದು ಹೇಳುವವರು ಅಪ್ರಭುದ್ದರು. ಇವೆರಡನ್ನೂ ಸಮತೋಲನದಲ್ಲಿ ಬಳಕೆ ಮಾಡಿ ಸದ್ದು ಗದ್ದಲಗಳಿಲ್ಲದೆ ಕೃಷಿ ಮಾಡುವವರು ನೈಜ ಕೃಷಿಕರು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!