ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ.

 • ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ.
 • ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ.
 • ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ.
 • ರೈತರೇ ಇದನ್ನು ಪಾಲಿಸುವಾಗ ಎರಡೆರಡು ಬಾರಿ ಯೋಚಿಸಿ.

ಘಟನೆ:

 • ಸುಮಾರು  4 ವರ್ಷಕ್ಕೆ ಹಿಂದೆ ಅಡಿಕೆ ಮರದ ಸಿಂಗಾರಕ್ಕೆ  ಬರುವ ಕಿಟದ ನಿಯಂತ್ರಣಕ್ಕೆ ಲಾಂಬ್ದಾಸೈಹೋಥ್ರಿನ್ ಎಂಬ ಕೀಟನಾಶಕವನ್ನು ಸಿಂಪಡಿಸಿದ್ದೆ.
 • ಬೆಳಗ್ಗೆ 9  ಗಂಟೆಗೆ ಪ್ರಾರಂಭ- ಮಧ್ಯಾನ್ಹ 1 ಕ್ಕೆ ಮುಕ್ತಾಯ.
 • ಊಟಕ್ಕಾಗಿ ಸ್ನಾನ ಅನಿವಾರ್ಯ. ಸುಮಾರು ½  ಗಂಟೆಯಲ್ಲಿ ಸ್ನಾನ ಆಯಿತು. ಊಟವೂ ಆಯಿತು.
 • ಅಲ್ಲಿಗೆ ಪ್ರಾರಂಭವಾಯಿತು, ಜೀವನ್ಮರಣ ಹೋರಾಟ. ರಾತ್ರೆ ಪೂರ್ತಿ.
 • ಸ್ನಾನ ಮಾಡಿದ್ದೇ ತಡ . ಮೈಯ ಚರ್ಮ ದ ಉರಿಯುವಿಕೆ, ಕಣ್ಣು ಉರಿ  ಪ್ರಾರಂಭ.
 • ಎಂತಹ ಯಾತನೆ ಎಂದರೆ ಚರ್ಮದಲ್ಲಿ ರೋಮಕಿತ್ತು ಬಂದಂತೆ.
 • ಕಣ್ಣು ಉರಿಯಲ್ಲಿ ನೊಡುವುದಕ್ಕೂ ಆಗುತ್ತಿರಲಿಲ್ಲ.
 • ಇದು ಹೆಚ್ಚುತ್ತ ಹೋಯಿತು. ಸಂಜೆ ಸುಮಾರಿಗೆ ತಜ್ಞರ ಬಳಿ ವಿಚಾರಿಸಿದರೆ ನನಗೇ ಬುದ್ದಿವಾದ ಹೇಳಿದರು. ಯಾಕಾಗಿ ಸಿಂಪರಣೆ ಮಾಡಿದಿರಿ ಎಂದು.
 • ಪರಿಹಾರ ಸಿಗದೆ ಕೊನೆಗೆ ರಾತ್ರೆ  ಮೈಗೆಲ್ಲಾ  ತೆಂಗಿನೆಣ್ಣೆ ಸವರಿ ಮನೆ ಹೊರ ಜಗಲಿಯಲ್ಲಿ ಬರೇ ನೆಲದಲ್ಲಿ ಹೊರಳಾಡಿದೆ.
 • ನಡು ರಾತ್ರೆ ತನಕ ನಿದ್ದೆ ಸೋಕಲಿಲ್ಲ. ನಂತರ ಬಳಲಿ ನಿದ್ದೆ ಬಂದಿರಬೇಕು. ಬೆಳೆಗ್ಗೆ ಆರಾಮವಾಗಿ ಎದ್ದೆ.
ಅಡಿಕೆ ಮರದ ಹೂಗೊಂಚಲು ಭಾಗ ಸ್ವಚ್ಚವಾಗಿದ್ದರೆ ಕೀಟನಾಶಕ – ರೋಗ ನಾಶಕ ಬೇಡ

ಆದದ್ದು ಇಷ್ಟೇ ರಾಸಾಯನಿಕ ಸಿಂಪರಣೆ ಮಾಡುವಾಗ ಕೆಲವು ಹನಿಗಳು ನನ್ನ ಮೈ ಬಟ್ಟೆಗೆ ಮುಖಕ್ಕೆ ತಗಲಿತ್ತು. ಮೈಗೆ ಬಟ್ಟೆ ಹಾಕಿದ್ದೆ. ಎಲ್ಲರೂ ಮಾಡುವಂತೆ  ಸಿಂಪರಣೆ ಮಾಡಿದ್ದೆ. ಆದರೆ ಕೆಲಸದವರಷ್ಟು ಜಾಗರೂಕತೆ ವಹಿಸಿರಲಿಲ್ಲ. ಇದು ನನ್ನನ್ನು ಒಮ್ಮೆ ಕೊಂದು ಬದುಕಿಸಿತ್ತು. ಮನೆಯವರಿಗೆ ಸಾಂತ್ವನ ಹೇಳಿದ್ದೆ.ನನಗಂತೂ ಬೆಳೆಗ್ಗೆ ಏಳುವಾಗ ಇರುತ್ತೇನೇ ಇಲ್ಲವೋ ಎಂಬ ದಟ್ಟ ಅಂಜಿಕೆ ಮನದಲ್ಲಿ ನಾಟಿತ್ತು.

ಈ ಸಮಸ್ಯೆಗೆ ಚಳಿಗಾಲ ಪ್ರಾರಂಭದಲ್ಲಿ ಒಮ್ಮೆ ಸಾಧಾರಣ ಕೀಟ ನಾಶಕ ಬಳಸಿದರೆ ಸಾಕು.

ಯಾಕೆ ಈ ವಿಚಾರ:

 • ರೈತರು ಕೀಟನಾಶಕ ಬಳಸಿ ಕೀಟ ಹತೋಟಿ ಮಾಡಬೇಕಾದ್ದು ಕೆಲವೊಮ್ಮೆ ಆನಿವಾರ್ಯವಾವಾಗಬಹುದು.
 •  ಆದರೆ ಎಲ್ಲಾ ಸಮಯದಲ್ಲಿ ಇದು ಅನಿವಾರ್ಯ ಅಲ್ಲ.
 • ಕೆಲವು ಸುರಕ್ಷಿತ ಕ್ರಮ ಅನುಸರಿಸಿ ಸಿಂಪರಣೆ ಮಾಡಲು ಸಾಧ್ಯವಿದ್ದರೆ ಮಾತ್ರ ಸಿಂಪರಣೆ ಮಾಡಿ.
 • ಅಡಿಕೆ ಬೆಳೆಗಾರರು ಈಗ ನಳ್ಳಿ ಉಳಿಸಲು ಬಳಕೆ ಮಾಡುವ ಕೀಟನಾಶಕ ಮತ್ತು ರೋಗ ನಾಶಕ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
 • ತಕ್ಷಣಕ್ಕೆ ಏನೂ ಗೊತ್ತಾಗದಿದ್ದರೂ ಸಹ ಇದು ಸಸ್ಯ ಶರೀರಕೆ ಸೇರಿದಂತೆ ನಮ್ಮ ದೇಹದ ಜೀವ ಕೋಶಗಳಿಗೂ  ಸೇರಿಕೊಳ್ಳುತ್ತದೆ.
 • ಇದರಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ನಂತಹ ಅಧಿಕ ಖರ್ಚಿನ ಖಾಯಿಲೆಗಳು ಬರುವ ಎಲ್ಲಾ ಸಾಧ್ಯತೆಯೂ ಇದೆ.
 • ಇಂದು ಸಮಾಜದಲ್ಲಿ ಅತ್ಯಧಿಕ ಅಸ್ವಾಸ್ಥ್ಯಗಳನ್ನು ಮೈಗೆಳೆದುಕೊಂಡವರು ಕೃಷಿಕರು.
 • ಇವರ ಅನುಕೂಲಕ್ಕೆ ಆಸ್ಪತ್ರೆ ಇರುವ ಊರಿನಿಂದ ನೇರ ಬಸ್ ಸಂಪರ್ಕವನ್ನೂ ಹಳ್ಳಿಗಳಿಗೆ ಕಲ್ಪಿಸಲಾಗಿದೆ.
ಮರದಲ್ಲಿ ಹೀಗೆ ಹೂಗೊಂಚಲು ಒಣಗಿದ್ದರೆ ಯಾವ ಕೀಟನಾಶಕ- ರೋಗ ನಾಶಕ ಬಳಸಿದರೂ ಫಲಿತಾಂಶ ಕಡಿಮೆ.

ಇದು ಅವೈಜ್ಞಾನಿಕ ಕೀಟನಾಶಕ- ರೋಗನಾಶಕ- ಮುಂತಾದವುಗಳ ಬಳಕೆ ಮಾಡಿದ್ದರಿಂದಲೇ ಆಗಿದೆ.ಎಲ್ಲಾ ಸಮಯ ಸಂದರ್ಭದಲ್ಲಿ ತೀರಾ ಜಾಗರೂಕತೆಯನ್ನು ಮಾಡಲಿಕ್ಕೆ ಅಸಾಧ್ಯವಾದ ಕಾರಣ ಅಜಾಗರೂಕತೆ ಸಂಭವಿಸುವುದು ಸಹಜ.

ಪರಿಹಾರಗಳು:

 • ನಳ್ಳಿ ಉದುರುತ್ತದೆ ಎಂದರೆ ಅದು ಕೀಟದ ಸಮಸ್ಯೆ ಎಂದೇ ತೀರ್ಮಾನಕ್ಕೆ ಬರಬೇಡಿ.
 • ನಳ್ಳಿ ಉದುರಲು ಪರಾಗ ಕಣಗಳ ಕೊರತೆ, ಮರದ ಆರೋಗ್ಯ, ಪೋಷಕಾಂಶಗಳ ಕೊರತೆ ಹೀಗೆ ಹಲವು ಕಾರಣಗಳಿರುತ್ತದೆ.
 • ಕೀಟಗಳ ಹಾವಳಿ ಪ್ರಾರಂಭದ ಹೂ ಗೊಂಚಲು ಬರುವ ಸಮಯದಲ್ಲಿ  ಮಾತ್ರ ಹೆಚ್ಚು .
 • ನಂತರ ಪ್ರಾಕೃತಿಕವಾಗಿಯೇ ಕಡಿಮೆಯಾಗುತ್ತದೆ.
 • ರೋಗಗಳ ಬಗ್ಗೆ ಹೇಳುವುದೇ ಆದರೆ ಅಡಿಕೆ ಮರದ ಸಿಂಗಾರಕ್ಕೆ ಅಂಥಹ ರೋಗಗಳು ಬೇಸಿಗೆಯ ಸಮಯದಲ್ಲಿ ಬರುವುದು ಕಡಿಮೆ.
 • ಶಿಲೀಂದ್ರ ನಾಶಕ ತಯಾರಕರ ಮತ್ತು ಮಾರಾಟಗಾರರ ವ್ಯಾವಹಾರಿಕ ತಂತ್ರಗಳು ಈ ಉತ್ಪನ್ನದ ಬಳಕೆ ಮಾಡುವಂತೆ ಮಾಡಿದೆ.
 • ಅಡಿಕೆ ಬೆಳೆಯುವ ಭಾಗಗಳಲ್ಲಿ ಈ ಸೀಸನ್ ನಲ್ಲಿ ಟನ್ ಗಟ್ಟಲೆ ಮ್ಯಾಂಕೋಜೆಬ್ ಶಿಲೀಂದ್ರ ನಾಶಕದ ವ್ಯವಹಾರ ಇದೆ.
 • ಅಡಿಕೆಗೆ ಬರುವ ಪ್ರಮುಖ ಕೀಟ ಪೆಂಟಟೋಮಿಡ್ ಬಗ್ ಮತ್ತು ಸಿಂಗಾರ ತಿನ್ನುವ ಹುಳು
 • . ಇದನ್ನು ಒಂದು ಸಿಂಪರಣೆಯಲ್ಲಿ ಪ್ರಾರಂಭದಲ್ಲಿ ನಿಯಂತ್ರಿಸಿಕೊಂದರೆ ಸಾಕಾಗುತ್ತದೆ.
ಬರೇ ಪೊಷಕಾಂಶ ನಿರ್ವಹಣೆಯಲ್ಲಿ ಈ ರೀತಿ ಫಸಲು ಉಳಿಸಲು ಸಾಧ್ಯವಿದೆ.

ಪದೇ ಪದೇ ತಿಂಗಳು – ತಿಂಗಳು ಆವರ್ತಿಯಲ್ಲಿ ಸಿಂಪರಣೆ ಮಾಡುವುದು ಜೇಬಿಗೂ ಹಾನಿ- ಆರೋಗ್ಯಕ್ಕೂ ಹಾನಿ.

 • ಕೀಟನಾಶಕಗಳ ವಾಸನೆಯನ್ನು ಆಘ್ರಾಣಿಸುವುದರಿಂದ ಲಂಗ್ಸ್  ಸಮಸ್ಯೆ ಉಂಟಾಗುತ್ತದೆ.
 • ಅಡಿಕೆ ಮರದಲ್ಲಿ ಉಳಿದ ಹಳೆ ಅಡಿಕೆ ಗೊನೆ, ಒಣಗಿದ ಗೊಂಚಲುಗಳನ್ನು ಸ್ವಚ್ಚವಾಗಿ ತೆಗೆದರೆ 75% ಕ್ಕೂ ಹೆಚ್ಚು, ರೋಗ  ಕೀಟ ಬಾಧೆ ಕಡಿಮೆಯಾಗುತ್ತದೆ.

ಅಡಿಕೆ ಮರಗಳ ಸಿಂಗಾರಕ್ಕೆ ಮತ್ತು ಎಲೆಗಳಿಗೆ ಬೇಸಿಗೆಯಲ್ಲಿ ಪ್ರತೀ ಲೀ. ನೀರಿಗೆ1  ಗ್ರಾಂ  ಪ್ರಮಾಣದಲ್ಲಿ ಎನ್ ಪಿ ಕೆ ಪೊಷಕಾಂಶ ಮತ್ತು ಲಘು ಪೋಷಕಾಂಶ ಮತ್ತು ಬೋರಾನ್ ಸೇರಿಸಿ ಸಿಂಪರಣೆ ಮಾಡಿದರೆ  ನಳ್ಳಿ ಉದುರುವಿಕೆ ಕಡಿಮೆಯಾಗುತ್ತದೆ.

 • ನೈಸರ್ಗಿಕ ಮೂಲದ ಸಮುದ್ರ ಪಾಚಿ ಅಥವಾ ಅಂತಹ ಸತ್ವ ಉಳ್ಳ ಬೆಳೆವಣಿಗೆ ಪ್ರಚೋದಕವನ್ನು ಸಿಂಪರಣೆ ಮಾಡುವುದರಿಂದ ಕಾಯಿ ಕಚ್ಚುವಿಕೆಗೆ  ಅನುಕೂಲವಾಗುತ್ತದೆ.

ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಗಳ ಅವಷ್ಯಕತೆ ಇರುವ ಕಾರಣ ಚಳಿ ಮುಗಿದ ಫೆಭ್ರವರಿಯಿಂದ ಮೇ ತನಕ ಪ್ರತೀ ತಿಂಗಳೂ ಅಥವಾ 15 ದಿನಕ್ಕೊಮ್ಮೆ ಪೋಷಕ ಆಹಾರವನ್ನು ಕೊಡಿ.

ಅನವಶ್ಯಕ ಕೀಟನಾಶಕ ಬಳಕೆ ಮಾಡಿ ಆರೋಗ್ಯ ಕೆಡಿಸಿಕೊಳ್ಳಬೇಡಿ. ಇದರಿಂದ ರೋಗ – ಕೀಟ ಇನ್ನಷ್ಟು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗಲಾರದು.

 

One thought on “ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

Leave a Reply

Your email address will not be published. Required fields are marked *

error: Content is protected !!