ಆಡು ಸಾಕುವುದು ಬ್ಯಾಂಕಿನಲ್ಲಿ ದುಡ್ಡು ಇಟ್ಟಂತೆ. ಇದನ್ನು ಯಾವಾಗ ಬೇಕಾದರೂ ನಗದೀಕರಣ ಮಾಡಿಕೊಳ್ಳಬಹುದು. ಇದಕ್ಕೆ ಹೂಡಿದ ಬಂಡವಾಳ ಒಂದೇ ವರ್ಷದಲ್ಲಿ ದ್ವಿಗುಣ. ಆ ಕಾರಣಕ್ಕೆ ಆಡು ಸಾಕಣಿಕೆ ಒಂದು ಕೃಷಿ ಪೂರಕ ವೃತ್ತಿಯಾಗಿ ಬೆಳೆಯುತ್ತಿದೆ.
- ಬರೇ ಆಡನ್ನು ಎಲ್ಲೆಂದರಲ್ಲಿ ಮೇಯಲು ಬಿಟ್ಟಾಕ್ಷಣ ಅದು ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲಾರದು.
- ಅದಕ್ಕೆ ಪೌಷ್ಟಿಕ, ಮೇವು ಮತ್ತು ಆಹಾರ ನೀಡಿದಾಗ ಮಾತ್ರ ಅದು ತೂಕ ಬರುತ್ತದೆ. ಬೇಗ ಮರಿ ಹಾಕುತ್ತದೆ.
ಪೌಷ್ಟಿಕ ಮೇವು ಯಾವುದು:
- ಹಾಲು ಕೊಡುತ್ತಿರುವ ಆಡಿಗೆ ದಿನಕ್ಕೆ 5-15 ಕಿಲೋ ಗ್ರಾಂ ಹಸುರು ಮೇವು ಬೇಕು
- ಬರೇ ಹಸುರು ಮೇವು ಅಲ್ಲದೆ ,1-2 ಕಿಲೋ ಗ್ರಾಂ ಒಣ ಮೇವು ಅಗತ್ಯವಾಗಿ ಕೊಡಬೇಕು.
- ದಿನಕ್ಕೊಮ್ಮೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ ಮೇಯಲು ಬಿಡುವಾಗ ಅದನ್ನು ಸಾದ್ಯವಾದಷ್ಟು ಬೆಳೆ ತೆಗೆದು ಬಿಟ್ಟ ಹೊಲಗಳಿಗೆ ಮೇಯಲು ಬಿಡಬೇಕು.
- ಅಲ್ಲಿ ಬೆಳೆ ಉಳಿಕೆಗಳನ್ನು ತಿಂದರೆ ಅದರಲ್ಲಿರುವ ಸಾರಾಂಶಗಳು ಆಡನ್ನು ಪುಷ್ಟಿಯಾಗಿ ಬೆಳೆಸುತ್ತವೆ.
- ಜಾಲೀ ಗಿಡಗಳು, ಹಲಸಿನ ಸೊಪ್ಪು, ಬೈನೆ ಮರದ ಸೊಪ್ಪು ಆಡಿಗೆ ಇಷ್ಟವಾದ ಮೇವು.
- ಇದನ್ನು ತಿನ್ನಲು ಬಿಡಬೇಕು. ಸೊಪ್ಪು ಆಡುಗಳ ದೇಹ ಪೋಷಣೆಗೆ ಉತ್ತಮ ಮೇವು.
- ಇದನ್ನು ತಂದು ಹಾಕಿದರೆ ಅಡುಗಳು ಬೇಗ ತೂಕ ಬರುತ್ತವೆ.
- ಹಿಪ್ಪು ನೇರಳೆ ವ್ಯವಸಾಯ ಮಾಡುವಲ್ಲಿ ದೊರೆಯುವ ಕಡ್ಡಿ ಮತ್ತು ನಿರುಪಯುಕ್ತ ದಂಟು ಸಹ ಪೌಷ್ಟಿಕ ಆಹಾರ.
- ಈ ಮೇವಿನಲ್ಲಿಯೂ ಸಾರಾಂಶಗಳು ಉತ್ತಮವಾಗಿರುತ್ತವೆ.
ಗ್ಲೆರಿಸೀಡಿಯಾ ಸೊಪ್ಪು, ಸುಬಾಬುಲ್ ಸೊಪ್ಪು, ಕ್ಯಾಲಿಯಾಂಡ್ರಾ ಸೊಪ್ಪು, ಜೋಳದ ಎಳೆ ಸಸ್ಯ( ಹೈಡ್ರೋಫೋನಿಕ್ಸ್) ಹಾಗೂ ಸಾರಜನಕ ಸ್ಥಿರೀಕರಿಸುವ ದ್ವಿದಳ ಸಸ್ಯಗಳನ್ನು ತಿನ್ನಿಸಿದರೆ ಆಡು ಸದ್ಧೃಢ.
ದಾಣಿ ಮಿಶ್ರಣ:
- ಬರೇ ಮೇವು ಮಾತ್ರ ಅಡಿನ ತೂಕ ಹೆಚ್ಚಳಕ್ಕೆ ಸಾಕಾಗುವುದಿಲ್ಲ.
- ದಾಣಿ ಮಿಶ್ರಣವನ್ನು ಕೊಟ್ಟರೆ ಮೇವಿನಿಂದ ದೊರೆತ ಸಾರಗಳ ಫಲ ದೇಹಕ್ಕೆ ಫಲಪ್ರದವಾಗಿ ದೊರೆಯುತ್ತದೆ.
- ದಾಣಿ ಮಿಶ್ರಣವಾಗಿ ದಿನಕ್ಕೆ ಒಂದು ಆಡಿಗೆ ಸುಮಾರು 1- 1.5 ಕಿಲೋ ಗ್ರಾಮ್ ಆಹಾರ ಕೊಡಬೇಕು.
- ದಾಣಿ ಮಿಶ್ರಣದಲ್ಲಿ ಜೋಳ, ಗೋವಿನ ಜೋಳ, ರಾಗಿ, ಸಜ್ಜೆ, ಮೊದಲಾದ ಏಕದಳ ಧಾನ್ಯಗಳನ್ನು ಸೇರಿಸಬೇಕು.
- ಹುರುಳಿ , ಅಲಸಂಡೆ, ಅವರೆ ಮುಸುಕಿ , ಹೆಸರು, ಶೇಂಗಾ , ಕಡಲೆ ಚವಳಿ, ತೊಗರಿ, ಮುಂತಾದ ದ್ವಿದಳ ಧಾನ್ಯಗಳ ನುಚ್ಚನ್ನು ಸೇರಿಸಬೇಕು.
- ಇವುಗಳಲ್ಲಿ ಸಾರಜನಕ ವಸ್ತುಗಳು ಅಧಿಕವಾಗಿರುವ ಕಾರಣ ಬೆಳವಣಿಗೆ ಉತ್ತಮವಾಗಿರುತ್ತದೆ.
- ಹಾಲೂ ಹೆಚ್ಚು ಕೊಡುತ್ತದೆ. ಮಾಂಸ ಖಂಡಗಳು ಬೆಳೆಯುತ್ತವೆ.
- ದಾಣಿ ಮಿಶ್ರಣದ ಖರ್ಚನ್ನು ಹಾಲಿನಿಂದ ಪಡೆಯುವಂತಿರಬೇಕು.
ಪೌಷ್ಟಿಕ ತಿಂಡಿ ಮಿಶ್ರಣ:
ತಿಂಡಿ ಮಿಶ್ರಣವನ್ನು ತಯಾರಿಸುವಾಗ ಮೂಲವಸ್ತುಗಳನ್ನು ಇಂತಿಷ್ಟೇ ಪ್ರಮಾಣದಲ್ಲಿ ಸೇರಿಸಿರಬೇಕು.
- ಶೇ. 20 ಗೋದಿ ಬೂಸಾ, ಶೇ. 52 ಗೋವಿನ ಜೊಳದ ಹುಡಿ, ಮತ್ತು ಶೇ. 25 ನೆಲಕಡ್ಲೆ ಹಿಂಡಿ.
- 30% ಗೋವಿನ ಜೋಳದ ಹುಡಿ, 37% ಜೋಳದ ನುಚ್ಚು 10% ಶೇಂಗಾ ಹಿಂಡಿ ಮತ್ತು 20% ಬೇಳೆ ಕಾಳಿನ ಹೊಟ್ಟು.
- 22 % ಗೋಧಿ ಬೂಸಾ, 50% ಹುರುಳಿ ಮತ್ತು 25% ಶೆಂಗಾ ಹಿಂಡಿ.
- ಶೇ.15 ಶೇಂಗಾ ಹಿಂಡಿ, ಶೇ. 40 ಹುರುಳಿ ನುಚ್ಚು,37 % ಗೋವಿನ ಜೋಳ, ಮತ್ತು ಶೇ. 5 ದ್ವಿದಳ ಕಾಳಿನ ಸಿಪ್ಪೆ .
ಈ ನಾಲ್ಕು ಕ್ರಮದಲ್ಲಿ ತಯಾರಿಸಿದ ದಾಣಿ ಮಿಶ್ರಣ ಅಧಿಕ ಪೌಷ್ಟಿಕ ಆಹಾರವಾಗಿದ್ದು, ಹಾಲನ್ನೂ ಹೆಚ್ಚು ಕೊಡಬಲ್ಲುದು, ದೇಹದ ಬೆಳವಣಿಗೆಯೂ ಶೀಘ್ರವಾಗಿ ಆಗುವುದು. ಮರಿಯೂ ಬೇಗ ಹಾಕುವುದು.
ಬರೇ ಇಷ್ಟೇ ಅಲ್ಲದೆ ಈ ಎಲ್ಲಾ ಮಿಶ್ರಣಕ್ಕೆ ಶೇ.1 ರಷ್ಟು ಉಪ್ಪು ಮತ್ತು ಶೇ. 2 ರಷ್ಟು ಖನಿಜ ಪುಡಿ ಸೇರಿಸುವುದರಿಂದ ಇದು ಇನ್ನೂ ಪೌಷ್ಟಿಕವಾಗುತ್ತದೆ.