ಹೈನುಗಾರಿಕೆ ಮಾಡುತ್ತಿದ್ದಿರಾ? ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮ ಆ ವೃತ್ತಿಯನ್ನು ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನು ಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ.
ಕೊಂಡು ತರುವ ಪಶು ಆಹಾರ:
- ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ.
- ಸ್ಪರ್ಧೆಗಾಗಿ ದರ ವೆತ್ಯಾಸಗಳೂ ಇವೆ.
- ಹಾಲು ಕೊಳ್ಳುವವರು ನಿಮ್ಮ ಹಾಲು ನಮಗೆ ಕೊಡುತ್ತೀರೆಂದಾದರೆ , ನಾವು ಕೊಡುವ ಪಶು ಆಹಾರವನ್ನು ಬಳಸಿ ಎಂದು ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಾರೆ.
- ಹಾಲು ಕೊಳ್ಳುವವರೂ ಲಾಭ ಇರುವುದು ಪಶು ಆಹಾರದ ವ್ಯವಹಾರದಲ್ಲಿ ಎಂದು ಚೆನ್ನಾಗಿ ತಿಳಿದಿದ್ದಾರೆ.
- ಅದಕ್ಕಾಗಿ ಒಂದಕೊಂದು ಪೂರಕ ವ್ಯವಹಾರದಲ್ಲಿರುತ್ತಾರೆ.
ಪಶು ಆಹಾರ ತಯಾರಕರು ನಿಮಗೆ ಗೊತ್ತಿಲ್ಲದ ಅಥವಾ ಮಾರುಕಟ್ಟೆಯಲ್ಲಿ ಎಲ್ಲೂ ಲಭ್ಯವಿಲ್ಲದ ಸಾಮಾಗ್ರಿಗಳನ್ನು ತಂದು ನಿಮಗೆ ಕೊಡುವುದಿಲ್ಲ. ಎಲ್ಲೆಲ್ಲಿ ತಮಗೆ ಕಡಿಮೆ ಬೆಲೆಗೆ ಸಾಮಾಗ್ರಿ ದೊರೆಯುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿಯೇ ಅದನ್ನು ತಯಾರಿ ಮಾಡಿ ಕೊಡುತ್ತಾರೆ. ಕೊಂಡು ತರುವ ಪಶು ಆಹಾರದಲ್ಲಿ ಕಿಲೋದಲ್ಲಿ 200 ಗ್ರಾಂ ಯೂರಿಯಾ ಇರುವ ಶಂಕೆ ಇದೆ.
- ಇದರ ಬದಲಿಗೆ ನೀವೇ ಪಶು ಆಹಾರವನ್ನು ತಯಾರು ಮಾಡಿಕೊಂಡರೆ ಆವರು ನಿಮ್ಮಿಂದ ಹಿಂಡುವ ಹಾಲಿನ ಆದಾಯ ನಿಮಗೆ ಉಳಿಯಬಹುದಲ್ಲಾ.
ಅಧಿಕ ಹಾಲು – ಯಾವ ಆಹಾರ:
- ಪ್ರತೀ 3 ಲೀ ಹಾಲಿನ ಉತ್ಪಾದನೆಗೆ 1 ಕಿಲೋಗ್ರಾಂ ನಷ್ಟು ಪಶು ಆಹಾರ ಬೇಕು.
- ಅಲ್ಲದೆ ಪ್ರತೀ ದಿನಕ್ಕೆ ಕನಿಶ್ಟ 1.5 ಕಿಲೋ ಸಮತೋಲನ ಪಶು ಆಹಾರವನ್ನು ಅದರ ದೇಹ ಪೋಷಣೆಗಾಗಿಯೇ ಕೊಡಬೇಕು.
- ಈ ಪಶು ಆಹಾರದಲ್ಲಿ ನೆಲಕಡ್ಲೆ ಹಿಂಡಿ, ರವೆ ಗೋಧಿ ಬೂಸಾ, ಚಕ್ಕೆ ಬೂದಿ ಬೂಸಾ, ಮುಸುಕಿನ ಜೋಳ, ಕಡಲೆ ಹೊಟ್ಟು, ಖನಿಜ ಮಿಶ್ರಣ ಹಾಗೂ ಉಪ್ಪು ಇರಬೇಕು.
ಸಾಮಾನ್ಯವಾಗಿ ಈ ಪಶು ಆಹಾರದಲ್ಲಿ ಶೇ. 20 ರಷ್ಟು ಕಚ್ಚಾ ಪ್ರೋಟೀನು ಹಾಗೂ ಶೇ. 70 ರಷ್ಟು ಜೀರ್ಣ ಆಗುವ ಆಹಾರ ಇರಬೇಕು.
- ಕಾಳುಗಳನ್ನು ಹಿಟ್ಟು ಮಾಡಿ ದನಗಳಿಗೆ ಕೊಡಬಾರದು.
- ಅಕ್ಕಿ ತೌಡು, ಗೋಧಿ ಬೂಸಾ, ಎಣ್ಣೆ ತೆಗೆದಿರುವ ಅಕ್ಕಿ ತೌಡು ಅಥವಾ ಹೊಟ್ಟುಗಳು, ಇವು ಆಹಾರದಲ್ಲಿ ಶೇ. 45 ಕ್ಕಿಂತ ಹೆಚ್ಚು ಇರಕೂಡದು.
- ಇವು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ.
- ಇದರಿಂದ ಹಾಲಿನ ಡಿಗ್ರಿ ಬರುವುದಿಲ್ಲ. ಆರೋಗ್ಯ ಹದಗೆಡುತ್ತದೆ.
- ರಾಸು ಬೇಗ ಗರ್ಭವಾಗುವುದಿಲ್ಲ.
- ಬೆನ್ನು ಮತ್ತು ಹೊಟ್ಟೆ ಭಾಗದಲ್ಲಿ ಇರುವ ಕಪ್ಪು ಕೂದಲು ಕೆಂಪಾಗುತ್ತದೆ.
- ಕೆಚ್ಚಲು ಬಾವು ಆಗುವುದು ಹೆಚ್ಚು.
- ಅಡುಗೆ ಸೋಡಾವನ್ನು ಕೊಡುವುದರಿಂದ ಹಸುವಿನ ಹೊಟ್ಟೆಯ ಆಮ್ಲೀಯತೆ ಕಡಿಮೆಯಾಗುತ್ತದೆ.
ನೀವೇ ತಯಾರಿಸುವುದು ಹೇಗೆ?
- ಪಶು ಆಹಾರದಲ್ಲಿ ಇರಬೇಕಾದ ಸರಾಂಶಗಳಿಗನುಗುಣವಾಗಿ ಬೇರೆ ಬೇರೆ ವಸ್ತುಗಳನ್ನು ಮಿಶ್ರಣ ಮಾಡಿ ಅವರವರೇ ಪಶು ಆಹಾರ ತಯಾರಿಸಿಕೊಂಡರೆ ಕೊಂಡು ತರುವ ಆಹಾರಕ್ಕಿಂತ ಸುಮಾರು 25-30 % ಕಡಿಮೆ ಬೆಲೆಗೆ ಅದು ಪೂರೈಸುತ್ತದೆ.
- ಮುಸುಕಿನ ಜೋಳದ ಹುಡಿ 12 ಕಿಲೋ, ಗೋಧಿ ಬೂಸಾ 30ಕಿಲೋ , ಶೇಂಗಾ ಹಿಂಡಿ 25ಕಿಲೋ, ಹತ್ತಿ ಬೀಜದ ಹಿಂಡಿ 30ಕಿಲೋ ಖನಿಜ ಮಿಶ್ರಣ 2ಕಿಲೋ ಮತ್ತು ಉಪ್ಪು 1ಕಿಲೋ ಸೇರಿಸಿದ ಒಂದು ಮಿಶ್ರಣ ಇದರಲ್ಲಿ72% ಶಕ್ತಿ ಮತ್ತು 28%ಪ್ರೊಟೀನು ಇರುತ್ತದೆ.
- ಮುಸುಕಿನ ಜೋಳದ ಹುಡಿ 30 ಕಿಲೊ, ಅಕ್ಕಿ ತೌಡು 25 ಕಿಲೋ, ಶೇಂಗಾ ಹಿಂಡಿ 25 ಕಿಲೋ, ಹತ್ತಿ ಬೀಜದ ಹಿಂಡಿ 12 ಕಿಲೋ, ಹುರಿದ ಸೋಯಾ 5 ಕಿಲೋ, ಖನಿಜ ಮಿಶ್ರಣ 2ಕಿಲೋ ಮತ್ತು ಉಪ್ಪು 1ಕಿಲೋ ಸೇರಿಸಿದ ಇನ್ನೊಂದು ಮಿಶ್ರಣ
- ಇದರಲ್ಲಿ ಶೇ. 76 ಶಕ್ತಿ ಮತ್ತು 15% ಪ್ರೊಟೀನು ಇರುತ್ತದೆ. ಇದಕ್ಕೆ ಕಿಲೋ ಸುಮಾರು 23 ರೂ ಖರ್ಚು ಬರುತ್ತದೆ.
- ಮುಸುಕಿನ ಜೋಳದ ಹುಡಿ 33 ಕಿಲೊ, ಗೋಧಿ ಬೂಸಾ 34 ಕಿಲೋ, ಶೇಂಗಾ ಹಿಂಡಿ 30 ಕಿಲೋ, ಖನಿಜ ಮಿಶ್ರಣ 2ಕಿಲೋ ಮತ್ತು ಉಪ್ಪು 1ಕಿಲೋ ಸೇರಿಸಿದ ಇನ್ನೊಂದು ಮಿಶ್ರಣ. ಇದರಲ್ಲಿ ಶೇ. 72 ಶಕ್ತಿ ಮತ್ತು 21% ಪ್ರೊಟೀನು ಇರುತ್ತದೆ.
- ಶೇಂಗಾ ಹಿಂಡಿ ಶರೀರದಲ್ಲಿ ಬೇಗ ಜೀರ್ಣವಾಗುತ್ತದೆ. ಹತ್ತಿ ಬೀಜದ ಹಿಂಡಿ ಕೊಬ್ಬರಿ ಹಿಂಡಿ ನಿಧಾನ. ಇವುಗಳನ್ನು ಮಿಶ್ರಣ ಮಾಡಿ ಕೊಟ್ಟರೆ ಉತ್ತಮ. ಆದರೆ ಶೇಂಗಾ ಹಿಂಡಿಯ ಗುಣಮಟ್ಟ ಮಾತ್ರ ಖಾತ್ರಿ ಇರಲಿ.
ಜೋಳ ಹುಡಿಗೆ ಕಿಲೋ 20 ರೂ. ಶೇಂಗಾ ಹಿಂಡಿ ಕಿಲೋ 45ರೂ. ಹತ್ತಿ ಬೀಜದ ಹಿಂಡಿ 30 ರೂ. ಖನಿಜ ಮಿಶ್ರಣ 100 ರೂ. ಮತ್ತು ಉಪ್ಪು 5 ರೂ. ಇರುತ್ತದೆ. ಇಷ್ಟನ್ನು ಮಿಶ್ರಣ ಮಾಡಿದಾಗ 1 ಕಿಲೋ ಪಶು ಆಹಾರವನ್ನು 20-22 ರೂ. ಗಳಲ್ಲಿ ತಯಾರಿಸಿಕೊಳ್ಳಬಹುದು. ಜೋಳದ ಹುಡಿಯನ್ನು ಕಡಿಮೆ ಮಾಡಲು ಉದ್ದು ಸಿಪ್ಪೆ, ಕಡಲೆ ಸಿಪ್ಪೆ, ಬಳಕೆ ಮಾಡಿ. ಇದು ಹಸುಗಳು ಬೇಗ ಬೆದೆಗೆ ಬರಲು ಸಹಕಾರಿ.
ಪಶು ಆಹಾರ ತಯಾರಿಕೆಯಲ್ಲಿ ಕಿಲೋದಲ್ಲಿ 2-3 ರೂ. ಉಳಿದರೂ ಸಹ ಹಾಲು ಉತ್ಪಾದನೆಯಲ್ಲಿ ಸ್ವಲ್ಪ ಲಾಭವಾಗುತ್ತದೆ. ಎಲ್ಲವನ್ನೂ ಕೊಂಡು ತಂದರೆ ಅತೀ ದೊಡ್ದ ನಷ್ಟದ ವೃತ್ತಿಯಾಗುತ್ತದೆ.