ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ.
- ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು,
- “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ”
- ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು.
- ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು ಅದಲ್ಲ.
- ಈ ಮಾತಿನಲ್ಲಿ ಆಧುನಿಕ ಕೃಷಿ ವಿಜ್ಞಾನ ಇದೆ.
- ಇದನ್ನೇ ಸಸ್ಯ ವಿಜ್ಞಾನಿ ಸರ್ ಜಗದೀಶ್ಚಂದ್ರ ಬೋಸ್ ಸಹ ಹೇಳಿದ್ದಾರೆ.
- ಇದುವೇ ಪ್ರಾಕೃತಿಕ ಕೃಷಿ.
ನೀವು ಗಮನಿಸಿದ ಸತ್ಯ:
- ಮನೆ ಬಾಗಿಲಿನ ತೆಂಗಿನ ಮರಕ್ಕೆ ಏನು ಗೊಬ್ಬರ ಹಾಕದಿದ್ದರೂ ಅದರಲ್ಲಿ ಫಸಲು ಚೆನ್ನಾಗಿರುತ್ತದೆ. ಆರೋಗ್ಯವಾಗಿಯೂ ಇರುತ್ತದೆ.
- ರಸ್ತೆ ಬದಿಯಲ್ಲಿರುವ ಮಾವಿನ ಮರದಲ್ಲಿ ಮಾವು ಆದಂತೆ ನಾವು ನೆಟ್ಟು ಬೆಳೆಸಿದ ಮರದಲ್ಲಿ ಆಗುವುದಿಲ್ಲ.
- ಅದೇ ರೀತಿ ಗೇರು, ತೆಂಗು, ಹಲಸು ಅಥವಾ ಯಾವುದೇ ಸಸ್ಯ ರಸ್ತೆ ಬದಿಯಲ್ಲಿ ಯಾರ ಆರೈಕೆಯೂ ಇಲ್ಲದೆ ಎಷ್ಟು ಉತ್ತಮವಾಗಿ ಬೆಳೆದಿರುತ್ತದೆ.
- ರೈತರು ದಿನಾ ಓಡಾಡುತ್ತಾ ಗಮನಿಸುತ್ತಾ ಇರುವ ಎಲ್ಲಾ ತರಹದ ಬೆಳೆಗಳಿಗೆ ರೋಗ- ಕೀಟ ಬಾಧೆ ಕಡಿಮೆ. ಇಳುವರಿಯೂ ಅಧಿಕ.
- ಯಾರ ಹೊಲಕ್ಕೆ ಜನ ಹೆಚ್ಚು ಹೆಚ್ಚು ಭೇಟಿ ನೀಡುತ್ತಾರೆಯೋ ಅವರ ಹೊಲದಲ್ಲಿ ಉತ್ತಮ ಇಳುವರಿ ಇರುತ್ತದೆ.
- ಶಾಲೆಗಳ ವಠಾರದಲ್ಲಿಇರುವ ತೆಂಗಿನ ಮರ, ಗೇರು ಮರಗಳಲ್ಲಿ ಎಷ್ಟು ಉತ್ತಮ ಇಳುವರಿ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಯಾಕೆ ಹೀಗೆ:
ಇದು ಪ್ರಕೃತಿ ನಿಯಮ. ಸಸ್ಯಗಳು ಮಾನವ ಒಡನಾಟವನ್ನು ಬಯಸುತ್ತವೆ. ಮಾನವ ಎನ್ನುವುದಕ್ಕಿಂತಲೂ ಪ್ರಕೃತಿಯಲ್ಲಿರುವ ಜೀವಿಗಳ ಒಡನಾಟವನ್ನು ಬಯಸುತ್ತವೆ. ಕೃಷಿ ಹೊಲದ ವಿಚಾರ ಬಂದಾಗ ಮಾನವ ಒಡನಾಟ ಎಂತಲೂ , ಕಾಡಿನ ವಿಷಯದಲ್ಲಿ ಪ್ರಾಣಿ ಪಕ್ಷಿಗಳ ಸಹಜೀವನವು ಅಗತ್ಯ ಎಂದು ಹೇಳಬಹುದು.
- ಮಾನವನ ನಿತ್ಯ ಓಡಾಟದಿಂದ ಬೆಳೆಗಳ ಮೇಲೆ ಅದೇನೋ ವಿಶಿಷ್ಟ ಪರಿಣಾಮ ಉಂಟಾಗುತ್ತದೆ.
- ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಮಾನವನ ಉಸಿರಾಟದಲ್ಲಿ ಹೊರಬೀಳುವ ಕಾರ್ಬನ್ ಡೈ ಆಕ್ಸೈಡ್ ಸಸ್ಯಗಳ ಉಸಿರಾಟಕ್ಕೆ ಹೇರಳವಾಗಿ ದೊರೆತು ಅವುಗಳು ಉತ್ತಮವಾಗಿ ಬೆಳೆಯುತ್ತವೆ.
- ಪರಿಣಾಮ ಉತ್ತಮ ಫಸಲನ್ನು ಕೊಡುತ್ತವೆ.
ಕಾರ್ಬನ್ ಡೈ ಆಕ್ಸೈಡ್ ಪೂರೈಕೆ:
ಸಸ್ಯಗಳ ಉಸಿರಾಟಕ್ಕೆ ಬೇಕಾಗುವುದು ಇಂಗಾಲದ ಡೈ ಆಕ್ಸೈಡ್. ಅವು ಮಾನವ ಸೇರಿದಂತೆ ಎಲ್ಲಾ ಜೀವ ಜಂತುಗಳು ಉಸಿರಾಟ ಮಾಡಿ ಹೊರ ಬಿಡುವ ಅನಿಲ.ಇದನ್ನು ಸಸ್ಯಗಳು ತಮ್ಮ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬಳಕೆ ಮಾಡಿಕೊಳ್ಳುತ್ತವೆ. ಅದಕ್ಕೆ ಪ್ರತಿಯಾಗಿ ಶುದ್ಧ ಆಮ್ಲಜನಕವನ್ನು ಪರಿಸರಕ್ಕೆ ಕೊಡುತ್ತದೆ.
- ನಾವು ನಮ್ಮ ಹೊಲದಲ್ಲಿ ಸುತ್ತಾಡುತ್ತಾ ಇದ್ದಾಗ ನಮ್ಮ ಉಸಿರಾಟ ಮತ್ತು ಹೇಗೆ ಒಡನಾಟ ಬೆಳೆಸುವುದು:
- ದಿನಾ ಬೆಳಿಗ್ಗೆ, ಮಧ್ಯಾನ್ಹ, ಸಂಜೆ ಮೂರೂ ಹೊತ್ತಿನಲ್ಲಿ ಹೊಲದಲ್ಲಿ ಸುತ್ತಾಡುತ್ತಾ ಮಾತನಾಡುತ್ತಾ ಸಂಚರಿಸಬೇಕು.
- ನೆಂಟರಿಷ್ಟರು ಬಂದಾಗ ಅವರನ್ನು ಹೊಲ ಸುತ್ತಲು ಕರೆದೊಯ್ಯಬೇಕು.
- ಹೊಲ ಸುತ್ತುವಾಗ ಹೆಚ್ಚಿನ ಮಾತುಕತೆ ನಡೆಸಬೇಕು. ‘
- ಹೊಲದಲ್ಲಿ ಪ್ರತೀ ಸೀಸನ್ ನಲ್ಲಿ ತಿನ್ನಬಹುದಾದ ಹಣ್ಣು ಹಂಪಲು ಬೆಳೆಗಳಿದ್ದರೆ ಮನೆ ಮಕ್ಕಳೂ ಸಹ ತೋಟ ಸುತ್ತುವ ಹವ್ಯಾಸವನ್ನು ಬೆಳೆಸುತ್ತಾರೆ.
- ಕೃತಕವಾಗಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೆಚ್ಚು ಮಾಡಲು ಆಗಾಗ್ಗೆ ಹೊಲದ ಕೃಷಿ ತ್ಯಾಜ್ಯಗಳನ್ನು ಅರ್ಧ ಸುಡುವ ಕಾರ್ಯವೂ ಸಹಕಾರಿ. ಇದರಿಂದ ಕೀಟ ನಿಯಂತ್ರಣ ಸಹ ಆಗುತ್ತದೆ.
- ಕೆಲವು ಕರಗದೇ ಇರುವ ಉಪಯೋಗ ರಹಿತ ವಸ್ತುಗಳನ್ನು ಯಾರಾದರೂ ಸುಡುವುದೇ ಆದ ಕಾರಣ ರೈತರೂ ಇದನ್ನು ಸುಡಬಹುದು.
ಫಲಿತಾಂಶ:
- ಹೆಚ್ಚು ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ದೊರೆತಂತೆ ಸಸ್ಯಗಳು ಹೆಚ್ಚು ಹೆಚ್ಚು ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಸುತ್ತವೆ.
- ಇದರ ಕ್ಷಮತೆ 70 % ಹೆಚ್ಚಳವಾಗುತ್ತದೆ.
- ಇದರಿಂದ ಸಸ್ಯ ಬೆಳವಣಿಗೆ ವೃದ್ದಿಸುತ್ತದೆ.
- ವಾತಾವರಣಕ್ಕೆ ಮಾನವನ ಮೂಲಕ ವರ್ಷಕ್ಕೆ 10 ಬಿಲಿಯನ್ ಟನ್ ನಷ್ಟು ಕಾರ್ಬನ್ ಡೈಆಕ್ಸೈಡ್ ಹೊರ ಹಾಕಲ್ಪಡುತ್ತದೆ.
- ಇದರಲ್ಲಿ ಔದ್ಯಮಿಕ ಕಾರ್ಬನ್ ಸಹ ಸೇರಿದೆ.
- ಅತಿಯಾದರೆ ಅದೂ ಉತ್ತಮವಲ್ಲ.
ಕಾರ್ಬನ್ ಡೈ ಆಕ್ಸೈಡ್ ಎಂಬುದು ಭೂಮಿಯಲ್ಲಿ ಹಸುರು ಹೆಚ್ಚಿಸಲು ಬೇಕಾಗುವ ಅನಿಲ ಎಂದೇ ವ್ಯಾಖ್ಯಾನಿಸಲಾಗಿದೆ. (CO2 is making Earth greener-for now) ಇದನ್ನು ನಾಸಾ ವಿಜ್ಞಾನಿಗಳೂ ಸಹ ಸ್ಪಷ್ಟಪಡಿಸಿದ್ದಾರೆ. ಕಳೆದ 35 ವರ್ಷಗಳಿಂದ ನಮ್ಮ ಭೂಮಿಯಲ್ಲಿ ಹಸಿರು ಉಳಿದಿದ್ದರೆ ಅದು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾದ ಕಾರಣ ಎಂಬುದನ್ನು ಸುಮಾರು 32 ತಜ್ಞರು, 24 ಸಂಸ್ಥೆಗಳು ಅಧ್ಯಯನ ಮಾಡಿ ತಿಳಿಸಿವೆ.
- ಹಾಗೆಂದು ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳವಾದರೆ ಜಾಗತಿಕ ತಾಪಮಾನದ ಏರಿಕೆಯಾಗುತ್ತದೆ.
- ಸಮುದ್ರ ಮಟ್ಟ ಏರಿಕೆಯಾಗುತ್ತದೆ.
- ಹಿಮಗಡ್ಡೆಗಳು ಕರಗುತ್ತದೆ.
- ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮವೂ ಉಂಟಾಗುತ್ತದೆ.
ಕೃಷಿ – ಕಾರ್ಬನ್ ಡೈ ಆಕ್ಸೈಡ್:
- ಕೃಷಿ ಬೆಳೆಗಳಿಗೆ ಕಾರ್ಬನ್ ಡೈಆಕ್ಸೈಡ್ ಹೆಚ್ಚು ಬೇಕು.
- ಅದನ್ನು ನಾವು ಕೊರತೆ ಆಗದಂತೆ ಮಾಡಲು ಸರಳ ಮತ್ತು ಪರಿಸರ ಪೂರಕ ವಿಧಾನ ಎಂದರೆ ನಾವು ಹೆಚ್ಚು ಹೆಚ್ಚು ಹೊಲದಲ್ಲಿ ಇರುವುದು.
- ಇದರಿಂದ ಪರೋಕ್ಷವಾಗಿ ತುಂಬಾ ಪ್ರಯೋಜನ ಇದ್ದು,
- ಅಲ್ಲಿನ ನ್ಯೂನತೆಗಳು ತಕ್ಷಣ ಗಮನಕ್ಕೆ ಬಂದು ಅದನ್ನು ಸರಿಪಡಿಸಲು ಇದು ಸಹಾಯಕ.
ಅಂಗಾರಾಮ್ಲವನ್ನು ಕೃತಕ ವಿಧಾನದಲ್ಲಿ ಒದಗಿಸುವ ಬಗ್ಗೆ ಸಂಶೋಧನೆಗಳಾಗಿಲ್ಲ. ಒಂದು ಗಿಡಕ್ಕೆ ದಿನಕ್ಕೆ ಬೇಕಾಗುವ ಅಂಗಾರಾಮ್ಲದ ಅವಶ್ಯಕತೆಯ ಬಗ್ಗೆ ಅಧ್ಯಯನಗಳು ಆದಲ್ಲಿ ಅದನ್ನು ಕೃತಕವಾಗಿ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಬಹುದು. ಆ ತನಕ ದಿನದಲ್ಲಿ ಸಾಧ್ಯವಾದಷ್ಟೂ ಬಾರಿ ಹೊಲಕ್ಕೆ ಹೋಗಿ ಮತ್ತು ಸಸ್ಯಗಳ ಜೊತೆ ಮಾತಾಡಿಸಿ.