ಪಶುಪಾಲನೆ ಮಾಡುವವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ. ಅದರೊಂದಿಗೆ ಸ್ವಲ್ಪ ಅಜೋಲಾವನ್ನು ಮನೆಯ ಸಮೀಪ ಬೆಳೆಸಿದರೆ ಪೌಷ್ಟಿಕ ಮೇವು ಲಭ್ಯವಾಗುತ್ತದೆ.
- ಮೇವನ್ನು ಅದಕ್ಕಾಗಿಯೇ ಹೊಲ ಮೀಸಲಿಟ್ಟು ಬೆಳೆಸಿದಾಗ ಆ ಹೊಲದ ಉತ್ಪಾದಕತೆಯನ್ನುಲೆಕ್ಕಾಚಾರ ಹಾಕಿದರೆ ಅದು ನಷ್ಟ.
- ಇದರ ಬದಲಿಗೆ ಪೌಷ್ಟಿಕ ಮೇವನ್ನು ಕಡಿಮೆ ಸ್ಥಳದಲ್ಲಿ ಬೇರೆ ಕಡೆಯಲ್ಲಿ ಉತ್ಪಾದಿಸುವುದು ಲಾಭದಾಯಕ.
- ಪಶುಗಳಿಗೆ ಸತ್ವ ಇಲ್ಲದ 50 ಕಿಲೋ ಮೇವು ಕೊಡುವ ಬದಲಿಗೆ ಹೆಚ್ಚು ಸಾರಾಂಶ ಇರುವ 10-15 ಕಿಲೋ ಮೇವು ಕೊಟ್ಟರೆ ಸಾಕಾಗುತ್ತದೆ.
- ಇದರಿಂದ ದೇಹ ಪೋಷಣೆಯೂ ಆಗುತ್ತದೆ, ಅವುಗಳ ಹಸಿವೂ ಸಹ ನೀಗುತ್ತದೆ.
ಮೇವು ಮತ್ತು ಪಶುಪಾಲನೆ:
- ನಮ್ಮ ದೇಶದಲ್ಲಿ ಪಶುಪಾಲನೆಗೆ ಸಾಕಾಗುವಷ್ಟು ಪೌಷ್ಠಿಕ ಮೇವು ಲಭ್ಯವಿಲ್ಲ.
- ಬರಗಾಲ ಬಂದರಂತೂ ಭಾರೀ ಕಷ್ಟ. ಹಸಿರು ಹುಲ್ಲನ್ನು ಅದಕ್ಕಾಗಿಯೇ ಹೊಲ ಮೀಸಲಿಟ್ಟು ಬೆಳೆಸಿ ಪಶುಪಾಲನೆ ಮಾಡುವಾಗ ಖರ್ಚು ದುಬಾರಿಯಾಗುತ್ತದೆ.
- ಹೆಚ್ಚಿನೆಲ್ಲಾ ಮೇವುಗಳು ಹೊಟ್ಟೆ ತುಂಬಿಸಲು ಅಧಿಕ ಪ್ರಮಾಣದಲ್ಲಿ ಕೊಡುವಂತದ್ದಾಗಿದ್ದು,
- ಅದರ ಶರೀರ ಪೋಷಕ ಗುಣ, ಪ್ರಮಾಣಕ್ಕೆ ಅನುಗುಣವಾಗಿ ಇಲ್ಲ.
- ಇಂದು ನಮ್ಮ ಹೈನುಗಾರಿಕೆಗೆ ಅಧಿಕ ಸತ್ವದ ಕನಿಷ್ಟ ಪ್ರಮಾಣದ ಆಹಾರದ ಅವಶ್ಯಕತೆ ಹೆಚ್ಚಾಗಿದೆ.
- ಇದನ್ನು ನೀರಿನ ತೊಟ್ಟಿಗಳಲ್ಲಿ ಬೆಳೆಸಬಹುದಾದ ಅಜೋಲ ಮೂಲಕ ಪಡೆಯಬಹುದು.
- ಅಜೋಲ ನೀರಿನಲ್ಲಿ ತೇಲುತ್ತಾ ಬದುಕುವ ಬಹುವಾರ್ಷಿಕ ಸಸ್ಯವಾಗಿದ್ದು, ಎಲ್ಲಾ ಹೈನುಗಾರರೂ ಇದನ್ನು ಬೆಳೆಸಿ ಪೂರಕ ಆಹಾರವಾಗಿ ಬಳಸಬಹುದು.
- ಅಜೋಲಾ ಎಂಬ ನೀರಿನಲ್ಲಿ ತೇಲುವ ಸಸ್ಯದ ಬುಡ ಭಾಗದಲ್ಲಿ ಅನಬೆನಾ ಎಂಬ ಹೆಸರಿನ ಒಂದು ನೀಲಿ ಹಸುರು ಪಾಚಿ ಇರುತ್ತದೆ.
- ಅದು ಅಜೋಲಾ ಸಸ್ಯದೊಂದಿಗೆ ಸಹಜೀವನ ನಡೆಸುವ ಪಾಚಿಯಾಗಿದ್ದು, ಅಧಿಕ ಪೌಷ್ಟಿಕ ಅಂಶಗಳನ್ನು ಹೊಂದಿದೆ.
- ಇದು ಮಳೆಗಾಲದಲ್ಲಿ ನೀರು ಹೆಚ್ಚಾಗಿ ಕೊಳೆಯುವುದಿಲ್ಲ. ಯಾವುದೇ ಅಡ್ಡ ಪರಿಣಾಮಗಳಿಲ್ಲ.
ನಮ್ಮಲ್ಲಿ ಬೇರೆ ಬೇರೆ ನಮೂನೆಯ ಅಜೋಲಗಳು ಕಂಡುಬರುತ್ತವೆಯಾದರೂ, ಪಿನ್ನಾಟ ಮತ್ತು ಸಾಲ್ಫೇನಿಯಾ ಕುಟುಂಬಕ್ಕೆ ಸೇರಿದ ತಳಿಗಳು ಮೇವಿಗೆ ಸೂಕ್ತ. ಇದು ವಾತಾವರಣದ ಸಾರಜನಕವನ್ನು ಹೀರಿಕೊಂಡು ಬದುಕುವ ಸಸ್ಯವಾಗಿದೆ. ಇದರ ಎಲೆ ತುಂಬಾ ಚಿಕ್ಕದು. ರಸಸಾರ 4ರಿಂದ 6ರ ತನಕ ಇರುತ್ತದೆ. ಉಷ್ಣತೆ 25ರಿಂದ 27 ಡಿಗ್ರಿ ತನಕ ಇದ್ದರೆ ಉತ್ತಮವಾಗಿ ಬೆಳೆಯುತ್ತದೆ. ನೆರಳು ಮಾಡಿ ಈ ಉಷ್ಣತೆಯನ್ನು ಕಡಿಮೆ ಮಾಡಿ ಬೆಳೆಸಬಹುದು.
ಹೇಗೆ ಬೆಳೆಸುವುದು:
- ಪ್ಲಾಸ್ಟಿಕ್ ಹಾಳೆಯನ್ನು ನೆಲಕ್ಕೆ ಹಾಸಿ ಟ್ಯಾಂಕ್ ಮಾಡಿ ಅಜೋಲವನ್ನು ಬೇಕಾದಲ್ಲಿ ಬೆಳೆಸಬಹುದು.
- ಪ್ರತೀ ದಿನಕ್ಕೆ ಒಂದು ಕಿಲೋ ಅಜೋಲ ಪಡೆಯಲು ಒಂದು ಮೀಟರ್ ಅಗಲ, 2 ಮೀಟರ್ ಉದ್ದದ ಒಂದು ಅಡಿ ಆಳದ ಗುಂಡಿ ಬೇಕಾಗುತ್ತದೆ.
- ಇಂತಹ ಅನುಕೂಲಕರ ಬೇರೆ ಬೇರೆ ಬೇರೆ ಅಳತೆಯ ಹೊಂಡವನ್ನು ಮಾಡಿಕೊಂಡು ಅದರ ಮೇಲೆ ಪ್ಲಾಸ್ಟಿಕ್ ಹಾಳೆ ಹೊದಿಸಿ, ಮೂಲೆಗಳನ್ನು ಗಟ್ಟಿ ಮಾಡಿ ಮೇಲೆ 20ರಿಂದ 24 ಕೆ.ಜಿ. ಫಲವತ್ತಾದ ಗದ್ದೆ ಮಣ್ಣನ್ನು ಹಾಕಿ ಸಮನಾಗಿ ಹರಡಬೇಕು.
- ನಂತರ 5 ಕೆ.ಜಿ. ಸಗಣಿ ಹಾಗೂ 20 ಗ್ರಾಂ. ಸೂಪರ್ ಫಾಸ್ಫೇಟ್ ಹಾಗೂ 50 ಗ್ರಾಂ. ಲವಣ ಮಿಶ್ರಣವನ್ನು 10 ಲೀ. ನೀರಿನಲ್ಲಿ ಬೆರೆಸಿ ಗುಂಡಿಗೆ ಸುರಿಯಬೇಕು.
- ಗುಂಡಿಯಲ್ಲಿ 5 ರಿಂದ 8 ಸೆಂ.ಮೀ ವರೆಗೆ ನೀರು ನಿಲ್ಲಿಸಿರಬೇಕು. ಇದರ ಮೇಲೆ 1 ಬೊಗಸೆಯಷ್ಟು ತಾಜಾ ಹಾಗೂ ಶುದ್ಧವಾದ ಅಜೋಲವನ್ನು ತಂದು ಹಾಕಬೇಕು.
- ಈ ಅಜೋಲವು 10 ರಿಂದ 12 ದಿನದಲ್ಲಿ ಗುಂಡಿಯ ತುಂಬಾ ಬೆಳೆದು ಬಳಕೆಗೆ ಸಿದ್ದವಾಗುತ್ತದೆ.
- ಅಧಿಕ ಪ್ರಮಾಣದಲ್ಲಿ ಅಜೋಲ ಬೆಳೆಯಲು ವಾರಕ್ಕೊಮ್ಮೆ 5 ಲೀ. ನೀರಿನಲ್ಲಿ ಒಂದು ಕೆ.ಜಿ. ಸಗಣಿಯನ್ನು ಬೆರೆಸಿ ಹಾಕುತ್ತಿರಬೇಕು.
- ತೊಟ್ಟಿಯ ನೀರನ್ನು ತಿಂಗಳಿಗೊಮ್ಮೆ ಬದಲಾಯಿಸಿ ಮಣ್ಣನ್ನು 6 ತಿಂಗಳಿಗೊಮ್ಮೆ ಬದಲಾಯಿಸಬೇಕು.
- ಪ್ರತೀ ದಿನ 25% ಅಜೋಲವನ್ನು ತೆಗೆದರೂ ಮರುದಿನ ಪುನಹ ತೊಟ್ಟಿ ತುಂಬಾ ಅಜೋಲ ಬೆಳೆದು ತುಂಬುತ್ತದೆ.
- ಪ್ರತೀ ದಿನ ತೆಗೆಯುವಾಗ ಬೇರೆ ಬೇರೆ ಕಡೆಗಳಿಂದ ತೆಗೆಯಬೇಕು.
ಪಶು ಮೇವು ಮಾತ್ರವಲ್ಲ:
- ಅಜೋಲವನ್ನು 6 ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆ ಕುರಿ, ಮೇಕೆ, ಹಂದಿ ಮೊಲ ಹಾಗೂ ಕೋಳಿಗಳಿಗೆ ನೀಡಬಹುದು.
- ತೊಟ್ಟಿಯಿಂದ ಅಜೋಲ ತೆಗೆದ ಮೇಲೆ ಚೆನ್ನಾಗಿ ತೊಳೆದು ಬಕೆಟಿನಲ್ಲಿ ಹಾಕಿ ಪಶು ಆಹಾರದೊಂದಿಗೆ ಮಿಶ್ರಣ ಮಾಡಿ ಆಕಳು ಎಮ್ಮೆಗೆ ದಿನಕ್ಕೆ ಒಂದರಿಂದ 2 ಕೆ.ಜಿ.ಯಷ್ಟು ಕೊಡಬಹುದು.
- 2 ಕೆ.ಜಿ.ಗಿಂತ ಹೆಚ್ಚು ಕೊಟ್ಟಲ್ಲಿ ಅದು ಜಾನುವಾರುಗಳಿಗೆ ಅಜೀರ್ಣ ಉಂಟಾಗಿ ಹೊಟ್ಟೆ ಉಬ್ಬರಿಸುವ ಸಾಧ್ಯತೆ ಇದೆ.
- ಅಜೋಲಾವನ್ನು ಮೇವಾಗಿ ಕೊಡುವುದರಿಂದ ಹಾಲು ಹೆಚ್ಚಳವಾಗುತ್ತದೆ. ಹಸಿ ಹುಲ್ಲು ಅಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು.
ಅಜೋಲಾ ಸಸ್ಯಗಳನ್ನು ಪಶು ಮೇವಾಗಿ ಬಳಸಿದರೆ ಬೇರೆ ಮೇವುಗಳನ್ನು ಕಡಿಮೆ ಮಾಡಬಹುದು. ಇದು ದೇಹ ಪೋಷಣೆಯ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ.