ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?

ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ  ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು. 

Malayan yellow dwarf coconut
ಮಲಯನ್ ಯಲ್ಲೋ ಡ್ವಾರ್ಫ್ ತೆಂಗಿನಕಾಯಿ

  • ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ?
  • ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210 ರೂ. DXT (Dwarf X Tall(ಕುಬ್ಜ ಮತ್ತು ಎತ್ತರದ ಸಂಕರಿತ ಎಲ್ಲಿಯೂ ಅದನ್ನು ಹೈಬ್ರೀಡ್ ಎಂದು ಹೇಳಿಲ್ಲ)    ಎಂಬ ಹೆಸರಿನ ತಳಿಯ ಬೆಲೆ ರೂ.250.
  • ಈ ಬೀಜದ, ಸಸಿಯ ಮಹಿಮೆಯನ್ನು ಸ್ವಲ್ಪ ಕೇಳಿ. ಇಲ್ಲಿ ವಿವರವಾಗಿ ಹೇಳುತ್ತೇನೆ.

 

ಇದು ಯಾವ ಬೀಜ:

  • ಚೌಘಾಟ್ ಆರೆಂಜ್ ಡ್ವಾರ್ಫ್(ಗೆಂದಾಳಿ)(COD),ಮಲಯನ ಯೆಲ್ಲೋ ಡ್ವಾರ್ಪ್ (ಸೀತಾಳಿ) (MYD), ಚೌಘಾಟ್ ಗ್ರೀನ್ ಡ್ವಾರ್ಫ್ (ಹಸುರು 18 ತಿಂಗಳಲ್ಲಿ ಹೂ ಬಿಡುವ)(CGD)  ಇವು ಪ್ರಚಲಿತದಲ್ಲಿರುವ ಕುಬ್ಜ ತಳಿಯ ತೆಂಗಿನ ತಳಿಗಳು.
  • ಇನ್ನೂ ಕೆಲವು ತಳಿಗಳು ಇವೆ. ಆದರೆ ಅದರ ಕ್ಷಮತೆ ಉತ್ತಮವಾಗಿಲ್ಲವಂತೆ.
  • ಈ ಕುಬ್ಜ ತಳಿಯ ಸಸಿಗೆ  ತಲಾ 210 ರೂ.ಗಳು. ಇದು ನಿಜಬೀಜ  ( Pollinated True seed)ಅಲ್ಲ.
  • ಫಾರಂ ನಲ್ಲಿ  ಬೆಳೆಯುತ್ತಿರುವ ಆ ತಳಿಯ ತೆಂಗಿನ ಮರದಲ್ಲಿ ಆದ ಕಾಯಿಯನ್ನು ಮೊಳಕೆಗೆ ಇಟ್ಟು ಪಡೆಯಲಾದ ಸಸಿ  ಎನ್ನುತ್ತಾರೆ ಸಸಿ ಕೊಡುವವರು.
seedlings raised bed
ಇದು ಸಸಿ ಮಾಡುವ ಸ್ಥಳ.
  • ಇನ್ನೂ ಬೀಜದ ತೆಂಗಿನ ಕಾಯಿ, ಇದೂ ಸಹ ನೋಟ  ಚೆನ್ನಾಗಿರುವ ಕಾಯಿಯನ್ನು ಕೊಡುವುದು ಅಷ್ಟೇ.
  • ಇಲ್ಲಿ ಎಷ್ಟು ಆಯ್ಕೆ ಮಾನದಂಡಗಳಿವೆಯೋ ತಿಳಿಯದು. ಆದರೆ ವೈಜ್ಞಾನಿಕವಾಗಿ ಇದರಲ್ಲಿ ಆಯ್ಕೆ ಮಾಡಲು ಅಂತಹ ಆನೆ ಕುದುರೆಗಳಿಲ್ಲ.
  • ಮರದ ಎಲ್ಲಾ ಬೆಳೆದು ಬಲಿತ ತೆಂಗಿನ ಕಾಯಿಗಳನ್ನು ಬೀಜಕ್ಕಿಟ್ಟರೆ ತಾಯಿ ಮರದ ತರಹದ ಬಣ್ಣದ ಗರಿಯನ್ನು ಬಿಟ್ಟರೆ ಅದರದ್ದೇ ಮೂಲ ಆಗಿರುತ್ತದೆ. ಇದೇ ಇಲ್ಲಿನ ಆಯ್ಕೆ ಕ್ರಮ.

ಹೈಬ್ರೀಡ್ ಸಸಿ:

  •  ಸಾಮಾನ್ಯವಾಗಿ DXT  ಕ್ರಾಸಿಂಗ್ ಮಾಡಿ ಪಡೆಯಲಾದ ಹೈಬ್ರೀಡ್ ಸಸಿ  ಯಾವುದು ಗೊತ್ತೇ?
  • ಮಲಯನ್ ಯಲ್ಲೋ ಡ್ವಾರ್ಫ್ ಅಥವಾ ಚೌಘಾಟ್ ಆರೆಂಜ್ ಡ್ವಾರ್ಪ್ ತಳಿಯ ಕಾಯಿಗಳನ್ನು ಬೀಜಕ್ಕಿಟ್ಟಾಗ ಅದರಲ್ಲಿ ಹುಟ್ಟಿದ  ಸಸಿಯ ಗರಿಯಲ್ಲಿ ಕೆಲವು ಬಣ್ಣ ವ್ಯತ್ಯಾಸ ಬರುತ್ತವೆ.
  • ಇದು ಮಿಶ್ರ ಪರಾಗಸ್ಪರ್ಷದಿಂದಾಗಿ ಉಂಟಾದ ವೆತ್ಯಾಸ.
  • ಇದನ್ನೇ ಹೈಬ್ರೀಡ್ ತಳಿ ಎಂದು ಹೇಳಿ  ರೈತರಿಗೆ ಕೊಡಲಾಗುತ್ತದೆ.
  • ಇದು ಮಾನವ ಕೃತಕ ಪರಾಗಸ್ಪರ್ಶ ಮಾಡಿ ಪಡೆದ ಬೀಜದ ಸಸಿ ಅಲ್ಲ ಎಂಬುದು ಅದನ್ನು ಪಾತಿಯಲ್ಲಿ ಹಾಕಿದ್ದನ್ನು ನೋಡಿದಾಗ ತಿಳಿಯುತ್ತದೆ.
  • ಕಿತ್ತಳೆ ಮತ್ತು ಹಳದಿ ಗಿಡ್ಡ ತಳಿಯ ಸಸಿ ಮಾಡಿದ ಪಾತಿಯಲ್ಲಿ ಬೆಳೆದ ಬಣ್ಣ ವೆತ್ಯಾಸದ ತಳಿಯನ್ನು ಹೈಬ್ರೀಡ್ ತಳಿಯಾಗಿ ಕೊಡಲಾಗುತ್ತದೆ.
Coconut trees at CPCRI Garden Nettana
ನೆಟ್ಟಣ ಫಾರಂ ನಲ್ಲಿ ಬೀಜದ ಆಯ್ಕೆಯ ಮರಗಳು
  • ಇಲ್ಲಿ ನೈಸರ್ಗಿಕವಾಗಿ ಕೃತಕ ಪರಾಗಸ್ಪರ್ಷ ಆಗಲು ಬೇಕಾದಂತೆ ಎಲ್ಲಾ ತಳಿಗಳನ್ನೂ ಒಟ್ಟೊಟ್ಟಿಗೆ ಬೆಳೆಸಲಾಗುತ್ತಿದೆ.
  • ಸಹಜವಾಗಿ ಇಲ್ಲಿ ನೈಸರ್ಗಿಕ ಕ್ರಾಸಿಂಗ್  ನಡೆದೇ ನಡೆಯುತ್ತದೆ.

ತಿರಸ್ಕೃತ ಇಲ್ಲವೇ ಇಲ್ಲ:

  • ನಾನು ತಿಳಿದಂತೆ ತೆಂಗಿನ ಬೀಜದ ಸಸಿ ಇಂತಿಷ್ಟು ವರ್ಷ ಬೆಳೆದಾಗ ಇಂತಿಷ್ಟು  ಎಲೆಗಳನ್ನು ಬಿಡಬೇಕು.
  • ಇಂತಿಷ್ಟು ಎತ್ತರ ಆಗಬೇಕು ಎಂಬುದಿದೆ. ಮೊಳಕೆಗೆ ಇಟ್ಟ ಬೀಜ ಇಂತಿಷ್ಟು ಸಮಯದಲ್ಲಿ ಮೊಳಕೆಗೆ ಇಟ್ಟರೆ ಮೊಳಕೆ ಬರಬೇಕು ಎಂಬ ಮಾನದಂಡ ಇದೆ.
  • ಪಾತಿಯಲ್ಲಿ ಬೆಳೆಸಿದ್ದನ್ನು  ನೊಡುವಾಗ ಇಲ್ಲಿ ಹಳೆಯ ಗಿಡ ಅಥವಾ ತಡವಾಗಿ  ಮೊಳಕೆ ಬಂದ ಗಿಡಗಳನ್ನು ತಿರಸ್ಕೃತ ಗಿಡ ಎಂದು ಪ್ರತ್ಯೇಕಿಸಿದಂತೆ ಕಾಣುವುದಿಲ್ಲ.
  • ಆದರೆ ಇಲ್ಲಿ ಅದನ್ನು ಅನುಸರಿಸಿದಂತೆ ಕಾಣುತ್ತಿಲ್ಲ.
  • ಪಾತಿಯಲ್ಲಿ 10-01-2019 ರಂದು ಬಿತ್ತನೆ ಮಾಡಿದ  ಪಾತಿಯ ಸಸಿಗಳೂ ಸಹ 4-5  ಎಲೆಯನ್ನು ಪಡೆದಿವೆ ಅಷ್ಟೇ.

ಇಷ್ಟು ಬೆಲೆ ಪಡೆಯುವಾಗ ಸಸಿಯನ್ನು ಕನಿಷ್ಟ ಪಾಲಿಥೀನ್ ಚೀಲದಲ್ಲಿ ಬೆಳೆಸಿ ಕೊಟ್ಟರೆ ಅದರ ಬೇರುಗಳಿಗೆ ಹಾನಿಯಾಗುವುದಿಲ್ಲ.  ಸಸಿಯನ್ನು ಪಾತಿಯಿಂದ ತೆಗೆಯುವಾಗ ಯಾವ ಜಾಗರೂಕತೆಯನ್ನೂ ವಹಿಸಲಾಗುತ್ತಿಲ್ಲ.

ಬೀಜಕ್ಕೆ ಇಷ್ಟು ದುಬಾರಿ ಬೆಲೆ ಇಡಬೇಕಾಗಿಲ್ಲ:

  • ಸಾಮಾನ್ಯವಾಗಿ ಕುಬ್ಜ ತಳಿಯ ತೆಂಗುಗಳು ಸ್ವಕೀಯ ಪರಾಗಸ್ಪಶ ಆಗುವುದೇ ಹೆಚ್ಚು.
  • ಇದರಲ್ಲಿ ಹೆಣ್ಣು ಹೂವು ಮತ್ತು ಗಂಡು ಹೂವುಗಳು ಅರಳಿರುವಾಗಲೇ ಬಹುತೇಕ ಕಾಯಿ ಕಚ್ಚುವ ಕಾರಣ ಇದರಲ್ಲಿ ವೆತ್ಯಾಸಗಳ ಪ್ರಮಾಣ ತುಂಬಾ ಕಡಿಮೆ.
  • 100 ಬೀಜಗಳಲ್ಲಿ 90 ಕ್ಕೂ ಹೆಚ್ಚು ಕಾಯಿಗಳು ತಾಯಿ ಮರದ ನಿಜ ಗುಣವನ್ನು ಪಡೆದಿರುತ್ತದೆ.
  • ಆದ ಕಾರಣ ಬೀಜವೊಂದರ ಬೆಲೆ ಕಾಯಿಯ ಬೆಲೆಯ ದುಪ್ಪಟ್ಟಾದರೂ ತೊಂದರೆ ಇಲ್ಲ ಒಂದು ಕಾಯಿಯ ಬೆಲೆಯ 4 ಪಟ್ಟು ಎಂದರೆ ಇದು ಬಹಳ ದುಬಾರಿಯೇ ಸರಿ.
  • ಇಷ್ಟಕ್ಕೂ ನೀವು ಇಲ್ಲಿಂದ ಬೀಜ ತಂದರೆ ಎಲ್ಲವೂ ಮೊಳಕೆ ಒಡೆಯುತ್ತದೆ ಎಂಬ ಖಾತ್ರಿ ಇಲ್ಲ.
  • ಮೊಳಕೆ ಬಾರದಿದ್ದರೆ ಅದಕ್ಕೆ ಬೇರೆ ವ್ಯವಸ್ಥೆಯೂ ಇಲ್ಲ.
  • ಸಸಿ ಬೆಳೆದು ಮರವಾದಾಗ ಫಲ ಕೊಡದಿದ್ದರೆ ಅದು ಬೆಳೆಸಿದವನ ಹಣೆ ಬರಹ ಎಂದೇ ತಿಳಿಯಬೇಕು.

ನೈಸರ್ಗಿಕ ಹೈಬ್ರೀಡ್ ಗೂ ಸ್ಥಳೀಯ ತಳಿಯ ಸಸಿಗೂ ಯಾವ ವೆತ್ಯಾಸವೂ ಇಲ್ಲ. ನಮ್ಮಲ್ಲಿ ಸಾವಿರಾರು ವರ್ಷಗಳಿಂದ ತೆಂಗಿನಲ್ಲಿ ಕೋಟ್ಯಾಂತರ ಸಂಖ್ಯೆಯ  ನೈಸರ್ಗಿಕ ಹೈಬ್ರೀಡ್ ತಳಿಗಳು ಆಗಿರಬಹುದು.

ಸಂಸ್ಥೆಯ ಸಿಬ್ಬಂದಿಗಳು   ಹೇಳುತ್ತಾರೆ:

  • ಹಿಂದೆ ಇದೇ ಗಿಡಗಳನ್ನು 75 ರೂ ಗಳಿಗೆ ಕೊಡುತ್ತಿದ್ದೆವು. ಬೀಜದ ಕಾಯಿಗಳನ್ನು 30 ರೂ. ಗಳಿಗೆ ಕೊಡುತ್ತಿದ್ದೆವು.
  • ಆದರೆ ಈಗ ಸಂಸ್ಥೆಯ ಎಲ್ಲಾ  ಖರ್ಚು ವೆಚ್ಚಗಳು ಹೆಚ್ಚಾದ ಕಾರಣ ದರ ಹೆಚ್ಚು ಮಾಡಲಾಗಿದೆಯಂತೆ.
  • ಖರ್ಚು ವೆಚ್ಚಗಳು ಅಧಿಕ ಸರಿ. ಆದರೆ ಇಲ್ಲಿ ಅಪ್ಪಟತನ ಮತ್ತು ಕೆಲವು ಮಾನದಂಡಗಳನ್ನು ಅನುಸರಿಸುವುದು ಅವಶ್ಯಕವಲ್ಲವೇ?

ಸ್ವಲ್ಪ ಬದಲಾವಣೆ ಅಗತ್ಯ :

  • ಸರಕಾರೀ ವ್ಯವಸ್ಥೆಯಲ್ಲಿ ರೈತರಿಗೆ ಕೊಡುವ ಸಸಿ ಬೀಜಗಳು (superior seed and seedlings) ಬಹಳ ಉತ್ತಮ ಗುಣಮಟ್ಟದ್ದು ಆಗಿರಬೇಕು.
  • ಇಲ್ಲಿ ಗುಣಮಟ್ಟದ ವಿಚಾರದಲ್ಲಿ ಯಾವ ರಾಜಿಯೂ ಮಾಡಬಾರದು.
  • ವಿಜ್ಞಾನಿಗಳು ತಮ್ಮ ತಿಳುವಳಿಕೆಯ ಜ್ಜಾನದಲ್ಲಿ ಅನುತ್ಪಾದಕ ಗಿಡಗಳನ್ನು ನಾಶ ಮಾಡಬೇಕು.
  • ರೈತರ ಹಿತವನ್ನೂ ಗಮನಿಸಿ ದರ ನಿರ್ಧಾರ ಮಾಡಬೇಕು.
  • ಪ್ರ ತಿಷ್ಟಿತ ಸಂಸ್ಥೆಯೊಂದು ಕೊಡುವ ಗಿಡ, ಬೀಜ ಕನಿಶ್ಟ 98% ಇಳುವರಿ ಖಾತ್ರಿಯನ್ನು ಹೊಂದಿಲ್ಲದಿದ್ದರೆ ಜನ ಆಡಿಕೊಳ್ಳುವುದಕ್ಕೂ ವಾಸ್ತವಕ್ಕೂ  ಯಾವ ವೆತ್ಯಾಸವೂ ಇಲ್ಲದಂತಾಗದೇ?

ನಮ್ಮ ರೈತರು ಬೇರೆ ದೇಶದ ರೈತರ ಜೊತೆಗೆ ಉತ್ಪಾದನೆಯಲ್ಲಿ ಸ್ಪರ್ಧಿಗಳಾಗಬೇಕಿದ್ದರೆ ಮುಖ್ಯವಾಗಿ ಸಂಶೋಧನಾ ಸಂಸ್ಥೆಗಳ ಸಹಕಾರ ಬೇಕು. ಇದು ಬರೇ ಪತ್ರಗಳಲ್ಲಿ ಆದರೆ ಸಾಲದು.ಬೀಜ, ಸಸಿ ಮುಂತಾದವುಗಳಲ್ಲಿ ದೇಶದ ರೈತರ ಬೆಂಬಲಕ್ಕೆ ನಿಲ್ಲಬೇಕು. ಒಂದು ಉತ್ತಮ ಬೀಜ- ಸಸಿ ರೈತನಿಗೆ ಲಭ್ಯವಾದರೆ ಅವನು ಅದನ್ನು ಕೊಟ್ಟವರನ್ನು ನಿತ್ಯ ಸ್ಮರಿಸಬಲ್ಲ.
ಈ ಲೇಖನದ ಉದ್ದೇಶ ಸಂಸ್ಥೆಯ ಬಗ್ಗೆ ತಪ್ಪು ಸಂದೇಶ ಕೊಡುವುದು ಅಲ್ಲ. ಸಂಸ್ಥೆಯು ಇನ್ನಷ್ಟು ಜನಸ್ನೇಹಿಯಾಗಲಿ ಎಂಬ ಒತ್ತಾಯ ಅಷ್ಟೇ.  ಈ ಬಗ್ಗೆ ಪ್ರತಿಕ್ರಿಯೆಯನ್ನೂ ಕೊಡಬಹುದು. ಇದನ್ನು ಪ್ರಕಟಿಸಲಾಗುವುದು.
end of the article:—————————————————————–
search words : CPCRI seed farm # Nettana farm# Coconut# coconut seeds# Coconut seedlings# COD#CGD# TXD # Coconut farm# Orange coconut# yellow coconut#

Leave a Reply

Your email address will not be published. Required fields are marked *

error: Content is protected !!