ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ.

 • ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು.
 • ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ.
 • ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ.
 • ಮಣ್ಣು ಎಂಬ ಬೆಳೆ ಬೆಳೆಸುವ ಮಾದ್ಯಮ ಆರೋಗ್ಯಕರವಾಗಿರಬೇಕಾದರೆ ಸಾವಯವ ವಸ್ತುಗಳನ್ನು ಬಳಕೆ ಮಾಡಲೇ ಬೇಕು.

ಯಾವುದು ಸಾವಯವ ಗೊಬ್ಬರ:

 • ಬೆಳೆಗಳಿಗೆ ಸಾವಯಯ ಗೊಬ್ಬರಗಳನ್ನು ಬಳಸುವಾಗ ರೈತರು ಪ್ರಾಮುಖ್ಯವಾಗಿ ಗಮನಿಸಬೇಕಾದದ್ದು,
 • ಅದು ಕಡಿಮೆ ಬೆಲೆಗೆ ಹೆಚ್ಚು ಸತ್ವಗಳನ್ನು ಕೊಡುವಂತದ್ದಾಗಬೇಕು.
 • ಹೆಚ್ಚು ಪ್ರಮಾಣದಲ್ಲೂ ಸಿಗುವಂತಾಗಬೇಕು.
 • ಅಂತಹ ಗೊಬ್ಬರಗಳಲ್ಲಿ  ಕೆಲವು ಬೆಳೆ ತ್ಯಾಜ್ಯಗಳು ಮತ್ತು  ಪ್ರಾಣಿ ತ್ಯಾಜ್ಯಗಳು ಪ್ರಮುಖವಾದವುವುಗಳು.

ಬೆಳೆ ತ್ಯಾಜ್ಯಗಳು:

organic mulching helps to increase yield

 • ಎಲ್ಲಾ ಬೆಳೆ ತ್ಯಾಜ್ಯಗಳಲ್ಲಿ ಆ ಬೆಳೆಗೆ ಪೂರೈಕೆ ಮಾಡಿದ ಪೋಷಕಗಳ ಸುಮಾರು 3-5 % ಸಾರಾಂಶಗಳು ಉಳಿದಿರುತ್ತವೆ.
 • ಅದನ್ನು ಸಮರ್ಪಕವಾಗಿ ಮಣ್ಣಿಗೆ ಮರು ಬಳಕೆ ಮಾಡಬೇಕು.
 • ತೋಟದಲ್ಲಿ  ಬೆಳೆಯುವ ಹುಲ್ಲು ಕಳೆಗಳನ್ನು, ಅದೇ ಬೆಳೆಯ ತ್ಯಾಜ್ಯಗಳನ್ನು ಬೆಳೆಗಳ ಬುಡಕ್ಕೆ ಮಲ್ಚಿಂಗ್ ಮಾಡುವುದರಿಂದ ಅವುಗಳು ಮಣ್ಣಿನಿಂದ ಬಳಸಿದ ಪೋಷಕಗಳು ಮತ್ತೆ ದೊರೆಯುತ್ತದೆ.
 • ಇವು ಪೂರ್ತಿ ಬೆಳೆಯನ್ನು ಸಾಕುವಷ್ಟು ಪೋಷಕಗಳನ್ನು ಹೊಂದಿರುವುದಿಲ್ಲವಾದರೂ ಸ್ವಲ್ಪ ಮಟ್ಟಿಗೆ ಮಣ್ಣಿನ ತರಗತಿ ಸುಧಾರಿಸಲು ಸಹಾಯಕ.

ಬೆಳೆತ್ಯಾಜ್ಯಗಲ್ಲಿ ಗರಿಷ್ಟ ಪೊಷಕಾಂಶಗಳು ಇರುವುದು ಬೀಜಗಳಲ್ಲಿ. ಬೀಜಗಳು ಎಂದರೆ ಅದು ಇಡೀ ಬೆಳೆಯ ಸತ್ವಗಳನ್ನು ಅಂತಿಮವಾಗಿ ಸಂಗ್ರಹಿಸಿದ ಫಲ.. ಬಹುತೇಕ ಫಸಲಿನ ಬೀಜಗಳಲ್ಲಿ ಗರಿಷ್ಟ ಪೋಷಕಾಂಶಗಳು ಇರುತ್ತವೆ. ಅದು ದ್ವಿದಳ ಬೀಜಗಳಾಗಿದ್ದರೆ ಅದರಲ್ಲಿ ಮತ್ತೂ ಹೆಚ್ಚು ಸಾರಾಂಶಗಳು ಇರುತ್ತವೆ.

 • ಬೀಜಗಳನ್ನು ನೇರವಾಗಿ ಪೊಷಕವಾಗಿ ಬಳಕೆ ಮಾಡುವುದು ಕಷ್ಟ.
 • ಅದರ ಎಣ್ಣೆ ತೆಗೆದಾಗ ಸಿಗುವ ಅದರ ಹಿಂಡಿಗಳನ್ನು ಬಳಸುವುದು ರೂಢಿ.
 • ರಾಸಾಯನಿಕ ಅಧಿಕಸಾರದ ಗೊಬ್ಬರಗಳಿಗೆ ಸರಿಸಾಟಿಯಾದ ಪೋಷಕಾಂಶಗಳು ಇದರಲ್ಲಿ  ಇರುತ್ತವೆ.
 • ಇದರಲ್ಲಿ ಕೆಲವು ಸಾರಜನಕ ಹೆಚ್ಚು, ಇನ್ನು ಕೆಲವು ಹಿಂಡಿಗಳಲ್ಲಿ ರಂಜಕ ಮತ್ತು ಪೊಟ್ಯಾಶ್ ಹೆಚ್ಚು ಇರುತ್ತದೆ.
 • ಜೊತೆಗೆ ಕೆಲವು ಸೂಕ್ಷ್ಮ ಪೋಷಕಾಂಶಗಳೂ ಇರುತ್ತದೆ.
 • ದ್ವಿದಳ ಹಿಂಡಿಗಳಲ್ಲಿ ಸಾರಜನಕ ಹೆಚ್ಚು. ಏಕದಳ ಬೀಜದ ಹಿಂಡಿಗಳಲ್ಲಿ ಪೊಟ್ಯಾಶಿಯಂ, ರಂಜಕ ಹೆಚ್ಚು ಇರುತ್ತದೆ.

ಹಿಂಡಿ ಗೊಬ್ಬರ ಎಷ್ಟು ಹಾಕಬೇಕು:

ಸಾರಜನಕ ಹೆಚ್ಚು ಇರುವ ಹರಳು ಹಿಂಡಿ
 • ಹಿಂಡಿ ಗೊಬ್ಬರಗಳನ್ನು ಬಳಕೆ ಎಣ್ಣೆ ತೆಗೆದ ನಂತರದ ಉಪ ಉತ್ಪನ್ನವನ್ನು ಬಳಕೆ ಮಾಡುವುದು ಉತ್ತಮ.
 • ಎಣ್ಣೆ ಅಷ್ಟು ಉತ್ತಮವಲ್ಲ.  ಕಲಬೆರಕೆಯೂ  ಇರಬಹುದು.
 • ಹರಳೆಣ್ಣೆಯನ್ನೇ ತೆಗೆದು, ಅಥವಾ ಬೇವಿನ ಎಣ್ಣೆಯನ್ನು  ತೆಗೆದಾಗ ಸಿಗುವ ಹಿಂಡಿ ಬೇಗ ಪೋಷಕಾಂಶಗಳನ್ನು ಹೊರ ಬಿಡುತ್ತದೆ.

ಸಾಮಾನ್ಯವಾಗಿ ಕೃಷಿಗೆ ಬಳಕೆಯಾಗುವ ಹಿಂಡಿಗಳಲ್ಲಿ ಹರಳು ಹಿಂಡಿ ಮತ್ತು  ಬೇವಿನ ಹಿಂಡಿ  ಪ್ರಾಮುಖ್ಯವಾದುದು. ಇದರಲ್ಲಿ ಸರಾಸರಿ 6 % ಸಾರಜನಕ ಮತ್ತು 2%  ರಂಜಕ ಮತ್ತು 1%  ಪೊಟ್ಯಾಶ್ ಇರುತ್ತದೆ.ಹತ್ತಿಬೀಜದ  ಹಿಂಡಿಯಲ್ಲಿ ಯಲ್ಲಿ ಪೊಟ್ಯಾಶ್ ಅಂಶ ಹೆಚ್ಚು ಇರುತ್ತದೆ. ತೆಂಗಿನ ಹಿಂಡಿಯಲ್ಲಿ ಪೊಟ್ಯಾಶಿಯಂ ಮತ್ತು ರಂಜಕ ಇರುತ್ತದೆ. ಹಸುಗಳು ತಿನ್ನುವ ಹಿಂಡಿ ದುಬಾರಿಯಾದ ಕಾರಣ ಇದನ್ನು  ಕೃಷಿಗೆ ಬಳಕೆ ಯುಕ್ತವಲ್ಲ.

ಪೊಟ್ಯಾಶಿಯಂ ಇರುವ ಹತ್ತಿ ಕಾಳಿನ ಹಿಂಡಿ

 • ಇವುಗಳನ್ನು ಮಿಶ್ರಣ  ಮಾಡಿ ಹಾಕಬೇಕು. ಒಂದು ಕಿಲೋ ಹರಳು-ಬೇವು ಹಿಂಡಿಯಲ್ಲಿ 50 ಗ್ರಾಂ ಸಾರಜನಕ ಇರುತ್ತದೆ.
 • ಅದೇ ರೀತಿಯಲ್ಲಿ 20  ಗ್ರಾಂ ರಂಜಕ ಮತ್ತು 10-15   ಗ್ರಾಂ ಪೊಟ್ಯಾಶ್ ಇರುತ್ತದೆ.
 • 2 ಕಿಲೋ ಹರಳು ಹಿಂಡಿ ಮತ್ತು,1 ಕಿಲೋ ಹತ್ತಿ ಬೀಜದ ಹಿಂಡಿಯನ್ನು ಹಾಕಿ ಬೇರೆ ರಾಸಾಯನಿಕ ಗೊಬ್ಬರಗಳಿಲ್ಲದೆ  ಅಡಿಕೆ ತೋಟದ ಗೊಬ್ಬರದ ಅವಶ್ಯಕತೆಯನ್ನು ನೀಗಿಸಬಹುದು.
 •  ಬರೇ ಎನ್ ಪಿ ಕೆ ಹೊರತಾಗಿ ಹಿಂಡಿ ಗೊಬ್ಬರಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಸತು ಮತ್ತು  ಇನ್ನಿತರ ಅಗತ್ಯ ಸೂಕ್ಷ್ಮ ಪೊಷಕಾಂಶಗಳೂ ಇರುವುದು ವಿಷೇಷ.

ಪ್ರಾಣಿ ಜನ್ಯ ಗೊಬ್ಬರ:

 • ನಮ್ಮ ರೈತರು ಕುರಿ – ಆಡಿನ ಗೊಬ್ಬರವನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ.
 • ಇದರಲ್ಲಿ ಫಲಿತಾಂಶವನ್ನೂ ಕಂಡವರಿದ್ದಾರೆ.
 • ಕಾರಣ ಇಷ್ಟೇ ಒಂದು ಬುಟ್ಟಿ ಸುಮಾರು 4-5 ಕಿಲೋ ಕುರಿ/ ಅಡಿನ ಒಣ ಗೊಬ್ಬರ ನೀರು ಹೀರಿಕೊಂಡು  ಆಗುವ ಪ್ರಮಾಣ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರಕಿಂತ ಹೆಚ್ಚು.

ಕುರಿ/ಆಡು ಹಿಕ್ಕೆ ನಿಧಾನವಾಗಿ ಕರಗಿ ಅದರ ಸತ್ವವನ್ನು ಬಿಡುತ್ತದೆ. ಆದ ಕಾರಣ ಅದು ಬೆಳೆಗಳಿಗೆ ಧೀರ್ಘ ಕಾಲದ ತನಕ  ಸಾರಾಂಶಗಳನ್ನು ಕೊಡುತ್ತಿರುತ್ತದೆ. ಹಾಗಾಗಿ ಅಡಿಕೆ , ತೆಂಗಿನ ಮರಗಳು ಚೆನ್ನಾಗಿ ಬೆಳೆಯುತ್ತವೆ.

 • ಒಂದು ಅಡಿಕೆ ಮರಕ್ಕೆ ಕನಿಷ್ಟ 1 ಬುಟ್ಟಿಯಷ್ಟು ಕುರಿ ಗೊಬ್ಬರವನ್ನು ಕೊಟ್ಟು ಅದು ತೊಳೆದು ಹೋಗದಂತೆ ರಕ್ಷಣೆ ಮಾಡಿದರೆ ಅದು ಮರಕ್ಕೆ ಬೇಕಾಗುವ ಸಾರಜನಕ ಅಂಶವನ್ನು ಪೂರ್ತಿ ಕೊಡುತ್ತದೆ.
 • ಬಹಳಷ್ಟು ಜನ ಬರೇ ಕುರಿ ಗೊಬ್ಬರ ಒಂದನ್ನೇ ಹಾಕಿ ಉತ್ತಮ ಫಸಲು ಪಡೆಯುತ್ತಾರೆ .
 • ಕುರಿ / ಆಡುಗಳು ಕಳೆ ಇತ್ಯಾದಿ ಸಸ್ಯಗಳನ್ನು ತಿಂದ ಪರಿಣಾಮ ಅದರಲ್ಲಿ ರಂಜಕ, ಪೊಟ್ಯಾಶಿಯಂ ಹಾಗೂ ಲಘು ಪೋಷಕಾಂಶಗಳೂ ಇರುತ್ತವೆ.
 • ಕಾರಣ ಇದರ ಹಿಕ್ಕೆಯಲ್ಲಿ  ಧೀರ್ಘಾವಧಿಯ ಅನುಕೂಲ ಇದೆ.

ಕೋಳಿ ಗೊಬ್ಬರ:

 •  ಇದರಲ್ಲಿ ಸಾಕಷ್ಟು ಪೋಷಕಾಂಶಗಳು  ಇವೆ. ಇದರಲ್ಲಿ ಮಲ ಮೂತ್ರಗಳು ಎರಡೂ ಇರುವ ಕಾರಣ ಇದು ಉತ್ತಮ ಗೊಬ್ಬರ.
 • ಕೋಳಿಗಳಿಗೆ ತಿನ್ನಲು ಕೊಡುವ ಆಹಾರದಲ್ಲಿ ಉಳಿಕೆಯಾದ ಸಾರಾಂಶಗಳು ಇದರಲ್ಲಿ ಇರುತ್ತವೆ.
 • ಆದರೆ ಇದನ್ನು ಬಳಸಿದರೆ ಅದರ ಪರಿಣಾಮ ಅಲ್ಪಾವಧಿಯಲ್ಲಿ ಇದರ ಸತ್ವ ಕರಗಿ ಮುಗಿಯುತ್ತದೆ.
 • ಕೋಳಿ ಗೊಬ್ಬರದಲ್ಲಿ ಸಾರಜನಕ ಹೆಚ್ಚು. ಉಳಿದ ರಂಜಕ ಮತ್ತು ಪೊಟ್ಯಾಶಿಯಂ ಅಂಶ ಸ್ವಲ್ಪ ಇರುತ್ತದೆ.
 • ಕೋಳಿಗೆ ಕೊಡಮಾಡುವ ಕ್ಯಾಲ್ಸಿಯಂ, ಮೆಗ್ನೀಶಿಯಂ , ಗಂಧಕ, ಹಾಗೆಯೇ ಕೆಲವು ಪೋಷಕಗಳೂ ಇರುತ್ತವೆ.
 • ಈ ಗೊಬ್ಬರವನ್ನು ಒಮ್ಮೆಲೇ ಕೊಡುವ ಬದಲು ವರ್ಷಕ್ಕೆ ಮೂರು ನಾಲ್ಕು ಬಾರಿಯಂತೆ ವಿಭಜಿತ ಕಂತುಗಳಲ್ಲಿ ಕೊಡುವುದು ಉತ್ತಮ.
 • ಒಂದು ಬುಟ್ಟಿ,( ಸುಮಾರು 10 ಕಿಲೋ ಒಣ ತೂಕ) ಒಂದು ಅಡಿಕೆ ಮರಕ್ಕೆ ಸಾಕಾಗುತ್ತದೆ.
 • ಮೊಟ್ಟೆ ಕೋಳಿಯ ಗೊಬ್ಬರ ಹೆಚ್ಚು  ಸಾರಾಂಶಗಳನ್ನು ಒಳಗೊಂಡಿರುತ್ತದೆ.
 • ಕೋಳಿ ಗೊಬ್ಬರ ಬಳಸುವ ಹೊಲಕ್ಕೆ ಮರ ಸುಟ್ಟ ಬೂದಿ ಅಥವಾ ಯಾವುದಾದರೂ ಉದ್ದಿಮೆಗಳ ಬೂದಿ( ಪೊಟ್ಯಾಶ್ ಉಳ್ಳ)ಯನ್ನು ಸೇರಿಸಿದರೆ ಅದು ಸಮತೋಲನ ಗೊಬ್ಬರವಾಗುತ್ತದೆ.

ಸಾವಯವ ಗೊಬ್ಬರಗಳಿಂದ ಕೃಷಿ ಸಾಧ್ಯವಿಲ್ಲ ಎಂಬುದು ತಪ್ಪು ಕಲ್ಪನೆ. ಸಾಧ್ಯ. ಅದನ್ನು ಒಟ್ಟು ಹಾಕುವುದು ಮತ್ತು ಬಳಕೆ ಮಾಡಲು ಕೆಲಸ ಹೆಚ್ಚಾಗುವ ಕಾರಣ  ಜನ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಕೊಂಡು ತರುವ ಗೊಬ್ಬರಕ್ಕಿಂತ ಕಚ್ಚಾ ಗೊಬ್ಬರಗಳನ್ನು ತಂದು ಬಳಸುವುದು ಮಿತವ್ಯಯ.

 

Leave a Reply

Your email address will not be published. Required fields are marked *

error: Content is protected !!