ಸೂಕ್ಷ್ಮ ನೀರಾವರಿಯ ಹೃದಯ – ಫಿಲ್ಟರ್ ಗಳು.

ಫಿಲ್ಟರ್ ಎಂದರೆ ಯಾವ ನೀರಿನಲ್ಲಿ  ಯಾವ ರೀತಿಯ ಕಶ್ಮಲ ಇದೆ ಎಂಬುದನ್ನು  ಗಮನಿಸಿ ಅದನ್ನು ಸಮರ್ಪಕವಾಗಿ ಸೋಸಿ ಕೊಡುವ  ವ್ಯವಸ್ಥೆ.  ಬರಿ ಕಣ್ಣಿನಲ್ಲಿ ನೀರನ್ನು ಕಾಣುವಾಗ ಬಹಳ ಸ್ವಚ್ಚವಾಗಿ ಕಂಡರೂ ಅದರಲ್ಲಿ ಏನಾದರೂ ಕಶ್ಮಲ ಇದ್ದೇ ಇರುತ್ತದೆ. ಅದನ್ನು ಸೋಸದೇ ಹನಿ ನೀರಾವರಿಯ ಮೂಲಕ ಹರಿಸಿದರೆ  ವ್ಯವಸ್ಥೆ  ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಕಶ್ಮಲಗಳನ್ನು ನೀರಿನಿಂದ ಪ್ರತ್ಯೇಕಿಸಿ ಸೋಸಿ ಕೊಡುವ ಬೇರೆ ಸೋಸು ವ್ಯವಸ್ಥೆಗಳು ಇವು.

ಮೆಷ್  ಫಿಲ್ಟರ್: (ಸ್ಕ್ರೀನ್ )

 • ಇದು 80-100-120 ಮೈಕ್ರಾನ್ ಅಳತೆಯ ಮೆಶ್ ಮೂಲಕ ಸೋಸಿ ನೀರು ಹೊರ ಹರಿಯುವ ಸಾಧನ. 
 • ಇದು ಮಿತವ್ಯಯದ್ದಾಗಿದ್ದು , ಮೈಕ್ರೋ ಟ್ಯೂಬು  ನೀರಾವರಿಗೆ  ಅದರಲ್ಲೂ 1.5 ಎಂ ಎಂ ತೂತಿನಿಂದ ಮೇಲ್ಪಟ್ಟ ತೂತು ಉಳ್ಳದ್ದಕ್ಕೆ, 1.5 ರಿಂದ 2ಎಂ ಎಂ ತನಕದ ತೂತು ಉಳ್ಳ  ಮಿಸ್ಟ್  ಸ್ಪ್ರೇ, ಮೈಕ್ರೋ ಸ್ಪ್ರಿಂಕ್ಲರ್‍ಗಳಿಗೆ ಇದನ್ನು  ಬಳಕೆ ಮಾಡಬಹುದು.
 • ಇದರಲ್ಲಿ ಸಣ್ಣ ಕಲ್ಲಿನ ಹುಡಿ ಸೋಸಲ್ಪಡುತ್ತದೆ.

 • ತೀರಾ ಸಣ್ಣ ಹುಡಿಗಳು  ಪಾಸ್ ಆಗುತ್ತದೆ.
 • ದೊಡ್ಡ ಕಲ್ಲಿನ ಹುಡಿಗಳು ಬಂದರೆ  ಅದು ಉಜ್ಜಿಕೊಂಡಂತಾಗಿ ಮೆಷ್ ಹರಿಯುತ್ತದೆ.
 • ಸಣ್ಣ ಕಲ್ಲಿನ ಹುಡಿಗಳು ಮುಂದೆ ಹೋಗದಂತೆ ತಡೆಯಲು ಇದನ್ನು ಅಳವಡಿಸುತ್ತಾರೆ.
 • ಪರಿಶುದ್ಧ ಕೊಳವೆ ಬಾವಿಯ ನೀರಿಗೆ ಇದು ಸಾಕಾಗುತ್ತದೆ.

ಸ್ಯಾಂಡ್ ಫಿಲ್ಟರ್:

 • ಇದನ್ನು ಗ್ರಾವೆಲ್ ಫಿಲ್ಟರ್ ಎಂದೂ ಕರೆಯುತ್ತಾರೆ.
 • ಸಾಧಾರಣ ಗಾತ್ರದ ಸಿಲ್ಟ್, ಮಣ್ಣು ತಡೆಹಿಡಿಯಲ್ಪಟ್ಟು  ಶುದ್ಧ ನೀರು ಹೊರ ಹೋಗುತ್ತದೆ.
 • ಇದನ್ನು  ಪಂಪಿನ ಬುಡದಲ್ಲಿ ಅಳವಡಿಸುವ ಬದಲಿಗೆ ಎಲ್ಲಿ ವಿತರಣೆ ಪ್ರಾರಂಭವಾಗುತ್ತದೆಯೋ ಅಲ್ಲಿ ತನಕ ನೀರನ್ನು ಒಯ್ದು ನಂತರ ಅಳವಡಿಸುವುದು ಒಳ್ಳೆಯದು.
 • ಈ ಫಿಲ್ಟರ್ ಒಳಗೆ ಪೆಟ್ರೋಲಿಯಂ ಮೂಲದ ಮರಳನ್ನು ತುಂಬಿರಲಾಗುತ್ತದೆ.

 • ಅದರಲ್ಲಿ ಈ ಸಿಲ್ಟ್ ಅಂಟಿಕೊಳ್ಳುತ್ತದೆ.
 •  ಒಳಗಡೆ ಇರುವ ಕ್ಯಾಂಡಲ್ ಸೋಸಿ ಕಶ್ಮಲ ಮುಕ್ತ ನೀರನ್ನು ಮುಂದೆ ಕಳುಹಿಸುತ್ತದೆ.
 • ಇದನ್ನು ಹೊಳೆ, ಕೆರೆ ನೀರಿಗೆ ಮತ್ತು ಸಿಲ್ಟ್ ಇರುವ ಕೊಳವೆ ಬಾವಿ ನೀರಿಗೆ ಬಳಕೆ ಮಾಡಬೇಕು.
 • ಕೊಳವೆ  ಬಾವಿಯ ನೀರಾದರೆ ಮೊದಲು ಸ್ಕ್ರೀನ್ ಫಿಲ್ಟರ್ ಅಥವಾ ಡಿಸ್ಕ್ ಫಿಲ್ಟರ್  ಅಳವಡಿಸಿ ನಂತರ ಇದರ ಮೂಲಕ ನೀರನ್ನು ಹೊರ ಹರಿಸಲಾಗುತ್ತದೆ.
ಗ್ರಾವೆಲ್ ಫಿಲ್ಟರ್ ಒಳಗಿನ ಮರಳಿನಲ್ಲಿ ಸಿಕ್ಕಿ ಹಾಕಿಕೊಂಡ ಸಿಲ್ಟ್

ಡಿಸ್ಕ್ ಫಿಲ್ಟರ್:

 • ಇದರಲ್ಲಿ ಒಳಗಡೆ ಪ್ಲೇಟಿನಂತೆ ಒತ್ತೊತ್ತಾಗಿ ಡಿಸ್ಕ್ ಗಳಿದ್ದು ಅದರಲ್ಲಿ ನೀರು ಸುತ್ತಿ ಬಳಸಿ ಹೋಗುವ ಗೆರೆಗಳಿರುತ್ತವೆ.
 • ಇದರ ಎಡೆಯಲ್ಲಿ ನೀರು ಒಳ ಹೋಗುವಾಗ ಕಲ್ಮಶಗಳು ಒಳಗೆ ಪ್ರವೇಶವಾಗಲಾರದು.
 • ಇದರಲ್ಲಿ ಸಿಲ್ಟ್ ಮತ್ತು ಕಲ್ಲಿನ ಸೂಕ್ಷ್ಮ ಹುಡಿ, ಮಣ್ಣು ಮುಂದೆ ಹೋಗುವುದಿಲ್ಲ.


ಹೈಡ್ರೋ ಸೈಕ್ಲೋನ್ ಫಿಲ್ಟರ್:

 • ಇದನ್ನು ಸಾಂಡ್ ಸಪರೇಟರ್ ಎಂಬುದಾಗಿಯೂ ಕರೆಯುತ್ತಾರೆ.  
 • ನೀರು ಒಳ ಪ್ರವೇಶಿಸಿ  ಕೆಳಮುಖವಾಗಿ ನುಗ್ಗಲ್ಪಟ್ಟು  ಅಲ್ಲಿಂದ ಅದು ಸುರುಳಿ ಕಟ್ಟಿ ಮೇಲಕ್ಕೆ ತಳ್ಳಲ್ಪಡುತ್ತದೆ.
 • ಆಗ ಅದರಲ್ಲಿ ಸಿಕ್ಕಿ ಹಾಕಿಕೊಂಡ ಸಿಲ್ಟ್ ಗಳು, ಮರಳು ಕೆಳ ಭಾಗದಲ್ಲಿ ಸಂಗ್ರಹವಾಗುತ್ತದೆ.
 • ಇದು ಅತೀ ಸೂಕ್ಷ್ಮ ಸಿಲ್ಟ್ ಸಹ ಹೊರ ಹೋಗಲಾರದು.
Sand separator filter
ಮರಳು ಫ್ರತ್ಯೆಕಿಸುವ ಫಿಲ್ಟರ್‍

ಈಗ ಬಹುತೇಕ ಫಿಲ್ಟರ್ ಗಳು HDPE  ಸಾಮಾಗ್ರಿಯಲ್ಲಿ ತಯಾರಿಸಲ್ಪಟ್ಟು ಬರುವ ಕಾರಣ ತುಕ್ಕು ಹಿಡಿಯುವ ಸಮಸ್ಯೆ ಇಲ್ಲ. ಧೀರ್ಘ ಬಾಳ್ವಿಕೆಯೂ ಬರುತ್ತದೆ.

ಯಾವ ರೀತಿಯ ನೀರಿಗೆ ಯಾವ ಫಿಲ್ಟರ್‍ಗಳನ್ನು ಯಾವ ರೀತಿ ಅಳವಡಿಸಬೇಕು ಎಂಬುದನ್ನು  ತಜ್ಞರ ಮೂಲಕ ತಿಳಿದು ಅಳವಡಿಸಬೇಕು. ಮಿತವ್ಯಯಕ್ಕೆಂದು ಸೂಕ್ತವಲ್ಲದ ಫಿಲ್ಟರನ್ನು ಅಳವಡಿಸಿಕೊಂಡರೆ ಹನಿ ನೀರಾವರಿ ವ್ಯವಸ್ಥೆಯೇ ಹಾಳಾಗುತ್ತದೆ. ಸಾಮಾನ್ಯವಾಗಿ ಸಿಲ್ಟ್ ಇರುವ ನೀರಿಗೆ ಸ್ಕ್ರೀನ್, ಸ್ಯಾಂಡ್ ಮತ್ತು ಡಿಸ್ಕ್ ಫಿಲ್ಟರ್ ಈ ಮೂರೂ ಬೇಕಾಗುತ್ತದೆ.

 • ಫಿಲ್ಟರ್ ಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಕೆರೆ , ಬಾವಿ ನೀರಿಗಾದರೆ ನೀರು ಹೀರುವ ಫುಟ್ ವಾಲ್ವ್ ಗೆ   ಹಾಕುವ ಫಿಲ್ಟರ್ ಅಥವಾ ಮೆಷ್ ಸುತ್ತಿದರೆ ಒಳ್ಳೆಯದು.

 • ಕೊಳವೆ ಬಾವಿಯ ನೀರಾದರೆ ಪಂಪು ಮತ್ತು ಮೋಟರು ಮಧ್ಯದ ಭಾಗಕ್ಕೆ 1 ಎಂ ಎಂ ತೂತಿನ ಮೆಷ್  ಕಟ್ಟಿದರೆ ಒಳ್ಳೆಯದಾಗುತ್ತದೆ.

ಹನಿ ನೀರಾವರಿ ವ್ಯವಸ್ಥಿತವಾಗಿ ಕೆಲಸ ಮಾಡಲು ಸೂಕ್ತ ಫಿಲ್ಟರ್ ಅಗತ್ಯ. ಯಾರು  ಹನಿ ನೀರಾವರಿಯಲ್ಲಿ ತೃಪ್ತರೋ ಅವರೆಲ್ಲಾ ಸಮರ್ಪಕ ಫಿಲ್ಟರ ವ್ಯವಸ್ಥೆ ಮಾಡಿಕೊಂಡವರು.ಫಿಲ್ಟರ್ ಸರಿ ಇಲ್ಲದ ಹನಿ ನೀರಾವರಿ ವ್ಯವಸ್ಥೆ  ದುರ್ಬಲ ಹೃದಯದ ಮನುಷ್ಯರಂತೆ.

end of the article: —————————————————————————-
search words: Irrigation # Micro irrigation# filtration# Hydrocyclone filter# sand filter# meshfilter# disk filter# Foot walve filter#  filtering sand# Problem free micro irrigation# Micro irrigation design#
 

Leave a Reply

Your email address will not be published. Required fields are marked *

error: Content is protected !!