ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.

ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು.

ಸಾಂದರ್ಭಿಕ ಚಿತ್ರ

  • ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು  ಮಾತ್ರ ತಮ್ಮ ಭೋಧನಾ ಕೊಠಡಿ ಅಥವಾ (ಸೆಮಿನಾರ್ ಹಾಲ್)  ಕುಳಿತು ಪ್ರೇಕ್ಷಕರ ಜೊತೆಗೆ ಸಂವಾದ ಮಾಡುವುದು.
  • ನಿಮಗೆ ಒಂದು ಲಿಂಕ್ ಕೊಡಲಾಗುತ್ತದೆ.
  • ಈ ಲಿಂಕ್ ಓಪನ್ ಮಾಡಿದಾಗ ನೀವು ಅವರು ಮಾತಾಡಿದ್ದನ್ನು ಕಾಣುತ್ತೀರಿ, ಕೇಳುತ್ತೀರಿ.
  • ನಿಮಗೆ ಮಾತಾಡಲು ಅವಕಾಶ ಕೊಟ್ಟರೆ ನೀವೂ ಮಾತಾಡಬಹುದು.
  • ಇಲ್ಲಿ ಯಾರೂ ಮುಖಾಮುಖಿ ಆಗಲಿಕ್ಕಿಲ್ಲ.
  • ನೀವು ಏನಾದರೂ ಉಗಿಯುತ್ತೀರೆಂದಾದರೆ ಅಲ್ಲೇ ನಿಮ್ಮ ಮಾತು ಕಟ್.
  • ದರಿದ್ರ ನೆಟ್ ವರ್ಕ್ ಇವರ ಈ ಅನಾಚಾರವನ್ನು ಕೇಳಲು, ನೋಡಲು ಅವಕಾಶ ಕೊಡದಿರುವ ಕಾರಣ ಜನಕ್ಕೆ ಇದು ತಿಳುವಳಿಕೆಗೆ ಬಂದಿಲ್ಲ.

ಇದು  ಕಿಸಿದುಕೊಳ್ಳುವ ಭಾಷಣ ಅಷ್ಟೇ:

ಇದು ನಮ್ಮ ರೈತರ ಸ್ಥಿತಿ. ಇವರಿಗೆ ಎಲ್ಲಿ ಇವರ ಕಡಲೆ ಜಗಿಯಲಾಗುತ್ತದೆ
  • ಕೆಲವು ವೆಬಿನಾರ್ ಗಳಲ್ಲಿ ನಾನು ಭಾಗವಹಿಸಿದ್ದೆ.
  • ಅಲ್ಲಿ ಏನೂ ಅಂತಹ ವಿಶೇಷ ಕಂಡೇ ಇಲ್ಲ.
  • ಸಾಮಾನ್ಯವಾಗಿ ನಮ್ಮ  ತಜ್ಞರು ಯಾವಾಗಲೂ ಮಾಡುವ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಏನಿದೆಯೋ ಅದನ್ನೇ ಇಲ್ಲಿಯೂ ಪ್ರಸ್ತುತಪಡಿಸುತ್ತಾರೆ.
  • ಇಂತಹ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಅಂತರ್ಜಾಲದಲ್ಲಿ ಸಾಕಷ್ಟು ಲಭ್ಯವಿರುತ್ತದೆ.
  • ಬಹಳಷ್ಟು ಕೃಷಿ ತಜ್ಞರಿಗೆ ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡದಲ್ಲಿ ತಮ್ಮ ಪ್ರಸ್ತುತಿಯನ್ನು ಒದಗಿಸಲು ಸಹ ತಮ್ಮ ಜ್ಞಾನ ಇರುವುದಿಲ್ಲ.
  • ಇವೆಲ್ಲವೂ ಅಂತರ್ಜಾಲದಿಂದ ಕಾಪೀ ಪೆಸ್ಟ್ ಆದ ಪ್ರಸ್ತುತಗಳಂತೆ ಇರುತ್ತವೆ.
  • ಕೆಲವು ಖಾಸಗಿ ಸಂಸ್ಥೆಗಳೂ ಈ ಒಂದು ಅವಕಾಶದಲ್ಲಿ ತಮ್ಮ ಉತ್ಪನ್ನಗಳ ಪ್ರಚಾರವನ್ನೂ ಇದೇ ದಾರಿಯಲ್ಲಿ ಮಾಡಿಕೊಳ್ಳುತ್ತಿವೆ.
  • ನಮ್ಮ ಗೊಬ್ಬರ, ನಮ್ಮ ಸಸಿಗಳು, ನಮ್ಮ ಉತ್ಪನ್ನಗಳು ಇದರಿಂದಾಗಿ ಆಗುವ ಪ್ರಯೋಜನಗಳು ಮತ್ತು ಇದನ್ನು ಉಚಿತವಾಗಿಯೇ  ಕೊಡುತ್ತಿದ್ದೇವೇನೋ ಎಂದು ಭಾಸವಾಗುವಂತೆ ಇದನ್ನು ಪ್ರಸ್ತುತಿ ಪಡಿಸಿ ಜನರನ್ನು ಮರಳು ಮಾಡುತ್ತಿವೆ.

ಕೃಷಿ ತಜ್ಞರು ಇನ್ನೂ ರೈತರ ಹತ್ತಿರ ಬರಲಿಲ್ಲ:

ರೈತನ ಸ್ಥಿತಿ ಹೀಗಿದೆ, ಕೃಷಿ ಉಪದೇಶ ಮಾಡುವವರು ಹೇಗಿದ್ದ್ರಾರೆ ನಿಮಗೇ ಗೊತ್ತಲ್ಲವೇ?
  • ನಿಷ್ಟುರವಾಗಿ ಹೇಳಬೇಕೆಂದರೆ ನಮ್ಮ ದೇಶದ ಕೃಷಿಕ ಇನ್ನೂ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ, ಅಥವಾ ತಮ್ಮ ಬೆಳೆಯ ಯಾವುದೆ ಸಮಸ್ಯೆ ನಿವಾರಣೆಯಲ್ಲಿ ವಿಫಲನಾಗಿದ್ದರೆ ಅದು ನಮ್ಮ ದೇಶದ ಕೃಷಿ ತಂತ್ರಜ್ಞಾನ ವರ್ಗಾವಣೆ ಮಾಡುವವರ ವೈಫಲ್ಯದಿಂದ.
  • ಒಬ್ಬರು ( ಹೆಸರು ಬೇಡ) ಕೃಷಿ ವಿಜ್ಞಾನಿ ನನ್ನನ್ನು ತರಾಟೆಗೆ ತೆಗೆದುಕೊಂಡು  ಹೇಳಿದ್ದರು.
  • ನಾವು ಕೃಷಿ ವಿಶ್ವ ವಿಧ್ಯಾನಿಲಯ ಇರುವಾಗ ನಿಮಗ್ಯಾಕಯ್ಯಾ ಕೃಷಿ ಬಗ್ಗೆ ಮಾಹಿತಿ ನೀಡುವ ಉಸಾಬರಿ ಎಂದು.
  • ಇಂತಹ ಕೃಷಿ ವಿಜ್ಞಾನಿಗಳು ಇದ್ದುದರಿಂದಲೇ ನಮ್ಮ ಕೃಷಿ ವ್ಯವಸ್ಥೆ ತುಂಬಾ ಹಿಂದೆ ಉಳಿದಿದೆ.
  • ನಾವು ಕಳೆದ 10 ತಿಂಗಳ ಹಿಂದೆ ಕೃಷಿ ಅಭಿವೃದ್ದಿ ಎಂಬ ಆನ್ ಲೈನ್ ಕೃಷಿ ಮಾಹಿತಿ ಕೊಡಬಲ್ಲ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು.
  • ಈ ಹಿಂದೆಯೂ ನಾವು ಇದೇ ಕ್ಷೇತ್ರದಲ್ಲಿ ಸುಮಾರು 25 ವರ್ಷ ಕೆಲಸ ಮಾಡಿದ್ದು, ರೈತ ಕಳಕಳಿ ಗಾಗಿ ಇದನ್ನು ಮಾಡುತ್ತಿದ್ದೇವೆ.
  • ಬಹುಷಃ ಇದು ನಮಗೆ ಬೇಡದ ಕೆಲಸ ಎಂಬುದು ನಮ್ಮ ಕೃಷಿ ತಜ್ಞರ ಮನಸ್ಸಿನೊಳಗಿನ ಭಾವನೆ.
  • ಕಾರಣ ಇಷ್ಟೇ ರೈತರಿಗೆ ಅನುಕೂಲವಾಗುವ ಯಾವುದೇ ಮಾಹಿತಿಯನ್ನೂ ಇವರು ತಾವೂ ಕೊಡುವುದಿಲ್ಲ, ಕೊಡುವವರಿಗೂ ಕೊಡಲು ಇಷ್ಟ ಪಡುವುದಿಲ್ಲ.
  • ಕೆಲವು ಕಮಿಟೆಡ್ ಕೃಷಿ ತಜ್ಞರುಗಳಿದ್ದು, ಇವರು  ತಮ್ಮದೇ ಜಾತಿ, ಮತ್ತು ಮನೋ ಬುದ್ಧಿಗೆ ಸಾಮ್ಯತೆ ಇರುವವರೊಂದಿಗೆ ಮಾತ್ರ ತಮ್ಮ ಕೃಷಿ ಜ್ಞಾನವನ್ನು ಹಂಚಿಕೊಳ್ಳುವವರು.
  • ಇನ್ನು ಕೆಲವರು ಪ್ರಚಾರ ಪ್ರಿಯರು. ಓದುವ ರೈತರಿಗೆ ನಯಾ ಪೈಸೆಯ ಪ್ರಯೋಜನ ಆಗದಿದ್ದರೂ ತಮ್ಮ  ಭಾವಚಿತ್ರವನ್ನು ಪ್ರಕಟಿಸುವ ಸಲುವಾಗಿಯೇ ಬರೆದುಕೊಳ್ಳುವ ಚಟ ಇರುವವರು.

 ಸರಕಾರದ ಸಂಬಳ ಪಡೆದು, ಸರಕಾರದ ದುಡ್ಡಿನಲ್ಲೇ ಸಂಶೋಧನೆ ನಡೆಸಿ, ಸೇವಾವಧಿಯಲ್ಲಿ ಬರೇ  ಕಾಲಹರಣ ಮಾಡಿ,  ನಿವೃತ್ತಿಯ ನಂತರ ತನ್ನ ಸಂಶೋಧನೆಯ  ( ತಳಿ, ಇತ್ಯಾದಿಗಳನ್ನು) ಜ್ಞಾನವನ್ನು ಖಾಸಗಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಿಕೊಂಡು  ಅಲ್ಲಿ ಲಕ್ಷಾಂತರ ಸಂಭಾವನೆಗೆ ದುಡಿಯುವ ನೂರಾರು  ಕೃಷಿ ತಂತ್ರಜ್ಞರೂ ಇದ್ದಾರೆ.

ಒಂದು ಬಹಿರಂಗ ಪ್ರಶ್ನೆ:

ಈ ರೈತನಿಗೆ ಇರುವ ಕೃಷಿ ಜ್ಞಾನ ವಿಧ್ಯೆ ಕಲಿತ ತಜ್ಞರಿಗೆ ಇಲ್ಲವಾಯಿತಲ್ಲಾ.
  • ನಮ್ಮಲ್ಲಿ ಲಕ್ಷಾಂತರ ಜನ ಕೃಷಿ ತಜ್ಞರಿದ್ದಾರೆ. ಇವರಿಗೆ ಲಕ್ಷ ಲೆಕ್ಕದಲ್ಲಿ ಸರಕಾರ ಪಗಾರ ಕೊಡುತ್ತದೆ. ( ಜಿ ಕೆ ವಿಕೆ ಕೃಷಿ ಮೇಳದಲ್ಲಿ ಒಬ್ಬ ಕೃಷಿ ವಿಜ್ಞಾನಿ ಹೇಳಿದ ಮಾತು, ಸ್ವಾಮೀ ನಮ್ಮಲ್ಲಿ ಅಸಿಸ್ಟೆಂಟ್ ಪ್ರೊಫೆಸರ್  ಆದವರಿಗೆ 2 ಲಕ್ಷಕ್ಕಿಂತಲೂ ಹೆಚ್ಚು ಸಂಬಳ ಇದೆ, ಇವರಿಗೆ ಯಾವ ಕೃಷಿಕನ ಕಷ್ಟವೂ ಬಿದ್ದು ಹೋಗಿಲ್ಲ ಎಂದು)
  • ಇಷ್ಟು ಇರುವಾಗ ಇವರು ಯಾಕೆ ಈ ಬಡಪಾಯಿ ಕೃಷಿಕರ ಜೊತೆಗೆ ಬೆರೆಯಬಲ್ಲರು?
  • ರೈತರ ಏಳಿಗೆಗಾಗಿ ಸರಕಾರ ಈ ಕೃಷಿ ತಜ್ಞರನ್ನು ಸಾಕುತ್ತಿದೆ.
  • ಇವರು ರೈತರಿಗಾಗಿ  ಇರುವವರು. ಹಾಗಾದರೆ ಎಷ್ಟು ಜನ ಕೃಷಿ ತಜ್ಞರು ತಮ್ಮ ದೂರವಾಣಿ ಸಂಖ್ಯೆಯನ್ನು ರೈತರಿಗೆ ಕೊಡಲು ಇಚ್ಚೆ ಪಡುತ್ತೀರಿ?
  • ಬಹುಷಃ ನಂಬ್ರ ಕೊಟ್ಟರೂ ಸರಕಾರ ಕರೆನ್ಸೀ ಹಣ ಕೊಟ್ಟರು ರೈತರ ಕರೆಯನ್ನು ಸ್ವೀಕರಿಸಲು ಅದಕ್ಕೆ ಬಿಡುವೇ ಇರುವುದಿಲ್ಲ.
  • ಕಚೇರಿ ಅವಧಿ ಬಿಟ್ಟು ಒಂದು ಕ್ಷಣ  ರೈತರ ಬಳಿಯಲ್ಲಿ ಸಮಯ ಕಳೆಯಬಲ್ಲ ಒಬ್ಬನೇ ಒಬ್ಬ ಕೃಷಿ ತಂತ್ರಜ್ಞ ಇರಬಹುದೇ ಹುಡುಕಿ.
  • ಯಾವ ಕೃಷಿ ತಜ್ಞನಿಗೆ ನಿಮಗೆ ಅರ್ಥವಾಗುವ ಭಾಷೆಯಲ್ಲಿ ತನ್ನ ಜ್ಞಾನವನ್ನು ಅಥವಾ ನಿಮಗೆ ಬೇಕಾಗುವ ಕೃಷಿ ಜ್ಞಾನವನ್ನು  ಕೊಡಲು ಸಾಧ್ಯವಿದೆ?
  • ನಿಮ್ಮ ಕಷ್ಟಕ್ಕೆ ಮಿಡಿಯುವ ಹೃದಯ ಉಳ್ಳ  ಯಾರಾದರೂ  ಕೃಷಿ ತಜ್ಞರನ್ನು ಕಂಡಿದ್ದೀರಾ ?.
  • ಈಗ ಕೊರೋನಾ ಎಂಬ ಮಹಾ ಸಂಕಟ ಎದುರಾಗಿದೆ.
  • ಇದರ ಪರಿಣಾಮ ಮಧ್ಯಮವರ್ಗದ ಕೃಷಿಕರ ಮೇಲೆಯೇ ಹೆಚ್ಚು.
  • ಇಂತಹ ಸಂದರ್ಭದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಸಲಹೆಯನ್ನು ಕೊಟ್ಟ ಯಾವ ಕೃಷಿ ತಂತ್ರಜ್ಞರನ್ನು ನೀವು ಗುರುತಿಸಿದ್ದೀರಿ?

 ರೈತರೊಂದಿಗೆ ಸಂವಹನ ನಡೆಸುವಲ್ಲಿ ಅಸಹ್ಯ ಪಟ್ಟುಕೊಳ್ಳುವ , ಸಂವಹನಕ್ಕೆ ಸರಳ ಭಾಷೆಯನ್ನೂ ಆರಿಯದ , ಪುಸ್ತಕದ ಹುಳಗಳಾಗಿರುವ ಈ ಕೃಷಿ ತಂತ್ರಜ್ಞರ ಕೈಯಲ್ಲಿ   ಕೃಷಿ ಕ್ಷೇತ್ರದ ಸುಧಾರಣೆಯ ಜವಾಬ್ಧಾರಿಯನ್ನು ಕೊಟ್ಟರೆ ಇನ್ನು 50   ವರ್ಷ ಆದರೂ ಕೃಷಿ ಕ್ಷೇತ್ರದ ಏಳಿಗೆ ಆಗದು.

ಎಲ್ಲವೂ ಸಂಬಳಕ್ಕಾಗಿ, ಸ್ವಾರ್ಥಕ್ಕಾಗಿ:

  • ಕೃಷಿ ತಂತ್ರಜ್ಞರಿರಲಿ, ಅಥವಾ ಯಾವುದೇ ಅಭಿವೃದ್ದಿ ಇಲಾಖೆ ಇರಲಿ, ಅವರು ನಿಮ್ಮ ಹೆಸರಿನಲ್ಲಿ ಉತ್ತಮ ಸಂಬಳ ಪಡೆಯುವುದು ಮತ್ತು ನಮಗೆ ಸರಕಾರ ಅದು ಕೊಡಲಿಲ್ಲ, ಇದು ಕೊಡಲಿಲ್ಲ ಎಂದು ದುಃಖ ವ್ಯಕ್ತ ಪಡಿಸುವುದರಲ್ಲೇ  ಇವರು ಜೀವನ ಹರಣ ಮಾಡುತ್ತಿದ್ದಾರೆ.
  • ನಮ್ಮ  ಕಾರ್ಯ ಕ್ಷೇತ್ರದಲ್ಲಿ ಸಾಲವನ್ನೇ  ಮೈಮೇಲೆರಚಿಕೊಂಡಿರುವ ಕೋಟ್ಯಾಂತರ ಜನ ಇದ್ದಾರೆ.
  • ಇವರಿಗಾಗಿ ನಾನು ಏನು ಮಾಡಬಹುದು ಎಂದು ಚಿಂತಿಸುವುದು ಮತ್ತು ಅದಕ್ಕೆ ಬೇಕಾದಂತೆ ನಡೆಯುವ ಮನೋಸ್ಥಿತಿ ನಮ್ಮ ಕೃಷಿ ತಂತ್ರಜ್ಞರಿಗೆ ಬರಲಿ ಎಂದು ಪ್ರಾರ್ಥಿಸುತ್ತೇವೆ.

 

Leave a Reply

Your email address will not be published. Required fields are marked *

error: Content is protected !!