ಟೊಮಟೋ ಬೆಳೆಗಾರರು ಕಾಲ ಕಾಲಕ್ಕೆ ಬರುವ ರೋಗ ಸಮಸ್ಯೆಗೆ ಈ ರೀತಿ ಪರಿಹಾರ ಕ್ರಮ ಕೈಗೊಳ್ಳಬಹುದು.
- ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವ ಜನಪ್ರಿಯ ತರಕಾರಿ ಬೆಳೆಯಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಲಾಗುತ್ತಿದೆ.
- ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ಸೂಕ್ತ. ರಸಸಾರ 6 ರಿಂದ 7 ಇದ್ದಲ್ಲಿ ಬೆಳೆಗೆ ಅನುಕೂಲ.
- ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು.
- ಇತ್ತೀಚಿನ ದಿನಗಳಲ್ಲಿ ಉತ್ತಮ ಇಳುವರಿ ಕೊಡಬಲ್ಲ ತಳಿಗಳು ಲಭ್ಯವಿದ್ದು, ಹೆಕ್ಟರ್‍ಗೆ 100 ರಿಂದ 250 ಗ್ರಾಂ ಬಿತ್ತನೆ ಬೀಜ ಅವಶ್ಯಕತೆ ಇರುತ್ತದೆ.
ಸಸಿಮಡಿ ತಯಾರಿಕೆ:
- ಸಸಿಮಡಿ ತಯಾರಿಕೆ ವೇಳೆ 3 ರಿಂದ 4 ಕೊಟ್ಟಿಗೆ ಗೊಬ್ಬರ ಹಾಗೂ 2 ಕಿಲೋ ಗ್ರಾಂ ಕ್ಯಾಲ್ಸಿಯಂ ಮ್ಯಗ್ನಿಷಿಯಮ್ ಗಂಧಕವುಳ್ಳ ಗೊಬ್ಬರ ಪ್ರತಿ ಮಡಿಗಳಿಗೆ ಕೊಟ್ಟಲ್ಲಿ ಮಣ್ಣಿನ ಫಲವತ್ತತೆ ಉತ್ತಮಗೊಂಡು ಟ್ರೈಕೋಡರ್ಮಾ ಶಿಲೀಂಧ್ರ ನಾಶಕದಿಂದ ಬೀಜೋಪಚರಿಸಿದ ಬೀಜಗಳ ಬಿತ್ತನೆ ಮಾಡಿ ತೆಳುವಾಗಿ ಮಣ್ಣಿನಿಂದ ಮುಚ್ಚಬೇಕು.
- ಮೊಳಕೆ ಒಡೆದ 4 ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.
ಹೊಲ ಸಿದ್ದತೆ:
- ನಾಟಿ ಮಾಡಲು ಸಿದ್ಧಪಡಿಸಿದ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಭೂಮಿ ಹದಮಾಡಿ, ನಿಗದಿತ ಪ್ರಮಾಣದ ಕಾಂಪೋಸ್ಟ್ ಕೊಟ್ಟಿಗೆ ಗೊಬ್ಬರ ಬಳಸಿ ಭೂಮಿ ಸಿದ್ಧತೆ ಮಾಡಬೇಕು.
- ಶಿಫಾರಸ್ಸು ಮಾಡಿದ ಶೇ. 50 ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ(50 ಕೆ.ಜಿ), ಪೋಟ್ಯಾಷ್(30 ಕೆ.ಜಿ) ಹಾಗೂ ಸಮೃದ್ಧಿ ಅಥವಾ ಸೆಟ್‍ರೈಟ್ ಕೆಂಪು ಮಣ್ಣಿನಲ್ಲಿ ಪ್ರದೇಶಗಳಿಗೆ ಬಳಸಿದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು.
ಮುಖ್ಯ ರೋಗಗಳು:
ಎಲೆ ಚುಕ್ಕೆ ರೋಗ ಹಾಗೂ ಅಂಗಮಾರಿ:
- ಅಲ್ಟರ್‍ನೇರಿಯ, ಸೆಪ್ಟೋರಿಯ ಶಿಲೀಂಧ್ರಗಳು ಈ ರೋಗವನ್ನು ಪೋಟಾಷ್ ಕೊರತೆ ಇರುವ ಭೂಮಿಗಳಲ್ಲಿ ಯಥೇಚ್ಛವಾಗಿ ಹರಡುತ್ತವೆ.
- ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಪರಿವರ್ತನೆಗೊಂಡು ಎಲೆ ಅಂಗಮಾರಿ ರೋಗ ಸೃಷ್ಠಿಯಾಗಿ ಎಲೆಗಳು ಒಣಗುತ್ತವೆ.
- ಮ್ಯಾಂಕೋಜಿಬ್ 2 ಗ್ರಾಂ. ಹಾಗೂ ಬಯೋ 20 ಅಥವಾ ಬಯೋವಿಟಾ 50 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಲ್ಲಿ ರೋಗ ನಿರ್ವಹಣೆ ಸಾಧ್ಯ.
ಎಲೆ ಮುದುಡು ರೋಗ:
- ಗಿಡಗಳ ಎಲೆಗಳು ಪೊದೆಯಾಕಾರಗೊಂಡು ಎಲೆಯ ಬೆಳವಣಿಗೆ ಕುಂಠಿತಗೊಂಡು, ಎಲೆ ಗಾತ್ರ ಕಡಿಮೆಯಾಗಿ ಕಾಯಿ ಕಟ್ಟುವಿಕೆ ಕ್ಷೀಣಿಸುವುದು
- ಬೇಸಿಗೆ ಕಾಲದಲ್ಲಿ ರಸ ಹೀರುವ ಕೀಟಗಳಲ್ಲಿ ಉದ್ಭವಗೊಂಡ ಮಾರಕ ವೈರಸ್ ರೋಗವು ಗಿಡದಿಂದ ಗಿಡಗಳಿಗೆ ಹರಡುತ್ತದೆ.
- ಭೂಮಿಯಲ್ಲಿ ಜಿಂಕ್ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.
- ಹುಳಿ ಮಜ್ಜಿಗೆ ಅಥವಾ ಗೋಮೂತ್ರ 750 ಮೀ.ಲೀ ಪ್ರತಿ 15 ಲೀಟರ್ ಟ್ಯಾಂಕ್‍ಗೆ ಬೆರೆಸಿ ಸಿಂಪಡಿಸಬೇಕು.
- ಅತಿಯಾದ ಮುದುಡು ಪೀಡಿತ ಗಿಡವನ್ನು ಹೊಲದಿಂದ ತೆಗೆದು ನಾಶಪಡಿಸಬೇಕು.
ಸೊರಗು ರೋಗ:]
- ಈ ರೋಗದಲ್ಲಿ ಎರಡು ವಿಧಗಳಿವೆ ಪ್ಯೂಸೇರಿಯಂ ಸೊರಗು ರೋಗ ಹಾಗೂ ದುಂಡಾಣು ಸೊರಗು ರೋಗ. ಶಿಲೀಂಧ್ರ ಸೊರಗು ತುತ್ತಾದ ಗಿಡಗಳು ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಕೆಳಗೆ ಬಾಗುತ್ತವೆ.
- ನಂತರ ಗಿಡದ ಎಲೆಗಳು ಪೂರ್ತಿ ಒಣಗುತ್ತವೆ. ರೋಗ ಪೀಡಿತ ಗಿಡಗಳನ್ನು ನಾಶಪಡಿಸಬೇಕು.
- ಸೊರಗು ಪೀಡಿತ ಹಾಗೂ ಸುತ್ತಲಿರುವ ಆರೋಗ್ಯ ಗಿಡಗಳಿಗೆ ಸಿಓಸಿ (ತಾಮ್ರದ ಅಕ್ಸಿಕ್ಲೋರೈಡ್) 0.3 ಗ್ರಾಂ. ಅಥವಾ ಕಾರ್ಬೇನಡೆಂಜಿಮ್ 0.2% ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ನೆನೆಯುವಂತೆ ಸುರಿಯಬೇಕು.
- ರೋಗ ನಿರೋಧಕ ಶಕ್ತಿ ಹೊಂದಿದ ತಳಿಗಳನ್ನು ಬೆಳೆಸಬೇಕು.
ಕೀಟಗಳು:
- ಎಲೆ ತಿನ್ನುವ ಕೀಟ ಇದರ ಮೊದಲ ಹಂತದ ಮರಿ ಹುಳುಗಳು ಎಲೆಯ ಹಸಿರು ಪದಾರ್ಥವನ್ನು ಕೊರೆದು ತಿನ್ನುತ್ತವೆ.
- ಡೈಮೀಥೆಯೇಟ್ 1.5 ಮಿ.ಲೀ ಅಥವಾ ಫಸ್ಪೋಮೀಡಾನ್ 0.5 ಮೀ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿಬೇಕು.
ಹಣ್ಣು ಕೊರೆಯುವ ಹುಳ:
- ಮರಿ ಹುಳುಗಳು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ನಂತರ ಹಣ್ಣು ಕೊಳೆಯಲು ಆರಂಭಿಸುತ್ತದೆ.
- ಕಾರ್ಬರಿಲ್ 3 ಗ್ರಾಂ. ಅಥವಾ ಬೇವಿನ ಎಣ್ಣೆ 5 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
ಪೋಷಕಾಂಶ ನ್ಯೂನತೆಗಳು:
- ಭೂಮಿಯಲ್ಲಿ ಸುಣ್ಣದ ಅಂಶ ಕಡಿಮೆಯಾದಾಗ ಸಸ್ಯಗಳಲ್ಲಿ ಇಳುವರಿ ಕೊಡಬಲ್ಲ ಕಾಯಿ ಹಣ್ಣುಗಳು ಕ್ಯಾಲ್ಸಿಯಂ ಕೊರತೆಯಿಂದ ಕಪ್ಪು ಕಂದು ಬಣ್ಣಕ್ಕೆ ತಿರುಗುತ್ತವೆ.
- ಕ್ಯಾಲ್ಸಿಯಂ ಯುಕ್ತ ಪೋಷಕಾಶಗಳಾದ ಸುಣ್ಣದ ಪುಡಿ 2.0 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿ ಕಟ್ಟುವ ಸಂದರ್ಭದಲ್ಲಿ ಸಿಂಪಡಿಸಿದಲ್ಲಿ ಈ ನ್ಯೂನತೆ ನಿವಾರಿಸಬಹುದು.
ಲೇಖಕರು; ಡಾ. ಜûಹೀರ್ ಅಹಮದ್ ಬಿ., ಮತ್ತು ಡಾ.ರಾಜು ಜಿ. ತೆಗ್ಗೆಳ್ಳಿ ಡಾ. ವಾಸುದೇವ ನಾಯ್ಕ, ಡಾ. ಶ್ರೀನಿವಾಸ ಬಿ.ವಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ , ನಿಸರ್ಗ ಹೆಚ್. ಎಸ್ , ಡಾ. ಪುಷ್ಪಲತಾ. ಎಂ.