ಹೆಚ್ಚಿನ ರೈತರು ಕೃಷಿ ನೀರಾವರಿಗೆ ಬೋರ್ ವೆಲ್ ನೀರಿನ ಮೂಲವನ್ನು ಆಶ್ರಯಿಸಿದ್ದಾರೆ. ಕೊಳವೆ ಬಾವಿಯಲ್ಲಿ ನೀರು ಎಷ್ಟು ಇದೆ, ಪಂಪು ಎಷ್ಟು ಆಳಕ್ಕೆ ಇಳಿಸಬೇಕು ಎಂದು ತಿಳಿಯುವುದು ಹೀಗೆ.
ಕೊಳವೆ ಬಾವಿ ಎಂದರೆ ಅದು ಶಿಲಾ ಪದರದಲ್ಲಿ ಜಿನುಗುವ ನೀರು. ಇದನ್ನು ಬರಿಗಣ್ಣಿನಿಂದ ಎಷ್ಟು ಇದೆ ಎಂದು ನೋಡುವುದು ಅಸಾಧ್ಯ. ಕೆರೆ, ಬಾವಿಯ ನೀರನ್ನು ಎಷ್ಟು ಇದೆ, ಎಷ್ಟು ತೆಗೆಯಬಹುದು ಎಂದು ಕರಾರುವಕ್ಕಾಗಿ ತಿಳಿಯಬಹುದು. ಆದರೆ ಕೊಳವೆ ಬಾವಿಯ ನೀರಿಗೆ ಅದು ಸಾಧ್ಯವಿಲ್ಲ. ಕೆಲವು ಪಳಗಿದವರು ಸ್ವಲ್ಪ ಮಟ್ಟಿಗೆ ಹೇಳುವುದು ಸರಿಯಾಗುತ್ತದೆಯಾದರೂ ಬಹುತೇಕ ಎಲ್ಲವೂ ಅಂದಾಜು.
- ಕೊಳವೆ ಬಾವಿಯಲ್ಲಿ ಎಷ್ಟು ನೀರು ಇದೆ, ಎಷ್ಟು ಪಂಪು ಇಳಿಸಬೇಕು ಎಂಬುದನ್ನು ತಿಳಿಯಬೇಕಿದ್ದರೆ ಅದನ್ನು ತೋಡಿದ ನಂತರ ಟೆಸ್ಟ್ ಪಂಪನ್ನು ಇಳಿಸಿ ನೋಡುವುದು ಕರಾರುವಕ್ಕಾದ ವಿಧಾನ.
- ಅಂದಾಜಿಗೆ ಲೆಕ್ಕಾಚಾರ ಹಾಕಿ ಪಂಪು ಇಳಿಸುವುದರಿಂದ ಮತ್ತೆ ಖರ್ಚು ಹೆಚ್ಚಾಗುತ್ತದೆ.
ನೀರು ಎಷ್ಟು ಇದೆ ಹೇಗೆ ತಿಳಿಯುವುದು ?
- ಕೊಳವೆ ಬಾವಿ ತೋಡುವಾಗ ಬರುವ ನೀರನ್ನು ನೋಡಿ ಅಂದಾಜು ಮಾಡುವುದು ಅಷ್ಟೊಂದು ಸೂಕ್ತವಲ್ಲ.
- ಅಲ್ಲಿ ಗಾಳಿಯ ಒತ್ತಡದಲ್ಲಿ ನೀರು ಮೇಲಕ್ಕೆ ಹಾರಬಹುದು. ಭಾರೀ ನೀರು ಬಂದಂತೆ ಕಾಣಬಹುದು.
- ರಿಗ್ ನವರು ನಿಮಗೆ ಸಂತೋಷವಾಗಲಿ ಎಂದು ಎರಡು, ಮೂರು ನಾಲ್ಕು ಇಂಚಿನ ಲೆಕ್ಕ ಕೊಡಬಹುದು.
- ಆದರೆ ಪಂಪು ಇಳಿಸುವ ಮುಂಚೆ ಅದನ್ನು ಖಾತ್ರಿ ಮಾಡಿಕೊಳ್ಳಿ.
- ನೀರು ಎಷ್ಟು ಆಳದಲ್ಲಿ ಸಿಕ್ಕಿದೆ, ಮತ್ತು ತೋಡುತ್ತಿರುವಾಗ ಹೊರ ಚೆಲ್ಲುತ್ತಿರುವ ನೀರು ಎಷ್ಟು ಎಂದು ತಿಳಿದುಕೊಳ್ಳಿ.
- ಒಮ್ಮೆ ರಾಡ್ ಬದಲಾಯಿಸುವಾಗ ಅಧಿಕ ಒತ್ತಡದಲ್ಲಿ ನೀರು ಹೊರ ಚಿಮುತ್ತದೆ ಆದನ್ನು ಒಟ್ಟಾರೆ ನೀರು ಎಂದು ತಿಳಿಯದಿರಿ.
- ರಾಡ್ ಅರ್ಧ ಇಳಿಯುವಾಗ ಬರುತ್ತಿರುವ ನೀರು ಲಭ್ಯ ನೀರಾಗಿರುತ್ತದೆ.
- ನೀರಿನ ಇಳುವರಿಯನ್ನು ಈ ಸಮಯದಲ್ಲಿ V ನಾಚ್ ಮೂಲಕ ಪರೀಕ್ಷಿಸಬಹುದು.
- ಇದಕ್ಕಿಂತ ಉತ್ತಮ ಎರಡು ಇಂಚು PVC ಪೈಪಿನ ತುಂಡನ್ನು ತೆಗೆದುಕೊಂಡು ಅದರ ಸುತ್ತ ಬಾವಿ ಕೊರೆದ ಹುಡಿ ಅಥವಾ ಮಣ್ಣು ಹಾಕಿ,
- ಅದರ ಒಳ ಭಾಗದಲ್ಲಿ ಹರಿಯುವ ನೀರನ್ನು ಗಮನಿಸಿ ಎಷ್ಟು ಇಂಚು ನೀರು ಇದೆ ಎಂದು ತಿಳಿಯಬಹುದು.
- PVC ಪೈಪಿನಲ್ಲಿ ಪೂರ್ತಿ ಒಳಗೋಡೆಗೆ ತಾಗಿಕೊಂಡು ನೀರು ಹೊರ ಹರಿದರೆ , ಅದರಲ್ಲಿ ಮಿಗತೆಯಾಗಿ ಬೇರೆ ಭಾಗದಿಂದ ಹರಿಯತೊಡಗಿದರೆ ನೀರು 2 ಇಂಚಿಗಿಂತ ಹೆಚ್ಚು ಇದೆ ಎಂದು ತಿಳಿಯಬಹುದು.
- ಅಗತ್ಯವಿದ್ದರೆ ಅದಕ್ಕಿಂತ ದೊಡ್ಡ ಪೈಪು 2.5-3 ಹೀಗೆ ಬದಲಾಯಿಸಿ ನೋಡಬಹುದು.
- ಆದರೆ ಪಂಪಿಗೆ ಬಳಸುವ ಪೈಪು ಸಾಮಾನ್ಯವಾಗಿ 2 ಇಂಚು ಆದ ಕಾರಣ ಇದು ಸಾಕಾಗುತ್ತದೆ.
ಇದರ ಅಂದಾಜಿನಲ್ಲಿ ಅಂದರೆ ಎಷ್ಟು ಆಳ ತೋಡುವಾಗ ಈ ಪ್ರಮಾಣದ ನೀರು ಹೊರ ಹರಿದಿದೆಯೋ ಅಷ್ಟು ಆಳಕ್ಕೆ ಪಂಪನ್ನು ಇಳಿಸಬೇಕಾಗುತ್ತದೆ.
- ಪಂಪು ಇಳಿಸುವ ಮುಂಚೆ ಒಮ್ಮೆ ಹೆಚ್ಚು ಹೆಡ್ ಉಳ್ಳ ಪಂಪನ್ನು ಟೆಸ್ಟ್ ಗಾಗಿ ಇಳಿಸುವುದು ಸೂಕ್ತ.
- ಸಾಮಾನ್ಯವಾಗಿ 10-15 ವರ್ಷದ ಹಿಂದೆ ಪಂಪು ಇಳಿಸುವ ವೃತ್ತಿ ಮಾಡುವವರಲ್ಲಿ ಈ ವ್ಯವಸ್ಥೆ ಇತ್ತು.
- ಇಳಿಸಿ ನೋಡಿ, ನಂತರ ಸೂಕ್ತ ಪಂಪಿನ ನಿರ್ಧಾರ ಮಾಡಲಾಗುತ್ತಿತ್ತು.
- ಈಗ ಅದು ಬಹಳ ಕಡಿಮೆಯಾಗಿದೆ. ಕೆಲವರು ಈಗಲೂ ಮಾಡಿಕೊಡುವವರಿದ್ದಾರೆ.
- ಟೆಸ್ಟ್ ಪಂಪ್ ಇಳಿಸುವಾಗ ಆಗಾಗ ನೀರಿನ ಇಳುವರಿಯನ್ನು 10-15 ನಿಮಿಷ ತನಕ ನೋಡಿ ಅಗತ್ಯವಿದ್ದರೆ ಮತ್ತೆ ಕೆಳಕ್ಕೆ ಇಳಿಸಬೇಕು.
- ನೀರು ಹೊರ ಬೀಳುವಾಗ ದೂರಕ್ಕೆ ಬೀಳುವ ವರೆಗೆ ಪಂಪನ್ನು ಇಳಿಸಬೇಕು.
- ಇಲ್ಲವಾದರೆ ಮತ್ತೆ ಒಂದೇ ವರ್ಷದಲ್ಲಿ ಪಂಪನ್ನು ಕೆಳಕ್ಕೆ ಇಳಿಸಬೇಕಾಗಲೂ ಬಹುದು.
ಪಂಪ್ ಕೊಳ್ಳುವಾಗ ಇದು ತಿಳಿದಿರಿ:
- ನೀವು ತೋಡಿದ ಬಾವಿಯ ಆಳ ಸರಿಯಾಗಿ ನೆನಪಿರಲಿ.
- ಅದರಲ್ಲಿ ಎಷ್ಟು ಆಳದಲ್ಲಿ ನೀವು ಅಳತೆ ಮಾಡಿದ ಪ್ರಮಾಣದ ನೀರು ಬಂದಿದೆ ಅದೂ ನೆನಪಿರಲಿ.
- ಉದಾ: ಬಾವಿ ಸುಮಾರು 250 ಅಡಿ ಆಗಿದ್ದರೆ ನೀವು ಆಯ್ಕೆ ಮಾಡುವ ಪಂಪು ಕನಿಷ್ಟ 10 ಸ್ಟೇಜ್ ಆಗಿರಬೇಕು.
- ನಂತರ ನೀವು ನೀರಾವರಿ ಮಾಡಲು ಎಷ್ಟು ಎತ್ತರಕ್ಕೆ ನೀರನ್ನು ಸಾಗಿಸುತ್ತೀರಿ, ಅದನ್ನು ಅಧಿಕ ಒತ್ತಡದಲ್ಲಿ ಸರಬರಾಜು ಮಾಡುವುದಾದರೆ ಅದಕ್ಕನುಗುಣವಾಗಿ ಎತ್ತರವನ್ನು ಲೆಕ್ಕಾಚಾರ ಹಾಕಿ,ಹೆಚ್ಚುವರಿ ಸ್ಟೇಜ್ ಬೇಕಾಗುತ್ತದೆ.
- ಸುಮಾರು 500 ಅಡಿ ತನಕ ಬಾವಿ ಕೊರೆಸಿದ್ದೀರಿ , 350 -400 ಅಡಿ ನಂತರವೇ ನೀರು ಬಂದಿದೆ ಎಂದಾದರೆ
- ನೀವು ಸುಮಾರು 400 ಅಡಿ ತನಕ ಪಂಪನ್ನು ಇಳಿಸುವುದಿದ್ದರೂ ಅದೇ ಪಂಪು ಹೋದಾಣಿಕೆ ಆಗುವಂತೆ ಸುಮಾರು 14-16 ಸ್ಟೇಜ್ ನ ಪಂಪನ್ನು ಆಯ್ಕೆ ಮಾಡುವುದು ಉತ್ತಮ.
- ಇದೆಲ್ಲಾ ಅಂದಾಜು ಮಾಡುವುದಕ್ಕಿಂತ ಟೆಸ್ಟ್ ಪಂಪ್ ಇಳಿಸಿ ನೋಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲ.
- ಆದರೆ ಈಗಿನ ಕೊಳವೆ ಯುಗದಲ್ಲಿ ನೀರು ಬೇಗ ಆಳಕ್ಕೆ ಇಳಿಯುವ ಸಾಧ್ಯತೆ ಇರುವ ಕಾರಣ ಪಂಪು ಕೆಳಗೆ ಇಳಿಸಲು ಅನುಕೂಲವಾಗುವಂತೆ ಪಂಪು ಖರೀದಿಸಿ.
- ಎಷ್ಟು ಮೇಲೆ ನೀರು ನಿರಂತರವಾಗಿ ಹೊರ ಚೆಲ್ಲುತ್ತದೆಯೋ ಅಲ್ಲಿ ತನಕ ಮಾತ್ರ ಪಂಪು ಇಳಿಸಿ.
- ನಂತರ ವರ್ಷ ಕಳೆದಂತೆ ಕೆಳಕ್ಕೆ ಇಳಿಸುವ ಪ್ರಮೇಯ ಬರುತ್ತದೆ.
ವರ್ಷವೂ ಇದನ್ನು ಮಾಡುತ್ತಿರಿ:
- ಕೊಳವೆ ವಾವಿಗೆ ಪಂಪು ಹಾಕಿದ ನಂತರ ಈಗ ಇದ್ದ ನೀರು ಯಾವಾಗಲೂ ಏಕ ಪ್ರಕಾರವಾಗಿ ಇರಬೇಕೆಂದು ಇಲ್ಲ.
- ಅದು ಕಡಿಮೆಯಾಗಿ ತಳಕ್ಕೆ ಇಳಿಯಬಹುದು.
- ಇದನ್ನು ನಾವು ವರ್ಷಕ್ಕೊಮ್ಮೆ ಪರೀಕ್ಷಿಸಬೇಕು.
- ಪಂಪಿನ ಭಾಗದಲ್ಲಿ ತೆರೆದು ನಿರಂತರ 15-20 ನಿಮಿಷ ನೀರನ್ನು ಹೊರಚೆಲ್ಲಿ.
- ಮೊದಲು ಬೀಳುವಾಗ ಯಾವ ಜಾಗಕ್ಕೆ ಬೀಳುತ್ತಿತ್ತು,
- ಕೊನೆಗೆ ಯಾವ ಜಾಗಕ್ಕೆ ಬೀಳುತ್ತದೆ ಎಂದು ಅಂದಾಜು ಮಾಡಿ
- ನೀರಿನ ಇಳುವರಿ ಕಡಿಮೆಯಾಗುತ್ತಿದೆಯೇ , ಏಕಪ್ರಕಾರವಾಗಿದೆಯೇ ಎಂದು ಕಣ್ಣಂದಾಜಿನಲ್ಲಿ ಪರೀಕ್ಷೆ ಮಾಡುವುದು ಉತ್ತಮ.
ಕೊಳವೆ ಬಾವಿಯೇ ಇಂದು ಕೃಷಿಗೆ ನೀರಾವರಿ ಮೂಲವಾಗಿದ್ದು, ಎಲ್ಲರೂ ಕೊಳವೆ ಬಾವಿ ತೋಡುವವರೇ. ಎಲ್ಲಾ ಕಡೆ ಸಾಕಷ್ಟು ಜನ ಪಂಪು ಮಾರುವವರು, ಪಂಪು ಇಳಿಸುವವರು. ಅವರು ವ್ಯಾಪಾರ ಮಾಡುವವರು. ನೀವು ನಿಮಗೆ ಯಾವ ಪಂಪು ಸೂಕ್ತ ಎಂದು ಬುದ್ದಿವಂತಿಕೆಯಲ್ಲಿ ನೀರಿನ ಇಳುವರಿ ಪರೀಕ್ಷೆ ಮಾಡಿಸಿ ಪಂಪು ಖರೀದಿಸಿದರೆ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪಂಪು ದಾಸ್ತಾನು ಇಡುವ ಪ್ರಮೇಯ ಬರಲಾರದು.