ಭಾರತ ಸರಕಾರ ನೆರೆಯ ಭೂತಾನ್ ನಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಅನುಮತಿ ನೀಡಿದೆ ಇದು ನಮ್ಮ ದೇಶದ ಉತ್ಪಾದನೆಗೆ ಹೋಲಿಸಿದರೆ ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ. ಸುದ್ದಿ ಮಾತ್ರ ಭಾರೀ ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಭಾರತ ಸರಕಾರದ ವಿದೇಶಿ ವ್ಯಾಪಾರದ ನಿರ್ಧೇಶನಾಲಯದ (Directorate general of Foreign Trade ) ಈ ಆಮದಿಗೆ ಅನುಮತಿಸಿದೆ ಎನ್ನಲಾಗುತ್ತಿದೆ. ಈ ನಿರ್ಧೇಶನಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಈ ಕುರಿತಂತೆ ಒಂದು ಸುತ್ತೋಲೆಯೂ ಇದೆ. ಹಾಗಾಗಿ ಇದು ವಾಸ್ತವ ವಿಚಾರವೇ ಆಗಿದೆ. ಸ್ಥಳೀಯವಾಗಿ ಈ ನೆವದಲ್ಲಿ ಅಡಿಕೆ ದರ ಬೀಳಿಸಲು ಇದನ್ನು ದೊಡ್ಡ ಸುದ್ದಿ ಮಾಡಲಾಗುತ್ತದೆಯೋ ಎಂಬ ಅನುಮಾನ ಉಂಟಾಗುತ್ತಿದೆ.
ನಮ್ಮ ದೇಶಕ್ಕೆ ತಾಗಿಕೊಂಡ ಒಂದು ಪುಟ್ಟ ರಾಷ್ಟ್ರ ಭೂತಾನ್. ಇಲ್ಲಿಯ ಒಟ್ಟಾರೆ ಚದರ ವಿಸ್ತೀರ್ಣ 38,394 ಚರದ ಕಿಲೋಮೀಟರುಗಳು. ಇಲ್ಲಿನ ಬಹುತೇಕ ಪ್ರದೇಶಗಳು ಎತ್ತರದ ಶಿಖರ ಪ್ರದೇಶಗಳು. ಕೆಲವು ಮಾಹಿತಿಗಳ ಪ್ರಕಾರ ಇಲ್ಲಿ 1:1 ರ ಪ್ರಮಾಣದಲ್ಲಿ ನೀರು ಮತ್ತು ನೆಲ ಇರುತ್ತದೆ. ಇಲ್ಲಿನ ಮುಖ್ಯ ಬೆಳೆಗಳು ಅಕ್ಕಿ, ಗೋಧಿ, ಜೋಳ ಬಾರ್ಲಿ ತರಕಾರಿಗಳು ಆಲೂಗಡ್ಡೆ ಅಲ್ಲದೆ ತೋಟಗಾರಿಕಾ ಹಣ್ಣಿನ ಬೆಳೆಗಳಾದ ಸೇಬು ಮತ್ತು ಅಲ್ಪಸ್ವಲ್ಪ ಅಡಿಕೆ. ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಗುಡ್ಡ ಬೆಟ್ಟಗಳಲ್ಲಿ ಟೆರೆಸಿಂಗ್ ಮಾದರಿಯ ಭತ್ತದ ಗದ್ದೆಗಳನ್ನು ಕಂಡವರು. ಇಂತಹ ಭತ್ತದ ಗದ್ದೆಗಳು ಇಲ್ಲಿ ಹೆಚ್ಚು. ಇಲ್ಲಿನ ಒಟ್ಟು ಭೂ ಪ್ರದೇಶದಲ್ಲಿ ಗರಿಷ್ಟ ಶೇ.3 ರಷ್ಟು ಮಾತ್ರ ಬೇಸಾಯಕ್ಕೆ ಒಳಪಟ್ಟಿದ್ದು, ಭೂತಾನ್ ದೇಶದ 80% ಜನ ಕೃಷಿಯನ್ನು ಅವಲಂಭಿಸಿದ್ದಾರೆ.16% ದಷ್ಟು ಉದ್ದಿಮೆಗಳು ಮತ್ತು 13% ದಷ್ಟು ಜಲವಿದ್ಯುತ್ ಉತ್ಪಾದನೆ ಇದೆ. ಅತೀ ಸಣ್ಣ ರಾಷ್ಟ್ರವಾದರೂ ಕೃಷಿ ಸಂಶೋಧನಾ ಕೇಂದ್ರಗಳು ಎಲ್ಲವೂ ಇದೆ. ಇಲ್ಲಿಯ ಜನರ ಪ್ರಾಮುಖ್ಯ ಆಹಾರ ಆಲೂಗಡ್ಡೆ. ಹಾಗಾಗಿ ಈ ಬೆಳೆಗೆ ಹೆಚ್ಚಿನ ಪ್ರಾತಿನಿಧ್ಯ. ಇಲ್ಲಿನ Chukha,Dagana, Samdrup Jongkhar,Samtse,Sarpang,ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು ಸುಮಾರು 1200 ಹೆಕ್ಟೇರ್ ಗಳಷ್ಟು ಅಡಿಕೆ ಬೆಳೆ ಪ್ರದೇಶ ಇದೆ.2005 ರ ಸುಮಾರಿಗೆ 5000 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆ ಇದ್ದುದು ,2020 ಕ್ಕೆ ಅದು 17000 ಮೆಟ್ರಿಕ್ ಟನ್ ತನಕ ಮುಟ್ಟಿದೆ ಎಂಬ ವರದಿಗಳಿವೆ.ಬೆಳೆ ವಿಸ್ತರಣೆ ಇಲ್ಲಿಯೂ ಆಗುತ್ತಿದೆ. ಈ ದೇಶದಲ್ಲಿಯೂ ಅಡಿಕೆಯ ಬಳಕೆ ಇದೆ. ನೇಪಾಳ ಮುಂತಾದ ದೇಶಗಳಿಗೆ ಇಲ್ಲಿಂದ ಅಡಿಕೆ ಹೋಗುತ್ತದೆ. ಇವೆಲ್ಲಾ ದಾಖಲೆಗಳನ್ನು ಗಮನಿಸಿದಾಗ ಈಗ ಹರಿದಾಡುತ್ತಿರುವ ಸುದ್ದಿ ನಿಜವೋ ಅಥವಾ ಯಾವುದೋ ಉದ್ದೇಶಕ್ಕಾಗಿ ಹರಿಬಿಟ್ಟ ಸುದ್ದಿಯೋ ತಿಳಿಯುತ್ತಿಲ್ಲ.
ಹಸಿ ಅಡಿಕೆ ಎನ್ನುತ್ತಾರೆ ಇದು ಸಾಧ್ಯವೇ?
- ಭೂತಾನ್ ದೇಶ ಭಾರತಕ್ಕೆ ತಾಗಿಕೊಂಡ ದೇಶದಂತೆ ನೆರೆಯ ಚೀನಾಕ್ಕೂ ತಾಗಿಕೊಂಡ ದೇಶವಾಗಿದೆ.
- ಚೀನಾದಲ್ಲಿ ಅಡಿಕೆಯ ಬಳಕೆ ಇದ್ದಂತೆ ಇಲ್ಲಿ ಬಳಕೆ ಇದೆ.
- ನಮ್ಮ ದೇಶದ ಬಿಹಾರದ ಸಂಪರ್ಕ ಭೂತಾನ್ ದೇಶಕ್ಕೆ ಹೆಚ್ಚಾಗಿದ್ದು, ಅಡಿಕೆ ಖರೀದಿಯ ಪ್ರಮುಖ ಸ್ಥಳ ಪಾಟ್ನಾ ದ ಸಂಪರ್ಕ ಭೂತಾನ್ ಗೆ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು.
- ಭೂತಾನ್ ಗೂ ಭಾರತಕ್ಕೂ ಉತ್ತಮ ಸಂಬಂಧ ಇದೆ. ಇಲ್ಲಿನ ಅಡಿಕೆ ಸಣ್ಣ ಗಾತ್ರದ (ತೀರ್ಥಹಳ್ಳಿ, ಶಿವಮೊಗ್ಗ ತರಹದ) ಅಡಿಕೆಯಾಗಿದೆ ಎನ್ನುತ್ತಾರೆ,
- ನೆರಯ ನೇಪಾಳದ ಓರ್ವ ಮಿತ್ರರು.
- ಇಲ್ಲಿಂದ ಹಸಿ ಅಡಿಕೆ ಭಾತರಕ್ಕೆ ಆಮದು ಆಗಲಿದೆ ಎಂದರೆ ಅದು ಭಾರತದ ಯಾವುದೋ ಖರೀದಿದಾರರು ಈ ಒಪ್ಪಂದ ಮಾಡಿರಬೇಕು.
- ಹಸಿ ಅಡಿಕೆ (Fresh green arecanut)ತರುವುದು ಯಾವ ರೀತಿಯಲ್ಲಿ ಎಂಬುದೇ ಇಲ್ಲ ಅರ್ಥವಾಗದ ವಿಚಾರವಾಗಿದೆ.
- ಸಾಮಾನ್ಯವಾಗಿ ಹಸಿ ಅಡಿಕೆಯನ್ನು ಕೊಯಿಲು ಮಾಡಿ 2-3 ದಿನಗಳ ಒಳಗೆ ಸಿಪ್ಪೆ ತೆಗೆದು ಸಂಸ್ಕರಿಸಬೇಕು.
- ಇಲ್ಲವಾದರೆ ಹಾಳಾಗುತ್ತದೆ. ಆ ಸ್ಥಿತಿಯಲ್ಲಿ ಅಡಿಕೆಯನ್ನು ತುರುವುದು ಹೌದೇ ಎಂಬ ಸಂಶಯವೂ ಇದೆ.
- ಕೆಲವು ಮಾಹಿತಿಗಳ ಪ್ರಕಾರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ,ಅಡಿಕೆಯನ್ನು ಸುಲಿದು ಇಲ್ಲಿಗೆ ತರಲಾಗುತ್ತದೆ.
- ಇಲ್ಲಿ ನಂತರ ಸಂಸ್ಕರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಯೂ ಇದೆ.
ಭೂತಾನ್ ನಿಂದ ಅಡಿಕೆ ಬಂದರೆ ನಮ್ಮ ಮಾರುಕಟ್ಟೆಗೆ ಧಕ್ಕೆ ಇಲ್ಲ.
- ಲೆಕ್ಕಾಚಾರಗಳು ಹೇಳುವ ಅಂಕಿ ಅಂಶಗಳ ಪ್ರಕಾರ ಬರುವ ಅಡಿಕೆಯ ಪ್ರಮಾಣ ಬರೇ 17000 ಟನ್ ಗಳಷ್ಟು.
- ಅದು ಹಸಿ ಅಡಿಕೆಯೇ ಆದರೆ ಸಂಸ್ಕರಿಸಿ ಒಣಗಿಸಿದಾಗ (20%) ಒಟ್ಟು 3400 ಟನ್ ಅಡಿಕೆ ಭಾರತದ ಮಾರುಕಟ್ಟೆಗೆ ಹೆಚ್ಚುವರಿಯಾಗಿ ಬಂದಂತಾಗುತ್ತದೆ.
- ಇದು ಬರೇ ಅತ್ಯಲ್ಪ ಪ್ರಮಾಣ ಎನ್ನಬಹುದು. ಇಷ್ಟು ಪ್ರಮಾಣದ ಅಡಿಕೆ ನಮ್ಮ ಒಂದು ತಾಲೂಕಿನ ಉತ್ಪಾದನೆಯ ಅರ್ಧದಷ್ಟೂ ಆಗಲಾರದು.
- ಉದಾಹರಣೆಗೆ ಸಾಗರದಂತಹ ಮಾರುಕಟ್ಟೆಗೆ ಸಾಗರ ಹೊಸನಗರ ಸೇರಿ ಹೆಚ್ಚು ಕಡಿಮೆ 1,00,000 ಕ್ವಿಂಟಾಲು ಆಡಿಕೆ ಬರುತ್ತದೆ.
- 34000 ಕ್ವಿಂಟಾಲು ನಮ್ಮಲ್ಲಿ ಎರಡು ಸೊಸೈಟಿಯಲ್ಲಿ ಸಂಗ್ರಹವಾಗುವ ಅಡಿಕೆ.
- ಹಾಗಿರುವಾಗ ಇದು ನಮ್ಮ ಬೆಳೆಗಾರರಿಗೆ ತೊಂದರೆ ಉಂಟು ಮಾಡದು.
- ಕ್ಯಾಂಪ್ಕೋ ಅಧ್ಯಕ್ಷರು ಈ ಮಾತನ್ನು ಹೇಳಿದ್ದಾರೆ. ಇದನ್ನು ಇಲ್ಲಿ ಸ್ಮರಿಸಬೇಕಾಗಿದೆ.
- ಆದರೆ ಕನಿಷ್ಟ ಆಮದು ಬೆಲೆಯನ್ನು ಬಿಟ್ಟು (minimum import price)ಕಿಲೋಗೆ ರೂ.250 ರಂತೆ ಆಮಧು ಮಾಡಿಕೊಳ್ಳಲು ಅನುಮತಿ ನೀಡಬಾರದಿತ್ತು ಎಂಬುದಾಗಿ ಉಲ್ಲೇಖಿಸಿದ್ದಾರೆ.
- ಈ ಬಗ್ಗೆ ಕೇಂದ್ರ ಸರಕಾರಕ್ಕೆ ಕನಿಷ್ಟ ಆಮದು ಬೆಲೆಯಂತೆ ತರಿಸಿಕೊಳ್ಳುವ ಶರ್ತವನ್ನು ಪಾಲಿಸಬೇಕು ಎಂದು ಮನವಿಯನ್ನು ಆಗಲೇ ಮಾಡಲಾಗಿದೆ.
- ಇದಕ್ಕೆ ಖಂಡಿತವಾಗಿಯೂ ಸರಕಾರ ಸ್ಪಂದಿಸಲೇ ಬೇಕು. ಸರಕಾರ ತಾನು ಹೊರಡಿಸಿದ ಸುತ್ತೋಲೆಯನ್ನು ತಿದ್ದುಪಡಿ ಮಾಡಬಾರದೆಂದೇನೂ ಇಲ್ಲ.
- ಭೂತಾನ್ ದೇಶದಿಂದ ಅಡಿಕೆ ಆಮದು ಆದರೆ ನಿಜವಾಗಿ ನಮ್ಮ ಅಡಿಕೆ ಮಾರುಕಟ್ಟೆಗೆ ತೊಂದರೆ ಉಂಟಾಗಲಾರದು.
- ಇದರೊಂದಿಗೆ ಬೇರೆ ದೇಶದ ಅಡಿಕೆ ಸೇರ್ಪಡೆಯಾದರೆ ಸ್ವಲ್ಪ ಸಮಸ್ಯೆ ಉಂಟಾಗಬಹುದು.
- ಇಲ್ಲಿ ಉತ್ಪಾದನೆಯಾಗುವ ಗುಣಮಟ್ಟದ ಅಡಿಕೆ ಬಳಕೆದಾರ ವರ್ಗದಲ್ಲಿ ಅದರದ್ದೇ ಆದ ಸ್ಥಾನವನ್ನು ಹೊಂದಿದೆ.
- ಇದು ಚಾಲಿ ಅಡಿಕೆ ಮಾರುಕಟ್ಟೆಗೆ ಯಾವ ತೊಂದರೆಯನ್ನೂ ಮಾಡಲಾರದು.
ಬೆಲೆ ಇಳಿಕೆಗೆ ಇದು ಕಾರಣವಾಯಿತು ಅಷ್ಟೇ:
- ಸಂದರ್ಭಕ್ಕನುಗುಣವಾಗಿ ವ್ಯಾಪಾರಿಗಳು ಅವಕಾಶವನ್ನು ಬಳಸಿಕೊಳ್ಳುವುದು ಸಹಜ.
- ಈ ಸುದ್ದಿಯನ್ನು ಸಾಧ್ಯವಾದಷ್ಟು ಹಬ್ಬಿಸುತ್ತಾ ಇದ್ದರೆ ಉತ್ಪಾದಕ ವರ್ಗದಲ್ಲಿ ಆತಂಕ ಉಂಟಾಗಿ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ.
- 17000 ಟನ್ ಅಡಿಕೆ ಇನ್ನೂ ಬಂದಿಲ್ಲ. ಬಂದು ಸಂಸ್ಕರಣೆ ಆಗಬೇಕಿದೆ.
- ಅದಕ್ಕೂ ಮೊದಲು ಅಡಿಕೆ ಮಾರುಕಟ್ಟೆ ಕುಸಿತ ಪಾರಂಭವಾಗಿದೆ. ಇದರ ಹಿಂದೆ ವ್ಯಾಪಾರಿಗಳ ತಂತ್ರಗಾರಿಕೆಯೂ ಇಲ್ಲ ಎನ್ನುವಂತಿಲ್ಲ.
- ಮೊನ್ನೆ ಕೆಂಪಡಿಕೆ ದರ ಮೇಲೇರಿದಾಗ ಯಾವುದೋ ವ್ಯಾಪಾರಿ ಸಟ್ಟಾ ವ್ಯವಹಾರ ಮಾಡಿ ತನ್ನ ಸ್ಟಾಕನ್ನು ಕ್ಲೀಯರ್ ಮಾಡಿಕೊಂಡ ಸಾಧ್ಯತೆ ಇದೆ.
- ಇನ್ನೂ ಸಾದ್ಯವಾದಷ್ಟು ಕಡಿಮೆ ಬೆಲೆಗೆ ಅಡಿಕೆ ಸಿಗಬೇಕು.
- ಆ ತನಕ ಖರೀದಿಯಲ್ಲಿ ಉತ್ತೇಜನ ಕಡಿಮೆಯಾಗುತ್ತದೆ.
- ಅಡಿಕೆಗೆ ಯಾವಾಗಲೂ ಒಂದೇ ರೀತಿಯ ಮಾರುಕಟ್ಟೆ.
- ಯಾವಾಗಲೂ ಖರ್ಚಾಗುವ ಪ್ರಮಾಣವೂ ಒಂದೇ ಇರುತ್ತದೆ.
- ಬರುವ ಪ್ರಮಾಣವೂ ಒಂದೇ ರೀತಿ. ಇದರಲ್ಲಿ ವ್ಯತ್ಯಾಸ ಇರಲಾರದು.
- ಈಗ ಪರಿಸ್ಥಿತಿ ತಿಳಿಯಾಗುವ ತನಕ ದರ ಇಳಿಕೆಯ ಹಾದಿಯಲ್ಲಿ ಇರುತ್ತದೆ.
- ವ್ಯಾಪಾರಿಗಳು ಸ್ಟಾಕು ಹೆಚ್ಚಿಸಿಕೊಂಡ ನಂತರ ಮತ್ತೆ ಬೇಡಿಕೆ ಪ್ರಾರಂಭವಾಗುತ್ತದೆ.
- ಈಗ ಮಾರುಕಟ್ಟೆಯಲ್ಲಿ ಕಡಿಮೆ ದರ ಹಾಕುವವರೇ ಹೊರತು ಒಳ್ಳೆಯ ದರ ಹಾಕುವವರೇ ಇಲ್ಲದಾಗಿದ್ದಾರೆ.
- ಇನ್ನು ಹೊಸ ಅಡಿಕೆ ಮಾರುಕಟ್ಟೆಗೆ ಬರಲಿದ್ದು,ಅದೆಲ್ಲದರ ಅವಕಾಶವನ್ನು ವ್ಯಾಪಾರಿಗಳು ಬಳಸಿಕೊಳ್ಳುವ ಸಾಧ್ಯತೆ ಇದೆ.
ಬೆಳೆಗಾರರು ಏನು ಮಾಡಬೇಕು:
- ದರ ಕುಸಿದಿದೆ ಎಂದು ಯಾವ ಬೆಳೆಗಾರರೂ ಪಾನಿಕ್ ಸೆಲ್ಲಿಂಗ್ ಮಾಡಬೇಡಿ.
- ಆಮದು ಈ ಹಿಂದೆಯೂ ಆಗಿದೆ. ಆ ಸಮಯದಲ್ಲೂ ದರ ಏರಿದೆ. ಈಗ ಬರುವ ಅಡಿಕೆ ನಮ್ಮ ಮಾರುಕಟ್ಟೆಗೆ ಯಾವ ಘಾಸಿಯನ್ನೂ ಉಂಟು ಮಾಡಲಾರದು.
- ಬೆಳೆಗಾರರು ಗುಣಮಟ್ಟದ ಅಡಿಕೆ ಉತ್ಪಾದನೆಯಲ್ಲಿ ಯಾವಾಗಲೂ ರಾಜಿ ಮಾಡಿಕೊಳ್ಳದಿರಿ.
- ನಮ್ಮ ರಾಜ್ಯವೂ ಸೇರಿದಂತೆ, ನೆರೆಯ ಕೇರಳ, ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲೂ ಅಡಿಕೆ ಬೆಳೆಯಲಾಗುತ್ತದೆ.
- ಅಡಿಕೆ ಬೆಳೆಗಾರರು ಸರಕಾರದ ಅಡಿಪಾಯವಾಗಿದ್ದಾರೆ.
- ಹಾಗಾಗಿ ಬೆಳೆಗಾರರ ಹಿತವನ್ನು ನಿರ್ಲಕ್ಷಿಸಿ ಯಾವುದೇ ಸರಕಾರ ನಿರ್ಧಾರ ತೆಗೆದುಕೊಳ್ಳಲಾರದು.
- ಈಗ ತೆಗೆದುಕೊಂಡ ನಿರ್ಧಾರವನ್ನೂ ಹಿಂಪಡೆಯುವ ಅಥವಾ ತಿದ್ದುಪಡಿ ಮಾಡುವ ಸಾಧ್ಯತೆ ಹೆಚ್ಚು ಇದೆ.
- ಹಾಗಾಗಿ ಪ್ಯಾನಿಕ್ ಮಾರಾಟ ಕ್ಕೆ ಮುಂದಾಗಬೇಡಿ. ಭಾರೀ ದರದ ನಿರೀಕ್ಷೆ ಇಟ್ಟುಕೊಳ್ಳದಿರಿ.
ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನದ ಮಾರುಕಟ್ಟೆ ಯ ಕುಸಿತಕ್ಕೆ ಕಾರಣವಾಗುವ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಕೊಡಬಾರದು. ದೆಹಲಿ ಸರಕಾರ ಪಾನ್ ಮಸಾಲ ಬ್ಯಾನ್ ಮಾಡಿದ್ದ ಆದೇಶವನ್ನು ಹಿಂಪಡೆದದ್ದು ಇಂತಹ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುವ ಮೂಲಕ ನಮ್ಮ ಒಳಿತಿಗಾಗಿ ಸುದ್ದಿಗಳನ್ನು ಬಳಸಿಕೊಳ್ಳುವುದನ್ನು ಅಭ್ಯಾಸ ಮಾಡಬೇಕು.