3 ವರ್ಷಕ್ಕೆ ಅಡಿಕೆ ಫಲ ಕೊಡಬೇಕಾದರೆ ಏನೇನು ಮಾಡಬೇಕು?

3 ವರ್ಷ ತುಂಬುತ್ತಿರುವ ಅಡಿಕೆ ಸಸಿ

ಅಡಿಕೆ ಸಸಿ ನೆಟ್ಟು ಅದು ಇಳುವರಿ ಬರಲು ಅಥವಾ ಹೂ ಗೊಂಚಲು ಮೂಡಲು ಕೇವಲ 3 ವರ್ಷ ಸಾಕು. ಅದು ನಾವು ಬೆಳೆಸುವ ಕ್ರಮ ಮತ್ತು ತಳಿ ಗುಣದಿಂದ ನಿರ್ಧಾರವಾಗುತ್ತದೆ. ಬಹುತೇಕ ಎಲ್ಲಾ ತಳಿಗಳೂ ಫಸಲು ಕೊಡುವುದು 1 ವರ್ಷ ವಿಳಂಬವಾದರೂ ಹೂ ಗೊಂಚಲನ್ನು ಕೇವಲ 3 ನೇ ವರ್ಷಕ್ಕೆ ತೋರಿಸುತ್ತದೆ.

ಅಡಿಕೆ ಸಸಿಯಲ್ಲಿ ಹೂ ಗೊಂಚಲು ಬರಲು ಕೆಲವರು 4-5-6 ವರ್ಷ ತನಕವೂ ಕಾಯುತ್ತಾರೆ. ಇದು ಅವರ ಅಸಮರ್ಪಕ ತೋಟ ನಿರ್ವಹಣೆ ವಿಧಾನದಿಂದ ಆಗುವುದು. ಉತ್ತಮವಾದ ಸಸಿ ಆಗಿರಬೇಕು. ಸರಿಯಾಗಿ ಭೂಮಿ ಸಿದ್ದತೆ ಮಾಡಿರಬೇಕು. ಕಾಲ ಕಾಲಕ್ಕೆ ಅಗತ್ಯವಾದ ಗೊಬ್ಬರಕೊಡುತ್ತಾ ಇರಬೇಕು. ಮಗುವನ್ನು ಎಳವೆಯಲ್ಲಿ ಹೇಗೆ ತುಂಬಾ ನಿಗಾ ಕೊಟ್ಟು ಸಾಕುತ್ತೇವೆಯೋ ಹಾಗೆಯೇ ಅಡಿಕೆ ಸಸಿಗಳನ್ನು ನೆಟ್ಟು 2-3 ವರ್ಷ ತನಕ ಸಾಕಿದರೆ ಅದು ತನ್ನ ಸಹಜ ಗುಣದಂತೆ ಹೂ ಗೊಂಚಲು ಹೊರಹಾಕುತ್ತದೆ. ಇದು ಹೊಸತಲ್ಲ. ಹಲವಾರು ಬೆಳೆಗಾರರು 3 ನೇ ವರ್ಷಕ್ಕೆ ಫಲ ಕೊಡಬಲ್ಲ ಪಕ್ವ ಹೂ ಗೊಂಚಲನ್ನು ಬಿಡುವಂತೆ ಸಾಕಿದವರಿದ್ದಾರೆ. ಬಹುತೇಕ ಎಲ್ಲಾ ತಳಿಗಳೂ ಈ ಸಮಯಕ್ಕೆ ಹೂ ಮೊಗ್ಗನ್ನು (ಸಿಂಗಾರ) ಹೊರ ಹಾಕುತ್ತವೆ.

ಅಡಿಕೆ ಸಸಿಯಲ್ಲಿ ಹೂ ಗೊಂಚಲು ಮೂಡುವಿಕೆ:

ಅಡಿಕೆ ಸಸಿಯಲ್ಲಿ ಕಾಂಡದ ರಚನೆ ಕಾಣಿಸಿಕೊಂಡ ಮೇಲೆ ಅದಕ್ಕೆ ಸುತ್ತುವರಿದಂತೆ ಎಲೆಯ ರಕ್ಷಾ ಕವಚ ( ಹಾಳೆ) Leaf sheath) ಬರಲು ಪ್ರಾರಂಭವಾಗುತ್ತದೆ. ಹಾಳೆ ಮೂಡಲು ಪ್ರಾರಂಭವಾಯಿತೆಂದರೆ ಸಸ್ಯಕ್ಕೆ ಪಕ್ವತೆ (Meturity) ಬಂತು ಎಂದರ್ಥ. ಸಸಿ ಪಕ್ವತೆಗೆ ಬಂದ ನಂತರ ಹೂ ಗೊಂಚಲು ಚಿಕ್ಕದಾಗಿ ಮೂಡಲು ಪ್ರಾರಂಭವಾಗುತ್ತದೆ. ಹಾಳೆಯ ಬುಡದಲ್ಲಿ, ಕಾಂಡಕ್ಕೆ ಅಂಟಿಕೊಂಡಂತೆ  ಬಿಳಿ ಬಣ್ಣದ ಒಂದು ರಚನೆ ಕಾಣಿಸಲಾರಂಭಿಸುತ್ತದೆ. ಇದು ತದನಂತರ ಬರುವ ಹಾಳೆಗಳ ಎಡೆಯಲ್ಲಿ ದೊಡ್ಡದಾಗುತ್ತಾ ಬರುತ್ತದೆ. ಸಸಿಗೆ ಸೂಕ್ತ ಆರೈಕೆ ಮತ್ತು ಸೂಕ್ತ ಬೆಳವಣಿಗೆಯ ಅನುಕೂಲ ಕಲ್ಪಿಸಿಕೊಟ್ಟಲ್ಲಿ 2 ವರ್ಷ ತುಂಬಿದಾಗ ಹೂ ಗೊಂಚಲು ಕಣ್ಣಿಗೆ ಕಾಣುವಂತೆ ಇರುತ್ತದೆ. ಅಡಿಕೆ ಸಸಿಯಲ್ಲಿ ಪ್ರತೀ ತಿಂಗಳಿಗೆ ಒಂದರಂತೆ ಎಲೆಗಳು ಮೂಡುತ್ತಾ ಹೊಸತು ಮೂಡಿದಾಗ ಹಳತು ನಿರ್ಗಮಿಸುತ್ತಾ ಬೆಳೆಯುತ್ತಿರುತ್ತದೆ. ಎಳೆ ಪ್ರಾಯದಲ್ಲಿ ಇದು ತಿಂಗಳಿಗೊಮ್ಮೆ ಬರುವುದಿಲ್ಲ. ಎರಡು ತಿಂಗಳ ತನಕವೂ ಬೆಳವಣಿಗೆಯಲ್ಲಿ ಇರುತ್ತದೆ.  ಸಾಧಾರಣವಾಗಿ ಬುಡದ ಬೊಡ್ಡೆ ಕಾಣಿಸಿಕೊಂಡ ನಂತರ 3-4 ಗರಿಗಳು ಪಕ್ವವಾಗಿ ಉದುರಿದ ತರುವಾಯ ಹೂ ಗೊಂಚಲಿನ ರಚನೆ ಕಾಣಿಸುತ್ತದೆ. ಉತ್ತಮ ಆರೈಕೆಯಲ್ಲಿ ಅಡಿಕೆ ಸಸಿಯು 1 ವರ್ಷ 6 ತಿಂಗಳಿಗೆ ಬೊಡ್ಡೆ ಕಾಣಿಸುವಷ್ಟು ಬೆಳೆಯುತ್ತದೆ. ನಂತರ 4-5 ಹಾಳೆ ಉದುರಿದ ಮೇಲೆ ಹಾಳೆಯ ಒಳಗೆ  ಸ್ವಲ್ಪ ಉಬ್ಬಿಕೊಂಡಂತೆ ಹೂ ಗೊಂಚಲು ಕಾಣಿಸುತ್ತದೆ. ಇದು ಹುಸಿ ಹೂ ಗೊಂಚಲಾಗಿರುತ್ತದೆ. ಮುಂದುವರಿಯುತ್ತಾ ಉದ್ದವಾಗಿ ದಪ್ಪವಾಗಿ ಅದು ಪಕ್ವ ಹೂ ಗೊಂಚಲು ಅಗಿರುತ್ತದೆ. ಪಕ್ವ ಹೂ ಗೊಂಚಲಿನಲ್ಲಿ ಗಂಡು ಹೂವುಗಳು ಮತ್ತು ಹೆಣ್ಣು ಹೂವುಗಳು ಬೇಕಾದ ಅನುಪಾತದಲ್ಲಿ ಇರುತ್ತದೆ.

3 ವರ್ಷ ತುಂಬುತ್ತಿರುವ ಅಡಿಕೆ ಸಸಿ
3 ವರ್ಷ ತುಂಬುತ್ತಿರುವ ಅಡಿಕೆ ಸಸಿ

ತಳಿ ಗುಣವೂ ಪ್ರಾಮುಖ್ಯ:

 ಎಷ್ಟೇ ಪೌಷ್ಟಿಕ ಆಹಾರ ಸೇವಿಸಿದರೂ  ಕೆಲವರು ಬೇಗ ಪಕ್ವತೆಗೆ ಬರುವುದಿಲ್ಲ. ಕೆಲವರು ಹಿತಮಿತ ಆಹಾರದಲ್ಲೂ  ಬೇಗ ಪಕ್ವತೆಗೆ ಬರುತ್ತಾರೆ. ಅದೇ ರೀತಿಯಲ್ಲಿ ಅಡಿಕೆ ಸಸಿಗಳೂ ಸಹ. ವಂಶಗುಣದಲ್ಲಿ  ಕೆಲವು ತಳಿಗಳು ಬೇಗ ಹೂ ಗೊಂಚಲು ಬಿಡುವಷ್ಟು ಪಕ್ವತೆಗೆ ಬರುತ್ತವೆ. ಉದಾಹರಣೆಗೆ ಮಂಗಳ ತಳಿ. ಇದಲ್ಲದೆ ಸ್ಥಳೀಯ ತಳಿಗಳಿಗೆ ಸುಮಾರು  8-10 ತಿಂಗಳು ಹೆಚ್ಚು ಕಾಲಾವಧಿ ಬೇಕಾಗುತ್ತದೆ. ಅದಕ್ಕನುಗುಣವಾಗಿ ಅವುಗಳಲ್ಲಿ ಹೂಗೊಂಚಲು ಮೂಡುತ್ತದೆ. ಸ್ಥಳೀಯ ತಳಿಗಳಲ್ಲೂ ಸಮರ್ಪಕವಾಗಿ ಪೋಷಣೆ ಮಾಡಿದಲ್ಲಿ 3 ವರ್ಷಕ್ಕೆ ಅಪಕ್ವ ಹೂ ಗೊಂಚಲೂ, 4 ವರ್ಷಕ್ಕೆ ಅರೆ ಪಕ್ವ ಹೂ ಗೊಂಚಲೂ, 5 ವರ್ಷಕ್ಕೆ ಕಾಲಿಡುವಾಗ ಫಲ ಕೊಡಬಲ್ಲ ಪಕ್ವ ಹೂ ಗೊಂಚಲೂ ಬರುತ್ತದೆ. ಕೆಲವು ಮಿಶ್ರ ಪರಾಗಸ್ಪರ್ಷಕ್ಕೊಳಗಾಗಿ  ಬೇಗ ಹೂ ಗೊಂಚಲು ಮೂಡುವುದೂ ಇದೆ. ಸಾಗರದ ಸ್ಥಳೀಯ ತಳಿ, ಸಿರಸಿಯ ಸ್ಥಳೀಯ ತಳಿ ಉತ್ತಮ ಆರೈಕೆಯಲ್ಲಿ 4 ವರ್ಷ ತುಂಬಿದಾಗ ಫಲ ಕೊಟ್ಟ ಉದಾಹರಣೆ ಇದೆ. ದಕ್ಷಿಣ ಕನ್ನಡದ ಸ್ಥಳೀಯ ತಳಿ ಸುಮಾರಾಗಿ 5 ವರ್ಷಕ್ಕೆ ಫಲ ಕೊಡಬಲ್ಲ ಹೂ ಗೊಂಚಲು ಬಿಡುತ್ತದೆ. ಬಿಡುಗಡೆಯಾದ ತಳಿಗಳಾದ ಮೋಹಿತ್ ನಗರ, ಸುಮಂಗಳ, ಶ್ರೀಮಂಗಳ, ಶತಮಂಗಳ, ಶ್ರೀಮಂಗಳ, ಸ್ವರ್ಣ ಮಂಗಳ ಎಲ್ಲವೂ 4 ವರ್ಷಕ್ಕೆ ಫಲ ಕೊಡಬಲ್ಲ ಹೂ ಗೊಂಚಲು ಬಿಡುತ್ತವೆ. ಇವೆಲ್ಲವೂ ತಳಿ ಶುದ್ಧತೆಯ ಮೇಲೆ ಮತ್ತು  ಆರೈಕೆಯ ಮೇಲೆ ಅವಲಂಭಿಸಿದೆ.

ಬೇಗ ಫಲ ಕೊಡಲು ಹೇಗೆ ಆರೈಕೆ ಮಾಡಬೇಕು?

ನೆಡುವ ಅಡಿಕೆ ಸಸಿಗಳನ್ನು ನಂಬಲರ್ಹ ಮೂಲಗಳಿಂದ ಆಯ್ಕೆ ಮಾಡುವುದು ಪ್ರಾಮುಖ್ಯ. ಗಿಡಗಳು ಸುಮಾರು 6 ತಿಂಗಳ ಬೆಳವಣಿಗೆಯವು ಆಗಿದ್ದರೆ ಒಳ್ಳೆಯದು. ಗಿಡಕ್ಕೆ ಒಂದು ವರ್ಷ ಆಗಿದ್ದರೆ ಸ್ವಲ್ಪ ಬೆಳವಣಿಗೆ ಕುಂಠಿತವಾಗುತ್ತದೆ. ಸಸಿಗಳನ್ನು ನೆಡುವಾಗ ಹೊಂಡ ಮಾಡಲು ಸಾಧ್ಯವಿದ್ದರೆ ಮಾಡಿ. ಆದರೆ ಮಣ್ಣು ತುಂಬಿಸಿ ನೆಡಿ. ಸಮಾಧಾನಕ್ಕಾಗಿ ½ ಅಥವಾ ¾ ಅಡಿಯಷ್ಟು ಹೊಂಡ ಉಳಿಸಬಹುದು. ಹೀಗೆ ನೆಟ್ಟರೆ ನೀರು ನಿಲ್ಲುವ ಸಂಧರ್ಭಗಳಲ್ಲಿ ಕೆಳಗಿನ ಮಣ್ಣು ಅದನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ಬೇರುಗಳಿಗೆ ತಕ್ಷಣದಿಂದಲೇ ಬೆಳೆಯಲು ಸಡಿಲವಾದ ಮಣ್ಣು ಸಿಗುತ್ತದೆ.  ನೆಡುವಾಗ ಮಣ್ಣಿಗೆ ½ ಬುಟ್ಟಿಯಷ್ಟು ಹುಡಿಯಾದ ಕಾಂಪೋಸ್ಟು ಗೊಬ್ಬರವನ್ನು ಹಾಕಿ ನೆಡುವ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಸಸಿ ನೆಡುವಾಗ ಪ್ರತೀ ಗಿಡದ ಬುಡದಲ್ಲೂ ನೀರು ನಿಲ್ಲದಂತೆ ಬಸಿಗಾಲುವೆ ಮಾಡಿ. ಎತ್ತರ ತಗ್ಗಿನ ಭೂಮಿಯಾದರೂ ಬಸಿಗಾಲುವೆ ಮಾಡುವುದು ಸೂಕ್ತ. ಬಸಿಗಾಲುವೆ ಮಾಡುವುದರಿಂದ ಮಣ್ಣಿನಲ್ಲಿ ಹೆಚ್ಚು ಹೊತ್ತು ತಂಗುವ ನೀರಿನಿಂದ ಉಂಟಾಗುವ  ಬೇರಿನ ಕೊಳೆತ ನಿಯಂತ್ರಣವಾಗುತ್ತದೆ. ಒಂದು ದಿನಕ್ಕಿಂತ ಹೆಚ್ಚು ಸಮಯ ಬುಡ ಭಾಗದಲ್ಲಿ ನೀರು ನಿಂತರೆ ಆ ಈರು ಹಳಸಿ ಕವಲು ಬೇರುಗಳು ಕೊಳೆಯಲು ಪ್ರಾರಂಭವಾಗುತ್ತದೆ. ಮತ್ತೆ ಹೊಸ ಬೇರು ಬರಬೇಕಾಗುತ್ತದೆ. ಆಗ ಬೆಳವಣಿಗೆ ಕುಂಠಿತವಾಗುತ್ತದೆ.

3 ವರ್ಷ ತುಂಬುತ್ತಿರುವ ಅಡಿಕೆ ಸಸಿಗಳು
3 ವರ್ಷ ತುಂಬುತ್ತಿರುವ ಅಡಿಕೆ ಸಸಿಗಳು

ಮಳೆಗಾಲ ಬರುವ ಮುಂಚೆ ನಾಟಿ ಮಾಡಬೇಕು. ಇಲ್ಲವೇ ಮಳೆ ಮುಗಿಯುವಾಗ ನಾಟಿ ಮಾಡಬೇಕು. ಬುಡದಲ್ಲಿ ಮಣ್ಣು ಕಲಸಿ ಹಾಕಿದ ತರಹ ಆಗಬಾರದು.ಬುಡ ಭಾಗ ಸಡಿಲವಾಗಿರಬೇಕು. ಅಂಟು ಗೋಡು ಮಣ್ಣು ಬುಡದಲ್ಲಿ ಇದ್ದರೆ ಬೇರಿನ ಉಸಿರಾಟಕ್ಕೆ ತೊಂದರೆ ಆಗಿ ಬೆಳವಣಿಗೆ ಕುಂಠಿತವಾಗುತ್ತದೆ. ಅದಕ್ಕಾಗಿ ಬುಡಕ್ಕೆ ಕಾಂಪೋಸ್ಟು ಗೊಬ್ಬರ ಕೊಡಬೇಕು. ನೆಡುವ ಸಮಯದಲ್ಲಿ  ಪ್ರತೀ ಸಸಿಗೆ 50 ಗ್ರಾಂ DAP ಅಥವಾ 75 ಗ್ರಾಂ 20:20:0:13 ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಬೇಕು. ಇದು ಬೇರು ಬರಲು ಸಹಕಾರಿ. 100  ಗ್ರಾಂ ತನಕ ಶಿಲಾ ರಂಜಕ (ರಾಕ್ ಫೋಸ್ಫೇಟ್) ಸಹ ಬಳಸಬಹುದು.  ನೆಡುವ ಸಮಯದಲ್ಲಿ ಬಿಸಿಲು ಇದ್ದರೆ ಕಡ್ದಾಯವಾಗಿ ಆಗಲೇ ನೆರಳು ಮಾಡಬೇಕು. ಎಲೆಗಳಿಗೆ ಬಿಸಿಲಿನ ಗಾಯ ಆಗಲು ಬಿಡಬಾರದು. ಬೇಸಿಗೆಯ ಸಮಯದಲ್ಲಿ  ಕೆಂಪು ಮೈಟ್  (red mite) ಮತ್ತು ಬಿಳಿ ಮೈಟ್  ಹಾಗೂ ಸುಳಿ ತಿಗಣೆ (spindle bug)ನಿಯಂತ್ರಣಕ್ಕೆ ಅಗತ್ಯವಾಗಿ ಕ್ರಮ ಕೈಗೊಳ್ಳಬೇಕು. ನೆಟ್ಟ ನಂತರ ಪ್ರತೀ ತಿಂಗಳೂ ಸಾವಯವ  (2-3 ಕಿಲೋ) ಅಥವಾ ರಾಸಾಯನಿಕ ಗೊಬ್ಬರ (NPK 50 ಗ್ರಾಂ) ಕೊಡುತ್ತಾ ಇರಬೇಕು. ವರ್ಷದ ಎಲ್ಲಾ ಸಮಯದಲ್ಲೂ ಎಲೆಗಳು ಹಚ್ಚ ಹಸುರಾಗಿ ಇರುವಂತೆ ನೋಡಿಕೊಂಡರೆ ಸಸ್ಯಗಳ ಬೆಳವಣಿಗೆ ತೃಪ್ತಿಕರವಾಗಿ ಇರುತ್ತದೆ. ಬುಡದಲ್ಲಿ ಕಳೆಗಳು ಬೆಳೆಯದಂತೆ ಎರಡು ವರ್ಷ ಕಾಲ ಸಾವಯವ ತ್ಯಾಜ್ಯಗಳನ್ನು ಮುಚ್ಚಿ ಕಳೆ ನಿಯಂತ್ರಣ ಮಾಡಬೇಕು.  ಕಳೆಗಳು ಬೆಳೆದರೆ ಸಸ್ಯ ಬೆಳವಣಿಗೆಗೆ ತೊಂದರೆ ಆಗುತ್ತದೆ.ಬಾಳೆಯನ್ನು ಮೊದಲ ಮೂರು ವರ್ಷ ತನಕ ನಾಟಿ ಮಾಡಬಾರದು. ಬದುಗಳಲ್ಲಿ  ಮಾತ್ರ ನೆಡಬಹುದು.

ಗಿಡ ಬೆಳೆಯುತ್ತಿರುವಾಗ ಯಾವಾಗಲೂ ಬುಡ ಮಾತ್ರ ಗಮನಿಸುವುದಲ್ಲ. ಸುಳಿ ಭಾಗನ್ನೂ  ಗಮನಿಸುತ್ತಾ ಇರಬೇಕು.ಸುಳಿ ಭಾಗ ನೇರವಾಗಿ ಉದ್ದವಾಗಿ ಇಇರಬೇಕು( ಕೆಳಗಿನ ಚಿತ್ರ ಗಮನಿಸಿ) ಬಿಡಿಸಿಕೊಳ್ಳದ ಸುಳಿ  ಗಿಡ್ಡವಾಗಿದ್ದರೆ, ಅಥವಾ ತೂತು ತೂತು ಇದ್ದರೆ ತಕ್ಷಣ ಕೀಟ ನಿಯಂತ್ರಣ ಮಾಡಬೇಕು. ಇಲ್ಲವಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಇಳುವರಿ ತಡವಾಗುತ್ತದೆ.

ಸುಳಿ ನೇರವಾಗಿ ಇರಬೇಕು

ಯಾಕೆ 5 ವರ್ಷ ಆದರೂ ಫಲ ಪ್ರಾರಂಭವಾಗುವುದಿಲ್ಲ:

ಬಹಳಷ್ಟು ಅಡಿಕೆ ಬೆಳೆಯುವವರು ಸಸಿ ನೆಟ್ಟ ಮೊದಲ ವರ್ಷ ದಕ್ಷಿಣ ದಿಕ್ಕಿಗೆ ಆಂಶಿಕ ನೆರಳು ಮಾಡುವುದಿಲ್ಲ.  ನೆರಳು ಮಾಡದಿದ್ದರೆ ಮೈಟ್ ತೊಂದರೆ ಹೆಚ್ಚಾಗುತ್ತದೆ. ಸೂರ್ಯನ ಪ್ರಖರ ಬಿಸಿಲಿಗೆ ಎಲೆಗಳ ಉಸಿರಾಟಕ್ಕೆ ಆಹಾರ ಸಂಗ್ರಹಕ್ಕೆ ತೊಂದರೆಯುಂಟಾಗುತ್ತದೆ.  ಕೆಲವು ಕಡೆ ಬುಡ ಭಾಗದಲ್ಲಿ ಮಣ್ಣು ಹಾಕಿ ಬೇರಿನ ಉಸಿರಾಟಕ್ಕೆ ತೊಂದರೆ ಆಗಿರುತ್ತದೆ. ಕೆಲವರು  ಕುಂಠಿತ ಬೆಳವಣಿಗೆ ಗಿಡವನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆ. ಕಳೆಗಳನ್ನು ಹೆಚ್ಚು ಬೆಳಯಲು ಬಿಡುವುದು ಕೆಲವು ಕಡೆ ಕಾಣಬಹುದು. ಬಸಿಗಾಲುವೆ ಇಲ್ಲದೆ ಇದ್ದರೆ ಅಡಿಕೆ ಸಸಿ ಬೆಳವಣಿಗೆ ಆಗುವುದೇ ಇಲ್ಲ ಆದರೂ ಮಳೆಗಾಲದಲ್ಲಿ ಬೆಳೆದಷ್ಟೇ ಸೊರಗುತ್ತದೆ. ಸಾವಯವ ವಿಧಾನದಲ್ಲೇ ಬೆಳೆಸುವುದಿದ್ದರೂ ಅಧಿಕ ಪ್ರಮಾಣದಲ್ಲಿ ನಿರಂತರವಾಗಿ ಗೊಬ್ಬರ ಕೊಡುತ್ತಾ ಇರಬೇಕು. ಮಳೆ ನೀರು ತಕ್ಷಣ ಇಳಿದು ಹೋಗದಂತ ಅಂಟು ಮಣ್ಣಿನಲ್ಲಿ ಸಸಿಗಳ ಬೆಳವಣಿಗೆ ಚೆನ್ನಾಗಿ ಆಗುವುದಿಲ್ಲ.

ಬುಡದ ಬೊಡ್ಡೆ ಭಾಗಕ್ಕೆ ತಾಗುವಂತೆ ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಕಬಾರದು. 6 ಇಂಚು ದೂರ ಹಾಕಬೇಕು.  ಮೊದಲ ಎರಡು ವರ್ಷ ಹನಿ ನೀರಾವರಿ ಮಾಡಿದರೆ ಪ್ರತೀ ಗಿಡಕ್ಕೆ ಏಕಪ್ರಕಾರ ನೀರು ಲಭ್ಯವಾಗುತ್ತದೆ.

ಗಿಡ ತೆಗೆಯುವುದು:

ಎಲ್ಲಾ ಗಿಡಗಳೂ ಏಕ ಪ್ರಕಾರವಾಗಿ ಬೆಳೆಯುತ್ತಾ ಇರಬೇಕು, ನೆಟ್ಟ ನಂತರ 2 ತಿಂಗಳಲ್ಲಿ ಗಿಡ ಬೆಳವಣಿಗೆ ಆಗದೆ ಇದ್ದದ್ದು ಇದ್ದರೆ ಅದನ್ನು ತೆಗೆದು ಬೇರೆ ನೆಡಬೇಕು. ಹಾಗೆಯೇ ಮುಂದೆ ಪ್ರತೀ 2 ತಿಂಗಳಿಗೊಮ್ಮೆ ಬೆಳವಣಿಗೆ ಕುಂಠಿತವಾದ ಗಿಡಗಳಿದ್ದರೆ ತೆಗೆದು ಬೇರೆ ನೆಡಬೇಕು.  ನೆಡುವಾಗ ಆ ಬುಡದಲ್ಲಿ ಕೊಳೆತಿರುವ ಸಮಸ್ಯೆ ಇದ್ದರೆ ಶಿಲೀಂದ್ರ ನಾಶಕ ಸುರಿದು  ನಾಟಿ ಮಾಡಬೇಕು. ಬೇರು ಬಂದಿರದಿದ್ದರೆ ಬುಡಕ್ಕೆ 10 ಗ್ರಾಂ ಫೋರೇಟ್ ಹಾಕಿ ನೆಡಬೇಕು.  ಸಸಿಗಳ ಬುಡದಲ್ಲಿ ಮಣ್ಣು ಕಾಣದಂತೆ ಸಾವಯವ ತ್ಯಾಜ್ಯ ಹಾಕಿ ಮುಚ್ಚಲೇ ಬೇಕು.

ಎರಡನೇ ವರ್ಷವೂ ಪ್ರತೀ ತಿಂಗಳೂ ಗೊಬ್ಬರ ಕೊಡುತ್ತಾ ಸಾಕಬೇಕು. ಮೈಟ್ ಮತ್ತು ಸುಳಿ ತಿಗಣೆ ಈಗ ಪ್ರಮುಖ ಕೀಟವಾಗಿದ್ದು, ಅದನ್ನು ಗಮನಿಸಿ ಉಪಚಾರ ಮಾಡುತ್ತಾ ಇರಬೇಕು. ಎಲೆಗಳು ಹಚ್ಚ ಹಸುರಾಗಿ ಇರಬೇಕು. ಹಳದಿಯಾದರೆ ತಕ್ಷಣ ಕಾರಣ ಏನು ಎಂದು ಗಮನಿಸಿ ಉಪಚಾರ ಮಾಡಬೇಕು. ಹೀಗೆ ಆರೈಕೆ ಮಾಡಿದರೆ  ಎರಡು ವರ್ಷ ಭರ್ತಿಯಾಗುವಾಗುವಾಗ 1 ಅಡಿಯಷ್ಟು ಕಾಂಡದ ಬೆಳವಣಿಗೆ ಆಗಿರುತ್ತದೆ. ಆಗ ಬರುವ ಹಾಳೆಯ ಸಂದಿನಲ್ಲಿ  ಹೂ ಮೊಗ್ಗನ್ನು ಗಮನಿಸಬಹುದು. ಮುಂದೆ ಇದು ಬೆಳವಣಿಗೆ ಆಗುತ್ತಿದ್ದಂತೆ ಗಾತ್ರ ದೊಡ್ದದಾಗುತ್ತಾ ಬರುತ್ತದೆ.

1 ವರ್ಷ 6 ತಿಂಗಳಿಗೆ ಬೊಡ್ದೆ ಬಿಟ್ಟ ಅಡಿಕೆ ಸಸಿ
1 ವರ್ಷ 6 ತಿಂಗಳಿಗೆ ಬೊಡ್ದೆ ಬಿಟ್ಟ ಅಡಿಕೆ ಸಸಿ

ಬೇಗ ಹೂ ಗೊಂಚಲು ಬಂದರೂ ಅದರಲ್ಲಿ ಕಾಯಿ ಕಟ್ಟಲು ಪ್ರಾರಂಭವಾಗುವುದು  4 ವರ್ಷದ ತರುವಾಯ. ಮೊದಲು ಬರುವ ಹೂ ಗೊಂಚಲಿನಲ್ಲಿ ಹೆಣ್ಣು ಹೂವುಗಳು ಇರುವುದಿಲ್ಲ. ಇದ್ದರೂ ಕಡಿಮೆ ಇರುತ್ತದೆ. ಹಾಗಾಗಿ ಅದು ಪೊಳ್ಳು ಹೂ ಗೊಂಚಲು ಆಗಿರುತ್ತದೆ. ಕಾಯಿ ಕಚ್ಚಲು 4-5 ವರ್ಷ ಆದರೆ ಆ ಮರದ ಬಾಳ್ವಿಕೆ ಹೆಚ್ಚು ಮತ್ತು ಅದರಲ್ಲಿ ಕಾಯಿ ಉಳಿಯುವ ಪ್ರಮಾಣವೂ ಹೆಚ್ಚು.

ಅಂತರ ಮತ್ತು ಬೆಳಕು:

ಅಡಿಕೆ ಸಸಿ ನಾಟಿಗೆ ಸೂಕ್ತ ಅಂತರ 9X9 ಅಥವಾ 9X10 ಈ ಅಂತರದಲ್ಲಿ ಸಸ್ಯಕ್ಕೆ ಅಗತ್ಯವಿರುವಷ್ಟು ಗಾಳಿ ಬೆಳಕು ಲಭ್ಯವಾಗುತ್ತದೆ. ಮೊದಲೇ ಹೇಳಿದಂತೆ ಮೂರು ವರ್ಷದ ತನಕ ಬೆಳವಣಿಗೆಗೆ ತಡೆಯಾಗುವ ಬಾಳೆಯಂತಹ ಬೆಳೆ ಬೆಳೆಯದಿದ್ದರೆ ಸರಿಯಾಗಿ ಬಿಸಿಲು ದೊರೆತು ಸಸ್ಯಗಳು ಸರಿಯಾಗಿ ಆಹಾರ ಸಂಗ್ರಹಣೆ ಮಾಡುತ್ತಾ ವೇಗವಾಗಿ ಬೆಳೆಯುತ್ತದೆ.ಗಂಟುಗಳೂ ಹತ್ತಿರವಗಿರುತ್ತದೆ.

ಅಡಿಕೆ ಸಸಿ ಮೂರು ವರ್ಷಕ್ಕೆ ಹೂ ಮೊಗ್ಗು ಬಿಡಲು ತಯಾರಾಗುವುದರಲ್ಲಿ ಅಚ್ಚರಿ ಏನೂ ಇಲ್ಲ. ಇದು ಪಾಲನೆ ಪೋಷಣೆಯಲ್ಲಿ ನಿರ್ಧಾರವಾಗುವುದು.ಹೆಚ್ಚಿನ ನಿಗಾ ವಹಿಸಿ ಬೆಳೆಯಬೇಕು. ಯಾವಾಗಲೂ ನೀರು ನಿಂತು ಅದು ಹಳಸದಂತೆ ( Water Toxicity) ಆಗದಂತೆ ನೋಡಿಕೊಂಡರೆ ಬೆಳೆವಣಿಗೆಗೆ ಅಡೆತಡೆ ಉಂಟಾಗದೆ ತ್ವರಿತ ಇಳುವರಿ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!