ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು.
ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ ಹೆಚ್ಚು. ಇದರ ನಿಯಂತ್ರಣ ಹೀಗೆ.
- ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ ಬಂಚೀ ಟಾಪ್ ರೋಗ ಮತ್ತು ಅದರ ಇನ್ನೊಂದು ಭಾಗ ಸುಳಿ ಕೊಳೆ ರೋಗ.
- ಈ ಎರಡೂ ಯಾವಾಗ ಬರುತ್ತದೆ ಎಂದು ಗೊತ್ತೇ ಆಗುವುದಿಲ್ಲ.
- ರೋಗ ಬಂದ ನಂತರ ಆ ಬಾಳೆ ಸತ್ತೇ ಹೋಗುತ್ತದೆ.
- ಗಡ್ಡೆಯೂ ಕೊಳೆತು ಹೋಗುತ್ತದೆ.
- ಇದನ್ನು ಸುಳಿ ಕೊಳೆ ರೋಗ ಎಂತಲೂ ಹೇಳಬಹುದು.
- ವೈರಸ್ ರೋಗದ ಒಂದು ಲಕ್ಷಣ ಎಂದೂ ಹೇಳಬಹುದು.
ಈ ಸಮಸ್ಯೆ ಪೂರ್ವ ಭಾವಿಯಾಗಿ ಗೊತ್ತೇ ಆಗುವುದಿಲ್ಲ. ಸುಳಿ ಹೋದ ನಂತರ ಆ ಬಾಳೆ ಹೋಯಿತೆಂದೇ ಅರ್ಥ. ಅದರ ಕಂದೂ ಸಹ ಉಪಯೋಗಕ್ಕೆ ಬರುವುದಿಲ್ಲ. ಅದು ನೀರು ಕಂದುಗಳಾಗಿರುತ್ತವೆ.
ಚಿನ್ಹೆಗಳು:
- ಬಾಳೆಯ ಸಸ್ಯ ಚೆನ್ನಾಗಿಯೇ ಬೆಳೆಯುತ್ತಿರುತ್ತದೆ.
- ಒಮ್ಮೆಲೇ ಸುಳಿ ಭಾಗ ಎಲೆ ಮಾತ್ರ ಸಣ್ಣದಾಗಿ ಕೆಳಮುಖವಾಗಿ ಬಾಗುತ್ತದೆ.
- ಕ್ರಮೇಣ ಕೆಳ ಭಾಗದ ಎಲೆಗಳೂ ಸಹ ಕೊಳೆಯಲಾರಂಭಿಸುತ್ತದೆ.
- ಎಲೆಗಳ ದಂಟಿನ ಭಾಗದ ಬಣ್ಣ ಬದಲಾಗಿ ವೈರಸ್ ರೋಗದ ಚಿನ್ಹೆ ಕಾಣಿಸುತ್ತದೆ.
- ಕಂದುಗಳು ಸಹಜವಾಗಿರುವುದಿಲ್ಲ.
- ಸುಳಿ ಬಾಗ ಕೊಳೆಯಲಾರಂಭಿಸುತ್ತದೆ.
- ಕೊಳೆಯುವಿಕೆ ಗಡ್ಡೆ ತನಕ ವ್ಯಾಪಿಸಿ ಇಡೀ ಬಾಳೆ ಸತ್ತು ಹೋಗುತ್ತದೆ.
- ಕೆಲವೊಂದು ಸಂಧರ್ಭಗಳಲ್ಲಿ ಬಾಳೆ ಬದುಕಿಕೊಳ್ಳುವುದೂ ಇದೆ.
ಇದನ್ನು ಪೂರ್ತಿಯಾಗಿ ಕೊಳೆಯುವ ರೋಗ ಎಂತಲೂ ಹೇಳಲು ಸಾಧ್ಯವಿಲ್ಲ.ವೈರಸ್ ರೋಗದ ಬಹುತೇಕ ಕುರುಹುಗಳು ಕಂಡು ಬರುತ್ತವೆ.
ಪರಿಹಾರ :
- ಬಾಳೆಗೆ ಈ ರೀತಿ ಆದರೆ ಆದನ್ನು ತೆಗೆದು ನಾಶ ಮಾಡಿ
- ಉಳಿಸಿಕೊಳ್ಲಲು ಹೋದರೆ , ತೆಗೆಯುವುದು ತಡವಾದರೆ ಬೇರೆ ಬಾಳೆಗಳಿಗೆ ಇದು ಹರಡುತ್ತದೆ.
- ಇದರ ಕಂದು ಆರೋಗ್ಯವಾಗಿದೆ ಎಂಬ ಖಾತ್ರಿ ಇದ್ದರೆ, ಅದನ್ನು ಉಳಿಸಿ. ಬೇರೆ ಕಡೆ ನಾಟಿ ಮಾಡಲು ಉಪಯೋಗಿಸದಿರಿ.
- ಕೆಲವು ಸಂದರ್ಭಗಳಲ್ಲಿ ಬುಡಕ್ಕೆ ಮಣ್ಣು ಏರಿಸಿದರೆ ಇದು ಸರಿಯಾಗುತ್ತದೆ.
ಇದಕ್ಕೆ ಯಾವುದೇ ಕೀಟ ನಾಶಕ ಅಥವಾ ರೋಗ ನಾಶಕ ಫಲ ಕೊಡಲಾರದು. ನಮಗೆ ಗೋಚರವಾಗುವಾಗಲೇ ಇದು ಮಿತಿ ಮೀರಿರುತ್ತದೆ. ಪಾರಂಭಿಕ ಹಂತದಲ್ಲಿ ತುದಿ ಭಾಗ ಕಡಿದು ಬೋರ್ಡೋ ದ್ರಾವಣ, ಅಥವಾ ಬಾವಿಸ್ಟಿನ್ ದ್ರಾವಣವನ್ನು ಸಿಂಪಡಿಸಿ ಮತ್ತು ಬುಡಕ್ಕೆ ಡ್ರೆಂಚಿಂಗ್ ಮಾಡಿದರೆ, ವೈರಸ್ ರೋಗ ಬಾಧಿತ ಅಲ್ಲದಿದ್ದರೆ ಹೊಸ ಸುಳಿ ಬರುವುದುಂಟು.
ಮುನ್ನೆಚರಿಕೆ:
- ಬಾಳೆಯ ಬುಡದಲ್ಲಿ ನೀರು ನಿಲ್ಲದಿರುವಂತೆ ಬಸಿ ವ್ಯವಸ್ಥೆ ಮಾಡಿಕೊಳ್ಳಿ.
- ಇದು ಬಹು ರೋಗದ ಚಿನ್ಹೆಯಾದ ಕಾರಣ ಇದೇ ಪರಿಹಾರ ಕ್ರಮವನ್ನು ಹೇಳಲಿಕ್ಕಾಗುವುದಿಲ್ಲ.
ಬಾಳೆಗೆ ಬರುವ, ಕ್ರೌನ್ ರಾಟ್ , ಸ್ಟೆಮ್ ಎಂಡ್ ರಾಟ್, ಸುಡೋ ಸ್ಟೆಮ್ ಹಾರ್ಟ್ ರಾಟ್, ಹೆಡ್ ರಾಟ್ ಬ್ಯಾಕ್ಟೀರಿಯಲ್ ವಿಲ್ಟ್ ಮತ್ತು ಬನಾನಾ ಸ್ಟೀಕ್ ವೈರಸ್ ಎಲ್ಲವೂ ಸೇರಿರುವ ರೋಗ.
- ಪ್ರಾರಂಭಿಕ ಹಂತದಲ್ಲಿ ಇದಕ್ಕೆ 3 ಗ್ರಾಂ ಕಾಪರ್ ಆಕ್ಸೀ ಕ್ಲೋರೈಡ್ ಅನ್ನು ಬುಡಕ್ಕೆ2-3 ಲೀ ಮತ್ತು ಸುಳಿಗೆ ಸಿಂಪಡಿಸಿ ಪ್ರಯತ್ನ ಮಾಡಬಹುದು.
- ಕೆಲವೊಮ್ಮೆ ಶಿಲೀಂದ್ರ ಒಂದೇ ಇದಕ್ಕೆ ಕಾರಣವಾಗಿದ್ದರೆ ಸರಿಯಾಗುವ ಸಾಧ್ಯತೆ ಇದೆ.
- ಜೌಗು ಆಗುವ ಕಡೆ ಬಾಳೆಯನ್ನು ನಾಟಿ ಮಾಡದಿರಿ. ಮಳೆಗಾಲದಲ್ಲಿ ನಾಟಿ ಮಾಡುವುದು ಬೇಡ.
- ಗಡ್ಡೆ ನಾಟಿ ಮಾಡುವಾಗ ಬಾಳೆಯ ಮೂಲವನ್ನು ತಿಳಿದೇ ಖರೀದಿ ಮಾಡಿ.
- ತಾಯಿ ಬಾಳೆಗೆ ರೋಗ ಸೋಂಕು ತಗಲಿದ್ದರೆ ಆ ಬಾಳೆಯನ್ನು ಆಯ್ಕೆ ಮಾಡಬೇಡಿ. ಇದು ಸಸ್ಯ ಮೂಲದಿಂದಲೇ ಬರುತ್ತದೆ ಎನ್ನುತ್ತಾರೆ.ಆದರೆ ಇದು ಪೂರ್ಣವಾಗಿ ಒಪ್ಪುವಂತದ್ದಲ್ಲ.
ಬಾಳೆ ನೆಟ್ಟ ನಂತರ ಆಗಾಗ ಸುಳಿಯನ್ನು ಗಮನಿಸುತ್ತಿರಬೇಕು. ಇದು ಮಳೆಗಾಲ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ ಜಾಸ್ತಿ. ಹೆಚ್ಚಿನ ಹಾನಿ ಇಲ್ಲ. ಸುಮಾರು 2-3 % ಮಾತ್ರ ಈ ಸಮಸ್ಯೆಗೆ ಒಳಗಾಗುತ್ತದೆ.