ಬಹಳ ಜನ ಅನನಾಸು ದೊಡ್ದದಾಗುವುದಕ್ಕೆ ಅದರ ಜುಟ್ಟಿಗೆ ರಾಸಾಯನಿಕ ಹಾಕಬೇಕು ಎಂದು ತಿಳಿದಿದ್ದಾರೆ. ಅದು ತಪ್ಪು. ಸರಳ ಕ್ರಮದಲ್ಲಿ ಜುಟ್ಟನ್ನು ಸಣ್ಣದು ಮಾಡಿ, ಕಾಯಿ ದೊಡ್ಡದಾಗುವಂತೆ ಮಾಡಬಹುದು.
ಅನನಾಸು ಬೆಳೆದವರು ಮಾರಾಟ ಮಾಡುವಾಗ ಜುಟ್ಟು ದೊಡ್ದದಿದ್ದರೆ ಕೊಳ್ಳುವವ ಕೇಳುತ್ತಾನೆ, ಕಾಯಿಗೆಷ್ಟು ಬೆಲೆ, ಜುಟ್ಟಿಗೆಷ್ಟು ಬೆಲೆ ಎಂದು. ಜುಟ್ಟು ಸಣ್ಣದಿದ್ದರೆ ಬೆಲೆ ಹೆಚ್ಚು. ಜುಟ್ಟು ದೊಡ್ಡದಾದರೆ ಬೆಲೆ ಕಡಿಮೆ. ಜುಟ್ಟು ದೊಡ್ಡದಾಗುವುದು, ಸಣ್ಣದಾಗುವುದು ಬಿಸಿಲು ಮತ್ತು ನೆರಳಿನ ಕಾರಣದಿಂದ. ದೊಡ್ಡದಾದ ಜುಟ್ಟನ್ನು ಚಿವುಟುವ ಮೂಲಕ ಸಣ್ಣದಾಗುವಂತೆ ಮಾಡಬಹುದು. ಇದಕ್ಕೆ ಕೆಲವು ಕ್ರಮಗಳಿವೆ.
- ಅನನಾಸಿನಲ್ಲಿ ಜುಟ್ಟು ದೊಡ್ಡದಾದರೆ ಕಾಯಿ ಸಣ್ಣದಾಗುತ್ತದೆ.
- ಮೊದಲ ಬೆಳೆ, ಮತ್ತು ಪೂರ್ಣ ಬಿಸಿಲು ಮತ್ತು ಕೆಲವು ವಾತಾವರಣ ಅನುಕೂಲ ಸ್ಥಿತಿಯಲ್ಲಿ ಜುಟ್ಟು ಸಣ್ಣದಿರುತ್ತದೆ.
- ಎರಡನೇ ಬೆಳೆಗೆ ಜುಟ್ಟು ದೊಡ್ಡದಾಗುತ್ತದೆ. ಅಡ್ಡ ಬಿದ್ದ ಗಿಡದಲ್ಲಿ ಜುಟ್ಟು ದೊಡ್ಡದಾಗುತ್ತದೆ.
ಅನನಾಸಿನಲ್ಲಿ ಹೂ ಬರುವುದು:
- ಅನನಾಸಿನಲ್ಲಿ ಸಸ್ಯ ಬೆಳೆವಣಿಗೆ ಒಂದು ಹಂತಕ್ಕೆಬಂದ ನಂತರ ಸುಳಿಯಲ್ಲಿ ಹೂವು ಬರುತ್ತದೆ.
- ಒಂದೇ ಬಾರಿ ಎಲ್ಲಾ ಗಿಡದಲ್ಲಿ ಹೂವು ಬರಬೇಕಾದರೆ, ಅದಕ್ಕೆ ಹೂವು ಪ್ರಚೋದಕ ಹಾಕುವ ಕ್ರಮ ಅನುಸರಿಸಬೇಕು.
- ಹೂವು ಪ್ರಚೋದಕ ಎಂದರೆ ಎಥ್ರೇಲ್ ಮತ್ತು ಅಡುಗೆ ಸೋಡಗಳ ಮಿಶ್ರಣ.
- 10 ಲೀ. ನೀರು ಹಿಡಿಯುವ ಒಂದು ಬಕೆಟ್ ಗೆ 5 ಲೀ. ನೀರು ಹಾಕಿ, ಅದಕ್ಕೆ 40 ಗ್ರಾಂ ಅಡುಗೆ ಸೋಡಾವನ್ನು ಹಾಕಿ ಕಲಕಿರಿ.
- ನಂತರ ಅದಕ್ಕೆ 40 ಮಿಲಿ. ಎಥ್ರೇಲ್ ಹಾಕಿ.
- ಆಗ ಅದು ಸ್ವಲ್ಪ ಉಕ್ಕಿ ಬರುತ್ತದೆ.
- ಅದನ್ನು 100 ಲೀ. ನೀರಿಗೆ ಮಿಶ್ರಣ ಮಾಡಿ ಪ್ರತೀ ಅನನಾಸು ಸಸಿಯ ಸುಳಿಗೆ 40 ಮಿಲೀ. ಯಂತೆ ಹಾಕಿ.
- ಈ ದ್ರಾವಣಕ್ಕೆ ಬೇಕಿದ್ದರೆ ಯಾವುದಾದರೂ ಪೊಷಕವನ್ನು ಹಾಕಬಹುದು.
- 19:19:19 ಗೊಬ್ಬರ ಹಾಕಬಹುದು.
- ಸಾವಯವ ಬೆಳೆ ಪೋಷಕವನ್ನೂ ಹಾಕಬಹುದು. ಕೆಲವು ಸೂಕ್ಷ್ಮ ಪೋಷಕಾಂಶ ಉಳ್ಳ ಪೋಷಕಗಳೂ ಇವೆ.
- ಹಾರ್ಮೋನು ಹಾಕಿ ಸುಮಾರು 40 ದಿನಗಳ ನಂತರ ಹೂ ಬರುತ್ತದೆ.
- ಅಷ್ಟು ಸಮಯ ಸಸ್ಯಕ್ಕೆ ಬೆಳೆವಣಿಗೆ ಇರುತ್ತದೆ. ಹೂ ಬರಿಸುವ ಹಾರ್ಮೋನಿಗೆ ಪೋಷಕಗಳನ್ನು ಹಾಕಿದರೆ ಅದು ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಿಸಿ, ಕಾಯಿ ದೊಡ್ಡದಾಗಲು ಸಹಕರಿಸುತ್ತದೆ.
- ಈ ಕ್ರಿಯೆಯು ಹಾರ್ಮೋನು ಇಲ್ಲದೆಯೂ ನಡೆಯುತ್ತದೆ.
- ಸಾಧಾರಣವಾಗಿ ಸಸ್ಯ ಬೆಳವಣಿಗೆ ಆದದ್ದಿದ್ದರೆ ಜನವರಿ – ಫೆಬ್ರವರಿಯಲ್ಲಿ ಚಳಿ ಬಿದ್ದ ತಕ್ಷಣ ಹೂ ಬಿಡುತ್ತದೆ.
- ಆದ ಕಾರಣ ಅಗತ್ಯ ಇದ್ದರೆ ಮಾತ್ರ ಹಾರ್ಮೋನು ಬಳಕೆ ಮಾಡಬಹುದು.
- ಹೂವು ಅಥವಾ ಮಿಡಿ ಕಾಯಿ ಹೊರ ಹಾಕುವಾಗ ಅದು ಉದ್ದ ಆಕಾರದಲ್ಲಿ ಮೂಡಿದರೆ, ಅದರ ಜುಟ್ಟು ಸಣ್ಣದಾಗಿರುತ್ತದೆ.
ಜುಟ್ಟು ಸಣ್ಣದು ಮಾಡುವ ವಿಧಾನ:
- ಕೆಲವು ಅನನಾಸು ಗಿಡಗಳಲ್ಲಿ ಅವು ಬೆಳವಣಿಗೆಯ ಹಂತದಲ್ಲಿ ಬಿಸಿಲು ಸಿಕ್ಕಿದರೂ, ಜುಟ್ಟು ದೊಡ್ಡದಾಗುತ್ತದೆ.
- ಅಂತಹ ಕಾಯಿಗಳು ಉದ್ದ ಆಕಾರದಲ್ಲಿ ಇರದೆ, ಸ್ವಲ್ಪ ದುಂಡಗೆ ಇರುತ್ತದೆ.
- ಇಂತದ್ದನ್ನು ಮಿಡಿ ಆಗಿ ಸುಮಾರು 1 ತಿಂಗಳ ನಂತರ ಗುರುತಿಸಬಹುದು.
- ಹೂವು ಮೂಡಿದ ನಂತರ 15-20 ದಿನಗಳಲ್ಲಿ ಕಾಯಿ ಕಾಣಿಸುತ್ತದೆ.
- ಆಗ ಕಾಯಿಯ ಪ್ರತೀ ಕಣ್ಣುಗಳಲ್ಲಿ ಹೂವು ಅರಳುತ್ತದೆ.
- ತುದಿಯ ತನಕ ಎಲ್ಲಾ ಹೂ ಅರಳಿ ಅದು ಒಣಗಿದಾಗ ಕಾಯಿಗೆ ಒಂದು ಆಕಾರ ಬರುತ್ತದೆ.
- ಅದಾದ ಒಂದು ತಿಂಗಳ ಒಳಗೆ ಜುಟ್ಟಿನ ಅರ್ಧ ಭಾಗವನ್ನು ಚಿವುಟಿ ತೆಗೆದರೆ ಅಲ್ಲಿಗೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ.
ಹೆಚ್ಚು ಚಿವುಟಿದರೆ ಕಾಯಿಯ ಗಾತ್ರ ಸ್ವಲ್ಪ ದೊಡ್ಡದಾಗುತ್ತದೆಯಾದರೂ ಕಾಯಿಗೆ ನೋಟ ಇರುವುದಿಲ್ಲ. ಅರ್ಧ ಭಾಗವನ್ನು ಮಾತ್ರ ಚಿವುಟಬೇಕು. ಇದನ್ನು pinchin of crown ಎಂದು ಕರೆಯುತ್ತಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆಯುವವರಿಗೆ ಈ ರೀತಿ ಮಾಡುವುದು ಕಷ್ಟವಾದರೂ ಸಣ್ಣ ಬೆಳೆಗಾರರಿಗೆ ಸಾಧ್ಯ.
- ಜುಟ್ಟು ದೊಡ್ದದಾಗಲು ನೆರಳು ಮಾತ್ರ ಕಾರಣ ಅಲ್ಲ. ಜುಟ್ಟಿನ ಭಾಗಕ್ಕೆ ಮಳೆ ನೀರು ಬಿದ್ದರೆ, ಸ್ಪ್ರಿಂಕ್ಲರ್ ನೀರು ಬಿದ್ದರೆ ಸಹ ಜುಟ್ಟು ದೊಡ್ಡದಾಗುತ್ತದೆ.
- ಸೂರ್ಯನ ಬೆಳಕಿಗೆ ನೇರ ಮುಖಮಾಡಿದ್ದ ಸಸಿಗಳಲ್ಲಿ ಕಾಯಿಯ ಗಾತ್ರಕ್ಕನುಗುಣವಾಗಿ ಸಾಧಾರಣ ಜುಟ್ಟು ದೊಡ್ಡದಿರುತ್ತದೆ.
- ಗಿಡ ಅಡ್ಡ ಬಿದ್ದಾಗ ಅದು ಸೂರ್ಯನ ಬೆಳಕಿನ ದಿಕ್ಕಿಗೆ ಬಾಗಿ ಬೆಳೆದು ದೊಡ್ಡದಾಗುತ್ತದೆ.
- ಇಂತಹ ಕಾಯಿಗಳಿಗೆ ಮಾರುಕಟ್ಟೆ ಮೌಲ್ಯ ಚೆನ್ನಾಗಿರುವುದಿಲ್ಲ.
ಕೆಲವು ಸ್ಥಳೀಯ ಅನನಾಸು ತಳಿ (ಇದು ಮಾರೀಶಿಯಸ್ ತಳಿಗಳು) ಹೆಚ್ಚಾಗಿ ಸಣ್ಣ ಗಾತ್ರದ ಕಾಯಿ ಹೊಂದಿರುತ್ತವೆ. ಇದನ್ನೂ ಸಹ ಸ್ವಲ್ಪ ಗಾತ್ರ ದೊಡ್ದದು ಮಾಡಬಹುದು. ಈ ತಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಯ ಬುಡ ಭಾಗದಲ್ಲಿ ಮೊಳಕೆಗಳು (slips)ಬರುತ್ತವೆ.ಇದನ್ನು ಸಣ್ಣದಿರುವಾಗಲೇ ಮುರಿದು ತೆಗೆಯಬೇಕು. ಹಾಗೆಯೇ ಜುಟ್ಟಿನ ಭಾಗವನ್ನು ಸ್ವಲ್ಪ ಚಿವುಟಬೇಕು. ಆಗ ಅದು ಸ್ವಲ್ಪ ದೊಡ್ದ ಗಾತ್ರಕ್ಕೆ ಬೆಳೆಯುತ್ತದೆ.
ಅನನಾಸು ಬೆಳೆಯುವವರು ಜುಟ್ಟಿಗೆ ಯೂರಿಯಾ ಹಾಕುವುದು ಅಥವಾ ಇನ್ನೇನಾದರೂ ರಾಸಾಯನಿಕ ಹಾಕುವುದನ್ನು ಮಾಡಬೇಡಿ. ಅದಕ್ಕಿಂತ ಸುಲಭ ಇದು. ಇದರಿಂದ ಹಾನಿ ಏನೂ ಇಲ್ಲ. ಅನನಾಸಿಗೆ ಪೂರ್ಣ ಬಿಸಿಲು ಬೇಕು. ಅಂತಹ ಕಡೆ ಕಾಯಿ ಆಕರ್ಷಕವಾಗಿ ಬೆಳೆಯುತ್ತದೆ. ಆ ಕಾಯಿಗಳು ಸಿಹಿಯಾಗಿಯೂ ಇರುತ್ತದೆ. ಸಾರಜನಕ ಪೋಷಕ ಹೆಚ್ಚಾದಾಗ ಕಾಯಿ ಹುಳಿಯಾಗಿರುತ್ತದೆ,, ಜುಟ್ಟು ದೊಡ್ಡದಾಗುತ್ತದೆ.