ಬಾಳೆಯ ಎಲೆ ಹಳದಿಯಾಗುವುದು, ಒಣಗುವುದು ಶಿಲೀಂದ್ರ ರೋಗ. ಇದಕ್ಕೆ ಮುನ್ನೆಚ್ಚರಿಕೆ ಅಗತ್ಯ.
- ಶಿಲೀಂದ್ರ ರೋಗಗಳು ಹೆಚ್ಚಾಗಿ ಮಳೆಗಾಲದಲ್ಲಿ ಬರುವುದು ಜಾಸ್ತಿ.
- ಅದು ಮಳೆಗಾಲ ಮುಗಿಯುವ ಸಮಯದಲ್ಲಿ ಬಂದರೆ ಮುಂದಿನ ಚಳಿಗಾಲ ಪ್ರಾರಂಭವಾಗುವಾಗ ನಮ್ಮ ಗಮನಕ್ಕೆ ಬರುತ್ತದೆ.
- ಕೆಲವೊಮ್ಮೆ ಇಬ್ಬನಿ ಬೀಳುವ ಸಮಯದಲ್ಲೂ ಬರುತ್ತದೆ.
- ಬಾಳೆಗೆ ಬರುವ ರೋಗಗಳಲ್ಲಿ ಬಂಚೀ ಟಾಪ್ ಒಂದನ್ನು ಹೊರತು ಪಡಿಸಿ ಉಳಿದ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ನಿಯಂತ್ರಣ ಮಾಡುವುದು ಸುಲಭ. .
ಬಾಳೆಯಲ್ಲಿ ಚಳಿಗಾಲ ಪ್ರಾರಂಭವಾಗುವಾಗ ಮತ್ತು ಮಳೆಗಾಲ ಅಂತ್ಯದ ಸಮಯದಲ್ಲಿ ಕಂಡು ಬರುವ ಪ್ರಮುಖ ರೋಗ ಸಿಗಟೋಕಾ ಶಿಲೀಂದ್ರ ರೋಗ. ಅರ್ಧ ಮಳೆಗಾಲ ಮುಗಿಯುವಾಗ ಇದು ಗೋಚರವಾಗುತ್ತದೆ.
ರೋಗ ಚಿನ್ಹೆ:
- ಈ ರೋಗ ಬಂದಾಗ ಎಲೆಗಳ ಮೇಲೆ ಪ್ರಾರಂಭಿಕ ಹಂತದಲ್ಲಿ ಕಂದು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
- ನಂತರ ಈ ಚುಕ್ಕೆಗಳು ಅಗಲವಾಗುತ್ತಾ ಹೋಗುತ್ತದೆ.
- ಇದು ಕೆಳಭಾಗದ ಮೂರು –ನಾಲ್ಕು ಎಲೆಗಳಲ್ಲಿ ಕಂಡು ಬರುತ್ತದೆ..
- ಎಲೆಗಳ ಅಲಗು ಚುರುಟಿಕೊಂಡು, ಎಲೆಯ ಮೇಲೆಲ್ಲಾ ಚಿತ್ರ ಬಿಡಿಸಿದಂತೆ ಕಲೆಗಳು ಉಂಟಾಗುತ್ತವೆ.
- ಕೆಲವೊಮ್ಮೆ ಇಡೀ ಎಲೆಯಲ್ಲಿ ಈ ಚಿನ್ಹೆ ಕಾಣಿಸದೆ, ಎಲೆಯಲ್ಲಿ ಅಲ್ಲಲ್ಲಿ ಒಣ ಪ್ಯಾಚ್ ಗಳು ಕಾಣಿಸಬಹುದು.
- ಹೆಚ್ಚಾದಂತೆ ಅದು ಮೇಲ್ಭಾಗದ ಎಲೆಗಳಿಗೆ ವ್ಯಾಪಿಸುತ್ತದೆ.
- ಕೊನೆಗೆ ಸುಳಿಯ ತನಕವೂ ವಿಸ್ತಾರವಾಗುತ್ತದೆ.
- ಬಾಳೆ ಸಸ್ಯದ ದ್ಯುತಿ ಸಂಸ್ಲೇಷಣ ಕ್ರಿಯೆಗೆ ತೀವ್ರವಾಗಿ ತೊಂದರೆಯಾಗಿ ಗೊನೆ ಇದ್ದರೆ ಕಾಯಿ ಸಣಕಲಾಗುತ್ತದೆ.
- ಗೊನೆ ಹಾಕದ ಬಾಳೆಯಾದರೆ ಅದರ ಆಶೆ ಬಿಡಬೇಕು.
- ಇದಕ್ಕೆ ಕಾರಣ Pseudocercospora musicola (formerly Mycosphaerella musicola) ಶಿಲೀಂದ್ರ .
- ಇದರಲ್ಲಿ ಹಳದಿ ಸಿಗಟೋಕಾ ಮತ್ತು ಕಪ್ಪು ಸಿಗಟೋಕಾ ಎಂಬ ಎರಡು ವಿಧಗಳಿವೆ.
- ಪ್ರಪಂಚದಾದ್ಯಂತ ಬಾಳೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇದನ್ನು ಕಾಣಬಹುದು.
ಹಳದಿ ಸಿಗಟೋಕಾದಲ್ಲಿ ಮೊದಲು ಹಳದಿ ಬಣ್ಣದ ಪ್ಯಾಚ್ ಗಳು ಆದರೆ ಕಪ್ಪು ಸಿಗಟೋಕಾದಲ್ಲಿ ಕಡು ಬೂದು ಬಣ್ಣದ ಪ್ಯಾಚ್ ಗಳಾಗುತ್ತವೆ. ವಾಣಿಜ್ಯಿಕ ತಳಿಗಳಾದ ಕ್ಯಾವೆಂಡೀಶ್, ಮತ್ತು ಪುಟ್ಟು ಬಾಳೆ , ನೇಂದ್ರ ಮತ್ತು ಅಡುಗೆಗೆ ಬಳಸಲ್ಪಡುವ ತಳಿಗಳಿಗೆ ಇದರ ತೊಂದರೆ ಹೆಚ್ಚು. ಮಳೆಗಾಲದಲ್ಲಿ ಇದು ಪ್ರಾರಂಭವಾಗಿ ಶುಷ್ಕ ವಾತಾವರಣ ಸ್ಥಿತಿ ಏರ್ಪಡುವ ಚಳಿಗಾಲದಲ್ಲಿ ಹಿಮ ಬೀಳುವಾಗ ಉಲ್ಬಣವಾಗುತ್ತದೆ.
ನಿಯಂತ್ರಣ:
- ಮಳೆಗಾಲದಲ್ಲಿ ರೋಗ ಇರಲಿ, ಇಲ್ಲದಿರಲಿ,ಬಾಳೆ ಎಲೆಯ ಅಡಿ ಭಾಗಕ್ಕೆ ಕಾಪರ್ ಆಕ್ಸೀ ಕ್ಲೋರೈಡ್ ( 3 ಗ್ರಾಂ/ಲೀ) ಪ್ರಮಾಣದಲ್ಲಿ ಸಿಂಪರಣೆ ಮಾಡಿದರೆ ರೋಗ ಬರದಂತೆ ತಡೆಯಬಹುದು.
- ಬೋರ್ಡೋ ದ್ರಾವಣವೂ ಆಗುತ್ತದೆ. ಬಾವಿಸ್ಟಿನ್ ಸಹ ಆಗುತ್ತದೆ.
- ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವವರು “ಟಿಲ್ಟ್” ಸಿಂಪರಣೆ ಮಾಡುತ್ತಾರೆ. “ಸೆಕ್ಟಿನ್” ಸಹ ಆಗುತ್ತದೆ.
- ಬಾಳೆ ಎಲೆಯಲ್ಲಿ ಈ ಚಿನ್ಹೆ ಕಂಡು ಬಂದ ತಕ್ಷಣ ಕೆಳ ಭಾಗದ ಎಲೆಗಳನ್ನು ತೆಗೆದು ಅದನ್ನು ಸುಡಬೇಕು.
- ಇಲ್ಲವೇ ಪ್ರಖರ ಬಿಸಿಲಿಗೆ ಹಾಕಬೇಕು .ಬುಡದಲ್ಲಿ ಹಾಕಬಾರದು. ಇದು ರೋಗ ಹೆಚ್ಚಾಗಲು ಕಾರಣವಾಗುತ್ತದೆ.
- ಉಳಿದ ಎಲೆಗಳಿಗೆ ಗಮ್ ಸೇರಿಸಿ ಮ್ಯಾಂಕೋಜೆಬ್ ಅಥವಾ ಬಾವಿಸ್ಟಿನ್ ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು.
ಮುಂಜಾಗ್ರತೆ:
- ತೋಟದಲ್ಲಿ ಕಳೆಗಳು ಇರದಂತೆ ನೋಡಿಕೊಳ್ಳಬೇಕು.
- ಈ ರೋಗ ಬರಲು ಪ್ರಮುಖ ಕಾರಣ , ಬಾಳೆಯ ಸಾಂದ್ರತೆ ಹೆಚ್ಚು ಇರುವುದು.
- ಗಾಳಿ ಬೆಳಕು ಹೆಚ್ಚು ಆಡದೇ ಇರುವುದು.
- ಇಂತಹ ಸಂದರ್ಭಗಳಲ್ಲಿ ಕೆಳ ಭಾಗದ ಮೂರು ನಾಲ್ಕು ಎಲೆಯನ್ನು ತೆಗೆದು, ಬಾಳೆಗೆ ಪೊಷಕಾಂಶದ ಕೊರತೆ ಆಗದಂತೆ ಪತ್ರ ಸಿಂಚನದ ಮೂಲಕ ಗೊಬ್ಬರವನ್ನು ಕೊಡಬೇಕು.
- ಸಾರಜನಕ ಗೊಬ್ಬರವನ್ನು ಮಳೆಗಾಲದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಡಬೇಕು. ನೀರು ನಿಲ್ಲಬಾರದು.
- ಬೇರುಗಳು ಹಾನಿಗಾದಂತೆ ನೋಡಿಕೊಳ್ಳಬೇಕು.
- ಮಳೆ ಮುಗಿಯುವುದರ ಒಳಗೆ ಬುಡ ಭಾಗಕ್ಕೆ ಮಣ್ಣು ಹಾಕಿ, ಗೊಬ್ಬರ ಕೊಟ್ಟು ಹೊಸ ಬೇರು ಬೆಳೆಯಲು ಅನುಕೂಲ ಮಾಡಿಕೊಡಬೇಕು.
- ಮಳೆಗಾಲದಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ಉಳ್ಳ ಗೊಬ್ಬರ ಕೊಡುವುದರಿಂದ ರೋಗ ಸಾಧ್ಯತೆ ಕಡಿಮೆಯಾಗುತ್ತದೆ.
ಎಲೆಗಳ ಸಂಖ್ಯೆಗೆ ಅನುಗುಣವಾಗಿ ಬಾಳೆ ಗೊನೆ ಪುಷ್ಟಿಯಾಗುತ್ತದೆ. ಎಲೆಗಳಿಗೆ ಹೀಗೆ ರೋಗ ಸೋಕು ತಗಲಿದಾಗ ಅದಕ್ಕೆ ಔಷದೋಪಚಾರ ಮಾಡಿ, ಜೊತೆಗೆ ಬಾಳೆ ಗೊನೆಗೆಗೆ ಪೋಷಕಾಂಶಗಳನ್ನು ಸಿಂಪರಣೆ ಮೂಲಕ ಕೊಡಬೇಕು.