ಸಣ್ಣ ಯೋಚನೆ- ದೊಡ್ದ ಫಲಿತಾಂಶ.

ಸತ್ತ ತೆಂಗಿನ ಮರಕ್ಕೆ ಬಕೆಟ್ ಮುಚ್ಚಿದ್ದು

ನಾವು ಎಲೆಲ್ಲೋ ಪ್ರಯಾಣ ಮಾಡಬೇಕಾದರೆ ಹಲವಾರು ತೀರಾ ಸರಳವಾದ  ವಿಚಾರಗಳನ್ನು ಗಮನಿಸುತ್ತೇವೆ.  ಸರಳ ವಿಷಯಗಳಾದರೂ ನಮಗೆ ಅದು ಹೊಳೆದಿರುವುದಿಲ್ಲ. ಸಣ್ಣ ಯೋಚನೆಯಲ್ಲೇ  ದೊಡ್ಡ ಉಪಕಾರ ಇರುತ್ತದೆ. ಅದಕ್ಕೇ ಹೇಳುವುದು ಊರು ಸುತ್ತುವುದರಿಂದ ಜ್ಞಾನರ್ಜನೆ ಆಗುತ್ತದೆ..

 • ನಮ್ಮಲ್ಲಿ ಅಡಿಕೆ ಮರಗಳು ಸಾಯುತ್ತವೆ. ತೆಂಗಿನ ಮರಗಳು ಸಾಯುತ್ತವೆ.
 • ಸತ್ತ ಮರದಲ್ಲಿ ಕರಿಮೆಣಸು, ವೀಳ್ಯದೆಲೆ ಮುಂತಾದ ಬೆಳೆ  ಇರುತ್ತದೆ.
 • ಆಧಾರ ಮರ ಸತ್ತ ತರುವಾಯ ಅದು ಉತ್ತಮವಾಗಿ ಬೆಳೆಯುತ್ತದೆ.
 • ಹೆಚ್ಚು ಫಸಲನ್ನೂ  ಕೊಡುತ್ತಿರುತ್ತದೆ. 
 • ನಂತರ ಅದಕ್ಕೆ ರೋಗ ಸಹ ಬರುವುದು ನಿಧಾನ. 
 • ಆದರೇನಂತೆ ಅದಕ್ಕೆ ಆಯುಷ್ಯ ನಿರ್ಧರಿತವಾಗಿರುತ್ತದೆ. ಹೆಚ್ಚೆಂದರೆ  1 ವರ್ಷ ಅದರ ಆಯುಷ್ಯ ಬರೆದಿಡಬಹುದು.
 • ನಂತರ  ಬಳ್ಳಿಗೆ ಆಯುಷ್ಯ ಇದ್ದರೂ ಸಹ ಅದಕ್ಕೆ ಆಸರೆ ಕೈಕೊಡುವ ಕಾರಣ ಬಳ್ಳಿ ಸಾವಿಗೆ  ಶರಣಾಗಲೇ ಬೇಕು.

ಸಣ್ಣ ಯೋಚನೆ ದೊಡ್ಡ ಉಪಕಾರ

ಏನು ಮಾಡಬಹುದು:

ಇದನ್ನು ಸ್ವಲ್ಪ ಹೆಚ್ಚು ಸಮಯ ದೂಡಲು ಸಾಧ್ಯ. ಇದು ಕೆಲವು ಉಪಾಯಗಳಿಂದ. ಕೆಲವು ತುಂಬಾ ತಲೆ ಖರ್ಚು ಮಾಡುವ  ರೈತರು ಇಂತಹ ಕೆಲವು ಐಡಿಯಾಗಳಲ್ಲಿ  ನಿಸ್ಸೀಮರು. ತೆಂಗಿನ ಮರ ಸತ್ತರೆ ಅದರ ತಲೆ ಭಾಗವನ್ನು ಕಡಿದು ಅದರ ಮೇಲೆ ಒಂದು ಪಾತ್ರೆಯನ್ನು ಕವುಚಿ ಹಾಕಿದರೆ  ಆ ಮರದ ಆಯುಷ್ಯ ಮತ್ತೆ 2-3  ವರ್ಷ ಹೆಚ್ಚುತ್ತದೆ.   ಅದೇ ರೀತಿಯಲ್ಲಿ ಅಡಿಕೆ  ಮರಕ್ಕೂ ಸಹ.

 • ಸತ್ತ ಮರಗಳ ತುದಿಯ ಟೊಳ್ಳುಭಾಗದಿಂದ  ಅದು ಹಾಳಾಗುತ್ತಾ ಬರುತ್ತದೆ.
 • ಇದಕ್ಕೆ ಕಾರಣ ಅಲ್ಲಿ ನೀರು ಸೇರಿಕೊಳ್ಳುವುದು, ಕೊಳೆಯಿಸುವ ಸೂಕ್ಷ್ಮಾಣು ಜೀವಿಗಳು ಸೇರಿಕೊಳ್ಳುವುದೇ ಆಗಿದೆ.
 • ಮರ ಕೊಳೆಯಲಿಲ್ಲ ಎಂದಾದರೆ ಅದು ಬೇಗ ಮಗುಚಿ ಬೀಳಲಾರದು.
 • ತೆಂಗಿನ ಮರದ ಬುಡ ಭಾಗ ಹೆಚ್ಚು ಆಳದಲ್ಲಿ  ಇರದಿದ್ದರೂ ಆದರ ಬೇರುಗಳು ಗಟ್ಟಿಯಾಗಿ ನೆಲವನ್ನು  ಹಿಡಿದಿಟ್ಟುಕೊಂಡಿರುತ್ತದೆ.
 • ಕೆಲವು ಕಡೆ  ಸ್ವಲ್ಪ ಆಳ ಮಾಡಿ ಸಸಿ ನೆಟ್ಟಿದ್ದರೆ ಬುಡ ಭಾಗ ನೆಲದಲ್ಲಿ ಸ್ವಲ್ಪ ಅಳದಲ್ಲೇ ಇರುತ್ತದೆ.
 • ಅಂತಹ ಮರ ಬೇಗ ಬೇಗ ಮಗುಚಿ ಬೀಳಲಾರದು. ಬೇಗ  ಮಗುಚಿ ಬೀಳಲು ಅನುಕೂಲವಾಗುವ ಮಳೆ ನೀರು ಹಾಗೂ ಶಿಲೀಂದ್ರ ಬೆಳವಣಿಗೆಯನ್ನು ಸ್ವಲ್ಪ ನಿಯಂತ್ರಿಸಿಕೊಂಡರೆ  ಅದರ ಅಯುಷ್ಯ ಹೆಚ್ಚುತ್ತದೆ. 
 • ಮರ ಸತ್ತ  ತಕ್ಷಣ ಆ ಮರದ ತೀರಾ ಎಳೆ ಭಾಗದ ವರೆಗೆ ಏಣಿ ಇಟ್ಟು ಗರಗಸದಿಂದ ತುಂಡು ಮಾಡಿ ಇಲ್ಲವೇ ಕತ್ತಿಯಲ್ಲಿ ಕಡಿಯಿರಿ.
 • ಆ ಭಾಗಕ್ಕೆ ಸ್ವಲ್ಪ ತಿರುಳು ಕೆರೆದು  ಮೈಲುತುತ್ತೇ ದ್ರಾವಣ 5ಲೀ. ಮತ್ತು ಶೇ. 5  ರ ಕ್ಲೋರೋಫೆರಿಫೋಸ್ ದ್ರಾವಣ  5  ಲೀ ಎರೆದರೆ  ಮರದಲ್ಲಿ ಗೆದ್ದಳು ಬರುವುದು  ಸ್ವಲ್ಪ ಸಮಯದ ತನಕ  ದೂರವಾಗುತ್ತದೆ.
 • ನಂತರ ಆ ಭಾಗಕ್ಕೆ  ಒಂದು ಟೋಪಿ ತರಹ ಬೇಗ ಹಾಳಾಗದ ಪೈಂಟ್ ಬಾಲ್ದಿ, ಅಥವಾ ಇನ್ಯಾವುದಾದದರೂ ಮುಚ್ಚಳ ಹಾಕಿದರೆ  ಒಳಗೆ ನೀರು ಹೋಗುವುದಿಲ್ಲ.

ಮರ ಬೇಗ ಹಾಳಾಗುವುದಿಲ್ಲ.  ಮರವು ಕನಿಷ್ಟ 5  ವರ್ಷ ತನಕ ನಿರಾಯಾಸವಾಗಿ  ಬದುಕುತ್ತದೆ. ಅಷ್ಟೂ ಸಮಯದ ತನಕ ಮೆಣಸಿನ ಬಳ್ಳಿಯಲ್ಲಿ ಫಸಲನ್ನು  ಪಡೆಯುತ್ತಿರಬಹುದು.

Leave a Reply

Your email address will not be published. Required fields are marked *

error: Content is protected !!