ಒಂದು ತಳಿಯ ಅಧಿಕ ಉತ್ಪಾದನೆಗೆ , ಅಥವಾ ತಳಿ ಉನ್ನತೀಕರಣಕ್ಕೆ ಮತ್ತೊಂದು ತಳಿ ಮೂಲದಿಂದ ಕ್ರಾಸಿಂಗ್ ಮಾಡಿ ಪಡೆಯುವ ಹೊಸ ತಲೆಮಾರಿನ ತಳಿಗೆ ಹೈಬ್ರೀಡ್ ತಳಿ ಎನ್ನುತ್ತಾರೆ. ಇದು ಯಾವುದೋ ಅಧಿಕ ಇಳುವರಿ ಕೊಡುವ ಯಾರದೋ ಹಿತ್ತಲಲ್ಲಿರುವ ಮರದಿಂದ ಆಯ್ಕೆ ಮಾಡಿದ ಬೀಜ ಆಗಿರುವುದಿಲ್ಲ. ಗುರುತು ಪಡಿಸಿದ ಮರದ ಹೆಣ್ಣು ಹೂವಿಗೆ ಆಯ್ಕೆ ಮಾಡಿದ ಮರದ ಗಂಡು ಹೂವಿನ ಪರಾಗವನ್ನು ಕೈಯಿಂದ ( ಕೃತಕ) ಪರಾಗಸ್ಪರ್ಶ ಮಾಡಿ, ಅದರಲ್ಲಿ ಕಾಯಿ ಕಚ್ಚಿದ ಬೀಜವನ್ನು ಅಭ್ಯಸಿಸಿ ಬಿಡುಗಡೆ ಮಾಡಿದ ತಳಿಗೆ ಹೈಬ್ರೀಡ್ ತಳಿ ಎಂದು ಕರೆಯುತ್ತಾರೆ.
- ಬರೇ ಅಧಿಕ ಇಳುವರಿಯ ತಳಿಗೆ, ಅಥವಾ ಒಂದು ಮೂಲ ತಳಿಯ ನಿಜ ಗುಣದ ಬೀಜಕ್ಕೆ ಇಂಟರ್ ಕ್ರಾಸಿಂಗ್ ಸಾಕು.
- ಹೈಬ್ರಿಡ್ ಆಗಬೇಕಿದ್ದರೆ ಪ್ರತ್ಯೇಕ ಗಂಡು ಮೂಲದಿಂದ ಕ್ರಾಸಿಂಗ್ ಮಾಡಲಾಗುತ್ತದೆ.
- ತೆಂಗಿನಲ್ಲಿ ಹೈಬ್ರೀಡ್ ತಳಿಗಾಗಿ ಹೆಚ್ಚಾಗಿ ಗಿಡ್ದ ತಳಿಯ ಗಂಡು ಮೂಲದಿಂದ ಎತ್ತರದ ತಳಿಯ ಹೆಣ್ಣು ಹೂವಿಗೆ ಪರಾಗಸ್ಪರ್ಶ ಮಾಡಿ, (DXT)ಹೊಸ ತಳಿ ಪಡೆಯುತ್ತಾರೆ.
- ಇದು ಮಧ್ಯಮ ಎತ್ತರದ ತಳಿಯಾಗಿರುತ್ತದೆ.
ನಿಜವಾದ ಹೈಬ್ರೀಡ್ ಹೀಗೆ:
- ಒಂದು ಅಧಿಕ ಇಳುವರಿ ಕೊಡುವ ತೆಂಗು ಇರುತ್ತದೆ.
- ಇದು ತುಂಬಾ ಎತ್ತರವಾಗಿರುತ್ತದೆ ಎಂದಿಟ್ಟುಕೊಳ್ಳೋಣ.
- ಹಾಗೆಯೇ ಇದರ ಕಾಯಿಯ ಗುಣಮಟ್ಟ ಅಷ್ಟು ಉತ್ತಮವಾಗಿರುವುದಿಲ್ಲ, (ಕೊಬ್ಬರಿ, ರುಚಿ, ನೀರು, ರೋಗ ನಿರೋಧಕ ಶಕ್ತಿ ಇತ್ಯಾದಿ) ಅಥವಾ ಇನ್ಯಾವುದೋ ಲೋಪದೊಷಗಳು ಇರಬಹುದು.
- ಇದನ್ನು ಸರಿಪಡಿಸಲಿಕ್ಕಾಗಿ ಮತ್ತೊಂದು ಲೋಪ ರಹಿತ ಮರವನ್ನು ಪೇರೆಂಟ್ ಮರವಾಗಿ ಆಯ್ಕೆ ಮಾಡಬೇಕು.
- ಅದರ ಪರಾಗವನ್ನು ಸಂಗ್ರಹಿಸಿ, ಮೊದಲಿನ ಮರದ ಹೆಣ್ಣು ಹೂವಿಕೆ ಅದು ಪರಾಗ ಸ್ವೀಕರಿಸುವ ಪಕ್ವತೆ ಹೊಂದಿದಾಗ ಪರಾಗವನ್ನು ಸ್ಪರ್ಶಿಸಿ, ಅದನ್ನು ಕಾಯಿಕಚ್ಚುವಂತೆ ಮಾಡಬೇಕು.
- ಪರಾಗಸ್ಪರ್ಶ ಮಾಡಬೇಕಾದ ಮರದ ಹೂ ಗೊಂಚಲು ಅರಳಿದಾಕ್ಷಣ ಅದರ ಗಂಡು ಹೂವನ್ನೆಲ್ಲಾ ತೆಗೆದು ಬರೇ ಹೆಣ್ಣು ಹೂವುಗಳನ್ನು ಬಿಟ್ಟು ಸ್ವ ಅಥವಾ ಮಿಶ್ರ ಪರಾಗಸ್ಪರ್ಶ ಆಗದಂತೆ ಬಟ್ಟೆಯಿಂದ ಕವರ್ ಮಾಡಲೇ ಬೇಕಾಗುತ್ತದೆ.
- ಹೀಗೆ ಕಾಯಿ ಕಚ್ಚಿ, ಬೆಳೆದ ಆ ಗೊನೆಯ ಎಲ್ಲಾ ಕಾಯಿಗಳನ್ನೂ ಸಸಿ ಮಾಡಿ ಬೆಳೆಸಬೇಕು.
- ಅದರಲ್ಲಿ ಫಸಲು ಬಂದ ತರುವಾಯ ಯಾವುದು ಎಲ್ಲಾ ಮಾನದಂಡಗಳನ್ನೂ ಹೊಂದಿದೆ ಅದನ್ನು ಮಾತ್ರ ಮತ್ತೆ ಇಂಟರ್ ಕ್ರಾಸಿಂಗ್ ಮಾಡಬೇಕು.
- ಈ ರೀತಿ ಇಂಟರ್ ಕ್ರಾಸಿಂಗ್ ಅದಾಗ ದೊರೆಯುವ ಬೀಜ ಏನಿರುತ್ತದೆಯೋ ಅದು ಹೈಬ್ರೀಡ್ ತಳಿ ಗುಣದ ಬೀಜವಾಗಿರುತ್ತದೆ.
- ಇನ್ನೂ ಮುಂದುವರಿದು ಹೇಳಬೇಕೆಂದರೆ ಅದನ್ನೂ ಬೇರೆ ಬೇರೆ ಪ್ರದೇಶಗಳಲ್ಲಿ ಅದರೆ ಅದರ ಹೊಂದಾಣಿಕೆಯ ಪರೀಕ್ಷೆ ಮಾಡಬೇಕು.
- ಅಲ್ಲಿಯೂ ಅದು ಪಾಸ್ ಆಗಬೇಕು. ಉದಾಹರಣೆ ರಾಜ್ಯದ ಎಲ್ಲಾ ಭಾಗಕ್ಕೂ ಆಗುವ ತಳಿಯಾದರೆ ತೆಂಗು ಬೆಳೆಯುವ ಎಲ್ಲಾ ಕಡೆ ಇದನ್ನು ನೆಟ್ಟು ಬೆಳೆಸಿ ಬಂದ ಪಸಲು ಮೂಲ ತಳಿಗೆ ಸಾಮ್ಯತೆ ಇರಬೇಕು.
- ಮೊದಲ ಕ್ರಾಸಿಂಗ್ ನಲ್ಲಿ ಎಲ್ಲವೂ ಸರಿ ಬರುವುದಿಲ್ಲ.
- ಅದು ಶೇ.1 ಬರಲೂಬಹುದು. ಶೇ.10 ಬರಲೂ ಬಹುದು.
- ಸರಿ ಬಂದದ್ದನ್ನು ಮಾತ್ರವೇ ಆಯ್ಕೆ ಮಾಡಬೇಕು.
- ಇಷ್ಟು ಅಧ್ಯಯನಗಳು ನಡೆಯಲು ಸುಮಾರು ಕನಿಷ್ಟ 10 ವರ್ಷಕ್ಕಿಂತ ಹೆಚ್ಚು ಸಮಯ ಬೇಕು.
ನಿಜವಾಗಿ ಆಗುವುದು ಏನು?
- ಇಂದು ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಹೈಬ್ರೀಡ್ ತಳಿಗಳೆಂದರೆ ಅದು ಮೊದಲ ಒಂದು ಸ್ಟೆಪ್ ಮಾತ್ರ ಆದವುಗಳು. ಅದರಲ್ಲಿ ತಳಿ ವ್ಯತ್ಯಾಸ ಸಹಜವಾಗಿ ಬರುತ್ತದ್ದೆ. ಇದನ್ನು ಹೈಬ್ರೀಡ್ ತಳಿ ಎಂದು ಹೇಳಲು ಬರುವುದಿಲ್ಲ.
- ಇನ್ನು ಕೆಲವು ಜನ ಯಾವುದೋ ಮೂಲದಿಂದ ಹೈಬ್ರೀಡ್ ತಳಿಯನ್ನು ತಂದು ಬೆಳೆಸಿರುತ್ತಾರೆ. ಅದರ ಎಲ್ಲಾ ಕಾಯಿಗಳನ್ನು ಬೀಜಕ್ಕಿಡುತ್ತಾರೆ. ಅದರಲ್ಲಿ ಹುಟ್ಟಿದ ಸಸಿಯಲ್ಲಿ ಗರಿ ಲಕ್ಷಣ ( ಬಣ್ಣ) ನೋಡಿ ಸಾಮ್ಯತೆ ಇದ್ದರೆ ಅದನ್ನೇ ಹೈಬ್ರೀಡ್ ತಳಿ ಎಂದು ಹೇಳುತ್ತಾರೆ.
- ಇನ್ನೂ ಕೆಲವರು ತಮ್ಮಲ್ಲಿ ಒಂದು ಅಧಿಕ ಇಳುವರಿ ಕೊಡಬಲ್ಲ ಮರ ಇದ್ದರೆ, ಅಥವಾ ಎಲ್ಲಿಯಾದರೂ ಅವರು ಅಂತಹ ಮರವನ್ನು ಗುರುತಿಸಿದ್ದರೆ ಅದರ ಬೀಜವನ್ನು ತಂದು ಅದೇ ಹೈಬ್ರೀಡ್ ತಳಿ ಎಂದು ಹೇಳುತ್ತಾರೆ.
ತೆಂಗಿನಲ್ಲಿ ಹೈಬ್ರೀಡ್ ಬೀಜೋತ್ಪಾದನೆಯನ್ನು ಎಲ್ಲಾ ಮಾನದಂಡಗಳಿಗನುಗುಣವಾಗಿ ಮಾಡಿ ಸಸಿ ಪೂರೈಕೆ ಮಾಡುವವರು ಬಹುಶಃ ಇಲ್ಲವೆಂದೇ ಹೇಳಬಹುದು. ಕೆಲವರು ಮೊದಲ ಹಂತದಲ್ಲೇ ತುಂಬಾ ಸ್ಕ್ರೀನಿಂಗ್ ಮಾಡಿ ಸಸಿ ಆಯ್ಕೆ ಮಾಡುತ್ತಾರೆ. ಅಂತಲ್ಲಿ ಸುಮಾರು 75 % ನಿಜ ಗುಣ ಬರಬಹುದು.
- ವಾಸ್ತವವಾಗಿ ಹೈಬ್ರೀಡ್ ಬೀಜೋತ್ಪಾದನೆ ಮಾಡಿದ ಸಸ್ಯನ್ನೇ ಒದಗಿಸುತ್ತಾರೆ ಎಂದಾದರೆ ಆ ರೀತಿ ಸಸಿ ಕೊಡುವವರು 95% ನಿಖರತೆಯನ್ನು ಖಂಡಿತವಾಗಿಯೂ ಕೊಡಬಹುದು.
- ಕಾನೂನು ಪ್ರಕಾರ ಇಂತಹ ಸಸಿಗಳಲ್ಲಿ ಕುಂದುಕೊರತೆ ಅಥವಾ ಅವರು ಹೇಳುವ ಗುಣ ವ್ಯತ್ಯಾಸ ಆದಾಗ ಅವರಿಂದ ದಂಡ ಪಡೆಯುವ ಹಕ್ಕು ಗ್ರಾಹಕನಿಗೆ ಇರುತ್ತದೆ.
ಬಹಳಷ್ಟು ತೆಂಗಿನ ಸಸಿ ಮಾರುವ ನರ್ಸರಿಗಳವರು ಹೈಬ್ರೀಡ್ ತಳಿ ಎಂದು ಮಾರಾಟ ಮಾಡುವ ಸಸಿಗಳ ತಾಜಾತನ ತಿಳಿದುಕೊಳ್ಳಬೇಕಾದರೆ ಅದರ ಮೂಲ ಫಾರಂ ಎಲ್ಲಿದೆ ಎಂಬುದನ್ನು ತಿಳಿಯಲೇ ಬೇಕು. ನೈಸರ್ಗಿಕ ಪರಾಗಸ್ಪರ್ಷದಲ್ಲಿ ಪಡೆದ ಹೊಸ ತಲೆಮಾರಿನ ಸಸಿ ನೈಜ ಹೈಬ್ರೀಡ್ ಎನ್ನಿಸುವುದಿಲ್ಲ. ಕುಬ್ಜ ತಳಿ ಹೈಬ್ರೀಡ್ ಅಲ್ಲ. ಅದು ಭಿನ್ನ ತಳಿ.
ಹೈಬ್ರೀಡ್ ಸಸಿ ಕೊಳ್ಳುವಾಗ ಇದು ಗಮನದಲ್ಲಿ ಇರಲಿ;
ಹೈಬ್ರೀಡ್ ಸಸಿ ಉತ್ಪಾದಿಸಬೇಕಿದ್ದರೆ ಅದಕ್ಕೆ ಕೃತಕಪರಾಗಸ್ಪರ್ಶ ಮಾಡಲೇ ಬೇಕು. ಅದಕ್ಕೆ ಒಂದು ಬೀಜೋತ್ಪಾದನಾ ತೋಟ ಇರಬೇಕು. ಅಲ್ಲಿ ತಾಯಿ ಮರಗಳು ಮತ್ತು ಪೇರೆಂಟಲ್ ಮರಗಳ ಪ್ರತ್ಯೇಕ ತೋಟ ಇರಬೇಕು. ಅಲ್ಲಿ ಅದರ ಸೆಕೆಂಡರಿ ತೋಟ ಸಹ ಇರಬೇಕು. ಇದು ಎಲ್ಲಿ ಇದೆ. ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೇಳಿ. ಆಗ ಅವರಿಂದ ಬರುವ ಉತ್ತರದ ಮೇಲೆ ನೀವು ತಾಜಾತನದ ಬಗ್ಗೆ ತೀರ್ಮಾನ ಮಾಡಬಹುದು.
End of the article:
search words: coconut hybrid # hybrid coconut # coconut hybridaization # True hybrids # process of coconut hybridization # TXD hybrids # DXT hybrids #Coconut #
Thanks for your valuable advice &information shared. But to conclude it is always advisable to share the contact details of recongnised Private/Govt maintained nearby Nursery s where farmers can visit personally to buy the hybrid plants.
R/Girish Thirthahalli
ಉತ್ತಮ ಮಾಹಿತಿ. ಉತ್ತಮ ಹೈಬ್ರಿಡ್ T× ತೆಂಗಿನ ಸಸಿಗಳು ಲಭ್ಯವಿರುವ ಸಂಸ್ಥೆಗಳ ಪಟ್ಟಿ ಕೊಟ್ಟಿದ್ದರೆ ಕೃಷಿಕರಿಗೆ ಅನುಕೂಲವಾಗುತ್ತದೆ.