ತೆಂಗು ಬೆಳೆ ಲಾಭದಾಯಕ ಎಂದರೆ ಎಲ್ಲರೂ ನಗುತ್ತಾರೆ. ಆದರೆ ತೆಂಗಿನ ಬೆಳೆಯೊಂದರಿಂದಲೇ ಲಾಭ ಇಲ್ಲ. ಅದರ ಜೊತೆಗೆ ಬೇರೆ ಬೇರೆ ಬೆಳೆ ಬೆಳೆಸಬೇಕು. ಉತ್ತಮ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಬೇಕು. ಇಂತಹ ಬೆಳೆ ಯೋಜನೆಯಿಂದ ತೆಂಗಿನ ಬೆಳೆ ಸಹ ಲಾಭದಾಯಕಬಲ್ಲದು ಎನ್ನುತ್ತಾರೆ ಈ ರೈತ.
ಹೈಬ್ರೀಡ್ ತಳಿಯ ತೆಂಗು, ಅದರ ಮಧ್ಯಂತರದಲ್ಲಿ ಬಾಳೆ, ಅರಶಿನ, ಸುವರ್ಣ ಗಡ್ಡೆ, ನೀರಿನ ಕೆರೆಯಲ್ಲಿ ಮೀನು ಸಾಕಾಣಿಕೆ, ಬೀಜೋತ್ಪಾದನೆಗಾಗಿ ಭತ್ತದ ಬೆಳೆ, ಬೇಸಿಗೆಯಲ್ಲಿ ಭಾರೀ ಲಾಭ ಕೊಡುವ ಲಿಂಬೆ, ಹಲಸು, ಮಾವು ಇತ್ಯಾದಿ ಬೆಳೆಗಳನ್ನು ತಮ್ಮ 40 ಎಕ್ರೆಗೂ ಅಧಿಕ ಹೊಲದಲ್ಲಿ ಬೆಳೆಸಿ ಕೃಷಿಯಲ್ಲಿ ಲಾಭವಿದೆ ಎನ್ನುತ್ತಾರೆ, ರೈತ ಉಡುಪಿ ಜಿಲ್ಲೆ, ಉಪ್ಪೂರಿನ ಅಮ್ಮುಂಜೆಯ ಕೃಷಿಕ ಮತ್ತು ಉದ್ಯಮಿ ರತ್ನಾಕರ ಶೆಟ್ಟಿಯವರು. ಬರೇ ಕೃಷಿ ಮಾಡುವವರಿಗೆ ಅದರಲ್ಲಿ ಹೇಗೆ ಹೆಚ್ಚು ಹುಟ್ಟುವಳಿ ಮಾಡಿಕೊಳ್ಳಬೇಕು ಎಂಬುದು ಬೇಗ ಗೊತ್ತಾಗುವುದಿಲ್ಲ. ಸ್ವಲ್ಪ ಬೇರೆ ವ್ಯವಹಾರ ಇರುವವರಿಗೆ ಅದರನ್ನು ವ್ಯಾವಹಾರಿಕವಾಗಿ ನಡೆಸುವ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ರತ್ನಾಕರ ಶೆಟ್ಟಿಯವರು ತಮ್ಮ ಕೃಷಿಯ ಜೂತೆಗೆ ಒಂದು ಸಾಪ್ಟ್ ಡ್ರೀಂಕ್ಸ್ ಉದ್ದಿಮೆಯನ್ನೂ ನಡೆಸುತ್ತಿದ್ದಾರೆ. ಹಾಗಾಗಿ ಲಾಭ ನಷ್ಟ ಸರಿತೂಗಿಸುವ ಬಗ್ಗೆ ಅನುಭವಿಗಳು.
ತೆಂಗು ಬೆಳೆದರೆ ಹೈಬ್ರೀಡ್ ಬೆಳೆಯಬೇಕು:
- ತೆಂಗಿನಲ್ಲಿ ಪ್ರಕೃತ ದೊಡ್ದ ಸಮಸ್ಯೆ ಎಂದರೆ ಎತ್ತರದ ಮರಗಳಿಂದ ಕಾಯಿ ಕೀಳುವುದು, ಎಳನೀರು ಇಳಿಸುವುದು. ಇದರಷ್ಟು ತ್ರಾಸದಾಯಕ ಮತ್ತೊಂದಿಲ್ಲ.
- ಹೈಬ್ರೀಡ್ ತಳಿಯಾದರೆ ಅದು ದೊಡ್ಡ ಸಮಸ್ಯೆ ಆಗದು.
- ನೆಟ್ಟು ನಾಲ್ಕು ವರ್ಷಕ್ಕೇ ಫಲಕೊಡಲು ಪ್ರಾರಂಭವಾಗುತ್ತದೆ.
- ಮರದ ಗಂಟುಗಳು ಹತ್ತಿರವಾಗಿದ್ದು, ಎತ್ತರದ ಸ್ಥಳೀಯ ತಳಿಯಷ್ಟು ಬೇಗ ಬೆಳೆಯುವುದಿಲ್ಲ.
- ಹೈಬ್ರೀಡ್ ಅಥವಾ ಸಂಕರಣ ಮಾಡುವಾಗ ಎತ್ತರದ ತಳಿಗೆ ಗಿಡ್ಡ ತಳಿಯ ಮೂಲಕ ಕ್ರಾಸಿಂಗ್ ಮಾಡಿ ಅವೆರಡರ ಗುಣಗಳು ಹೊಸ ಪೀಳಿಗೆಗೆ ಬರುತ್ತದೆ.
- ಹಾಗಾಗಿ ಹೆಚ್ಚು ಎತ್ತರವೂ ಇಲ್ಲದೆ, ತೀರಾ ಗಿಡ್ದವೂ ಆಲ್ಲದ ತಳಿಯಾಗಿರುತ್ತದೆ.
- ಮರ 20-30 ವರ್ಷ ಬೆಳೆದರೂ ಕಾಯಿ ಕೀಳಲು ಏಣಿ ಸಾಕಾಗುತ್ತದೆ.
- ಹೈಬ್ರೀಡ್ ತಳಿಗಳ ಕಾಯಿ ಕೊಬ್ಬರಿಗೂ ಆಗುತ್ತದೆ. ಎಳನೀರಿಗೂ ಆಗುತ್ತದೆ.
- ಕಾಯಿಯ ಒಳಗೆ ಹೆಚ್ಚು ನೀರು ಇರುತ್ತದೆ. ರುಚಿಯೂ ಉತ್ತಮವಾಗಿರುತ್ತದೆ.
- ಸ್ಥಳೀಯ ತಳಿಯ ದುಪ್ಪಟ್ಟು ಇಳುವರಿ ಅಷ್ಟೇ ಆರೈಕೆಯಲ್ಲಿ ಬರುತ್ತದೆ.
ಇವರು ವಾರಕ್ಕೊಮ್ಮೆ ಬೇಡಿಕೆಯ ಮೇಲೆ ಸ್ವಲ್ಪ ಸ್ವಲ್ಪ ಎಳನೀರು ಕೊಡುತ್ತಾರೆ. ಎಳನೀರಿನ ತಳಿಯಾದ ಚೌಘಾಟ್ ಆರೆಂಜ್ ಡ್ವಾರ್ಫ್, (COD Chowghat Orange Dwarf) ಮಲಯನ್ ಎಲ್ಲೂ ಡ್ವಾರ್ಪ್ MYD, Malayan Yellow Dwarf) ತಳಿಗಳು ಹೆಚ್ಚು ಬೆಲೆಗೆ ಬೇಡಿಕೆಯಲ್ಲಿ ಮಾರಾಟವಾಗುತ್ತದೆ. ಹೈಬ್ರೀಡ್ ತಳಿಗಳ ಬಣ್ಣವೂ ಸ್ವಲ್ಪ ಕಿತ್ತಳೆ ಬಣ್ಣಕ್ಕೆ ಹತ್ತಿರವಾಗಿದ್ದು, ಅದು ಸಹ ಮಾರುಕಟ್ಟೆಯಲ್ಲಿ ಚೆನ್ನಾಗಿ ಮಾರಾಟವಾಗುತ್ತದೆ. ಎಳನೀರು ಮಾರಾಟ ಮಾಡುವುದರಿಂದ ಕಾಯಿಗಿಂತ ಲಾಭವಿದೆ. ಇಳುವರಿಯೂ ಹೆಚ್ಚಾಗುತ್ತದೆ.
ತಿಂಗಳಿಗೆ 10000 ದಷ್ಟು ತೆಂಗಿನ ಕಾಯಿ ಮಾರಾಟಕ್ಕೆ ಸಿಗುತ್ತದೆ ಎನ್ನುತ್ತಾರೆ. ಎಳನೀರಿಗೆ ಬೇಡಿಕೆ ಚೆನ್ನಾಗಿರುವಾಗ ಅದನ್ನು ಮಾರಾಟ ಮಾಡುವುದು, ಇಲ್ಲದಾಗ ಬೆಳೆಯಲು ಬಿಟ್ಟರೆ ಕಾಯಿಯಾಗುತ್ತದೆ. ಅದಕ್ಕೂ ಈಗ ಕಿಲೋ ಲೆಕ್ಕ ಆದ ಕಾರಣ ಅನುಕೂಲವಾಗಿದೆ ಎನ್ನುತ್ತಾರೆ.
ಇವರು ತೆಂಗು ಬೆಳೆ ಬೆಳೆಸುವ ಸಮಯದಲ್ಲಿ ಕಾಪುವಿನಲ್ಲಿ ಮುದ್ದಣ ನರ್ಸರಿಯವರು ಹೈಬ್ರೀಡ್ ತೆಂಗಿನ ಬೀಜೋತ್ಪಾದನೆ ಮಾಡುತ್ತಿದ್ದರು. ಅವರಿಗೆ ನರ್ಸರಿ ವ್ಯವಹಾರದಲ್ಲಿ ಉತ್ತಮ ಹೆಸರು ಇತ್ತು. ಅಲ್ಲಿಂದ ಸಸಿ ತಂದು ಬೆಳೆಸಿದ ಗಿಡಗಳು ಇವು ಎನ್ನುತ್ತಾರೆ ಶೆಟ್ಟರು.
- ಹೈಬ್ರೀಡ್ ತೆಂಗಿನಲ್ಲಿ ಇಳುವರಿ ಏನೋ ಚೆನ್ನಾಗಿ ಬರುತ್ತದೆ, ಕಾಯಿ ಕೀಳುವುದು ಎಲ್ಲವೂ ಸುಲಭ.
- ಆದರೆ ಇದಕ್ಕೆ ಕುರುವಾಯಿ ದುಂಬಿಯ ಕಾಟ ಅಧಿಕ. ಇದನ್ನು ಯಾವಾಗಲೂ ಗಮನಿಸುತ್ತಾ ಇರಬೇಕು.
- ಅದಕ್ಕೆ ಬೇಕಾದ ನಿರ್ವಹಣಾ ಕ್ರಮಗಳನ್ನು ಮಾಡುತ್ತಾ ಇರಬೇಕು.
- ಹಾಗೆಯೇ ಸುಳಿ ಕೊಳೆಯುವ ರೋಗವೂ ಇದೆ. ಇದನ್ನೂ ಗಮನಿಸುತ್ತಾ ಇದ್ದರೆ ಸರಿಪಡಿಸಬಹುದು.
ಕಳೆದ ಎರಡು ಮೂರು ವರ್ಷಗಾಳಿಂದ ಮತ್ತೆ ಬೆಳೆ ವಿಸ್ತರಣೆ ಮಾಡಿದ್ದಾರೆ. ಸುಮಾರು 400 ರಷ್ಟು ಹೈಬ್ರೀಡ್ ತಳಿಯ ತೆಂಗಿನ ಸಸಿಯನ್ನು CPCRI ನೆಟ್ಟಣ , ಸುಭ್ರಮಣ್ಯ ಇಲ್ಲಿಂದ ತರಿಸಿ ನಾಟಿ ಮಾಡಿದ್ದಾರೆ. ಹೈಬ್ರೀಡ್ ಫಸಲು ನೋಡಿದರೆ ಮತ್ತೆ ಸ್ಥಳೀಯ ತಳಿ ಹಿಡಿಸಲಾರದಂತೆ.
ತೆಂಗಿನ ಜೊತೆಗೆ ಬಾಳೆ ಬೆಳೆ:
- ತೆಂಗು ಒಂದೇ ಲಾಭದಾಯವಾಗುವುದಿಲ್ಲ. ಅದರ ಮಧ್ಯಂತರದಲ್ಲಿ ಇರುವ ಸ್ಥಳಾವಕಾಶದಲ್ಲಿ ಬಾಳೆ ಬೆಳೆದರೆ ಉತ್ತಮ ಲಾಭವಿದೆ.
- ಬಾಳೆಯಲ್ಲಿ ಕದಳಿ ಅಥವಾ ಪುಟ್ಟು ಬಾಳೆಗೆ ಹೆಚ್ಚು ಬೆಲೆ.
- ಇದನ್ನು ಮಧ್ಯಂತರದಲ್ಲಿ ಎರಡೂ ಸಾಲುಗಳಲ್ಲಿ ನಾಟಿ ಮಾಡುವುದರಿಂದ ಪ್ರತೀ ಗೊನೆ ಸರಾಸರಿ 15 ಕಿಲೋ ತನಕ ಬರುತ್ತದೆ.
- ಇದು ಲಾಭದಾಯಕ. ಒಮ್ಮೆ ಬಾಳೆ ನೆಟ್ಟರೆ 1.5 ವರ್ಷಕ್ಕೆ ಎರಡು ಗೊನೆ ಪಡೆಯಲಿಕ್ಕಾಗುತ್ತದೆ.
- ಇದಕ್ಕೆ ಹಾಕುವ ಗೊಬ್ಬರದಿಂದ ತೆಂಗಿನ ಫಸಲು ಹೆಚ್ಚುತ್ತದೆ.
ತೆಂಗಿನ ಸಸಿ ಎಳೆಯದಿರುವಾಗ ಮಿಶ್ರ ಬೆಳೆ:
- ಸುವರ್ಣ ಗಡ್ಡೆ, ತರಕಾರಿ ಗಡ್ಡೆ ಗೆಣಸಿನಲ್ಲಿ ಉತ್ತಮ ಬೆಲೆ ಇರುವ ಬೆಳೆ.
- ಇದನ್ನು ತೆಂಗಿನ ಮರಗಳು ಫಲ ಕೊಡುವ ತನಕವೂ ಬೆಳೆಯಬಹುದು.
- ಫಲ ಬಿಟ್ಟ ನಂತರವೂ ಬೆಳೆಯಬಹುದು. ಸರಾಸರಿ 10 ಕಿಲೋ ಗಡ್ಡೆ ಬರುತ್ತದೆ.
- ಕಿಲೋ ಗೆ ಸರಾಸರಿ 20-30 ರೂ ತನಕ ದರ ಸಿಗುತ್ತದೆ. ವರ್ಷಕ್ಕೆ ಸುಮಾರು 15 ಟನ್ ನಷ್ಟು ಸುವರ್ಣಗಡ್ಡೆ ಬೆಳೆಯುತ್ತಾರೆ.
- ಅರಶಿನ ಬೆಳೆಯೂ ಸಹ ಉತ್ತಮ ಮಿಶ್ರ ಬೆಳೆ. ಬಿಸಿಲು ಚೆನ್ನಾಗಿದ್ದಲ್ಲಿ ಉತ್ತಮ ಗಡ್ಡೆ ಬರುತ್ತದೆ.
- ಸ್ವಲ್ಪ ಬಿಸಿಲು ಕಡಿಮೆಯಾದರೂ ಬರುತ್ತದೆ. ಇದನ್ನು ಹುಡಿ ಮಾಡಿಯೂ ಮಾರಾಟ ಮಾಡಬಹುದು.
- ಇಲ್ಲವಾದರೆ ಹಾಗೆಯೇ ಗಡ್ಡೆ ಒಣಗಿಸಿ ಮಾರಾಟ ಮಾಡಬಹುದು. ಲಾಭದ ಬೆಳೆ. ಇದರ ಎಲೆಗೂ ಬೇಡಿಕೆ ಇದೆ.
ಏನು ಗೊಬ್ಬರ ಕೊಡುತ್ತಾರೆ?
ತೆಂಗಿಗೆ ಇವರು ರಸ ಗೊಬ್ಬರವನ್ನೂ ಕೊಡುತ್ತಾರೆ. ಕುರಿ ಗೊಬ್ಬರ ತದು ಅದನ್ನು ಕಾಂಪೋಸ್ಟು ಮಾಡಿ, ಅದಕ್ಕೆ ಕೆಲವು ಜೀವಾಣುಗಳನ್ನು ಸೇರಿಸಿ ವರ್ಷ ಕಳೆದು ಬಳಕೆ ಮಾಡುತ್ತಾರೆ. ಶಿಫಾರಿತ ಪ್ರಮಾಣದ ಗೊಬ್ಬರ ಹಾಕುವುದು ಅಗತ್ಯ ಎನ್ನುತ್ತಾರೆ.
ಭತ್ತದ ಬೆಳೆ:
- ಭತ್ತವನ್ನು ಇವರು ಬಹಳ ಹಿಂದಿನಿಂದಲೂ ಬೆಳೆಯುತ್ತಿದ್ದವರು. ಬೆಳೆಯುವಾಗ ಚೆನ್ನಾಗಿ ಬೆಳೆಯಬೇಕು.
- ತಜ್ಞರ ಸಲಹೆ ಪಡೆದು ಬೆಳೆಯಬೇಕು. ಹಾಗೆ ಬೆಳೆದರೆ ಅದನ್ನು ಬೀಜದ ಉದ್ದೇಶಕ್ಕೆ ಮಾರಾಟ ಮಾಡಲಿಕ್ಕಾಗುತ್ತದೆ.
- ಬೀಜದ ಭತ್ತಕ್ಕೆ ಬೆಲೆ ಉತ್ತಮವಾಗಿದೆ. ಇವರು ಹಿಂದೆ ಪಲ್ಗುಣ ತಳಿ ಪರಿಚಯಿಸಲ್ಪಟ್ಟಾಗ ಈಗಿನ ತೋಟ ಇರಲಿಲ್ಲ.
- ಇದನ್ನು ಬೀಜದ ಉದ್ದೇಶಕ್ಕೆ ಬೆಳೆದವರು. ಇದಕ್ಕೆ ಪ್ರಶಸ್ತಿಯೂ ಬಂದಿದೆಯಂತೆ.
- ಈಗ MO4 ತಳಿಯನ್ನು ಬೀಜೋತ್ಪಾದನೆಗಾಗಿಯೇ ಬೆಳೆಯುತ್ತಾರೆ.
ಅಡಿಕೆಗೇ ಯಾಕೆ ಹೋಗಲಿಲ್ಲ?
ಅಡಿಕೆ ಈಗಿನ ದರದಲ್ಲಿ ಲಾಭದಾಯಕ ನಿಜ. ಆದರೆ ಈ ರೀತಿ ಬೆಳೆ ವಿಸ್ತರಣೆ ಆಗುವುದು ನೋಡಿದರೆ ದರ ಬಿದ್ದರೆ ಬಹಳ ಕಷ್ಟವಾಗಬಹುದು. ಆದರೆ ತೆಂಗಿಗೆ ತಿನ್ನುವ ವಸ್ತುವಾದ ಕಾರಣ ಯಾವಾಗಲೂ ಬೇಡ ಎಂದು ಆಗಲಾರದು.ಅಡಿಕೆಯನ್ನೂ ಬೆಳೆಯುತ್ತಾರೆ. ತೆಂಗಿನಷ್ಟು ಅಡಿಕೆ ಬೆಳೆ ಇಲ್ಲ. ಅಡಿಕೆ ಮರಗಳಿಗೆ ಕರಿಮೆಣಸು ನಾಟಿ ಮಡಿದ್ದಾರೆ. ಉತ್ತಮ ಇಳುವರಿ ಬರುತ್ತದೆ. ಇದಕ್ಕೆ ಕೆಲಸ ಹೆಚ್ಚು ಎನ್ನುತ್ತಾರೆ.
ಹಣ್ಣಿನ ಗಿಡಗಳು:
- ಮಾವು ಹಲಸು, ಲಿಂಬೆ, ಮೂಸಂಬಿ ಮುಂತಾದ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ.
- ಕಾರಾವಳಿಯಾದರೂ ಇಲ್ಲಿ ಬೇಸಿಗೆಯಲ್ಲಿ ಲಿಂಬೆ ಚೆನ್ನಾಗಿ ಬೆಳೆಯುತ್ತದೆ.
- ಮೂಸಂಬಿಯೂ ಚೆನ್ನಾಗಿ ಬರುತ್ತದೆ. ನೂರಕ್ಕೂ ಹೆಚ್ಚು ಲಿಂಬೆ ಮೂಸಂಬಿ ಗಿಡಗಳಿವೆ.
- ಈಗ ಹೊಸ ಹೊಸ ಹಲಸಿನ ತಳಿಗಳನ್ನು ಪರಿಚಯಿಸಲಾಗಿದ್ದು, ಇದರ ಸಸಿಗಳನ್ನೂ ಸಹ ನೆಟ್ಟಿದ್ದಾರೆ.
- ವರ್ಷದ ಎಲ್ಲಾ ಕಾಲದಲ್ಲೂ ಹಲಸಿನ ಕಾಯಿ ಸಿಗುವ ತಳಿಯೂ ಇದೆ.
- ಮಾವಿನಲ್ಲಿ ಉತ್ತಮ ಮಾರುಕಟ್ಟೆ ಬೆಲೆ ಇರುವ ಮಲ್ಲಿಕಾ ಹಾಗೂ ಇನ್ನಿತರ ಮಾವಿನ ತಳಿಗಳನ್ನು ಬೆಳೆಸಿದ್ದಾರೆ.
- ಅದಕ್ಕೆಂದೇ ಪ್ರತ್ಯೇಕ ನೆಡು ತೋಪು ಮಾಡಿದ್ದಾರೆ.
ತೋಟದ ಕಳೆಗಳನ್ನು ಆಗಾಗ ಯಂತ್ರಗಳ ಮೂಲಕ ಸವರಿ ಮಣ್ಣಿಗೆ ಸೇರಿಸುತ್ತಾರೆ. ಇದು ಮಣ್ಣಿಗೆ ಸಾವಯವ ಅಂಶವನ್ನು ಸೇರಿಸಿಕೊಡುತ್ತದೆ. ಎರೆಹುಳುಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಮಣ್ಣಿನ ರಚನೆ ಉತ್ತಮವಾಗುತ್ತದೆ. ಬೇಸಿಗೆಯಲ್ಲಿ ತೇವಾಂಶ ಸಂರಕ್ಷಣೆಗೂ ಅನುಕೂಲವಾಗುತ್ತದೆ.
ಕೆರೆ ಮತ್ತು ಮೀನು ಸಾಕಾಣಿಕೆ:
ತೋಟದಲ್ಲಿ ತಗ್ಗಿನ ಜಾಗದಲ್ಲಿ ನೀರಾವರಿಯ ಕೆಕೆ ಮಾಡಿಕೊಂಡಿದ್ದು., ಇದರ ಆಳ 50 ಅಡಿಯಷ್ಟು ಇದೆಯಂತೆ. ಇದರಲ್ಲಿ ಸಾಕುವ ಮೀನುಗಳನ್ನು ಬೆಳೆಸುತ್ತಾರೆ. ಇದು ನೀರಿನಿಂದಲೂ ಪಡೆಯುವ ಉತ್ಪತ್ತಿಯಾಗಿರುತ್ತದೆ. ಕಾಟ್ಲಾ , ರೋಹು ಮುಂತಾದ ಮೀನು ಆಹಾರ ಕೊಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಕೃಷಿ ಹೊಂಡ ಇದ್ದದ್ದನ್ನು ವ್ಯವಸ್ಥಿತವಾಗಿ ಪುನರ್ ನಿರ್ಮಾಣ ಮಾಡಿ, ಅದರಲ್ಲಿ ಮೀನು ಸಾಕಾಣೆ ಮಾಡಿದ್ದಾರೆ.
ಕೃಷಿಯಲ್ಲಿ ಲಾಭ ಆಗಬೇಕಾದರೆ ಸಮಗ್ರ ಕೃಷಿ ಮಾಡಬೇಕು. ಒಂದಕ್ಕೊಂದು ಪೂರಕವಾಗಿ, ವರ್ಷವಿದೀ ಕೆಲಸದವರಿಗೆ ಕೆಲಸ ಕೊಟ್ಟು ಬೆಳೆ ಯೋಜನೆ ಹಾಕಿಕೊಂಡು ಬೆಳೆದರ ನಷ್ಟ ಇಲ್ಲ. ಲೆಕ್ಕಾಚಾರ ಬೇಕು ಎಂಬುದು ರತ್ನಾಕರ ಶೆಟ್ಟಿ ಯವರ ಅಭಿಪ್ರಾಯ.