ಅಡಿಕೆ ಮರದ ಸುಳಿ ಭಾಗ ಮುರುಟಿಕೊಂಡು ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ಹೆಚ್ಚಿನ ಕಡೆ ಕಂಡು ಬರುತ್ತಿದ್ದು ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ನಿಜವಾದ ಕಾರಣ ಏನು ಇದನ್ನು ಹೇಗೆ ಸರಿಮಾಡಬಹುದು ಎಂಬ ಬಗ್ಗೆ ಇಲ್ಲಿ ಕೂಲಂಕುಶವಾಗಿ ತಿಳಿಯೋಣ.
ಅಡಿಕೆ ಸಸಿ, ತೆಂಗಿನ ಸಸಿ, ಮರಗಳ ಸುಳಿ ಬೆಳವಣಿಗೆ ಹಂತದಲ್ಲಿದ್ದ್ದಾಗ ಒಂದರಿಂದ ಒಂದು ಗರಿ ಸಧೃಢವಾಗಿ ಬರುತ್ತಾ ಇರಬೇಕು. ಸುಳಿ ಭಾಗದಲ್ಲಿ ತೆರೆದುಕೊಳ್ಳದ ಗರಿ. ಕೆಳಭಾಗದಲ್ಲಿ ನಿಂತು ನೋಡಿದಾಗ ಒಂದು ಕೋಲಿನ ತರಹ ಕಾಣಿಸುತ್ತದೆ. ಇದು ಸಮರ್ಪಕವಾಗಿ ಕಾಣಿಸಿತು ಎಂದಾದರೆ ಅದರ ಸುಳಿ ಸರಿಯಾಗಿದೆ ಎಂದರ್ಥ. ಒಂದು ವೇಳೆ ಸುಳಿ ಕಾಣಿಸದೆ ಇದ್ದರೆ ಅಥವಾ ಸುಲೀ ಕಂಡರೂ ಅದು ಕಿರಿದಾಗಿ ಕಂಡರೆ ಅಲ್ಲಿ ಸುಳಿ ಮುರುಟಿದೆ ಎಂದರ್ಥ. ಸುಳಿ ಒಮ್ಮೆ ಮುರುಟಿದೆ ಎಂದಾದರೆ ನಂತರ ಬರುವ ಸುಳಿಗಳು ಮುರುಟಿಕೊಂಡೇ ಮೂಡುತ್ತಿರುತ್ತವೆ. ಕೆಲವೊಮ್ಮೆ ಯಾವುದೇ ಉಪಚಾರ ಮಾಡದೆಯೂ ಸ್ದರಿಯಾಗುವುದಿದೆ.
ಯಾವ ಕಾರಣಕ್ಕೆ ಸುಳಿ ಮುರುಟಿಕೊಳ್ಳುತ್ತದೆ?
- ಸುಳಿ ಭಾಗದ ಗರಿ ಬೆಳೆವಣಿಗೆ ಕಡಿಮೆಯಾಗುವುದೇ ಸುಳಿ ಮುರುಟಿಕೊಳ್ಳುವುದು.
- ಇದಕ್ಕೆ ಕಾರಣ ಸುಳಿ ಭಾಗದಲ್ಲಿ ಒಂದು ರೀತಿಯ ತಿಗಣೆಯ ವಾಸ.
- ಈ ತಿಗಣೆ ಸುಳಿಯ ಸಂದುಗಳಲ್ಲಿ ಕುಳಿತು ರಸ ಹೀರುತ್ತಾ ಇರುತ್ತದೆ.
- ಈ ತಿಗಣೆಯನ್ನು ಭಕ್ಷಿಸಲು ಅಲ್ಲಿಗೆ ಇರುವೆಗಳು ಬರುತ್ತವೆ.
- ಎರಡು ಮೂರು ತರಹದ ತಿಗಣೆಗಳು ಸುಳಿ ಭಾಗದಲ್ಲಿ ಕುಳಿತು ರಸ ಹೀರುತ್ತವೆ.
- ಸುಳಿ ತಿಗಣೆ, (Spindle bug) ಇದು ನಮಗೆಲ್ಲಾ ಗೊತ್ತಿರುವಂತದ್ದು. ಇದಲ್ಲದೆ ಬೇರೆ ತರಹದ ತಿಗಣೆ ಸಹ ಇಲ್ಲಿ ವಾಸಿಸುತ್ತದೆ.
- ಹಿಟ್ಟು ತಿಗಣೆಯೂ ಸಹ ಇರುತ್ತದೆ.ಇವೆಲ್ಲಾ ಸುಳಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.
- ಇವುಗಳನ್ನು ಭಕ್ಷಿಸಲು ಬಂದ ಇರುವೆಗಳು ಅವುಗಳ ಕಾಲಿನ ಮೂಲಕ ಬೇರೆ ಕಡೆಗೆ ಇದನ್ನು ಪ್ರಸಾರ ಮಾಡುತ್ತವೆ.
ಹೀಗೆ ಆದರೆ ತೊಂದರೆ ಏನು?
- ಸುಳಿ ಭಾಗದ ತೆರೆದುಕೊಳ್ಳದ ಎಲೆಯ ಬೆಳವಣಿಗೆ ಕುಂಠಿತವಾದರೆ, ಫಲ ಕೊಡುವ ಮರವಾದರೆ ಆ ಸುಳಿ ಕಂಕಳಲ್ಲಿ ಹೂ ಗೊಂಚಲು ಇರುವುದಿಲ್ಲ.
- ಇದ್ದರೂ ಸಹ ಅದು ಸಣ್ಣದಾಗಿದ್ದು, ಕಾಯಿ ಕಚ್ಚಿಕೊಳ್ಳುವುದಿಲ್ಲ. ಇಂತದ್ದು ಆದರೆ ಒಂದು ಮರ / ಸಸಿ ನಂತರ ಇನ್ನೊಂದು ಆಗುತ್ತಾ ಇರುತ್ತದೆ.
- ಹಾಗಾಗಿ ಈ ರೀತಿ ಆದರೆ ಅದನ್ನು ಉಪಚಾರ ಮಾಡಿ ಸರಿಯಾಗುವಂತೆ ಮಾಡಬೇಕು.
- ಹಾಗೆಂದು ಕೆಲವು ಕಡೆ ಅದು ತನ್ನಷ್ಟಕ್ಕೇ ಸರಿಯಾದ ಉದಾಹರಣೆ ಸಾಕಷ್ಟು ಇದೆ.
- ಇದಕ್ಕೆ ಕಾರಣ, ಈ ತಿಗಣೆಗಳನ್ನು ಭಕ್ಷಿಸುವ ಸ್ವಾಭಾವಿಕ ವೈರಿ ಕೀಟಗಳು ( predetors) ಗಳು ಬಂದು ಅದನ್ನು ನಾಶ ಮಾಡಿ ಆದದ್ದಾಗಿರುತ್ತದೆ.
- ಇದು ಕೆಲವೊಮ್ಮೆ ಆಗುತ್ತದೆ. ಕೆಲವೊಮ್ಮೆ ಆಗದೆಯೂ ಇರಬಹುದು.
- ಕ್ರಮೇಣ ಈ ಮರವು ಹಿಡಿಮುಂಡಿಗೆ ಅಥವಾ ಬಂದ್ ರೋಗದ ತರಹ ಆಗುವ ಸಾಧ್ಯತೆಯೂ ಇದೆ.
- ಇಂತಹ ಗರಿಗಳು ಸಹಜವಾದ ಗಟ್ಟಿತನವನ್ನು ಹೊಂದಿರುವುದಿಲ್ಲ.
ನಿಯಂತ್ರಣ ವಿಧಾನ:
- ತಿಗಣೆ ಜಾತಿಯ ಕೀಟಗಳನ್ನು ನಿಯಂತ್ರಣ ಮಾಡುವುದು ಸ್ವಲ್ಪ ಕಷ್ಟದ ಕೆಲಸ.ಈ ತಿಗಣೆಗಳು ಸಾಮನ್ಯವಾಗಿ ಕೀಟನಾಶಕಗಳ ಸಂಪರ್ಕಕ್ಕೆ ಸಿಕ್ಕದೆ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ.
- ಇವು ಮಣ್ಣಿನ ಎಡೆಯಲ್ಲೂ ಇರುತ್ತವೆಯಾದ ಕಾರಣ ನಿಯಂತ್ರಿಸಲಿಕ್ಕೆ ಸ್ವಲ್ಪ ಕಠಿಣ ಎಂದೇ ಹೇಳಬಹುದು.
- ಇದೇ ಕಾರಣಕ್ಕೆ ತಿಗಣೆ (Maite) ಇವುಗಳನ್ನು ಪೂರ್ತಿಯಾಗಿ ಹದ್ದುಬಸ್ತಿಗೆ ತರಲು ಆಗುವುದಿಲ್ಲ.
- ಇವುಗಳ ನಿಯಂತ್ರಣಕ್ಕೆ ಸ್ಪರ್ಶ (Contact) ಕೀಟನಾಶಕಗಳಿಗಿಂತ ಅಂತರ್ ವ್ಯಾಪೀ( Systemic) ಕೀಟನಾಶಕಗಳೇ ಹೆಚ್ಚು ಫಲಕೊಡುತ್ತವೆ.
- ಇದರ ನಿಯಂತ್ರಣಕ್ಕೆ ಕೆಲವು ಬೆಳೆಗಾರರು ಸಸಿ/ ಮರದ ಬುಡಕ್ಕೆ ಥಿಮೇಟ್, ಅಥವಾ ಫೋರೇಟ್ ಹಾಕುವುದುಂಟು.
- ಈ ಕೀಟನಾಶಕಗಳನ್ನು ಹಾಕಿದಾಗ ಅದು ಬೇರಿನ ಮೂಲಕ ಸಸ್ಯಾಂಗದ ಒಳಗೆ ಸೇರಿಕೊಂಡು ತಿಗಣೆಗಳನ್ನು ನಾಶಮಾಡುತ್ತದೆ.
- ಕೆಲವರು ಸುಳಿ ಬಾಗಕ್ಕೆ ಕೀಟನಾಶವನ್ನು ಸಿಂಪರಣೆ ಮಾಡಿ ತಿಗಣೆಗಳನ್ನು ನಾಶಮಾಡಿ ಸರಿ ಮಾಡುತ್ತಾರೆ.
- ಇನ್ನು ಕೆಲವರು ಜೈವಿಕ ಕೀಟನಾಶಕವಾದ ಪೆಸಿಲೋಮೈಸಿಸ್ ಮತ್ತ್ ವೆರ್ಟಿಸೀಲಿಯಂ ಮಿಶ್ರಣವನ್ನು ಬುಡ ಭಾಗದ ಮೂಲಕ ಕೊಟ್ಟು ಸಹ ಇದನ್ನು ನಾಶ ಮಾಡಬಹುದು.
- ಆಯ್ಕೆ ಆವರವರ ಅನುಕೂಲಕ್ಕನುಗುಣವಾದದ್ದು.
ಅಡಿಕೆ ಮರ ಮಾತ್ರವಲ್ಲ ತೆಂಗಿಗೂ ಆಗುತ್ತದೆ:
- ತೆಂಗಿನ ಗರಿಗಳು ಕುಬ್ಜವಾಗುವ ಸಮಸ್ಯೆ ನಮಗೆಲ್ಲಾ ಗೊತ್ತಿದೆ. ಇದಕ್ಕೂ ಕಾರಣ ಸುಳಿ ಭಾಗದಲ್ಲಿ ರಸ ಹೀರುವ ತಿಗಣೆ.
- ಸೂಕ್ಷ್ಮ ವಾಗಿ ನೋಡಿದಾಗ ಇದು ಕಾಣಿಸುತ್ತದೆ.
- ಈ ರೀತಿ ಆದ ಮರಗಳು/ಸಸಿಗಳಿಗೆ ಒಮ್ಮೆ ಉಪಚಾರ ಮಾಡಿದರೆ ಕೆಲವು ಸಮಯದ ವರೆಗೆ ಸರಿ ಇರುತ್ತದೆ.
- ಮತ್ತೆ ಪುನಹ ತಿಗಣೆ ಬರುವ ಸಾಧ್ಯತೆಯೂ ಇದೆ. ಇದರ ಸುಳಿಗೂ ಸಹ ಕೀಟನಾಶಕದ ಸಿಂಪರಣೆ ಮಾಡಬೇಕು.
ಬೇಸಾಯ ಕ್ರಮದಲ್ಲಿ ಹತೋಟಿ:
- ಸಮರ್ಪಕ ಬೇಸಾಯ ಕ್ರಮದಲ್ಲಿ ಪೂರ್ತಿಯಾಗಿ ಈ ಸುಳಿ ಮುರುಟು ಸಮಸ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲವಾದರೂ ಸ್ವಲ್ಪ ಮಟ್ಟಿಗೆ ಸಮತೋಲನ ಗೊಬ್ಬರ ಕೊಡುವ ಮೂಲಕ ಕಡಿಮೆಮಾಡಿಕೊಳ್ಳಲು ಸಾಧ್ಯ.
- ಸಾರಜನಕ ಹೆಚ್ಚಾಗಿ ಕೊಟ್ಟಿರುವ ಕಡೆ ಈ ಸಮಸ್ಯೆ ಹೆಚ್ಚು. ಸೊಕ್ಕಿ ಬೆಳೆದ ಸಸ್ಯಗಳು ಯವಾಗಲೂ ಕೀಟಗಳನ್ನು /ರೋಗಗಳನ್ನು ಹೆಚ್ಚಾಗಿ ಆಕರ್ಷಿಸುತ್ತವೆ.
- ಹಾಗೆಯೇ ಇದೂ ಸಹ. ಸಾರಜನಕ ಗೊಬ್ಬರಗಳಾದ ಕೋಳಿ ಗೊಬ್ಬರ, ಕುರಿ ಗೊಬ್ಬರ, ಯೂರಿಯಾ, ಕೊಟ್ಟಿಗೆ ಗೊಬ್ಬರಗಳನ್ನು ಕೊಡುವ ಜೊತೆಗೆ ಉಳಿದ ರಂಜಕ ಮತ್ತು ಪೊಟ್ಯಾಶಿಯಂ ಗೊಬ್ಬರಗಳನ್ನೂ ಕೊಡುವುದರಿಂದ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯಿಂದ ಪಾರಾಗಬಹುದು.
ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಮಣ್ಣಿನಲ್ಲಿ ಗಂಧಕದ ಅಂಶ ಹಗೆಯೇ ಸತು ಮತ್ತು ಮೆಗ್ನೀಶಿಯಂ ಕ್ಯಾಲ್ಸಿಯಂ ಅಂಶದ ಕೊರತೆ ಇರುತ್ತದೆ. ಅದನ್ನು ನೀಡುತ್ತಾ ಇರಬೇಕು. ಸತುವಿನ ಸಲ್ಫೇಟ್ (ZINK SULPHATE ) ಮೆಗ್ನೀಶಿಯಂ ಸಲ್ಫೇಟ್ ( Megnisium sulphate) ಸುಣ್ಣ ಇತ್ಯಾದಿಗಳನ್ನು ಅಗತ್ಯಕ್ಕನುಗುಣವಾಗಿ ಮಣ್ಣಿಗೆ ಪೂರೈಕೆ ಮಾಡುತ್ತಾ ಇರಬೇಕು.