ಇದು ಒಂದು ಅಧ್ಬುತ ಔಷಧೀಯ ಗುಣದ ಸಸ್ಯ. ನಿಮ್ಮ ಮನೆ ಹಿತ್ತಲಲ್ಲಿ ಒಂದೆರಡಾದರೂ ಇರಲಿ. ಅಲೋಪತಿಯಲ್ಲಿ ಗುಣಪಡಿಸಲಾಗದ ಖಾಯಿಲೆಯನ್ನು ಈ ಮೂಲಿಕಾ ಗಿಡ ಕೆಲವೇ ಗಂಟೆಗಳಲ್ಲಿ ಗುಣ ಮಾಡುತ್ತದೆ. ಸಮಸ್ಯೆ ಬಂದಾಗ ಇದನ್ನು ಹುಡುಕುವ ಬದಲು ಎಲ್ಲಾದರೂ ಸಿಕ್ಕಿದರೆ ಒಂದು ಎರಡು ಗಿಡ ನೆಡಿ.
ಹಿರಿಯ ನಿವೃತ್ತ ವೈದ್ಯರೊಬ್ಬರು ಹೇಳುತ್ತಿರುತ್ತಾರೆ. ಅಲೋಪತಿಯ ಬಹುತೇಕ ಔಷಧಿಗಳಿಗೆ ನಮ್ಮ ಸುತ್ತ ಮುತ್ತ ಇರುವ ಸಸ್ಯಗಳೇ ಮೂಲ ಎಂದು. ಕಾಲಮೇಘ ಗಿಡದ (ಕಿರಾತ ಕಡ್ಡಿ) ಸಸ್ಯ ಸಾರದಲ್ಲಿ ಜ್ವರ ನಿವಾರಕ ಗುಣ ಇದೆ. ಹಾಗೆಂದು ಇಡೀ ಜಗತ್ತಿನ ಜನರಿಗೆ ಬೇಕಾಗುವ ಔಷಧಿಯನ್ನು ಇದರ ಸಾರ ತೆಗೆದು ಮಾಡುವುದು ಪ್ರಾಯೋಗಿಕವಲ್ಲ. ಅದಕ್ಕೆ ಆ ಸಾರದಲ್ಲಿರುವ ಅಂಶವನ್ನು ರಾಸಾಯನಿಕವಾಗಿ ಸಂಯೋಜಿಸಿ ಜ್ವರದ ಔಷಧಿಯಾಗಿ ಕೊಡಲಾಗುತ್ತದೆ. ಹೀಗೆ ಹಲವಾರು ಔಷಧಿಗಳಿಗೆ ನಮ್ಮ ಸಸ್ಯ ಮೂಲಗಳೇ ಮೂಲ ಆಕರ.
ಇಂತಹ ಹಲವಾರೂ ಔಷಧೀಯ ಮಹತ್ವ ಉಳ್ಳ ಸಸ್ಯಗಳು ನಮ್ಮ ಸುತ್ತಮುತ್ತ ಇರುತ್ತವೆ. ಮೊನ್ನೆ ತಾನೇ ಮಂಗಳೂರು ವಿಶ್ವವಿಧ್ಯಾನಿಲಯದ ನಿವೃತ್ತ ಪ್ರೊಫೆಸರ್ ಹಾಗೂ ಅವರ ತಂಡ ಹಾಡೆ ಬಳ್ಳಿಯಲ್ಲಿ ಸ್ತನ ಕ್ಯಾನ್ಸರ್ ಶಮನ ಮಾಡುವ ಶಕ್ತಿ ಇದೆ ಎಂದು ಪತ್ತೆ ಮಾಡಿದ ಸುದ್ದಿ ನಮಗೆಲ್ಲಾ ಗೊತ್ತಿದೆ. ಅಂತಹ ಹಲವಾರು ಮೂಲಿಕಾ ಸಸ್ಯಗಳು ನಮ್ಮಲ್ಲಿವೆ. ನಮಗೆ ಅದರ ಮಹತ್ವ ಗೊತ್ತಿಲ್ಲದೆ ಅದನ್ನು ಅಳಿದು ಹೋಗಲು ಬಿಡುತ್ತಿದ್ದೇವೆ.
ಇದು ಅಸಾಮಾನ್ಯ ಮೂಲಿಕೆ ಸಸ್ಯ:
- ಇದರ ಕನ್ನಡ ಹೆಸರು ಉಮ್ಮತ್ತಿ, ಕರಿ ಉಮ್ಮತ್ತಿ, ಸಂಸ್ಕೃತದಲ್ಲಿ ಕೃಷ್ಣ ಉಮ್ಮತ್ತಿ ಎಂದು ಕರೆಯುತ್ತಾರೆ.
- ದೇಶದ ಎಲ್ಲಾ ಕಡೆ ಕಂಡು ಬರುತ್ತದೆ. ಹಿಂದೆ ನಮ್ಮ ಹಿರಿಯರು ಇದರ ಸಸ್ಯ ಸಿಕ್ಕಿದರೆ ತಂದು ತಮ್ಮ ಹೊಲದಲ್ಲಿ ಎಲ್ಲಿಯಾದರೂ ಬೆಳೆಯಲು ಬಿಡುತ್ತಿದ್ದರು.
- ಆಪತ್ತಿನ ಸಮಯದಲ್ಲಿ ಇದು ಉಪಯೋಗಕ್ಕೆ ಬರುತ್ತಿತು.
- ಈಗ ನೆಡುವವರು ಇಲ್ಲದೆ, ಕಳೆ ನಾಶಕದ ಕಾರುಬಾರಿನಲ್ಲಿ ಅಳಿವಿನ ಅಂಚಿಗೆ ತಲುಪುತ್ತಿದೆ ಎನ್ನಬಹುದು.
- ನಮ್ಮ ಸುತ್ತಮುತ್ತ ಅದೆಷ್ಟು ಔಷಧೀಯ ಸಸ್ಯಗಳಿರಬಹುದು.
- ಅದು ಗೊತ್ತಿದ್ದವರಿಗೆ ನೆಲದಲ್ಲಿ ನಡೆಯುವಾಗೆಲ್ಲಾ ಔಷಧೀಯ ಸಸ್ಯಗಳನ್ನು ಮೆಟ್ಟಿ ನಡೆದೆವೋ ಎಂಬ ತಪ್ಪು ಭಾವನೆ ಬರಬಹುದು.
- ಹೆಚ್ಚಿನ ಸಸ್ಯಗಳಲ್ಲಿ ಒಂದಿಲ್ಲೊಂದು ಔಷಧೀಯ ಗುಣ ಇದೆ.
- ಆದರೆ ಅದು ಈಗ ಹೊಸ ತಲೆಮಾರಿಗೆ ವರ್ಗಾವಣೆಯಾಗದೆ ಬರೇ ಕಳೆ ಸಸ್ಯಗಳಾಗಿ ಉಳಿದಿವೆ.
- ನಮ್ಮ ದೇಶದ ಸಸ್ಯಗಳೇ ಹಾಗೆ, ಅತೀ ದೊಡ್ಡ ಔಷಧೀಯ ಖಜಾನೆ.
ಇದು ವೈರಾಣು ಪ್ರತಿಬಂಧಕ:
- ಇದರ ಹೆಸರು Datura herb, ಇದರಲ್ಲಿ ಮೂರು ವಿಧಗಳು.
- ಒಂದು ಹಚ್ಚ ಹಸುರು ಎಲೆ. ಮತ್ತೊಂದು ಕಪ್ಪು ಮಿಶ್ರ ಹಸುರು ಎಲೆಯುಳ್ಳದ್ದು.
- ಇನ್ನೊಂದು ಅಲಂಕಾರದ ಹೂ ಬಿಡುವಂತದ್ದು. ಇವು ಮೂರೂ ನಮ್ಮ ರಾಜ್ಯದಲ್ಲಿ ಕಾಣಸಿಗುತ್ತದೆ.
- ಪ್ರಾದೇಶಿಕವಾಗಿ ಬೇರೆ ವಿಧಗಳನ್ನು ಕಾಣಬಹುದು. Datura metel ಎಂಬುದು ಹಸುರು ದಂಟಿನ ಬಿಳಿ ಹೂ ಬಿಡುವ ಸಸ್ಯ .
- Datura metel var. fastuosa ಕಪ್ಪು ದಂಟಿನ ಕಪ್ಪು ಹೂ ಬಿಡುವ ಎಲೆಯ ನರಗಳು ಕಪ್ಪಗಿರುವ ಸಸ್ಯ.
- ಎರಡೂ ಸಸ್ಯಗಳೂ ಔಷಧೀಯ. ಇದು ಪಾರಂಪರಿಕ ನಾಟಿ ವೈದ್ಯಕೀಯದಲ್ಲೂ ಬಳಕೆ ಮಾಡಲಾಗುತ್ತಿದೆ.
- ಇದರಲ್ಲಿ ಅಲ್ಕಲಾಯ್ಡ್ಸ್ ಮತ್ತು ಪ್ಲೇವನಾಯ್ಡ್ಸ್ ಅಂಶಗಳಿವೆ.
- ಇದನ್ನು ಆಯುರ್ವೇದ ವೈದ್ಯಕೀಯ ಪದ್ದತಿಯಲ್ಲಿ ಬೇರೆ ಬೇರೆ ಚಿಕಿತ್ಸೆಗೆ ಉಪಯೋಗಿಸುತ್ತಾರೆ.
- ಕಣ್ಣಿನ ದೌರ್ಬಲ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಬಳಕೆ ಮಾಡುತ್ತಾರೆ.
- ನರಗಳ – ಮಾಂಸಖಂಡಗಳ ಸೆಳೆತಕ್ಕೆ ನೋವು ನಿವಾರಕವಾಗಿ ಹಲವು ಔಷಧಿ ತಯಾರಿಕೆಗಳಲ್ಲಿ ಬಳಸುತ್ತಾರೆ.
ಕೆಪ್ಪಟೆ ಬಾವು ಮತ್ತು ಚಿಕಿತ್ಸೆ:
- ನಾಟೀ ವೈದ್ಯಕೀಯದಲ್ಲಿ ಎಲ್ಲರೂ ಮಾಡಬಹುದಾದ ಔಷಧೋಪಚಾರವನ್ನೂ ಇದರಲ್ಲಿ ಮಾಡಬಹುದು.
- ಸಾಮಾನ್ಯವಾಗಿ ನೀವೆಲ್ಲರೂ ಎಳವೆಯಲ್ಲಿ ಕೆಪ್ಪಟೆ ಬಾವು Mumps ಎಂಬ ಅಸ್ವಾಸ್ತ್ಯವನ್ನು ಅನುಭವಿಸಿದವರು.
- ಇದಕ್ಕೆ ಅಲೋಪತಿಯಲ್ಲಿ ಔಷಧಿ ಇದ್ದಂತಿಲ್ಲ. ಆದರೆ ನಮ್ಮ ಸಾಂಪ್ರದಾಯಿಕ ಔಷಧೋಪಚಾರದಲ್ಲಿ ಇದೆ. ಅದುವೇ ದತುರಾ ಸಸ್ಯದ್ದು.
- ಇದರ ಎಲೆಯಲ್ಲಿ ನೋವು ನಿವಾರಕ, ಪರಾವಲಂಬಿ ಜೀವಾಣು (ಜಂತು ಹುಳ೦ ನಿಯಂತ್ರಕ ಹಾಗೆಯೇ ಉರಿ ನಿಯಂತ್ರಕ ಗುಣವಿದೆ.
- ಕೆಪ್ಪಟೆ ಬಾವು ಒಂದು ವೈರಾಣು ಖಾಯಿಲೆ. Mumps is caused by a virus that spreads easily from person to person through infected saliva ಇದನ್ನು ಈ ಸಸ್ಯದ ಎಲೆ ರಸ ಗುಣಪಡಿಸುತ್ತದೆ.
- ನ್ಯಾಶನಲ್ ಇನ್ನೊವೇಟಿವ್ ಫೌಂಡೇಶನ್ ಆಪ್ ಇಂಡಿಯಾ NIF ಇವರು ಇದರ ಹಲವಾರು ಔಷಧೀಯ ಬಳಕೆಯನ್ನು ಗುರುತಿಸಿದ್ದಾರೆ.
- ಅದನ್ನು ಸುಣ್ಣದೊಂದಿಗೆ ಅರೆದು ಕೆಪ್ಪಟೆಗೆ ಹಚ್ಚಿದರೆ ಒಂದೇ ದಿನದಲ್ಲಿ ಬಾವು ತಗ್ಗಿ ಗುಣಮುಖವಾಗುತ್ತದೆ.
- ಹಾಗಾಗಿ ಸ್ವಲ್ಪ ಮಟ್ಟಿಗೆ ವೈರಾಣು ನಿಯಂತ್ರಣ ಗುಣವೂ ಇದೆ.
ಇದರ ಬೀಜಗಳು ಬಹಳ ವಿಷವೂ ಸಹ. ಇದನ್ನು ಸೇವಿಸಿದರೆ ಸಾವೂ ಸಂಭವಿಸಬಹುದು. ಔಷಧೀಯ ಮತ್ತು ವಿಷಕಾರಕ ಗುಣ ಎರಡನ್ನೂ ಹೊಂದಿದ ಸಸ್ಯ ಇದು.
ಹಾಗೆಂದು ಕೆಪ್ಪಟೆ ಬಾವು ಹೊರತಾಗಿ ಬೇರೆ ಯಾವುದೇ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ಬಳಕೆ ಮಾಡಬೇಡಿ. ಆಯುರ್ವೇದದಲ್ಲಿ ಅದನ್ನು ಅನುಭವ ಮತ್ತು ಸೂಕ್ತ ಮಾದರಿಯಲ್ಲಿ ಬೇರೆ ಬೇರೆ ಔಷಧಿಗಳಿಗೆ ಬಳಕೆ ಮಾಡುತ್ತಾರೆ. ಸರಳ ರೀತಿಯ ಔಷಧೀಯ ಬಳಕೆಗೆ ಮಾತ್ರ ಬಳಸಿರಿ.
ಮೂಲಿಕಾ ಸಸ್ಯಗಳ ಔಷಧಿ ಮಾಡಿಕೊಳ್ಳುವಾಗಲೂ ತಿಳಿದವರಿಂದ ಸರಿಯಾದ ಮಾಹಿತಿ ಪಡೆದೇ ಮಾಡಿಕೊಳ್ಳಬೇಕು. ಕೆಲವೊಮ್ಮೆ ಅದರಲ್ಲೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.