ಪ್ರತೀಯೊಬ್ಬ ಕೃಷಿಕರೂ ಮಂಗಗಳ ಕಾಟದಿಂದ ತೆಂಗಿನ ಕಾಯಿ, ಕೊಕ್ಕೋ ಮುಂತಾದ ಬೆಳೆಗಳನ್ನು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.ನಾನೂ ಈ ಕಾಟದಿಂದಾಗಿ ನನ್ನ ಅನನಾಸು ಬೆಳೆಯನ್ನು ಬಿಡಬೇಕಾಯಿತು. ತೆಂಗಿನ ಫಲಕ್ಕಾಗಿ ಕೊಕ್ಕೋ ವನ್ನು ಬಿಡಬೇಕಾಯಿತು. ಆದಾಗ್ಯೂ ಈ ವರ್ಷ ಮಂಗಗಳು ನನಗೆ 40000 ಕ್ಕೂ ಹೆಚ್ಚಿನ ಮೌಲ್ಯದ ಕೊಕ್ಕೋ ಬೆಳೆಯ ಆದಾಯ ಉಳಿಸಿಕೊಟ್ಟವು. ಈ ವಿಧಾನವನ್ನು ಎಲ್ಲರೂ ಪಾಲಿಸಿದರೆ ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಷ್ಟವಿಲ್ಲ. ಅದು ಹೇಗೆ ವಿವರ ಇಲ್ಲಿದೆ.
ಮಂಗಗಳ ಕಾಟ ಹೆಚ್ಚಾಗಲು ಮೂಲ ಕಾರಣ ನಾವು. ನಂತರ ಕಂದಾಯ ಇಲಾಖೆ, ಅರಣ್ಯ ಇಲಾಖೆಗಳು. ಅವುಗಳು ತಮ್ಮ ಹೊಟ್ಟೆ ಪಾಡಿಗಾಗಿ ಕೃಷಿಕನ ಹೊಲಕ್ಕೆ ಬಂದು ತಮ್ಮ ಬೆಳೆ ಭಕ್ಷಿಸುತ್ತವೆ. ನಾವು ಕೃಷಿ ಉದ್ದೇಶಕ್ಕಾಗಿ ಇದ್ದ ಮರಮಟ್ಟುಗಳನ್ನು ಕಡಿದು ಅವುಗಳಿಗೆ ಆಹಾರ ಇಲ್ಲದಂತೆ ಮಾಡಿದ್ದೇವೆ. ಕಂದಾಯ ಇಲಾಖೆ ಕಾಡಿನ ತರಹ ಇದ್ದ ಭೂಮಿಯನ್ನು ಸಹ ಅತಿಕ್ರಮಣಕಾರರಿಗೆ ಮಂಜೂರು ಮಾಡುತ್ತದೆ. ಭೂ ಅತಿಕ್ರಮಣಕಾರರ ಮೇಲೆ ಯಾವ ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳದೆ ಅವರಿಗೆ ಮೌಖಿಕ ಅನುಮತಿಯನ್ನು ನೀಡುತ್ತಿದೆ. ಅರಣ್ಯ ಇಲಾಖೆ ತನ್ನ ಸುಪರ್ದಿಯಲ್ಲಿದ್ದ ಅರಣ್ಯದಲ್ಲಿ ನಶಿಸುತ್ತಿರುವ ಹಲಸು, ಮಾವು, ಹೆಬ್ಬಲಸು,ಅತ್ತಿ, ಗೋಳಿ ಇತ್ಯಾದಿ ಹತ್ತಾರು ಮರಮಟ್ಟುಗಳನ್ನು ಕಂಡೂ ಕಾಣದಂತೆ ನಿದ್ರೆ ಮಾಡಿದೆ. (ಈಗ ಸ್ವಲ್ಪ ಎಚ್ಚರಿಕೆಯಾಗಿದೆ) ಪರಿಣಾಮ ಮರ್ಕಟಗಳು ಕೃಷಿಕನ ಹೊಲಕ್ಕೆ ಬರಲಾರಂಭಿಸಿವೆ. ಒಂದು ವೇಳೆ ಅವುಗಳು ಮಾತು ಬರುವ ಜೀವಿಗಳೇ ಆಗಿದ್ದರೆ ಭಾರತದ ನ್ಯಾಯವ್ಯವಸ್ಥೆಯೂ ಸಹ ಮಂಗಗಳ ಪರವಾಗಿ ತೀರ್ಪು ನೀಡುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸಿದ್ದೇವೆ.
ಮಂಗಗಳಿಂದ ಬೆಳೆಗಳಿಗೆ ಹಾನಿ ಇಲ್ಲದಂತೆ ಮಾಡುವ ವಿಧಾನ:
- ನಾವು ವರ್ಷ ಪೂರ್ತಿ ಆದಾಯ ಬೇಕೆಂದು ಬೆಳೆ ಯೋಜನೆ ಹಾಕಿಕೊಂಡಂತೆ ಮಂಗಗಳಿಗೆ ವರ್ಷ ಪೂರ್ತಿ ಆಹಾರ ದೊರೆಯುವಂತೆ ಹಣ್ಣು ಹಂಪಲು ಬೆಳೆಗಳನ್ನು ಬೆಳೆಸುವುದು ಒಂದೇ ಪರಿಹಾರ.
- ಯಾವ ತಜ್ಞನೂ ಇದಕ್ಕಿಂತ ಉತ್ತಮವಾದ ಸಲಹೆಯನ್ನು ಕೊಡಲಾರ.
- ಕೋತಿ ಗಳನ್ನು ಹೊಡೆದು ಕೊಲ್ಲುವುದು, ವಿಷ ಇಕ್ಕುವುದು ಪಾಪದ ಕೆಲಸ.
- ಇದರ ಬದಲಿಗೆ ಮಾನವನಾಗಿ ಹುಟ್ಟಿದ ನಾವು ಅವುಗಳನ್ನು ಅವುಗಳಷ್ಟಕ್ಕೆ ಬದುಕಲು ಅವಕಾಶ ಕೊಡಲೇ ಬೇಕು.
- ಅದು ನಮ್ಮ ಹೊಲದಲ್ಲಿ ಆಗಬೇಕೆಂದೇನೂ ಇಲ್ಲ.
- ಯಾರು ಬೇಸಾಯ ಮಾಡದೆ ಭೂಮಿಯನ್ನು ಖಾಲಿ ಬಿಟ್ಟಿದ್ದಾರೆಯೋ ಅಥವಾ ಸರಕಾರದ ಖಾಲಿ ಭೂಮಿ ಇದೆಯೋ ಅಲ್ಲೆಲ್ಲಾ ಮಂಗಗಳಿಗೆ
- ವರ್ಷದ ಎಲ್ಲಾ ಕಾಲದಲ್ಲೂ ಅವುಗಳಿಗೆ ಆಹಾರ ವಸ್ತು ದೊರೆಯುವಂತೆ ಮಾಡಿದರೆ ಮಂಗಗಳು ನಮ್ಮ ಬೆಳೆಯ ಸಹವಾಸಕ್ಕೆ ಬರಲಾರವು.
- ಇದನ್ನು ಸರಕಾರ ಮಾಡಬೇಕು ಎಂದು ನಾವು ಸುಮ್ಮನಿರುವುದಲ್ಲ.
- ಸರಕಾರ ಖಂಡಿತವಾಗಿಯೂ ನಮ್ಮ ಸಹಕಾರ ಇಲ್ಲದೆ ಇದರ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ.
- ನಮಗೆ ನಮ್ಮ ಬೆಳೆ ಬೇಕೆಂದಾದರೆ ನಾವು ನಮ್ಮ ಆದಾಯದಲ್ಲಿ ಅತ್ಯಲ್ಪವನ್ನು ಈ ಕೆಲಸಕ್ಕೆ ಮುಡಿಪಾಗಿ ಇಡಬೇಕು.
ಏನು ಕೆಲಸ ಮಾಡಬೇಕು?
- ನಾವು ಮನೆಯಲ್ಲಿ ಬೇರೆ ಬೇರೆ ಬಗೆಯ ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ.
- ಅದಕ್ಕೆಲ್ಲಾ ಬೀಜಗಳು ಇರುತ್ತವೆ. ಈ ಬೀಜಗಳನ್ನು ಕಸದ ಬುಟ್ಟಿಗೆ ಒಗೆಯಬೇಡಿ.
- ಸಂಗ್ರಹಿಸಿ ಇಟ್ಟು ದಾರಿಯಲ್ಲಿ ಪೇಟೆಗೆ ಹೋಗುವಾಗ ಕೃಷಿ ಮಾಡದೆ ಖಾಲಿ ಜಾಗ ಇದ್ದಲ್ಲಿ ಬಿಸಾಡಿ.
- ನಿಮ್ಮ ನೆರೆಹೊರೆಯವರು ಕೃಷಿ ಮಾಡದೆ ಭೂಮಿಯನ್ನು ಖಾಲಿ ಬಿಟ್ಟಿದ್ದರೆ ಅಲ್ಲಿ ಮಾವಿನ ಗೊರಟು, ಹಲಸಿನ ಬೀಜ, ಹಾಗೆಯೇ ಬೇಗ ಹೂ ಬಿಟ್ಟು ಕಾಯಿಯಾಗುವ ಪೇರಳೆ, ಮುಂತಾದ ಹಣ್ಣುಗಳ ಬೀಜಗಳನ್ನು ಅಲ್ಲಿ ಬಿಸಾಡಿ.
- ಪೇರಳೆ ಮರದ ಬುಡದಲ್ಲಿ ಬಿದ್ದ ಹಾಳಾದ ಹಣ್ಣುಗಳನ್ನು ಅಲ್ಲೇ ಬಿಡದೆ ಬಿಡುವಿದ್ದಾಗ ಅದನ್ನು ಪೊದರಿನೆ ಬಳಿಯಲ್ಲಿ ಬಿಸಾಕಿ.
- ಹಾಗೆಯೇ ನೆರೆಹೊರೆಯವರಲ್ಲಿ ಸಂಬಂಧಗಳು ಚೆನ್ನಾಗಿದ್ದರೆ ಅವರಿಗೆ ಹಲಸಿನ ಸಸಿ , ಮಾವಿನ ಸಸಿ ನೆಡಲು ಹೇಳಿ.
- ನೀವೂ ಖಾಲಿ ಸ್ಥಳ ಇದ್ದರೆ ಅಲ್ಲಿ ಬೇಗ ಹಣ್ಣುಗಳಾಗುವ ಸಸ್ಯಗಳನ್ನು ನೆಡಿ.
- ಮಂಗಗಳು ನಿಮ್ಮ ಬೆಳೆಯ ತಂಟೆಗೆ ಬರಲಾರವು. ಅವು ಅಲ್ಲೇ ಹಣ್ಣುಗಳನ್ನು ತಿನ್ನುತ್ತಾ ಇರುತ್ತವೆ.
ಮಂಗಗಳು ನನಗೆ ಹೇಗೆ ದಯತೋರಿದವು?
- ಈ ವರ್ಷ ಮಾವಿನ ಮರಗಳಲ್ಲಿ ಸಾಕಷ್ಟು ಕಾಯಿಗಳಾಗಿದ್ದವು. ಜೊತೆಗೆ ಮುರುಗಲ (ಪುನರ್ ಪುಳಿ, (Garcinia Indicum) ಹಣ್ಣುಗಳೂ ಆಗಿದ್ದವು.
- ಹಲಸಿನ ಹಣ್ಣುಗಳೂ ಆಗಿದ್ದವು. ಇವೆಲ್ಲಾ ನಮ್ಮ ಹೊಲದಲ್ಲಿ ಆದದ್ದಲ್ಲ.
- ನೆರೆ ಹೊರೆಯವರು ಯಾರೂ ಕೃಷಿ ಮಾಡುವುದೇ ಇಲ್ಲ.
- ಎಲ್ಲರೂ ಮರ ಮಟ್ಟು ಬೆಳೆಸಿ ಅದನ್ನು ಆಗಾಗ ಮಾರಾಟ ಮಾಡಿ ಬೀಡಿ ಕಟ್ಟುತ್ತಾ, ಕೂಲಿ ಕೆಲಸಕ್ಕೆ ಹೋಗುತ್ತಾ ಬದುಕುವವರು.
- ಅಲ್ಲಿ ಆದ ಮಾವಿನ ಹಣ್ಣು, ಮುರುಗಲ ಹಣ್ಣುಗಳನ್ನು ಮಾರ್ಚ್ ತಿಂಗಳಿನಿಂದ ಮೇ ಕೊನೆಯ ವರೆಗೂ ಬೇಕಾಬಿಟ್ಟಿ ತಿನ್ನುತ್ತಾ ಅವು ನನ್ನ ಕೊಕ್ಕೋ ಬೆಳೆಗಾಗಲೀ, ತೆಂಗಿನ ಮರಗಳಿಗಾಗಲೀ ತೊಂದರೆ ಮಾಡಲಿಲ್ಲ.
- ಹಾಗೆಂದು ಕಳೆದ ವರ್ಷ ಮಾವು ಆಗಿರಲಿಲ್ಲ.
- ಆಗ ಅವುಗಳು ಕೊಕ್ಕೋವನ್ನೂ ಬಿಟ್ಟಿರಲಿಲ್ಲ.
- ತೆಂಗಿನ ಮರಕ್ಕೂ ಧಾಳಿ ಇಟ್ಟಿದ್ದವು.
- ಮಂಗಗಳು ಒಮ್ಮೆ ಬಂದರೆ ಮತ್ತೆ ಖಾಯಂ ಎಂಬ ಆತಂಕದಲ್ಲಿದ್ದ ನನಗೆ ಈ ವರ್ಷ ಅದು ಹಾಗಿಲ್ಲ, ಅವುಗಳಿಗೆ ಆಹಾರ ಸಿಕ್ಕರೆ ಬೆಳೆಗಳ ತಂಟೆಗೆ ಬರಲಾರವು ಎಂಬ ಸತ್ಯ ವಿಷಯ ಅರಿವಿಗೆ ಬಂತು.
ಮಂಗಗಳ ಕಾಟ ತಪ್ಪಿಸಲು ನೆಡಬೇಕಾದ ಗಿಡಗಳು:
ಮೊದಲೇ ಹೇಳಿದಂತೆ ನಾವು ನಿರಂತರ ಆದಾಯಕ್ಕೆ ಬೆಳೆ ಯೋಜನೆ ಹಾಕಿಕೊಂಡಂತೆ ಮಂಗಗಳಿಗೂ ವರ್ಷವಿಡೀ ಹಣ್ಣು ಹಂಪಲುಗಳು ದೊರೆಯುವಂತೆ ಮಾಡಬೇಕು. ಯಾವ ಹಣ್ಣು ಯಾವ ಸಮಯದಲ್ಲಿ ಫಲಕೊಡುತ್ತದೆ ಅದನ್ನು ಅಭ್ಯಸಿಸಿ ಅದರ ಬೀಜಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಬೇಕು. ಸಾದ್ಯವಿದ್ದರೆ ಗಿಡಗಳನ್ನೂ ನೆಡಬಹುದು. ಸಾಧ್ಯವಾದಷ್ಟು ಸಾರ್ವಜನಿಕ ಟ್ಯಾಪ್, ಟಾಂಕಿ, ಕೆರೆ ದಂಡೆ, ಹೊಳೆ, ಹಳ್ಳದ ಬದಿ , ಕಣಿವೆಯಂತಹ ಜಾಗದಲ್ಲಿ ನೆಡುವುದರಿಂದ ಅಥವಾ ಬೀಜ ಬಿಸಾಡುವುದರಿಂದ ಅವು ಬೇಗ ಬೆಳೆಯುತ್ತವೆ. ಅಂತಹ ಗಿಡಗಳಲ್ಲಿ ಮುಖ್ಯವಾದವುಗಳು,
- ಫ್ಯಾಶನ್ ಫ್ರೂಟ್: ಇದು ಬೀಜದಿಂದ ನಿರಾಯಾಸವಾಗಿ ಸಸಿಯಾಗುತ್ತದೆ.
- ಬಳ್ಳಿ ಜಾತಿಯ ಈ ಹಣ್ಣು ಮಂಗಗಳಿಗೆ ಪ್ರಿಯ.
- ಇದು ಮೇ ತಿಂಗಳಿನಿಂದ ಪ್ರಾರಂಭವಾಗಿ ಬೇಸಿಗೆಯ ತನಕವೂ ಹಣ್ಣುಗಳನ್ನು ಕೊಡುತ್ತಿರುತ್ತವೆ.
- ಬೀಜದ ಸಸಿಯೂ ಫಲವತ್ತತೆ ಇದ್ದ ಸ್ಥಳದಲ್ಲಿ ನೆಟ್ಟ ಎರಡನೇ ವರ್ಷಕ್ಕೇ ಫಲ ಕೊಡುತ್ತದೆ.
- ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಫಸಲು ಕೊಡುತ್ತಿರುತ್ತದೆ.
- ಈ ಹಣ್ಣು ನಿಮ್ಮ ಮನೆಯಲ್ಲಿ ಬೆಳೆಯುತ್ತಿದ್ದರೆ ಅದರ ಹಣ್ಣುಗಳನ್ನು ಅಥವಾ ಸಸಿಗಳನ್ನು ನಿಮ್ಮ ಕಂಪೌಂಡಿನ ಬದಿಯಲ್ಲಿ ನೆಡಿ.
- ಮರಮಟ್ಟುಗಳಿಗೆ ಹಬ್ಬುತ್ತಾ ಬೆಳೆಯುತ್ತಿರುತ್ತದೆ.
- ಅಲ್ಲಿ ತನಕ ಬಂದ ಮಂಗಗಳು ಅದನ್ನು ತಿಂದು ಮರಳಿ ಹೋಗುತ್ತವೆ.
- ಕಮರಕದ ಹಣ್ಣು ಅಥವಾ ದಾರೆ ಹುಳಿ:ಇದು ವರ್ಷದಲ್ಲಿ ಎರಡು ಸಲ ಹೂ ಬಿಟ್ಟು ಕಾಯಿಯಾಗುತ್ತದೆ.
- ಇದರಲ್ಲಿ ಸಿಹಿ, ಮತ್ತು ಹುಳಿ ಎರಡು ಬಗೆಗಳಿದ್ದು, ಸಿಹಿ ಹಣ್ಣನ್ನು ಇಚ್ಚೆಪಟ್ಟು ತಿನ್ನುತ್ತವೆ.
- ಇದು ಬೀಜದಿಂದ ಸಸ್ಯಾಭಿವೃದ್ದಿಯಾಗುತ್ತದೆ.
- ಹಣ್ಣಿನ ಒಳಗೆ ಇರುವ ಸಣ್ಣ ಬೀಜವನ್ನು ಕಾಂಪೋಸ್ಟು ನಲ್ಲಿ ಹಾಕಿದರೆ ಕೆಲವೇ ದಿನದಲ್ಲಿ ಸಸಿಯಾಗುತ್ತದೆ.
- ಇದನ್ನು ಖಾಲಿ ಸ್ಥಳಗಳಲ್ಲಿ ನಾಟಿ ಮಾಡಿದರೆ ವರ್ಷದಲ್ಲಿ 2-3 ತಿಂಗಳ ತನಕ ಹಣ್ಣು ಸಿಗುತ್ತದೆ.
- ಪೇರಳೆ:ಈ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ.
- ಇದೂ ಸಹ ವರ್ಷದಲ್ಲಿ ಎರಡು ಸಲ ಕಾಯಿ ಕೊಡುತ್ತದೆ.
- ಹಣ್ಣಾಗಿ ಉದುರಿದ ಅಥವಾ ಹಕ್ಕಿಗಳು ತಿಂದು ಹುಟ್ಟಿದ ಗಿಡಗಳಿದ್ದರೆ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಡಿ.
- ಇದು ಕೋತಿಗಳಿಗೆ ಪ್ರಿಯ ಆಹಾರ.
- ಅತ್ತಿ ಗಿಡ:ಹಕ್ಕಿಗಳ ವಿಸರ್ಜನೆಯ ಫಲವಾಗಿ ಅತ್ತಿ ಗಿಡಗಳು ಅಲ್ಲಲ್ಲಿ ಹುಟ್ಟಿಕೊಂಡಿರುತ್ತವೆ.
- ಇದನ್ನು ಬೇರು ಸಮೇತ ಕಿತ್ತು ನೀರಿನ ಆಶ್ರಯ ಇರುವ ಕಡೆಯಲ್ಲಿ ನೆಟ್ಟರೆ ಅದು ವರ್ಷಕ್ಕೆ ಎರಡು ಸಲ ಕಾಯಿಯಾಗಿ ಮಂಗಗಳಿಗೆ ಆಹಾರವಾಗುತ್ತದೆ.
- ಇಂಥಹ ಹಲವಾರು ಆಹಾರವಾಗುವ ಸಸಿಗಳನ್ನು ಖಾಲಿ ಸ್ಥಳಗಳಲ್ಲಿ ನೆಟ್ಟು ಮಂಗಗಳಿಗೆ ಆಹಾರ ಲಭ್ಯವಾಗುವಂತೆ ಮಾಡಬಹುದು.
- ಹೆಬ್ಬಲಸಿನ ಸಸಿಗಳನ್ನು ನೆಡುವುದರಿಂದ ಬಹುಕಾಲದವರೆಗೂ ಮಂಗಗಳನ್ನು ದೂರಮಾಡಬಹುದು.
ಮಂಗಗಳಿಗೆ ವರ್ಷದ ಎಲ್ಲಾ ತಿಂಗಳುಗಳಲ್ಲೂ ಆಹಾರ ಸಿಗುವಂತೆ ಸಸಿಗಳನ್ನು ನೆಡಬೇಕು. ನೆಟ್ಟು ಒಂದು ಎರಡು ವರ್ಷಕ್ಕೇ ಫಲಕೊಡುವಂತದ್ದು ಆದರೆ ಉತ್ತಮ. ಪಪ್ಪಾಯಿ ಬೀಜಗಳನ್ನು ನೀರಾಶ್ರಯ ಇರುವ ಕಡೆ, ಕಸದ ರಾಶಿ ಇರುವ ಕಡೆ ಬಿಸಾಡಿದರೆ ಅಲ್ಲಿ ಗಿಡ ಬೆಳೆದು ಬೇಗ ಹಣ್ಣು ಸಿಗುತ್ತದೆ.
ನಾವು ಮಾಡುವ ತಪ್ಪು:
- ಕೋತಿಗಳು ಬೆಳೆಗಳಿಗೆ ಹಾನಿ ಮಾಡುತ್ತವೆ ಎಂದು ನಾವು ಸರಕಾರವನ್ನು ದೂರಿದರೆ ಪ್ರಯೋಜನ ಇಲ್ಲ. ಇದು ನಾವು ಮಾಡಿದ ತಪ್ಪು.
- ಇದನ್ನು ನಾವೇ ಸರಿಮಾಡಬೇಕೇ ಹೊರತು ಸರಕಾರ ಮಾಡಬೇಕು ಎಂದು ಸುಮ್ಮನಿರುವುದಲ್ಲ.
- ನಮ್ಮ ಊರಿನವರೇ ಆದ ಮೀಯಂದೂರು ಸುಬ್ರಾಯ ಭಟ್ಟರು (ದಿವಂಗತ) ಹೇಳುತ್ತಿದ್ದರು.
- “ನಮಗೆ ಮಂಗಗಳ ಕಾಟ ಕಡಿಮೆ.ನಾವು ನಮ್ಮ ಹೊಲದ ಬದಿಯಲ್ಲಿ ಹಲಸು, ಮಾವು ಎಲ್ಲಾ ನೆಟ್ಟಿದ್ದೇವೆ. ಮಂಗಗಳು ಅಲ್ಲಿಗೆ ಬರುತ್ತವೆ. ಅವುಗಳಿಗೆ ಬೇಕಾದಷ್ಟು ತಿಂದುಕೊಂಡು ಹೋಗುತ್ತವೆ.
- ನಮಗೆ ಬೇಕಾದಷ್ಟೇ ನಾವು ಅಲ್ಲಿಂದ ತರುವುದು. ಹಾಗಾಗಿ ತೆಂಗಿನ ಕಾಯಿ ಉಳಿಯುತ್ತದೆ. ಕೊಕ್ಕೋ ಉಳಿಯುತ್ತದೆ.
- ಇನ್ನೂ ಒಂದು ಅಂಶ ಅವರು ಹೇಳುತ್ತಾರೆ, ಎಲ್ಲರೂ ಕೃಷಿ ಮಾಡಿದರೆ ಮಂಗಗಳು ಕಡಿಮೆಯಾಗುತ್ತದೆ.
- ಎಲ್ಲರೂ ಅದನ್ನು ಓಡಿಸುತ್ತಾರೆ. ಹಾಗಾಗಿ ಎಲ್ಲರಿಗೂ ಕೆಲಸ ಸುಲಭವಾಗುತ್ತದೆ.”
- ಇಂತಹ ಕೆಲಸ ಮಾಡುವವರು ಬಹಳ ಕಡಿಮೆ. ಮಾಡಿದರೆ ಇದರಿಂದ ಪ್ರಯೋಜನ ಸಾಕಷ್ಟು ಇದೆ.
ಮಂಗಗಳನ್ನು ಅಹಿಂಸಾತ್ಮಕವಾಗಿ ಓಡಿಸಬೇಕು. ಕೊಲ್ಲುವುದು ಪಾಪದ ಕೆಲಸ. ಕೊಂದರೆ ಪಾಪಪ್ರಜ್ಞೆ ಜೀವಮಾನವಿಡೀ ನಮ್ಮನ್ನು ಕಾಡುತ್ತಿರುತ್ತದೆ. ದೃಷ್ಟಾಂತವಾಗಿ ಕೊಂದವರು ಕ್ಷೇಮದಲ್ಲೂ ಇಲ್ಲ. ಹಾಗಾಗಿ ಅಹಿಂಸಾತ್ಮಕವಾಗಿ ಮಂಗಗಳನ್ನು ಓಡಿಸುವುದು ಉತ್ತಮ.