ಬೆಂಡೆಯ ಹಳದಿ ಎಲೆ ರೋಗಕ್ಕೆ ಮದ್ದು ಇಲ್ಲ.

ಹಳದಿ ಎಲೆ ರೋಗ ಬಾಧಿತ ಬೆಂಡೆ ಎಲೆ

ಬೆಂಡೆ, ಅಪರೂಪದಲ್ಲಿ ಕುಂಬಳ ಜಾತಿಯ ಸಸ್ಯಗಳಿಗೆ ಬರುವ ಪ್ರಾಮುಖ್ಯ ರೋಗ ಎಂದರೆ ಎಲೆ ಹಳದಿಯಾಗುವ ವೈರಸ್ ರೋಗ. ವೈರಸ್ ಎಂಬುದಕ್ಕೆ ಕನ್ನಡದಲ್ಲಿ ನಂಜಾಣು ಎಂದು ಹೇಳಲಾಗುತ್ತದೆ. ನಂಜಾಣು ಎನ್ನುವುದು ಅತೀ ಸೂಕ್ಷ್ಮ ಜೀವಿಯಾಗಿದ್ದು, ಇದನ್ನು ಸರಿಯಾಗಿ ಅಭ್ಯಸಿಸಿ ಅದಕ್ಕೆ ಪ್ರತ್ಯಔಷಧಿ ತಯಾರಿಸಲು ತುಂಬಾ ಕಷ್ಟ. ಏನಿದ್ದರೂ ನಿರೋಧಕ ಶಕ್ತಿ ಹೊಂದಿದ ತಳಿಯನ್ನು  ಆಯ್ಕೆ ಮಾಡಬೇಕು ಅಷ್ಟೇ. ಬೆಂಡೆಯ ಎಲೆ ಹಳದಿ ರೋಗ ಇಂತದ್ದೇ ಆಗಿದೆ.

 • ಬಿಳಿ ಅಷ್ಟಪಟ್ಟಿ ಬೆಂಡೆ, ಅಥವಾ ಈಗ ಹೊಸತಾಗಿ ಕರೆಯಲಾಗುವ ‘ಕಾರ್ಲ ಬೆಂಡೆ’ ಅಥವಾ ‘ಕಾರ್ಕಳ ಬೆಂಡೆ’
  ಭಾರೀ ಬೇಡಿಕೆಯ ತರಕಾರಿಯಾಗಿದ್ದು, ಬೆಳೆ ಬೆಳೆದವರ ಅದೃಷ್ಟ ಚೆನ್ನಾಗಿದ್ದು , ಹಳದಿ ಎಲೆ ರೋಗ ಬಾರದೆ ಇದ್ದರೆ ಬಂಪರ್ ಲಾಭ.
 • ಆದರೆ ಆದೃಷ್ಟ ಚೆನ್ನಾಗಿದ್ದು, ಕೊನೆ ತನಕವೂ ಎಲೆ  ಹಳದಿ ರೋಗ ಬರಬಾರದು.

ಏನಿದು ವೈರಸ್:

ಬೆಂಡೆ ಗಿಡಕ್ಕೆ ನಂಜಾಣು ರೋಗ ಬಾಧಿಸಿದಾಗ ಬೆಳೆಯುವ ಬೆಂಡೆ ಈ ರೀತಿ ಬಿಳಿ ಬಣ್ಣದಲ್ಲಿರುತ್ತದೆ.
ಬೆಂಡೆ ಗಿಡಕ್ಕೆ ನಂಜಾಣು ರೋಗ ಬಾಧಿಸಿದಾಗ ಬೆಳೆಯುವ ಬೆಂಡೆ ಈ ರೀತಿ ಬಿಳಿ ಬಣ್ಣದಲ್ಲಿರುತ್ತದೆ.
 • ಬೆಂಡೆ ಬೆಳೆಯ ಅದೃಷ್ಟ ನಿರ್ಧಾರ ಮಾಡುವ ವೈರಸ್ Monopartile Begomovirus bheni yellow vein mosaic virus .
 • ಇದು ಯಾವ ಹಂತದಲ್ಲೂ  ಬರಬಹುದು. ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಇದ್ದರೆ ಬಾರದೆಯೂ ಇರಬಹುದು.
 • ಸಸ್ಯ ಶರೀರದ ಅಂಗಾಂಶದ ಮೇಲೆ ಪರಿಣಾಮ ಬೀರಿ, ಎಲೆ ಅಸಹಜವಾಗಿ ಹಳದಿಯಾಗುವುದು,ಕಾಯಿ ಸಣ್ಣಗಾಗುವುದು, ಬೆಳವಣಿಗೆ ಕುಂಠಿತವಾಗುವುದು ಇದರ ಲಕ್ಷಣ.
 • ಇದು ಬರೇ ಬೆಂಡೆಗೆ ಮಾತ್ರವಲ್ಲ, ಕುಂಬಳ, ಸೌತೆ ಕಾಯಿ, ತಂಬಾಕು ಮುಂತಾದ ಬೆಳೆಗಳಿಗೂ ಬರುತ್ತದೆ.
 • ಇದನ್ನು ಅಂಗ್ಲ ಭಾಷೆಯಲ್ಲಿ ಮೊಸೈಕ್ ವೈರಸ್ ಎನ್ನುತ್ತಾರೆ.
 • ಅಂದರೆ ಚಿತ್ರ ವಿಚಿತ್ರವಾಗಿ ಅಂಗಾಂಶಗಳು ಬೆಳವಣಿಗೆ ಹೊಂದುವುದು.
 • ಲ್ಯಾಟಿನ್ ಭಾಷೆಯಲ್ಲಿ ವೈರಸ್ ಗಳಿಗೆ ವಿಷ ಎನ್ನುತ್ತಾರೆ.

ಬೆಂಡೆ ಗಿಡಕ್ಕೆ ವೈರಸ್ ರೋಗ ಬಾಧಿಸಿದರೆ ಸಸಿ ಸಾಯುವುದು ನಿಧಾನ. ಹೂ ಬರುತ್ತದೆ. ಕಾಯಿಯೂ ಆಗುತ್ತದೆ. ಆದರೆ ಆರೋಗ್ಯವಂತ ಸಸಿಯಂತೆ ಅಲ್ಲ. ಫಲ ನೋಡಲು ಆಕರ್ಷಕವಾಗಿರುವುದಿಲ್ಲ. ಈ ಕಾಯಿಗಳನ್ನು ತಿನ್ನಬಹುದು. ಸಸ್ಯ ವೈರಸ್ ಗಳು ಮಾನವನಿಗೆ ತೊಂದರೆದಾಯಕ ಅಲ್ಲ. ಆದರೆ ಬೀಜಕ್ಕೆ ಮಾತ್ರ ಬಳಸಬಾರದು.

ಇಂತಹ ಕಡೆಯಿಂದ ಬೀಜ ಆಯ್ಕೆ ಮಾಡುವಂತಿಲ್ಲ.
ಇಂತಹ ಕಡೆಯಿಂದ ಬೀಜ ಆಯ್ಕೆ ಮಾಡುವಂತಿಲ್ಲ.

ಇದು ಸಸ್ಯ ಅಂಗಾಂಶಕ್ಕೆ ತಗಲುವ ನಂಜು.  ಒಮ್ಮೆ ಇದು ತಗಲಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಬೀಜದ ಮೂಲಕ ತನ್ನ ಪೀಳಿಗೆಗೂ ವರ್ಗಾವಣೆ ಆಗುತ್ತದೆ.

 • ಅನಾದಿ ಕಾಲದಿಂದಲೂ ಮನುಷ್ಯರಿಗೆ , ಪ್ರಾಣಿಗಳಿಗೆ  ವೈರಸ್ ಸೋಂಕು ತಗಲಿ ಸಾಮಾನ್ಯ ಹಾಗೂ ಗಂಭೀರ ರೋಗಗಳು ಬಂದುದಿದೆ. ಈಗಲೂ ರೋಗಗಳು ಬರುತ್ತಿವೆ.
 • ಸಿಡುಬು, ಮಂಪ್ಸ್, ಹಳದಿ ಜ್ವರ,  ರಾಬಿಸ್, ಏಡ್ಸ್ ,ಕೊರೋನಾ , ಸಾರ್ಸ್ , ಎಚ್ 1 ಎನ್ 1 , ನಿಫಾ, ಮಂಗನ ಕಾಯಿಲೆ , ಚಿಕನ್ ಗುನ್ಯಾ ಇವೆಲ್ಲಾ ನಂಜಾಣು ಅಥವಾ ವೈರಸ್ ರೋಗಗಳು.
 • ಸಸ್ಯಗಳಲ್ಲಿ ಬಾಳೆಗೆ ಬರುವ ಬಂಚೀ ಟಾಪ್, ಪಪ್ಪಾಯಕ್ಕೆ ಬರುವ ಮೊಸೈಕ್ ವೈರಸ್, ಬೆಂಡೆ, ಸಿಹಿ ಕುಂಬಳ, ಸೌತೆ ಮುಂತಾದವುಗಳಿಗೆ ಬರುವ ಎಲೆ ಹಳದಿಯಾಗುವ ರೋಗವೂ ಒಂದು ವೈರಸ್.
 • ಇವು ರಸ ಸ್ಪರ್ಶದ ಮೂಲಕ ರೋಗ ಪೀಡಿತ ಸಸ್ಯದಿಂದ ಆರೋಗ್ಯವಂತ ಸಸ್ಯಕ್ಕೆ ಪ್ರಸಾರವಾಗುತ್ತದೆ.
 • ರೋಗ ಪ್ರಸಾರಕ್ಕೆ ಕೆಲವು ಕೀಟಗಳು ವಾಹಕಗಳಾದರೆ ಮಾನವನ ಕೆಲವು ಕೃಷಿ ಕಾರ್ಯಗಳಲ್ಲೂ ಸೋಂಕು ವರ್ಗಾವಣೆಯಾಗುತ್ತದೆ.
ಹಳದಿ ರೋಗ ಹರಡುವ ಕೀಟಗಳಲ್ಲಿ ಇದೂ ಒಂದು
ಹಳದಿ ರೋಗ ಹರಡುವ ಕೀಟಗಳಲ್ಲಿ ಇದೂ ಒಂದು

ಯಾಕೆ ಇದಕ್ಕೆ ಮದ್ದು ಇಲ್ಲ:

 • ವೈರಸ್ ಗಳು ಎಂದರೆ  ಬ್ಯಾಕ್ಟೀರಿಯಾ ಗಳಿಗಿಂತಲೂ ಸೂಕ್ಷ್ಮವಾದ ಜೀವಿಗಳು.
 • ಇವು ಜೀವ ಕೋಶದ ಒಳಗೆ ಸೇರಿಕೊಳ್ಳುವವುಗಳು, ಹಾಗಾದ ಕಾರಣ ಇವುಗಳನ್ನು ಗುರಿಯಾಗಿಸಿಕೊಂಡು  ನಾಶ ಮಾಡುವುದು ತುಂಬಾ ಕಷ್ಟದ ಕೆಲಸ.
 • ವೈರಸ್ ಗಳು ಪರಾವಲಂಭಿ ಜೀವಿಗಳು, ಇವು ಜೀವ ಕೊಶದ ಒಳಗೆ ಪ್ರಜನನ ನಡೆಸುವವುಗಳು.
 • ಹೊರಗೆ ಯಾವುದೇ ಚಟುವಟಿಕೆ ಇರುವುದಿಲ್ಲ.

ಈ ವೈರಸ್  ಗಳು ಸಸ್ಯ ಜೀವ ಕೋಶಗಳಲ್ಲಿ ಸೇರಿಕೊಂಡು ಆ ಸಸ್ಯದ ಜೀವ ಕೋಶವನ್ನು ಛಿದ್ರ ಮಾಡಿ ತನ್ನ ಬೆಳವಣಿಗೆಯನ್ನು ವೃದ್ದಿಸಿಕೊಳ್ಳುತ್ತದೆ.  ಈ ಕಾರಣದಿಂದ ಸೋಂಕಿಗೆ ಒಳಗಾದ ಸಸ್ಯ ಸ್ವಾಭಾವಿಕ ಬೆಳವಣಿಗೆ ಬಿಟ್ಟು ಆಸ್ವಾಭಾವಿಕವಾಗುತ್ತದೆ.

 • ವೈರಸ್ ಗಳ ಸ್ವರೂಪ ಮತ್ತು ಚಟುವಟಿಕೆಯನ್ನೇ ಅಂದಾಜು ಮಾಡಲು ಅಸಾದ್ಯವಾದ ಕಾರಣ ಅದಕ್ಕೆ ಔಷದೋಪಚಾರವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಪರಿಹಾರ ಏನು:

 • ಮುಖ್ಯವಾಗಿ ಯಾವುದೇ ರೋಗ ಸೋಂಕು ಇಲ್ಲದ ಸಸ್ಯ ಮೂಲದಿಂದ ಬೀಜವನ್ನು ಆರಿಸಬೇಕು.
 • ಒಂದು ವೇಳೆ 10 ಗಿಡದಲ್ಲಿ 1-2 ಕ್ಕೆ ರೋಗ ಚಿನ್ಹೆ ಗೋಚರವಾದರೆ ತಕ್ಷಣ ಅದನ್ನು ತೆಗೆದು ಸುಡಬೇಕು.
 • ಒಂದು ವೇಳೆ ನೀವು ಆಯ್ಕೆ ಮಾಡುವ ಬೀಜ ಮೂಲದಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ ಸಹ ರೋಗವು ಅಲ್ಲಿ ಗೋಚರವಾಗದೆ ಇದ್ದು, ಅದು ಇನ್ನೊಂದು ತಲೆಮಾರಿನಲ್ಲಿ( ಬೀಜ) ಗೋಚರವಾಗಬಹುದು.
 • ಸಸ್ಯಗಳಿಗೆ ಹಳದಿ ಎಲೆ ರೋಗ ಬಂದಾಗ ಎಲೆಯಲ್ಲಿ, ಕಾಯಿಯಲ್ಲಿ, ಸಸ್ಯ ಬೆಳವಣಿಗೆಯಲ್ಲಿ ಯಾವ ಯಾವ ಲಕ್ಷಣ ಇರುತ್ತದೆ ಎಂದು ತಿಳಿದಿದ್ದರೆ ಅದನ್ನು ತೆಗೆದು ನಾಶ ಮಾಡುವುದು ಸುಲಭ.
 • ರೋಗ ಪೀಡಿತ ಸಸ್ಯವನ್ನು ಹಾಗೆಯೇ ಉಳಿಸಿಕೊಂಡರೆ ಅದರ ಮೇಲೆ ಕುಳಿತು ರಸ ಹೀರುವ ಕುಂಬಳ ದುಂಬಿ, ಸಿಂಬಳದ ಹುಳ, ಮತ್ತಿನ್ನಿತರ  ಕೀಟಗಳ ಮೂಲಕ ಆರೋಗ್ಯವಂತ ಗಿಡಕ್ಕೆ ಪ್ರಸಾರವಾಗಿ ಎಲ್ಲಾ ಗಿಡಗಳೂ ರೋಗ ಬಾಧಿತವಾಗುತ್ತದೆ.
 • ರೋಗ ಪೀಡಿತ ಸಸ್ಯದ ಎಲೆ, ಕಾಂಡವನ್ನು ಕತ್ತಿ ಮುಂತಾದ  ಸಾಧನದಲ್ಲಿ ಕಡಿದು ಅದರಲ್ಲಿ ಆರೋಗ್ಯವಂತ ಸಸಿಯನ್ನು ಕಡಿದರೆ ಖಂಡಿತವಾಗಿಯೂ ರೋಗ ಅದಕ್ಕೆ ಪ್ರಸಾರವಾಗುತ್ತದೆ.
 • ಬೆಂಡೆ ಬೆಳೆಯುವ ಸ್ಥಳದ ನೈರ್ಮಲ್ಯ ಪ್ರಾಮುಖ್ಯ. ಕಳೆ ಇತ್ಯಾದಿ ಇರಬಾರದು.
 • ಕಾರಣ ಕಳೆಯಲ್ಲಿ ರೋಗ ಪ್ರವಹಿಸುವ ಕೀಟಗಳು ಇರುತ್ತವೆ.
 • ಬೆಂಡೆಯನ್ನು ತಕ್ಷಣ ಬಳಸುವ ಕಾರಣ ಇದಕ್ಕೆ ಕೀಟನಾಶಕ ಬಳಕೆ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಸೂಕ್ತವಲ್ಲ.

ಬೆಂಡೆಯ ಬೀಜ ಮಾಡುವಾಗ ಸಸಿ ಒಣಗುವ ವರೆಗೋ ಕಾದು, ಮಾತೃ ಗಿಡಕ್ಕೆ ರೋಗ ಇಲ್ಲವೆಂದು ಖಾತ್ರಿಯಾದ ಮೇಲೆ ಬೀಜಕ್ಕೆ ಉಪಯೋಗಿಸಿರಿ. ಬೆಂಡೆಗೆ ಇದೇ  ಸಮಯದಲ್ಲಿ ರೋಗ ಬರುತ್ತದೆ ಎಂದು ಇಲ್ಲ. ಯಾವಾಗಲೂ ಬರಬಹುದು. ಆದ ಕಾರಣ ರೋಗ ಮುಕ್ತ ಬೆಂಡೆ ಬೀಜ ಎಂದು  ಹೇಳುವಂತಿಲ್ಲ.

ಇತ್ತೀಚೆಗೆ ಕೆಲವರು ಬೆಂಡೆಯ ಹಳದಿ ಎಲೆ ರೋಗಕ್ಕೆ ಸಸ್ಯ ಔಷಧಿ ಫಲಕಾರಿ ಎಂಬುದಾಗಿ ಹೇಳುತ್ತಿದ್ದಾರೆ. ವೈಜ್ಞಾನಿಕವಾಗಿ ಇದರ ನಿವಾರಣೆ ಸಾಧ್ಯವಿಲ್ಲ. ಸಸೌಷಧಿಯಲ್ಲಿ ಯಾರಾದರೂ ಫಲ ಕಂಡಿದ್ದರೆ  ಇಲ್ಲಿ ಎಲ್ಲರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು.

ಇದಕ್ಕೆ ಔಷಧಿ ಸಿಂಪರಣೆ ವ್ಯರ್ಥ ಪ್ರಯತ್ನ. ಪ್ರಾರಂಭದಲ್ಲಿ ಗುರುತಿಸಿ ಸೋಂಕಿಗೆ ಒಳಗಾದ ಸಸಿಯನ್ನು  ತೆಗೆದು ನಾಶ ಮಾಡಿದರೆ, ಬೇರೆ ಸಸ್ಯಗಳಾದರೂ ಉಳಿಯಬಹುದು.  ಒಮ್ಮೆ ವೈರಸ್  ರೋಗ ಬಂದ ಸ್ಥಳದಲ್ಲಿ ಮತ್ತೆ ಪುನಹ ಬೆಳೆ ಬೆಳೆಯದಿರಿ. ಎರಡು ವರ್ಷವಾದರೂ ಬೆಳೆ ಬೆಳೆಯಬೇಡಿ. ತಲೆ ಬಿಸಿ ಇಲ್ಲದೆ ಬೆಂಡೆ ಬೆಳೆಯಬೇಕಿದ್ದರೆ ನಂಜಾಣು ರೋಗ ನಿರೋಧಕ ಶಕ್ತಿ ಪಡೆದ ಹಸುರು  ಬೆಂಡೆಯನ್ನು ಬೆಳೆಸಿ.

Leave a Reply

Your email address will not be published. Required fields are marked *

error: Content is protected !!