ಸಾವಯವ ಕೀಟ –ರೋಗ-ನಿಯಂತ್ರಣ ವಿಧಾನ.

ಬೂದಿಯ ಮೂಲಕ ಕೀಟ ನಿಯಂತ್ರಣ

ಸರ್ವ ರೋಗಕ್ಕೆ ಬೂದಿ ಮದ್ದು ಎಂಬುದನ್ನು ಎಲ್ಲರೂ ಕೇಳಿರಬಹುದು. ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ವಸ್ತು, ಇದು ಕ್ಷಾರೀಯ. ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದನ್ನು ಬಹುಸ್ತರದ ಸಾವಯವ ಕೀಟ –ರೋಗ-ನಿಯಂತ್ರ ಕ ಎಂಬುದಾಗಿ ಹಿರಿಯರು ಹೇಳುತ್ತಾ ಬಂದಿದ್ದಾರೆ. ದುರದೃಷ್ಟವೆಂದರೆ ಈಗ  ಅಡುಗೆ ಒಲೆಗೆ ಗ್ಯಾಸ್  ಬಂದಿದೆ. ಬಿಸಿ ನೀರ ಸ್ನಾನಕ್ಕೆ ಸೋಲಾರ್ ಬಂದಿದೆ. ಕಟ್ಟಿಗೆ ಸುಟ್ಟ ಬೂದಿ ಔಷಧಿಗೂ ಇಲ್ಲದಾಗಿದೆ.

ಕೀಟ ನಿಯಂತ್ರಕ ಹೇಗೆ:

 • ಕೀಟಗಳು ತುಂಬಾ ಬುದ್ದಿವಂತ ಜೀವಿಗಳು. ಅವು ಹೆಚ್ಚಾಗಿ ಎಲೆಯ ಅಡಿಯಲ್ಲಿ, ಬುಡದಲ್ಲಿ, ನೆಲದಲ್ಲಿ ವಾಸವಾಗಿರುತ್ತವೆ.
 • ಇವು ಯಾವಾಗಲೂ ಎಲೆಯ ಮೇಲಿನ ಭಾಗವನ್ನು  ತಿನ್ನುವುದಿಲ್ಲ. ಅಡಿ ಭಾಗದಲ್ಲಿ ವಾಸಿಸುತ್ತಾ ಅಲ್ಲಿರುವ ಹರಿತ್ತನ್ನು ತಿನ್ನುತ್ತವೆ.
 • ಎಲೆ ಸಹಜವಾಗಿದ್ದರೆ ಮಾತ್ರ ಕೀಟಗಳು ಅಲ್ಲಿಗೆ ಪ್ರವೇಶ ಮಾಡುತ್ತವೆ.
 • ಯಾವುದಾದರೂ ಬಾಹ್ಯ ವಸ್ತುಗಳು ಕಂಡು ಬಂದರೆ ಅವು ದೂರವಾಗುತ್ತವೆ.
 • ಉದಾಹರಣೆಗೆ ರಸ್ತೆ ಬದಿಯಲ್ಲಿರುವ ಮಾವಿನ ಮರದಲ್ಲಿ ಕಾಯಿ ಕಚ್ಚುವಿಕೆಗೆ ಯಾವ  ಕೀಟ ಸಮಸ್ಯೆಯೂ ಉಂಟಾಗುವುದಿಲ್ಲ.
 • ಎಲೆಗಳ ಮೇಲೆ ಧೂಳು, ಹೊಗೆಯ ಕರಿ ಲೇಪನವಾಗುತ್ತದೆ.
 • ಅದೇ ರೀತಿಯಲ್ಲಿ ಹೂ ಮೊಗ್ಗುಗಳ ಮೇಲೆಯೂ ಅದು ಅಂಟಿಕೊಳ್ಳುತ್ತದೆ.
 • ಆ ಕಾರಣದಿಂದ ಅಲ್ಲಿಗೆ ಚಿಗುರು , ಹೂವು ಹಾಳು ಮಾಡಲು ಬರುವ ಕೀಟಗಳು ಸುಳಿಯುವುದಿಲ್ಲ. ಗರಿಷ್ಟ ಇಳುವರಿ ಬರುತ್ತದೆ.
 • ಈ ಮರಗಳಿಗೆ ಯಾರೂ ಕೀಟ ನಾಶಕ ಸಿಂಪಡಿಸುವುದಿಲ್ಲ. ಆದರೂ ಸಿಂಪಡಿಸಿದ ಮರಗಳಿಗಿಂತ ಉತ್ತಮ ಇಳುವರಿ ಇರುತ್ತದೆ.

ಬೂದಿ ಬಳಕೆಯ ಹಿನ್ನೆಲೆ:

 • ಸಾಮಾನ್ಯವಾಗಿ ನಮ್ಮ ಹಿರಿಯರು ಅಲಸಂಡೆ ಬೆಳೆಯುವಾಗ ಆ ದಿನ ಬಿಸಿನೀರು ಕಾಯಿಸಿದಾಗ ದೊರೆತ ಬೂದಿಯನ್ನು ಬಳ್ಳಿಯ ಮೇಲೆಲ್ಲಾ ಎರಚುತ್ತಿದ್ದರು.
 • ಸೌತೆ ಬೆಳೆ ಮಾಡುವಾಗಲೂ ಹಾಗೆಯೇ ಮಾಡುತ್ತಿದ್ದರು. ಸೌತೆ ಬಳ್ಳಿಯ ಮೇಲೆ ಬೂದಿ ಎರಚಿದರೆ ಹುಳ ಬರಲಾರದು.
 • ಹರಿವೆಗೆ ಬೂದಿ ಎರಚದೆ  ಇದ್ದರೆ  ತಾಜಾ ಎಲೆಯೇ ಸಿಗುತ್ತಿರಲಿಲ್ಲ. ಹರಿವೆಗೆ ರುಚಿಯೂ ಇರುವುದಿಲ್ಲ.
 • ಉಡುಪಿಯ ಶಂಕರಪುರದಲ್ಲಿ ಮಲ್ಲಿಗೆ ಬೆಳೆಯುವವರು ಬೂದಿಯನ್ನು ಮತ್ತು ಮಾನವ ಮೂತ್ರವನ್ನು ಮಿಶ್ರಣ ಮಾಡಿ ಮಲ್ಲಿಗೆ ಗಿಡಕ್ಕೆ ಹಾಕುತ್ತಿದ್ದರು.
 • ಅಗ ಕೀಟ ನಾಶಕ ಇರಲೇ ಇಲ್ಲ. ರೋಗಗಳೂ ಇರಲಿಲ್ಲ. ಕೀಟಗಳೂ ಬರುತ್ತಿರಲಿಲ್ಲ.
 • ಬೆಳೆಗಳಿಗೆ ಬಳಸಲಿಕ್ಕೆ ಬೂದಿ ಬೇಕು ಎಂದು ಸ್ವಲ್ಪವೂ ಬೂದಿಯನ್ನು ಹಾಳು ಮಾಡದೆ ಉಳಿಸಿಕೊಳ್ಳುತ್ತಿದ್ದರು.
 • ಬಸಳೆ ಎಂಬ ತರಕಾರಿಗೆ ಬೂದಿ ಇಲ್ಲದೆ  ಬೆಳೆಯಲು ಆಗುತ್ತಲೇ ಇರಲಿಲ್ಲ.  ಬೂದಿ ಬಳಸಿದ ಬಸಳೆಯ ರುಚಿಯೇ  ಭಿನ್ನವಾಗಿರುತ್ತದೆ.
 • ಬೂದಿ ಎರಚಿದಾಗ  ಕೀಟ  ನಿಯಂತ್ರಕವಾಗಿ ಕೆಲಸ ಮಾಡಿದರೆ ಅದು ತೊಳೆದು ಮಣ್ಣಿಗೆ ಸೇರಿದ ಮೇಲೆ ಪೋಷಕವಾಗಿ ಮತ್ತು  ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.
 • ಇದು ಕ್ಷಾರೀಯ ಆದ ಕಾರಣ ರೋಗಕಾರಕಗಳನ್ನೂ ಹತ್ತಿರ ಬರಲು ಬಿಡುವುದಿಲ್ಲ. ಹೊರತು ಇದು ರೋಗ ನಾಶಕ ಅಲ್ಲ.

ಹೇಗೆ ಬಳಸಬೇಕು:

 • ಬೂದಿಯನ್ನು ಸಸ್ಯಗಳ  ಎಲೆಗಳ ಮೇಲೆ ಬೀಳುವಂತೆ  ತೆಳುವಾಗಿ ಎರಚಬಹುದು.
 • ಸ್ವಲ್ಪ ನೀರು ಸೇರಿಸಿ ಅದನ್ನು ಬುಡಕ್ಕೆ ಸ್ವಲ್ಪ ಸ್ವಲ್ಪ ಎರೆಯಬಹುದು.
 • ಹೆಚ್ಚು ನೀರು ಸೇರಿಸಿ ಅದನ್ನು ದ್ರಾವಣ ಮಾಡಿ  ಸೋಸಿ ದೊಡ್ದ ನಾಸಲ್ ನ ಸಿಂಪರಣಾ ಸಾಧನದಲ್ಲಿ ಸಿಂಪರಣೆಯನ್ನೂ ಮಾಡಬಹುದು.
 • ಮಾನವ ಮೂತ್ರ ಸೇರಿಸಿದರೆ ಬಹಳಷ್ಟು ಕೊಳೆ ರೋಗಗಳು ಇರದಲ್ಲಿ ನಿಯಂತ್ರಣವಾಗುತ್ತದೆ.
 • ಬೂದಿಯನ್ನು ಆಗಾಗ ಎರಚುತ್ತಿದ್ದರೆ ಮಾತ್ರ ಪ್ರಯೋಜನವಾಗುತ್ತದೆ. ಒಮ್ಮೆ ಎರಚಿ ಬಿಟ್ಟರೆ ಫಲ ಇಲ್ಲ.

ಬೂದಿಯನ್ನು ಹಾಳು ಮಾಡಬೇಡಿ. ಬೆಳೆ ಸಂರಕ್ಷಣೆಗಾದರೂ ಒಲೆ ಉರಿಸಿ ಬೂದಿ ಮಾಡಿಕೊಳ್ಳಿ.  ಅಲ್ಪ ಕಾಲಿಕ ಬೆಳೆಗಳಿಗೆ ಕೀಟ ನಾಶಕ ಬಳಸುವ ಬದಲು ಇದನ್ನು ಬಳಸಿ ಆರೋಗ್ಯ ಉಳಿಸಿ. ಇದನ್ನು ಧೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳಿಗೆ ಬಳಸಿದರೆ ಇಳುವರಿ ನಿಶ್ಚಿತವಾಗಿ ಹೆಚ್ಚಳವಾಗುತ್ತದೆ.  ಬೂದಿಯು ಕೆಲವು ಕಾರ್ಖಾನೆಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಅದನ್ನು ತಂದು ಬೆಳೆಗಳಿಗೆ ಬಳಸಿರಿ.

Leave a Reply

Your email address will not be published. Required fields are marked *

error: Content is protected !!