ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ.
ತರಕಾರಿ ಬೆಳೆಸುವವರು ಬೀಜವನ್ನು ನೇರ ಬಿತ್ತನೆ ಮಾಡುವ ಬದಲಿಗೆ ಅದನ್ನು ಸೀಡ್ ಟ್ರೇ ಗಳಲ್ಲಿ ಮೊದಲು ಬಿತ್ತನೆ ಮಾಡಬೇಕು. ಅವು ಪೂರ್ತಿ ಮೊಳಕೆ ಒಡೆದು ಸಸಿಯಾಗುತ್ತವೆ. ಸಸಿ ಆದ ಬಳಿಕ ಅದನ್ನು ನಾಟಿ ಮಾಡಿದರೆ ಬೇಗ ಕೊಯಿಲು ಸಾಧ್ಯ.
- ಈಗಿನ ಹೈಬ್ರೀಡ್ ಬೀಜಗಳು ನಮ್ಮ ಸಾಂಪ್ರದಾಯಿಕ ಬೀಜಗಳಂತಲ್ಲ.
- ಗ್ರಾಂ ಲೆಕ್ಕದಲ್ಲಿ ಸಾವಿರಾರು ರೂಪಾಯಿ ಬೆಲೆ ಇರುವ ಈ ಬೀಜಗಳನ್ನು ಒಂದೊಂದೂ ಹಾಳಾಗದಂತೆ ರಕ್ಷಿಸುವುದು ಅಗತ್ಯ.
- ನೇರವಾಗಿ ಈ ಬೀಜಗಳನ್ನು ಬಿತ್ತಿದರೆ ಮೊಳಕೆ ಬಾರದೆ ಇದ್ದರೆ ಭಾರೀ ನಷ್ಟ.
- ಇದಕ್ಕೆ ಸೀಡ್ ಟ್ರೇ ಗಳು ಸಹಕಾರಿ.
- ಇದರಲ್ಲಿ ಸಮಾನ ಗಾತ್ರದ ಏಕ ಪ್ರಕಾರ ಬೆಳವಣಿಗೆಯ ಸಧೃಢ ಸಸಿಗಳು ಸಿಗುತ್ತವೆ.
ಹಿಂದೆ- ಈಗ:
- ತರಕಾರಿ ಬೆಳೆ ಈಗ ಹಿಂದಿನಂತಲ್ಲ. ಹಿಂದೆ ಉಳುಮೆ ಮಾಡಬೇಕು, ಸಾಲು ಮಾಡಬೇಕು, ಬೀಜ ಬಿತ್ತನೆ ಮಾಡಬೇಕು.
- ಮೊಳೆತ ಬೀಜದಲ್ಲಿ ಹೆಚ್ಚುವರಿ ಸಸಿಗಳಿದ್ದರೆ ತೆಗೆಯಬೇಕು.
- ಸಮರ್ಪಕ ಅಂತರ ಕಾಯ್ದುಕೊಳ್ಳಬೇಕಿತ್ತು.
- ಗ್ಯಾಪ್ ಫಿಲ್ಲಿಂಗ್ ಮಾಡಬೇಕು.
- ಈಗ ಹಾಗಿಲ್ಲ. ತರಕಾರಿ ಬೆಳೆಸಬೇಕೆಂದಿದ್ದರೆ ಮೊದಲು ಬೀಜಗಳನ್ನು ಸೀಡ್ ಟ್ರೇ ಗಳಲ್ಲಿ ಬಿತ್ತಿ ಮನೆಯ ಸಮೀಪ ಇಟ್ಟುಕೊಳ್ಳುವುದು.
- ನಂತರ ಹೊಲದ ಸಿದ್ದತೆ ಮಾಡುವುದು.
- ಹೊಲ ಸಿದ್ದವಾಗುವಾಗ ಸಸಿಗೆ ಎರಡು ಮೂರು ಎಲೆ ಬಂದಿರುತ್ತದೆ. ಅದನ್ನು ಬೇಕಾದ ಅಂತರದಲ್ಲಿ ನಾಟಿ ಮಾಡುವುದು.
- ಇದರಿಂದ ಫಸಲು ಬರುವುದಕ್ಕೆ ತಗಲುವ ಒಟ್ಟು ದಿನಗಳಲ್ಲಿ ಸುಮಾರು 10-15 ದಿನ ಉಳಿತಾಯವಾಗುತ್ತದೆ.
ರೈತರು ಈ ದಿನ ಹೊಲದ ಸಿದ್ದತೆ ಮಾಡಿದರೆ ನಾಳೆ ಸಸಿ ನಾಟಿ ಮಾಡಬಹುದು. ಟ್ರೇ ಗಳಲ್ಲಿ ಸಸಿ ಮಾಡಿ ಕೊಡುವ ಸಸ್ಯೋತ್ಪಾದನೆ ಕೇಂದ್ರಗಳು ಬೇಕಾದಾಗ ಸಸಿ ಒದಗಿಸುತ್ತವೆ.
ಅನುಕೂಲಗಳು ಏನು:
- ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಒಂದು ಮಾತಾದರೂ ಇದು ಸತ್ಯ.
- ಯಾವುದೇ ಬೆಳೆ ಮೊಳಕೆ ಒಡೆಯುವ ಸಮಯದಲ್ಲಿ ಉತ್ತಮ ಮಾಧ್ಯಮದಲ್ಲಿ ಪುಷ್ಟಿಯಾಗಿ ಮೊಳೆಯಬೇಕು.
- ಇದು ಸೀಡ್ ಟ್ರೇ ಗಳಲ್ಲಿ ಮಾತ್ರ ಸಾಧ್ಯ.
- ಹಿಂದೆ ನಮ್ಮ ಹಿರಿಯರು ಪಾತಿಗಳಲ್ಲಿ ಸಸಿ ಬೆಳೆಸಿ ಅದನ್ನು ಕಿತ್ತು ನಾಟಿ ಮಾಡುತ್ತಿದ್ದರು.
- ಅದರಲ್ಲಿ ಕಿತ್ತು ಪುನರ್ ನಾಟಿ ಮಾಡುವಾಗ ಸಸಿಗಳು ಒಮ್ಮೆ ಶಾಕ್ ಗೆ ಒಳಗಾಗುತ್ತವೆ.
- ಸೀಡ್ ಟ್ರೇ ಎಂಬ ವ್ಯವಸ್ಥೆಯಲ್ಲಿ ಹಾಗಿಲ್ಲ. ಸಸಿಗಳನ್ನು ಟ್ರೇಯ ಒಳಗಿನ ಅವಕಾಶದಲ್ಲಿ ಫಲವತ್ತಾದ ಮಾಧ್ಯಮ ತುಂಬಿ ಬೀಜ ಬಿತ್ತಲಾಗುತ್ತದೆ.
- ಬೀಜಗಳು ಮಾಧ್ಯಮದಲ್ಲಿ ಚೆನ್ನಾಗಿ ಮೊಳಕೆ ಒಡೆಯುತ್ತವೆ.
- ಅಲ್ಲಿಂದ ವರ್ಗಾಯಿಸುವಾಗ ಯಾವುದೇ ರೀತಿಯಲ್ಲಿ ಸಸಿಗೆ ಶಾಕ್ ಉಂಟಾಗುವುದಿಲ್ಲ.
- ಈ ರೀತಿ ಸಸಿ ಮಾಡಿದಾಗ ಆ ಸಸಿಗೆ ಹೆಚ್ಚಿನ ಶಕ್ತಿ ಇರುತ್ತದೆ.
ಸೀಡ್ ಟ್ರೇ ನಲ್ಲಿ ಯಾವ ರೀತಿಯಲ್ಲಿ ಬೆಳೆವಣಿಗೆ ಆಗುತ್ತಿತ್ತೋ ಅದೇ ನಾಟಿ ಮಾಡಿದಲ್ಲೂ ಮುಂದುವರಿಯುವ ಕಾರಣ ಸಸಿಗಳು ಉತ್ತಮವಾಗಿ ಬೆಳೆಯುತ್ತವೆ.ಮೂರೂ ಋತುಮಾನಗಳಲ್ಲಿ ಬೀಜ ಮೊಳಕೆ ಒಡೆಯಲು ಉಂಟಾಗುವ ಯಾವ ಸಮಸ್ಯೆಯೂ ಇದರಲ್ಲಿ ಎದುರಾಗುವುದಿಲ್ಲ.
ಟ್ರೇ ಗಳು:
- ಸೀಡ್ ಟ್ರೇ ಎಂಬ ಹೆಸರಿನಲ್ಲಿ ಬೀಜ ಬಿತ್ತಿ ಸಸಿ ಮಾಡುವ ಪಾತ್ರೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
- ಇದಕ್ಕೆ ತುಂಬುವ ಮಾಧ್ಯಮವೂ ಸಹ ಲಭ್ಯವಿದೆ.
- ಇದನ್ನು ತುಂಬಿ ಬೇಕಾಗುವಾಗ ಸಸಿ ಮಾಡಿಕೊಂಡರೆ ಬೇಕಾದಾಗ ನಾಟಿ ಮಾಡಿ ಬೇಗ ಪಸಲು ಪಡೆಯಬಹುದು.
- ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆಸುವವರು, ಟೇರೇಸ್ ಮೇಲೆ ತರಕಾರಿ ಬೆಳೆಸುವರ ಸಂಖ್ಯೆ ಹೆಚ್ಚಳವಾಗುತ್ತಿದ್ದು,
- ಇವರು ಬೀಜಗಳನ್ನು ನೇರವಾಗಿ ಚಟ್ಟಿಗಳಲ್ಲಿ ಅಥವ ಗ್ರೋ ಬ್ಯಾಗುಗಳಿಗೆ ಹಾಕಿ ಸಸಿ ಮಾಡುತ್ತಾರೆ.
- ಇದರಲ್ಲಿ ಇರುವೆಗಳು ತಿಂದು, ಅಥವಾ ಮೊಳಕೆ ಬರಲು ಸೂಕ್ತ ಅನುಕೂಲ ಇಲ್ಲದೆ ಸಸಿ ಬದುಕುವ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.
- ಒಂದೊಂದು ಚಟ್ಟಿಗೆ ಮೂರು ನಾಲ್ಕು ಬೀಜ ಬಿತ್ತಬೇಕಾಗುತ್ತದೆ.
- ಸೀಡ್ ಟ್ರೇ ಗಳಲ್ಲಿ ಸಸಿ ಮಾಡಿದಾಗ ಈ ಸಮಸ್ಯೆ ಇಲ್ಲ.
- ಸೀಡ್ ಟ್ರೇ ಯಲ್ಲಿ ಸಸಿ 1/2 ಅಡಿಯಷ್ಟು ಬೆಳೆದ ಮೇಲೆ ಅದನ್ನು ಚಟ್ಟಿ ಇಲ್ಲವೇ ಗ್ರೋ ಬ್ಯಾಗಿಗೆ ವರ್ಗಾಯಿಸಬೇಕು.
- ಎಲ್ಲಾ ನಮೂನೆಯ ತರಕಾರಿಗಳನ್ನೂ ಈ ಸೀಡ್ ಟ್ರೇ ನಲ್ಲಿ ಬಿತ್ತನೆ ಮಾಡಬಹುದು.
- ದೊಡ್ಡ ಟ್ರೇ ಆದರೆ ಸಸಿಯನ್ನು 1 ಅಡಿ ತನಕವೂ ಬೆಳೆಸಿ ನಾಟಿ ಮಾಡಬಹುದು.
- ಇದರರಿಂದ ನೇರವಾಗಿ ತರಕಾರಿ ಬೀಜ ಬಿತ್ತಿ ಸಸಿ ಮೊಳೆತು ಬೇರು ಬಂದು ಸೆಟ್ ಆಗುವ ಸುಮಾರು 15-20 ದಿನ ಉಳಿತಾಯವಾಗಿ ಅಷ್ಟು ಬೇಗ ತರಕಾರಿಯ ಇಳುವರಿ ಪಡೆಯಬಹುದು.
- ಬರೇ ತರಕಾರಿಯಲ್ಲದೆ ನೇರವಾಗಿ ನೆಟ್ಟು ಸಸಿ ಮಾಡುವ ಎಲ್ಲಾ ನಮೂನೆಯ ಸಸ್ಯಗಳನ್ನೂ ಇದೇ ರೀತಿ ಬೆಳೆಸಬಹುದು.
ವಾಣಿಜ್ಯಿಕವಾಗಿ ಕೃಷಿ ಮಾಡುವವವರೆಲ್ಲಾ ಇದೇ ವಿಧಾನ ಅನುಸರಿಸುತ್ತಾರೆ. ಎಲ್ಲಾ ನಮೂನೆಯ ತರಕಾರಿ, ಟೊಮಾಟೋ, ಕಲ್ಲಂಗಡಿ, ಕರಬೂಜ, ಈಗ ಹೀಗೆ ಸಸಿ ಮಾಡಲ್ಪಡುತ್ತದೆ.