ಮಣ್ಣು ಪರೀಕ್ಷೆ ಮಾಡುವುದರಿಂದ ಗೊಬ್ಬರವನ್ನು ಎಷ್ಟು ಬಳಸಬೇಕು, ಯಾವುದು ಬೇಕು, ಯಾವುದು ಬೇಕಾಗಿಲ್ಲ ಎಂಬುದು ತಿಳಿಯುತ್ತದೆ. ಇದು ಸತ್ಯವಾದರೂ ಮಣ್ಣು ಎಂಬುದು ಕಾಲಕಾಲಕ್ಕೆ ಸ್ಥಿತಿಗತಿ ಬದಲಾವಣೆಯಾಗುವ ಕಾರಣ ಅದನ್ನು ಹೇಗೆ ಪರೀಕ್ಷಿಸಿ ಅದನ್ನು ತಿಳಿಯುವುದು ಎಂಬುದೇ ಪ್ರಶ್ನೆ. ಇದಕ್ಕೆಇರುವ ಉತ್ತರ ರೈತರೇ ಪರೀಕ್ಷೆ ವಿಚಾರದಲ್ಲಿ ತಜ್ಞತೆ ಹೊಂದುವುದು.
- ಹಾಗೆಂದು ಮಣ್ಣು ಪರೀಕ್ಷೆ ಎಂಬುದು ಬೇಡ ಎಂದಲ್ಲ.
- ಅನುಕೂಲ ಇದ್ದವರು ಇದನ್ನು ಸಮೀಪದ ಕೃಷಿ ಇಲಾಖೆಯಲ್ಲಿ ಮಾಡಿಸಿಕೊಳ್ಳಬಹುದು.
- ಕೆಲವು ಖಾಸಗಿ ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ ಮಾಡಿಸಿಕೊಳ್ಳಬಹುದು.
- ಕೆಲವು ಭಾರತ ಸರಕಾರದ ರಸಗೊಬ್ಬರ ತಯಾರಿಕಾ ಸಂಸ್ಥೆಗಳಲ್ಲೂ ಸಹ ಮಣ್ಣು ಪರೀಕ್ಷೆ ಮಾಡಿ ಪೋಷಕಾಂಶದ ಸ್ಥಿತಿಗತಿಯನ್ನು ತಿಳಿಸುವ ವ್ಯವಸ್ಥೆ ಇದೆ.
ಇದೆಲ್ಲವನ್ನೂ ಮಾಡಿಸಿಕೊಳ್ಳಲು ಸಾಧ್ಯವಿಲ್ಲದ ರೈತರು ತಮ್ಮ ಹೊಲದ ಮಣ್ಣು ಹೇಗಿದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅವರ ಹೊಲದ ಮಣ್ಣಿನ ಸ್ಥಿತಿಗತಿಯ ಚಿತ್ರಣ ಅವರಿಗೇ ತಿಳಿಯುತ್ತದೆ.
- ಕೃಷಿ ಹೊರತಾಗಿ ಉಳಿದೆಲ್ಲಾ ವೃತ್ತಿಯವರು ತಮ್ಮ ವೃತ್ತಿಯಲ್ಲಿ ತುಂಬಾ ತಜ್ಞತೆಯನ್ನು ಗಳಿಸಿಕೊಂಡಿರುತ್ತಾರೆ.
- ಆದರೆ ಕೃಷಿಕ ಹಾಗಿಲ್ಲ. ಅವನಿಗೆ ಗೊಬ್ಬರ ಹಾಕಬೇಕಾದರೂ, ಕೀಟನಾಶಕ ಹೊಡೆಯಬೇಕಾದರೂ ಹಾಗೆಯೇ ಎಲ್ಲದಕ್ಕೂ ಬೇರೆಯವರ ಸಲಹೆ ಬೇಕು.
- ಇದು ಅಗತ್ಯವೇ? ಕೃಷಿಕರೂ ತಮ್ಮ ವೃತ್ತಿಯಲ್ಲಿ ಪರರನ್ನು ಅವಲಂಭಿಸದೇ ತಜ್ಞತೆಯನ್ನು ಹೊಂದಲು ಸಾಧ್ಯವಿಲ್ಲವೇ?
- ಖಂಡಿತವಾಗಿಯೂ ಇದೆ. ಆದರೆ ಅದಕ್ಕಾಗಿ ರೈತರು ಸ್ವಲ್ಪ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ.
ಮಣ್ಣು ಪರೀಕ್ಷೆ ಎಂಬ ಗೊಂದಲದ ವಿಷಯ:
- ಮಣ್ಣು ಪರೀಕ್ಷೆ ಮಾಡುವುದು ಎಂದರೆ ಅದು ಸ್ವಲ್ಪ ಜಠಿಲ ವಿಷಯವೇ ಆಗಿರುತ್ತದೆ.
- ಕಾಲ ಕಾಲಕ್ಕೆ ಬದಲಾಗುವ ಮಣ್ಣಿನ ಸ್ಥಿತಿಗತಿ ಮತ್ತು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುವ ಮಣ್ಣಿನ ರಚನೆಯನ್ನು ಸಮರ್ಪಕವಾಗಿ ಪರೀಕ್ಷೆ ಮಾಡಿ ಅದರಲ್ಲಿ ಏನಿದೆ ಎಂಬುದನ್ನು ತಿಳಿಯುವುದು ಕಷ್ಟ ಸಾಧ್ಯ.
- ಹಾಗೆ ನೋಡಿದರೆ ಒಂದು ಎಕ್ರೆ ಹೊಲದಲ್ಲಿ ಕನಿಷ್ಟ 4-5 ರಷ್ಟಾದರೂ ಮಣ್ಣಿನ ,ಮಾದರಿಗಳನ್ನು ಸಂಗ್ರಹಿಸಿ ಅದನ್ನು ಪರೀಕ್ಷೆ ಮಾಡಿಸಿ,
- ಅದಕ್ಕನುಗುಣವಾಗಿ ಆಯಾ ಪ್ರದೇಶಕ್ಕೆ ತಕ್ಕಂತೆ ಪೋಷಕಗಳನ್ನು ಕೊಡಬೇಕಾಗುತ್ತದೆ.
- ಇಷ್ಟಕ್ಕೂ ಇದನ್ನು ಪರೀಕ್ಷೆ ಮಾಡಿದಾಗ ಅದರ ಫಲಿತಾಂಶಕ್ಕೆ ಅನುಗುಣವಾಗಿ ಉಪಚಾರ ಮಾಡಲು ನಮ್ಮಿಂದ ಕಷ್ಟ ಸಾಧ್ಯ.
- ಹೀಗೇ ಉಪಚಾರ ಮಾಡಿ ಅದನ್ನು ಸರಿಪಡಿಸಬಹುದು ಎಂದು ಹೇಳಿ ಕೊಡುವವರೂ ಇಲ್ಲ.
- ಮಣ್ಣು ಪರೀಕ್ಷೆ ಮಾಡಿಸಿದಾಗ ಬರುವ ಫಲಿತಾಂಶದ ವರದಿಯ ಕಥೆಯನ್ನಂತೂ ಇಲ್ಲಿ ವಿವರಿಸುವುದು ಬೇಡ.
- ಕೆಲವು ರೈತರು ಎರಡು ಕಡೆಗೆ ಒಂದೇ ಮಾದರಿಯನ್ನು ಕಳುಹಿಸಿ ಭಿನ್ನ ಭಿನ್ನ ಪರೀಕ್ಷಾ ವರದಿಗಳನ್ನು ಪಡೆದದ್ದೂ ಇದೆ.
ಮಣ್ಣು ಪರೀಕ್ಷೆ ವಿಚಾರದಲ್ಲಿ ಹಿರಿಯ ಬೇಸಾಯ ಶಾಸ್ರ ವಿಜ್ಞಾನಿಯಾಗಿದ್ದ ದಿ. ಶೀ. ಲ. ಅ. ದೀಕ್ಷಿತರು ಹೇಳುತ್ತಿದ್ದರು ನಾನು ಇದನ್ನು ಯಾವ ರೈತನಿಗೂ ಸಲಹೆ ಮಾಡುವುದಿಲ್ಲ ಎಂದು.
ಮಣ್ಣು ಹೇಗಿದೆ ಎಂಬುನ್ನು ನೀವೇ ತಿಳಿಯಬಹುದು:
- ತೇವಾಂಶ ಇರುವ ಮಣ್ಣಿನಲ್ಲಿ ಎರೆಹುಳುಗಳು ಎಷ್ಟು ಇವೆ ಎಂಬುದರ ಮೇಲೆ ಮಣ್ಣಿನ ಸ್ಥಿತಿಯನ್ನು ನೀವು ತಿಳಿಯಬಹುದು.
- ಮಣ್ಣಿನ ಆಮ್ಲೀಯತೆ ಮತ್ತು ಸಾವಯವ ಅಂಶ ಇವೆರಡೂ ಮಣ್ಣು ಪರೀಕ್ಷೆಯಲ್ಲಿ ಪ್ರಮುಖ ವಿಷಯ.
- ಒಂದು ಹಾರೆ ಮಣ್ಣು ಅಗೆದಾಗ 3-4 ಸಂಖ್ಯೆಯ ಎರೆಹುಳುಗಳು ಸಿಕ್ಕರೆ ಅಂತಹ ಮಣ್ಣು ಆಮ್ಲೀಯ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಯಬಹುದು.
- ಮಣ್ಣಿನಲ್ಲಿ ಹರಳು ಕಲ್ಲುಗಳು ಕಡಿಮೆ ಇದ್ದು, ಒಂದು ಹಿಂಡಿ ಮಣ್ಣನ್ನು ಕೈಯಲ್ಲಿ ಹಿಡಿದಾಗ ಅದರ ಬಣ್ಣ ಮತ್ತು ಅದರ ಮೃದುತ್ವದ ಮೇಲೆ ಅದರ ಸ್ಥಿತಿಯನ್ನು ತಿಳಿಯಬಹುದು.
- ಹೊಸ ಮಣ್ಣಿನಲ್ಲಿ ಸಾಮಾನ್ಯವಾಗಿ ಬೆಳೆಪೋಷಕಗಳು ಕಡಿಮೆ ಇರುತ್ತವೆ.
- ಹಾಗೆಯೇ ಜೀವಾಣುಗಳೂ ಕಡಿಮೆ ಇರುತ್ತದೆ.
- ಗಿಡ ಮರಗಳು ಇದ್ದ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚು ಇರುತ್ತದೆ. ಜೀವಾಣುಗಳೂ ಇರುತ್ತವೆ.
- ಜೀವಾಣುಗಳು ಹೇರಳವಾಗಿರುವ ಮಣ್ಣಿನಲ್ಲಿ ನೀವು ಕೊಡುವ ಪೋಷಕಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ.ಮಣ್ಣು ಸಡಿಲವಾಗಿ ಮೃದುವಾಗಿರಬೇಕು.
- ಗಟ್ಟಿಯಾಗಿ ಇರಬಾರದು.
- ಮಣ್ಣಿನ ಮೇಲೆ ನೀರು ಬಿದ್ದಾಗ ಅದನ್ನು ಮಣ್ಣು ಹೀರಿಕೊಳ್ಳುವಂತಿರಬೇಕು.
ಮಣ್ಣು ಎಲ್ಲಾ ಪೋಷಕಾಂಶಗಳನ್ನೂ ಒಳಗೊಂಡಿರುವುದಿಲ್ಲ. ಬೆಳೆ ಬೆಳೆದಂತೆ ಮಣ್ಣಿನ ಪೋಷಕಗಳು ವ್ಯಯವಾಗುತ್ತವೆ. ಬೆಳೆ ಹೆಚ್ಚು ಬಂದ ವರ್ಷ ಪೋಷಕಗಳು ಹೆಚ್ಚು ವ್ಯಯವಾಗಿರುತ್ತವೆ. ಆದ ಕಾರಣ ಪ್ರತೀ ವರ್ಷವೂ ಪೋಷಕಗಳನ್ನು ಕೊಡಲೇ ಬೇಕು. ಮಣ್ಣಿನಲ್ಲಿ ಕೆಲವು ಪೋಷಕಗಳು ಲಭ್ಯವಾಗದ ಸ್ಥಿತಿ ಉಂಟಾಗುತ್ತದೆ. ಇದಕ್ಕೆ ಕಾರಣ ಪೋಷಕಗಳನ್ನು ಕರಗಿಸಿಕೊಡುವ ಜೀವಾಣುಗಳು. ಈ ಜೀವಾಣುಗಳು ಮಣ್ಣು ಜನ್ಯವೇ ಆಗಿದ್ದು, ಸಾಕಷ್ಟು ಸಾವಯವ ಅಂಶ ಕೊಟ್ಟಾಗ ಅವು ಮಣ್ಣಿನಲ್ಲಿ ಇರುತ್ತವೆ. ಅವುಗಳ ಉಪಸ್ಥಿತಿಯಲ್ಲಿ ಪೋಷಕಗಳ ಬಂಧುತ್ವ ಉಂಟಾಗುವುದು ಕಡಿಮೆ.
- ಮಣ್ಣು ಪರೀಕ್ಷೆ ಮಾಡಿಸದವರು ವರ್ಷವೂ ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನು ಪೂರೈಕೆ ಮಾಡುತ್ತಿರಬೇಕು.
- ಅದರಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಪೋಷಕಾಂಶಗಳೂ ಇರುತ್ತವೆ.
- ಕೆಲವು ಅಲ್ಪಾವಧಿ ಬೆಳೆಗಳಿಗೆ ತಕ್ಷಣದ ಅಗತ್ಯಕ್ಕೆ ಪೋಷಕಗಳು ಬೇಕಾಗುತ್ತವೆ.
- ಅದನ್ನು ತಿಳಿಯಲು ಮಣ್ಣು ಪರೀಕ್ಷೆ ಬೇಕಾಗುತ್ತದೆ. ಅಡಿಕೆ, ತೆಂಗು ಮುಂತಾದ ಧೀರ್ಘಾವಧಿ ಬೆಳೆಗಳಿಗೆ ಮಣ್ಣು ಪರೀಕ್ಷೆಯ ತುರ್ತು ಇರುವುದಿಲ್ಲ.
- ಎಲೆ ಪರೀಕ್ಷೆ ಎಂಬುದು ಮಣ್ಣು ಪರೀಕ್ಷೆಗಿಂತ ಹೆಚ್ಚಿನ ಫಲಿತಾಂಶವನ್ನು ನೀಡುವಂತದ್ದಾಗಿರುತ್ತದೆ.
- ಇದು ಲಭ್ಯವಿದ್ದಲ್ಲಿ ಮಾಡಿಸಬಹುದು.
ಲೆಕ್ಕಾಚಾರಗಳ ಪ್ರಕಾರ ನಮ್ಮ ದೇಶದಲ್ಲಿ ಇನ್ನೂ 90% ಕ್ಕೂ ಹೆಚ್ಚಿನ ರೈತರು ಮಣ್ಣು ಪರೀಕ್ಷೆಯನ್ನು ಮಾಡುತ್ತಿಲ್ಲ. ಮಣ್ಣು ಪರೀಕ್ಷೆ ಮಾಡಿದವರ ಹೊಲದ ಬೆಳೆಗೂ ಮಾಡಿಸದವರ ಹೊಲದ ಬೆಳೆಗೂ ಗಣನೀಯ ವ್ಯತ್ಯಾಸ ಇರುವುದಿಲ್ಲ. ಮಣ್ಣನ್ನು ಸುಸ್ಥಿತಿಯಲ್ಲಿ ಇಡುವುದೇ ಮಣ್ಣು ರಕ್ಷಣೆ. ಮಣ್ಣು ಸವಕಳಿ ತಡೆದು, ಮಣ್ಣಿಗೆ ಮುಚ್ಚಿಗೆ ಮಾಡಿ ಮಣ್ಣಿನ ಸ್ಥಿತಿಯನ್ನು ಬದಲಾಗದಂತೆ ರಕ್ಷಿಸಬಹುದು.