“ವೇಸ್ಟ್ ಡಿ ಕಂಪೋಸರ್ “ ಒಂದು ಗೊಬ್ಬರ ಅಲ್ಲ.

by | Nov 20, 2020 | Organic Cultivation (ಸಾವಯವ ಕೃಷಿ) | 2 comments

ಹೆಸರೇ ಹೇಳುತ್ತದೆ, ಇದು ಕೃಷಿ ತ್ಯಾಜ್ಯಗಳನ್ನು ಕಳಿಯಿಸಿ ಕೊಡುವ ಜೀವಾಣುಗಳನ್ನು ಹೊಂದಿರುವ ಉತ್ಪನ್ನ ಎಂದು. ಆದರೆ ಜನ ಇದನ್ನೇ ಗೊಬ್ಬರ ಎಂದು ಭಾವಿಸಿ, ಎಲ್ಲದಕ್ಕೂ ವೇಸ್ಟ್ ಡಿ ಕಂಪೋಸರ್ ಬಳಸಿ ಎಂದು ಸಲಹೆ ಕೊಡುತ್ತಾರೆ.  ಯಾವ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೋ ತಿಳಿಯದು. ಬರೇ ಇದನ್ನು ಬಳಸಿ ಬೆಳೆಗಳಿಗೆ ಪೋಷಕಾಂಶದ ತೃಷೆ ತೀರಿತೆಂದಾದರೆ ಅದು ಒಂದು ಅದ್ಭುತವೇ ಸರಿ.

ವೇಸ್ಟ್ ಡಿ ಕಂಪೊಸರ್  ಬಾಟಲಿಯ ಒಳಗೆ

  • ಗೊಬ್ಬರಗಳು ಅಥವಾ ಪೊಷಕಾಂಶಗಳಲ್ಲಿ ಸ್ಥೂಲ ಗೊಬ್ಬರಗಳು ಮತ್ತು ತೀಕ್ಷ್ಣ ಗೊಬ್ಬರಗಳು ಎಂದು ಎರಡು ವಿಧ.
  • ಈಗ ಅದರಲ್ಲಿ ನ್ಯಾನೋ ಗೊಬ್ಬರಗಳೂ ಬಂದಿವೆ.
  • ಆದರೆ ಚಾಲ್ತಿಯಲ್ಲಿರುವುದು ಎರಡೇ.
  • ಸಾವಯವ ರೂಪದ ಕೋಳಿ, ಕುರಿ, ಕಾಂಪೋಸ್ಟು ಕೊಟ್ಟಿಗೆ ಗೊಬ್ಬರ ಕೃಷಿ ತ್ಯಾಜ್ಯಗಳ ಕಳಿತ ರೂಪದ ಗೊಬ್ಬರ ಇವೆಲ್ಲಾ ಸ್ಥೂಲ ಗೊಬ್ಬರಗಳು.
  • ಇವು ಅಧಿಕ ಪ್ರಮಾಣದಲ್ಲಿ  ಮಣ್ಣಿಗೆ ಸೇರಲ್ಪಟ್ಟಾಗ ಅದು ಸೂಕ್ಷ್ಮಾಣು ಜೀವಿಗಳ ಜೊತೆಗೆ ಬೆರೆತು ಶಿಥಿಲವಾಗಿ ತುಂಬಾ ಕಡಿಮೆ ಪ್ರಮಾಣಕ್ಕೆ ಇಳಿಯುತ್ತದೆ.
  • ಒಂದು ಎಲೆ ಕರಗಿ ಮಣ್ಣಿನ ರೂಪ ಹೊಂದಿದಾಗ ಅದು ಗ್ರಾಂ ಗಿಂತಲೂ ಕಡಿಮೆಯಾಗುತ್ತದೆ.
  • ಅದಕ್ಕಾಗಿ ಸ್ಥೂಲ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ (Bulk quantity) ಹಾಕಬೇಕಾಗುತ್ತದೆ.
  • ತೀಕ್ಷ್ನ ಗೊಬ್ಬರಗಳಲ್ಲಿ ರಸಗೊಬ್ಬರಗಳು ಸೇರಿವೆ.
  • ನ್ಯಾನೋ ಎಂಬುದು ಸ್ವಲ್ಪ ಜಠಿಲವಾದ ಪೋಷಕ ತಂತ್ರಜ್ಞಾನ.

ವೇಸ್ಟ್ ಡಿ ಕಂಪೋಸರ್ ಯಾಕೆ:

ವೇಸ್ಟ್ ಡಿ ಕಂಪೊಸರ್  ಬಾಟಲಿಯ ಒಳಗಿನ  ಜೀವಾಣುಗಳು

  • ಸ್ಥೂಲ ಗೊಬ್ಬರಗಳು ಬೇಗನೇ ಮಣ್ಣಿನಲ್ಲಿ ವಿಲೀನವಾಗುವುದಿಲ್ಲ. ಅವುಗಳನ್ನು ಕಳಿಯಲು ಒಂದೆಡೆ ರಾಶಿ ಹಾಕಿದರೂ ಅಲ್ಲಿ ಅದು ನಿಧಾನವಾಗಿಯೇ ಕರಗುತ್ತದೆ.
  • ಇದರಲ್ಲಿರುವ ಲಿಗ್ನಿನ್ ಮುಂತಾದ ಅಂಶಗಳು ಅದನ್ನು ಬೇಗ ಕಳಿಯಲು ಬಿಡುವುದಿಲ್ಲ.
  • ಲಿಗ್ನಿನ್, ಟ್ಯಾನಿನ್ ಹಾಗೆಯೇ ಇನ್ನಿತರ ವಸ್ತುವನ್ನು ಕರಗಿಸಿ ಕೊಡಲು ಸಹಾಯಕವಾದದ್ದು ಸಗಣಿ. ಇದು ನಮ್ಮ ಪೂರ್ವಜರಿಂದ ಲಾಗಾಯ್ತು ನಮಗೂ ಸಹ ಗೊತ್ತಿರುವ ಸತ್ಯ.
  • ನಮ್ಮ ಹಿರಿಯರು ಕೊಟ್ಟಿಗೆಯಲ್ಲಿ ಹಸುಗಳ ಕಾಲ ಬುಡಕ್ಕೆ ಸೊಪ್ಪು ತರಗೆಲೆ ಹಾಕಿ ಅದರ ಮೇಲೆ ಹಸುಗಳನ್ನು ಮಲಗುವಂತೆ ಮಾಡುತ್ತಿದ್ದರು.
  • ಆಗ ಅದರ ಮಲ ಮೂತ್ರಗಳು ಮತ್ತು ಅವುಗಳ ಕುಣಿದಾಟ ಆ ಸಾವಯವ ವಸ್ತುಗಳಿಗೆ ಸಗಣಿ, ಮೂತ್ರಗಳ ಲೇಪನವಾಗುವಂತೆ ಮಾಡುತ್ತಿತ್ತು.
  • ಅದನ್ನು ನಂತರ ಬೆಳೆಗಳ ಬುಡಕ್ಕೆ ಹಾಕಿ ಅದನ್ನು ಮಣ್ಣು ಇಲ್ಲವೇ ಇನ್ಯಾವುದಾದರೂ ಸಾವಯವ ವಸ್ತುಗಳಿಂದ  ಮುಚ್ಚಿದಾಗ ಅದು ಬೇಗ ಕರಗಿ ಹುಡಿ ರೂಪಕ್ಕೆ ಪರಿವರ್ತನೆಯಾಗುತ್ತಿತ್ತು.
  • ಆದರೆ ತರಗೆಲೆ ಇತ್ಯಾದಿಗಳನ್ನು ಹಾಗೆಯೇ ಬೇರೆ ಕಡೆ ರಾಶಿ ಹಾಕಿದರೆ ಅದು ಕಳಿಯಲು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.
  • ಕಳಿಯುವಿಕೆಯ ಕ್ರಿಯೆಗೆ ಸಹಕಾರಿಯಾಗುವ ಸೂಕ್ಷ್ಮಾಣು ಜೀವಿಗಳು ಹಸುವಿನ ಮಲದಲ್ಲಿ ಇರುತ್ತವೆ ಎಂಬುದು ನಮಗೂ ಗೊತ್ತಿದೆ.
  • ಈ ಸೂಕ್ಷ್ಮಾಣು ಜೀವಿಯನ್ನು ಸಂಸ್ಲೇಶಿಸಿ ಬರೇ ಸೂಕ್ಷ್ಮಾಣು ಜೀವಿಯನ್ನು ಮಾತ್ರವೇ ಇರುವಂತೆ ತಯಾರಿಸಿದ ಉತ್ಪನ್ನ ವೇಸ್ಟ್ ಡಿ ಕಂಪೋಸರ್.
  •  ಒಂದು ಕಡೆ ಸಗಣಿಯನ್ನು ರಾಶಿ ಹಾಕಿದಾಗ ಅದರಲ್ಲಿ  ಬೆಳೆಯುವ ಜೀವಾಣುಗಳೇ ಈ ಡಿ ಕಂಪೋಸಿಂಗ್ ಜೀವಾಣು.

ವೇಸ್ಟ್ ಡಿ ಕಂಪೊಸರ್  ಮಿಶ್ರಣ

ಎಲ್ಲಿ ಬಳಸಬಹುದು:

  • ಸಾವಯವ ತ್ಯಾಜ್ಯಗಳನ್ನು ಒಟ್ಟು ಸೇರಿಸಿ ಕಾಂಪೋಸ್ಟು ಮಾಡುವುದಿದ್ದರೆ, ಅದಕ್ಕೆ ಈ ಸೂಕ್ಷ್ಮಾಣು ಜೀವಿ ಮಿಶ್ರಣವನ್ನು ಬಳಕೆ ಮಾಡಿದರೆ ಅದು ತ್ವರಿತವಾಗಿ  ಕರಗಿ ಕಾಂಪೋಸ್ಟು ಆಗುತ್ತದೆ.
  • ಬೆಳೆಗಳ ಬುಡಕ್ಕೆ ಸಾವಯವ ತ್ಯಾಜ್ಯಗಳನ್ನು ಹಾಕಿದ್ದರೆ ಅದು ಬೇಗ ಕಳಿತು ಮಣ್ಣಾಗಿ ರೂಪಾಂತರ ಹೊಂದಲು ಇದನ್ನು ಅಲ್ಲಿಗೆ ಸಿಂಪಡಿಸಬಹುದು.
  • ಜೀವಾಮೃತ ಇತ್ಯಾದಿ ಸಾವಯವ  ಸಾರವನ್ನು ಬೆಳೆಗಳಿಗೆ ಕೊಡುವಾಗ ಇದರ ಜೊತೆಗೆ ವೇಸ್ಟ್ ಡಿ ಕಂಪೋಸರ್ ಬಳಕೆ ಮಾಡಬಹುದು.
  • ಇದರಲ್ಲಿ ತೆಂಗಿನ  ಸಿಪ್ಪೆ, ಅಡಿಕೆ ಸಿಪ್ಪೆ ಮುಂತಾದ ಅಧಿಕ ಟಾನಿನ್ – ಲಿಗ್ನಿನ್ ಉಳ್ಳ ವಸ್ತುಗಳು  ಬೇಗ ಕರಗಲ್ಪಡುವುದಿಲ್ಲ.

ಇದು ಪೂರ್ಣ ಗೊಬ್ಬರ ಅಲ್ಲ:

  • ಯಾರಾದರೂ ಈ ವೇಸ್ಟ್ ಡಿ ಕಂಪೋಸರ್ ಬಳಸಿ ಅದರಲ್ಲೇ ಉತ್ತಮ ಬೆಳೆ ಪಡೆದಿದ್ದರೆ ಅದು ಸಾವಯವ ಸಂಮೃದ್ಧ ಮಣ್ಣು ಆಗಿದ್ದರೆ ಮಾತ್ರ ಸಾಧ್ಯ.
  • ಅದೂ ಒಂದು ಬಾರಿಗೆ ಇಳುವರಿ ಕೊಡಬಹುದು. ನಿರಂತರವಾಗಿ ಕೊಡಲು ಸಾಧ್ಯವಿಲ್ಲ. ಪದೇ ಪದೇ ಸಾವಯವ ವಸ್ತುಗಳನ್ನು ಬಳಸಿ ಅದನ್ನು ಡಿ ಕಂಪೋಸ್ ಮಾಡಿ ಅದನು ಬಳಕೆ ಮಾಡುತ್ತಿದ್ದರೆ ಅದರಲ್ಲಿ ಇಳುವರಿ ಬರುವ ಸಾಧ್ಯತೆ ಇದೆ.
  • ಬರೇ ಮಣ್ಣಿಗೆ ಇದನ್ನು ಬಳಕೆ ಮಾಡಿದಲ್ಲಿ  ಇದು ಸ್ವತಂತ್ರ ಗೊಬ್ಬರವಾಗಿ ಕೆಲಸ ಮಾಡಲಾರದು.
  • ಅದುದರಿಂದ ಇದು ಒಂದು  ಸ್ವತಂತ್ರ  ಗೊಬ್ಬರ  ಅಲ್ಲ.

ಇದನ್ನೇ ಬಳಸಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂಬುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಇದು ಒಂದು ಸಾವಯವ ತ್ಯಾಜ್ಯಗಳ ಕರಗುವಿಕೆಗೆ ನೆರವಾಗುವ ಮಧ್ಯವರ್ತಿಯೇ ಹೊರತು ಇದು ಸ್ವತಂತ್ರ ಗೊಬ್ಬರ ಅಲ್ಲವೇ ಅಲ್ಲ. ಇಂತಹ ಕಾಂಪೋಸ್ಟ್  ಮಾಡಬಲ್ಲ ಸೂಕ್ಷ್ಮಾಣು ಜೀವಿಗಳು ಬೇರೆ ಬೇರೆ ಇವೆ.

  • ಕೃಷಿ ವಿಶ್ವ ವಿಧ್ಯಾನಿಲಯ ಬೆಂಗಳೂರು ಇಲ್ಲಿನ ಸೂಕ್ಷ್ಮಾಣು ಜೀವಿ ವಿಭಾಗದಲ್ಲಿ ಇದು ಲಭ್ಯವಿದೆ.
  • ಆದರೆ ಇರುವುದರಲ್ಲಿ NCOF ತಂತ್ರಜ್ಞಾನದ  ಈ ಉತ್ಪನ್ನ ಅಗ್ಗ. ಇದರಲ್ಲಿ ರೈತರಿಗೆ ಪ್ರಯೋಜನ ಇದ್ದರೆ ಕಾಂಪೋಸ್ಟು ಮಾಡಲು ಇದನ್ನೇ  ಬಳಕೆ ಮಾಡಬಹುದು.
  • ಅವು ಕಾಂಪೋಸ್ಟರ್ ಆಗಿ ಲಭ್ಯವಿವೆ.

ಕೆಲವು ಜನ ಸರಿಯಾಗಿ ವಸ್ತು ವಿಷಯವನ್ನು ಅರ್ಥ ಮಾಡಿಕೊಳ್ಳದೆ ಮನಬಂದತೆ ಹೇಳುತ್ತಾರೆ. ಇದರಲಿ ಅನುಭವ ಇರುವುದಿಲ್ಲ. ತಮ್ಮದೇ ಸಹ ವೃತ್ತಿ ಮಾಡುವವವರು ಕೃಷಿಕರು. ಅವರಿಗೆ ತಮ್ಮ ಅನುಭವಗಳನ್ನುಮಾತ್ರ ಹಂಚಿಕೊಳ್ಳಬೇಕು.

2 Comments

  1. ಶಾ. ರಮೇಶ

    ಉತ್ತಮವಾದ ಮಾಹಿತಿ ನಿಜಕ್ಕೂ ನಾನು ಸಹ ತಪ್ಪು ಕಲ್ಪನೆ ಹೊಂದಿದ್ದೆ ನಿಮ್ಮ ಮಾಹಿತಿಗೆ ಅಭಿನಂದನೆಗಳು

    Reply
  2. ಶಾ. ರಮೇಶ

    ಉತ್ತಮವಾದ ಮಾಹಿತಿ ನಿಜಕ್ಕೂ ನಾನು ಸಹ ತಪ್ಪು ಕಲ್ಪನೆ ಹೊಂದಿದ್ದೆ ನಿಮ್ಮ ಮಾಹಿತಿಗೆ ಅಭಿನಂದನೆಗಳು

    Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!