ಚಾಲಿ ಅಡಿಕೆಗೆ ದರ ಏರುತ್ತಲೇ ಇದ್ದು, ಸದ್ಯವೇ ಅದು ಕ್ವಿಂಟಾಲಿಗೆ ರೂ. 50,000 ತಲುಪಬಹುದು ಎಂಬುದಾಗಿ ಸುದ್ದಿ ಹಬ್ಬುತ್ತಿದೆ.
ಚಾಲಿ ಅಡಿಕೆಗೆ ಭಾರೀ ಬೇಡಿಕೆ ಬರುತ್ತಿದ್ದು, ಶಿರಸಿ , ಸಿದ್ದಾಪುರ, ಸಾಗರಲ್ಲಿ ಭಾರೀ ಮುತುವರ್ಜಿಯಿಂದ ಖರೀದಿ ನಡೆಯುತ್ತಿದೆ. ಇಂದು (6-08-21) ಶಿರಸಿ ಮಾರುಕಟ್ಟೆಯಲ್ಲಿ ಚಾಲಿ 41,800 ಕ್ಕೂ, ಯಲ್ಲಾಪುರದಲ್ಲಿ 41500 ,ಸಾಗರ ಮಾರುಕಟ್ಟೆಯಲ್ಲಿ 40,000 ಹಾಗೂ ಸಿದ್ದಾಪುರದಲ್ಲಿ 41,100 ಕ್ಕೂ ಖರೀದಿ ನಡೆದಿದೆ. ಪುತ್ತೂರು, ಸುಳ್ಯ ಮಂಗಳೂರಿನಲ್ಲಿ 45,000,ಪುತ್ತೂರು, ಸುಳ್ಯ ವಿಟ್ಲಗಳಲ್ಲಿ ಖಾಸಗಿ ವರ್ತಕರು 46,500ಕ್ಕೂ ಖರೀದಿ ನೆಡೆಸಿದ ವರದಿ ಇದೆ. ಕುಂದಾಪುರದಲ್ಲಿ ನಿನ್ನೆಯೇ 46,000 ಕ್ಕೆ ಖರೀದಿ ನಡೆದಿದೆ. ಈ ಎಲ್ಲಾ ವಿದ್ಯಮಾನಗಳು ಚಾಲಿ ಅಡಿಕೆ ಧಾರಣೆಯನ್ನು ಇನ್ನೂ ಮೇಲಕ್ಕೆ ಕೊಂಡೊಯ್ಯುವ ಸೂಚನೆಯಾಗಿದ್ದು, ಇದರ ಜೊತೆಗೆ ಕೆಂಪಡಿಕೆಯೂ ಸ್ವಲ್ಪ ಚೇತರಿಕೆ ಕಾಣುವ ಸಾಧ್ಯತೆ ಇದೆ.
ಶಿರಸಿ, ಯಲ್ಲಾಪುರ, ಸಾಗರ ಶಿವಮೊಗ್ಗದಲ್ಲಿ ಚಾಲಿಗೆ ಬೇಡಿಕೆ ಹೆಚ್ಚಿತೆಂದರೆ ಅದು ಬೆಲೆ ಏರಿಕೆಯ ಮುನ್ಸೂಚನೆ ಎನ್ನುತ್ತಾರೆ ಅನುಭವಿಗಳು.
- ಚಾಲಿ ಅಡಿಕೆ ವ್ಯವಹಾರ ಮಾಡುವ ಗುಜರಾತ್ , ಮಧ್ಯಪ್ರದೇಶ , ರಾಜಸ್ಥಾನದ ಕೆಲವು ವರ್ತಕರು ಸಾಗರ, ಶಿರಸಿ ಸಿದ್ದಾಪುರಗಳಲ್ಲಿ ಭಾರೀ ಪ್ರಮಾಣದಲ್ಲಿ ಚಾಲಿ ಅಡಿಕೆ ಖರೀದಿ ಮಾಡಿ, ಅದನ್ನು ಕತ್ತರಿಸಿ ಹುರಿದು ಪ್ಯಾಕಿಂಗ್ ಮಾಡಿ ಊರಿಗೆ ಕಳುಹಿಸುವ ಕೆಲಸ ನಿರತರಾಗಿದ್ದಾರೆ.
- ಇವರ ಪ್ರಕಾರ ಅಲ್ಲಿ ಅಡಿಕೆಯ ಕೊರತೆ ಉಂಟಾಗಿದೆಯಂತೆ.
- ಉತ್ತರ ಭಾರತದಲ್ಲಿ ಈಗ ಗುಟ್ಕಾದಂತಹ ಸಿದ್ದ ಉತ್ಪನ್ನಗಳಿಗಿಂತ ಜನ ಹೆಚ್ಚಿನ ಪ್ರಮಾಣದಲ್ಲಿ ಪಾನ್ ಬೀಡಾವನ್ನು ಅವರವರೇ ಸ್ವತಹ ಸಿದ್ದಪಡಿಸಿಕೊಂಡು ಬಳಕೆ ಮಾಡುವುದನ್ನು ಹೆಚ್ಚಾಗುತ್ತಿದೆಯಂತೆ.
- ಪ್ಯಾಕಿಂಗ್ ಆದ ಸಿದ್ದ ರೂಪದ ಅಡಿಕೆಯೆಲ್ಲಾ ಇಲ್ಲಿಗೆ ಮಾರಾಟವಾಗುತ್ತಿದೆಯಂತೆ.
- ಕಳೆದ ವರ್ಷ ಲಾಕ್ ಡೌನ್ ಸಮಯದಿಂದ ಉತ್ತರ ಭಾರತದಾದ್ಯಂತ ಹೆಚ್ಚಿನವರು ಬೀಡಾ ಶಾಪ್ ಗಳಲ್ಲಿ ಖರೀದಿ ನೆಡೆಸುವುದನ್ನು ಸ್ವಲ್ಪ ಕಡಿಮೆ ಮಾಡಿದ್ದು,
- ಅವರವರೇ ಸಿದ್ದಪಡಿಸಿಕೊಂಡು ತಿನ್ನುವುದನ್ನು ರೂಢಿ ಮಾಡಿಕೊಂಡಿರುವುದೇ ಚಾಲಿ ಅಡಿಕೆಯ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಒಬ್ಬರು.
- ಇದು ಅವರಿಗೆ ಮಿತವ್ಯಯವೂ ಆಗುತ್ತದೆಯಂತೆ.
ಚಾಲಿ ಅಡಿಕೆಗೇ ಬೇಡಿಕೆ:
- ಪಾನ್ ಬೀಡಾ ತಯಾರಿಸಲು ಬಳಕೆಯಾಗುವುದು ಚಾಲಿ ಅಡಿಕೆ.
- ಇದಕ್ಕೆ ಒಂದು ವಿಶಿಷ್ಟ ಸುವಾಸನೆ ಇದೆ. ಜೊತೆಗೆ ಇದರಲ್ಲಿ ಕಲಬೆರಕೆ ಹೆಚ್ಚಾಗಿ ಇರುವುದಿಲ್ಲ.
- ಕೆಂಪಡಿಕೆ ಬಳಕೆ ಹೆಚ್ಚಾಗಿ ಗುಟ್ಕಾ ದಂತಹ ಉತ್ಪನ್ನಗಳಿಗೆ ಮಾತ್ರ ಬಳಕೆಯಾಗುತ್ತದೆ.
- ಇತ್ತೀಚೆಗೆ ಕೆಂಪಡಿಕೆಯಲ್ಲಿ ಕಲಬೆರಕೆ ಹೆಚ್ಚಾಗುತ್ತಿದ್ದು, ಗ್ರಾಹಕ ವರ್ಗಕ್ಕೆ ಇದರ ಮಾಹಿತಿ ಇದೆ.
- ಚಾಲಿ ಅಡಿಕೆಗೆ ಕೃತಕ ಬಣ್ಣ ಹಾಕಿ ಮಾರಾಟ ಮಾಡುವ ಅತೀ ದೊಡ್ಡ ಜಾಲಗಳೇ ಇವೆ.
- ಅದೆಷ್ಟೂಅಡಿಕೆ ಇಲ್ಲಿಂದ ರವಾನೆಯಾಗಿ ತಿರಸ್ಕರಿಸಲ್ಪಡುವುದು, ಅದನ್ನೇ ಬೇರೊಬ್ಬರಿಗೆ ಮಾರಾಟ ಮಾಡುವುದು, ಅಂತಿಮವಾಗಿ ಹೇಗಾದರೂ ತಿನ್ನುವವನಿಗೆ ತಲುಪುತ್ತದೆ.
- ಹಿಂದೆ ಇದೆಲ್ಲಾ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿತ್ತು.
- ಈಗ ಅದು ಬಹಳಷ್ಟು ಹೆಚ್ಚಳವಾಗಿದೆ. ಒಂದಷ್ಟು ಜನ ಹಸಿ ಅಡಿಕೆ ಸುಲಿದು, ಅದಕ್ಕೆ ಚಾಲಿ ಮಿಶ್ರಣ ಮಾಡಿ, ಸ್ವಲ್ಪ ಬೇಯಿಸಿ. ರೆಡ್ ಆಕ್ಸೈಡ್ ಬಣ್ಣ ಹಾಕಿ ಕೆಂಪಡಿಕೆ ಹೆಸರಿನಲ್ಲಿ ಮಾಡುವುದು ಇದೆ ಎಂಬ ದಟ್ಟ ವದಂತಿಗಳಿವೆ.
- ಕೆಲವರ ಅಡಿಕೆ ಸಂಸ್ಕರಣಾ ಘಟಕಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನೂ ನಿರಾಕರಿಸಲಾಗುತ್ತಿದೆ.
- ಇದೆಲ್ಲಾ ಅವ್ಯವಹಾರಗಳು ಅಡಿಕೆ ಬಳಕೆದಾರರಿಗೆ ಅಲ್ಪ ಸ್ವಲ್ಪವಾದರೂ ಗೊತ್ತಾಗಿದೆ.
- ಆ ಕಾರಣಕ್ಕೆ ಜನ ಚಾಲಿಯನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ ಎನ್ನುತ್ತಾರೆ ಗುಜರಾತ್ ಮೂಲದ ಓರ್ವ ಸ್ಥಳೀಯ ಅಡಿಕೆ ಖರೀದಿದಾರರು.
ದರ ಎಲ್ಲಿ ತನಕ ತಲುಪಬಹುದು?
- ಚಾಲಿ ಅಡಿಕೆ ಧಾರಣೆ ಕಳೆದ ಸಾಲಿನಲ್ಲಿ ಹಳೆಯದು 54,000 ತನಕವೂ, ಹೊಸತು 43,500 ತನಕವೂ ಏರಿಕೆಯಾದದ್ದು ನಮಗೆಲ್ಲಾ ಗೊತ್ತಿರುವಂತದ್ದು.
- ಆ ಧಾರಣೆಯನ್ನು ಮೀರಿ ಈ ವರ್ಷ ಬೆಲೆ ಏರಿಕೆಯಾಗಬಹುದು ಎಂಬ ವದಂತಿಗಳಿವೆ.
- ಈಗಾಗಲೇ ಅಡಿಕೆ ಆಮದು ನಿಂತಿದೆ.
- ಗಡಿಯಗಳಲ್ಲಿ ಅಡಿಕೆ ಕಳ್ಳ ಸಾಗಾಟ ನಡೆಯುತ್ತಿದೆಯಾದರೂ ಅದನ್ನು ಕಟ್ಟು ನಿಟ್ಟಿನ ಕಣ್ಗಾವಲಿನಲ್ಲಿ ತಡೆ ಹಿಡಿಯಲಾಗುತ್ತಿದೆ.
- ಆದ ಕಾರಣ ಈ ವರ್ಷ ಸಪ್ಟೆಂಬರ್ ಸುಮಾರಿಗೆ ಹೊಸ ಅಡಿಕೆಗೆ ಕ್ವಿಂಟಾಲಿಗೆ ರೂ. 50,000 ವೂ ಹಳೆಯದು ಗರಿಷ್ಟ 55,000 ವೂ ಆಗಬಹುದು ಎನ್ನಲಾಗುತ್ತದೆ.
- ಅಡಿಕೆ ವ್ಯವಹಾರ ಮಾಡುವವರೆಲ್ಲರೂ ಗರಿಷ್ಟ ಪಮಾಣದಲ್ಲಿ ದಾಸ್ತಾನು ಇಟ್ಟಿದ್ದಾರೆ ಎಂಬುದಾಗಿ ಸುದ್ದಿಗಳಿವೆ.
- ಹಿಂದೆ ಖರೀದಿ ಆದಂತೆ ಅದನ್ನು ವಿಲೇವಾರಿ ಮಾಡುತ್ತಿದ್ದರು.
- ಈಗ ಟರ್ನ್ ಓವರ್ ಗಾಗಿ 50-60 % ಮಾರಿ ಉಳಿದವುಗಳನ್ನು ದಾಸ್ತಾನು ಮಾಡುತ್ತಿದ್ದಾರೆ.
- ಕಾರಣ ವ್ಯಾಪಾರಿಗಳಿಗೆ ಕಳೆದ ಎರಡು ಮೂರು ತಿಂಗಳಿಂದ ಬೆಲೆ ಏರಿಕೆಯ ಸೂಚನೆ ಗೊತ್ತಾಗಿದೆ.
ಕೆಂಪಡಿಕೆಯೂ ಚೇತರಿಕೆ ಅಗಲಿದೆ:
- ಚಾಲಿ ಅಡಿಕೆಗೆ ಬೆಲೆ ಏರಿಕೆ ಆದಂತೆ ಕೆಂಪು ಕೆಳಕ್ಕೆ ಬರಲಾರದು.
- ಹಾಗೆಂದು ಭಾರೀ ಏರಿಕೆ ಆಗದಿದ್ದರೂ ಈಗಿನ ಧಾರಣೆಯಲ್ಲಿ 1000-2000 ತನಕ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.
- ಕೆಂಪಡಿಕೆಗೆ ಬೇಡಿಕೆ ಕಡಿಮೆ ಆಗಿರುವುದೇ ಬೆಲೆ ಏರಿಕೆ ಆಗದಿರಲು ಕಾರಣ.
ಅಡಿಕೆ ಸಧ್ಯ ಮಾರಾಟ ಮಾಡಬೇಡಿ:
ಬೆಳೆಗಾರರು ಈ ತನಕ ದಾಸ್ತಾನು ಇಟ್ಟವರು ಸಧ್ಯ ಆಗಸ್ಟ್ ಮೂರನೇ ವಾರದ ತನಕ ಮಾರಾಟ ಮುಂದೂಡುವುದು ಸೂಕ್ತ. ಆ ತನಕ ಬೆಲೆ ಇಳಿಕೆ ಸಾದ್ಯತೆ ಇಲ್ಲ. ಆಗಸ್ಟ್ ಕೊನೇ ವಾರಕ್ಕೆ ಹೊಸತು ಕ್ವಿಂಟಾಲಿಗೆ 47,500 ತನಕ ಅಗಬಹುದು ಎಂಬ ಅಂದಾಜು ಇದೆ. ಹಳೆಯದು 53,500 ತನಕ ಮಾತ್ರ ಏರಿಕೆ ಆಗಬಹುದು. ಸ್ವಲ್ಪ ಕಾದು ಮಾರಾಟ ಮಾಡುವುದು ಸೂಕ್ತ.