ರೋಗದಲ್ಲಿ ಉದುರಿ ಬಿದ್ದ ಅಡಿಕೆಗೂ ಬೆಲೆ –ಬೇಡಿಕೆ.

ಮಾರಾಟಕ್ಕೆ ಬಂದ ಹಸಿ ಅಡಿಕೆ

ರೋಗದ ಅಡಿಕೆ, ಬಿದ್ದ ಅಡಿಕೆಯನ್ನು ಹೆಕ್ಕಿದರೆ ಅದನ್ನು ಏನು ಮಾಡುವುದು ಎಂದು ಅದನ್ನು ನಾವು  ಅಲ್ಲೇ ಬಿಡುತ್ತೇವೆ. ಇದಕ್ಕೆ ಬೆಲೆ ಇದೆ, ಕೊಳ್ಳುವವರು ಇದ್ದಾರೆ ಎಂದರೆ ಹೆಕ್ಕದೆ ಬಿಡುತ್ತೇವೆಯೇ? ಇಲ್ಲ. ಈ ಅಡಿಕೆಗೂ ಬೇಡಿಕೆ ಬಂದಿದೆ. ಬೆಲೆಯೂ ಇದೆ.  ಅದನ್ನು ಹೆಕ್ಕದೆ ಅಲ್ಲೇ ಉಳಿಸುವುದರಿಂದ ಹೆಚ್ಚಾಗುವ ರೋಗ ಸಾಧ್ಯತೆಯೂ ಇದರಿಂದ ಕಡಿಮೆಯಾಗುತ್ತದೆ.

ಸಹಕಾರ ವ್ಯವಸ್ಥೆಯಲ್ಲಿ ದೇಶಕ್ಕೆ ಮಾದರಿಯಾದ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಈಗ ಎಳೆಯ ಬಿದ್ದ ಅಡಿಕೆಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ತೋಟಗಾರ್ಸ್ ಕೋ ಓಪರೇಟಿವ್ ಸೊಸೈಟ್ TSS ಒಂದು ಮಹೋನ್ನತ ಹೆಜ್ಜೆ ಇಟ್ಟಿದೆ. ಇಲ್ಲಿನ ರೈತರು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ದಿನಂಪ್ರತೀ ಸುಮಾರು 20-30 ಕ್ವಿಂಟಾಲಿಗೂ ಆಧಿಕ ಪ್ರಮಾಣದಲ್ಲಿ ಬಿದ್ದ ಹಣ್ಣು ಅಡಿಕೆ, ಮಂಜೆ ಅಡಿಕೆ, ಬಲಿಯುತ್ತಿರುವ ಅಡಿಕೆ, ಎಳೆ ಅಡಿಕೆ , ರೋಗದಿಂದ ಉದುರಿದ ಹಸಿ ಅಡಿಕೆ, ಅರ್ಧಂಬರ್ಧ ಒಣಗಿದ ಅಡಿಕೆಯನ್ನು ರೈತರು ಮಾರಾಟ ಮಾಡಲು ತರುತ್ತಿದ್ದಾರೆ. ಮಳೆಯಿಂದಾಗಿ ಒಣಗಿಸುವ ವ್ಯವಸ್ಥೆ ಇಲ್ಲದ ಹಲವಾರು ಬೆಳೆಗಾರರ ಪಾಲಿಗೆ ಇದೊಂದು ದೊಡ್ಡ ಅನುಕೂಲವಾಗಿ ಪರಿಣಮಿಸಿದೆ.

ಇಂದು ಮಾರಾಟಕ್ಕೆ ಬಂದ ರೋಗದಲ್ಲಿ ಬಿದ್ದ ಅಡಿಕೆ
ಇಂದು ಮಾರಾಟಕ್ಕೆ ಬಂದ ರೋಗದಲ್ಲಿ ಬಿದ್ದ ಅಡಿಕೆ
  • ಉತ್ತರ  ಕನ್ನಡದ ಅಡಿಕೆ ಬೆಳೆಯ ಕಣಜ ಎಂದೇ ಹೆಸರುವಾಸಿಯಾದ ಶಿರಸಿಯಲ್ಲಿ ಟಿ ಏಸ್ ಎಸ್ ಎಸ್  ಎಂದರೆ ಅಡಿಕೆ ಬೆಳೆಗಾರರಿಗೆ ಒಂದು ದೇವಾಲಯ ಇದ್ದಂತೆ.
  • ಇಲ್ಲಿ ರೈತರ ಎಲ್ಲಾ ಸಮಸ್ಯೆಗೆ ನ್ಯಾಯಯುತ ಸ್ಪಂದನೆ  ಸಿಗುತ್ತದೆ. 
  • ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಸಂಸ್ಥೆಯು ಅಡಿಕೆ, ಕರಿಮೆಣಸು, ಬಾಳೆಕಾಯಿ, ತೆಂಗಿನಕಾಯಿ ಮುಂತಾದ ಎಲ್ಲಾ ಕೃಷಿ ಉತ್ಪನ್ನಗಳಿಗೂ ಖರೀದಿ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
  • ದಿನಂಪ್ರತೀ ಹರಾಜು ವ್ಯವಸ್ಥೆಯನ್ನು ಮಾಡಿಕೊಟ್ಟು ರೈತರಿಗೆ ಅನುಕೂಲಮಾಡಿಕೊಟ್ಟಿದೆ.
  • ಇಲ್ಲಿ ರೈತರು 1 ಕಿಲೋ ಅಡಿಕೆ ಇದ್ದರೂ ಮಾರಾಟಕ್ಕೆ ತರಬಹುದು.
  • ಕ್ವಿಂಟಾಲು ಗಟ್ಟಲೆ ಇದ್ದರೂ ತರಬಹುದು.  
  • ಈ ವರ್ಷದಿಂದ ಇಲ್ಲಿ ರೈತರ ತೋಟದಲ್ಲಿ ಹಣ್ಣಾಗಿ ಬೀಳುವ ಅಡಿಕೆ, ರೋಗದಿಂದ ಉದುರಿ ಬಿದ್ದ ಅಡಿಕೆ, ಅರ್ಧಂಬರ್ಧ ಒಣಗಿದ ಅಡಿಕೆ ,ಎಳೆ ಅಡಿಕೆ ಎಲ್ಲದಕ್ಕೂ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.
  • ಸಾಮಾನ್ಯವಾಗಿ ಇದೆಲ್ಲವೂ ರೈತರ ಹೊಲದಲ್ಲಿ ಹೆಕ್ಕದೇ ಅಲ್ಲಿಗೇ ಕೊಳೆತು ಮಣ್ಣಾಗುತ್ತಿತ್ತು.
  • ಈ ವರ್ಷ ಇಂತಹ ಸಮಸ್ಯೆ ಇಲ್ಲ. ರೈತರು ಇದನ್ನು ಹೆಕ್ಕಿ, ಅದು ಎಷ್ಟೇ ಪ್ರಮಾಣ ಇರಲಿ, ತಂದು ಇಲ್ಲಿನ ಮಾರುಕಟ್ಟೆ ಪ್ರಾಂಗಣದಲ್ಲಿ ಹಾಕಿದರೆ ಇದನ್ನು ಕೊಳ್ಳುವ ಖರೀದಿದಾರರು ಅದರ ಗುಣಮಟ್ಟಕ್ಕನುಗುಣವಾಗಿ ದರ ನಿರ್ಧರಿಸಿ ಕೊಳ್ಳುವ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ.
ಈ ಅಡಿಕೆಯೂ 1950 ರೂ. ಗಳಿಗೆ ಮಾರಾಟವಾಗಿದೆ
ಈ ಅಡಿಕೆಯೂ 1950 ರೂ. ಗಳಿಗೆ ಮಾರಾಟವಾಗಿದೆ

ಇಂದು ದಿನಾಂಕ 28-09-2021 ರ  ಮಂಗಳವಾರ ಸುಮಾರು 110 ಜನ ರೈತರು 1-10-20-50-30-80 ಕಿಲೋ ಲೆಕ್ಕದಲ್ಲಿ ಸುಮರು 15 ಕ್ವಿಂಟಾಲಿಗೂ ಹೆಚ್ಚು ಹಸಿ ಅಡಿಕೆಯನ್ನು ತಂದು ವಿಕ್ರಯಿಸಿದ್ದಾರೆ. ಕಿಲೋ ಅಡಿಕೆಗೆ ಕ್ವಿಂಟಾಲಿಗೆ 1800 ರಿಂದ 12,000 ರೂ  ತನಕ ಬೆಲೆಯಲ್ಲಿ ಖರೀದಿ  ನಡೆದಿದೆ.

ಯಾವ ಅಡಿಕೆಗಳು ಬಂದಿವೆ:

  • ಇಂದು ಹಾಗೂ ಸಾಮಾನ್ಯವಾಗಿ ಎಲ್ಲಾ ದಿನಗಳಲ್ಲೂ ಬರುವ ಅಡಿಕೆಗೆ ಈ ಎಲ್ಲಾ ನಾಮಕರಣ ಮಾಡಲಾಗಿದೆ.
  • ಸಿಪ್ಪೆ ಸ್ವಲ್ಪ ಒಣಗಿದ ಅಡಿಕೆಗೆ ಗೋಟು ಅಡಿಕೆ, ಕೊಳೆ ರೋಗ ಬಂದು ಉದುರಿದ ಅಡಿಕೆಗೆ ಹಸಿ ಕೊಳೆ ಅಡಿಕೆ, ಹಸಿರು ಬಣ್ಣ ಇದ್ದು ಉದುರಿದ ಅಡಿಕೆಗೆ ಹಸಿರು ಅಡಿಕೆ , ಬೆಳೆದ  ಅಡಿಕೆ ಉದುರಿದ್ದರೆ ಸಿಪ್ಪೆ ಅಡಿಕೆ ಎಂಬುದಾಗಿಯೂ, ಬಲಿತ ಬೇಯಿಸಿ ಕೆಂಪಡಿಕೆ  ಮಾಡಬಹುದಾದ ಅಡಿಕೆಗೆ ಹಸಿ ಸಿಪ್ಪೆ ಅಡಿಕೆ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ.
  • ಇವೆಲ್ಲವನ್ನೂ ಗುಣಮಟ್ಟಕ್ಕನುಗುಣವಾಗಿ ಟೆಂಡರ್ ಮಾಡಿ ಬೆಳೆಗಾರರಿಗೆ ನ್ಯಾಯಯುತವಾದ ಬೆಲೆಯನ್ನು ಒದಗಿಸಲಾಗಿದೆ.
  • ಬೆಳೆಗಾರರ ಬಾಯಿಯಲ್ಲಿ ಈಗ ಇದೇ ಸುದ್ದಿ, TSS ನಲ್ಲಿ ಈ ವ್ಯವಸ್ಥೆ ಮಾಡಿದ್ದರಿಂದ ನಮಗೆ ಲಾಭವಾಗಿದೆ ಎಂದು.
ಇಂದು ದಿ.29-09-2021 ರಂದು ಬಂದ ಅಡಿಕೆ ಮತ್ತು ಖರೀದಿ ದರ
ಇಂದು ದಿ.29-09-2021 ರಂದು ಬಂದ ಅಡಿಕೆ ಮತ್ತು ಖರೀದಿ ದರ

ಅಡಿಕೆಯಲ್ಲಿ ಬಿಸಾಡುವಂತದ್ದು ಯಾವುದೂ ಇಲ್ಲ:

  • ಅಡಿಕೆಯ ಸಿಪ್ಪೆ ಒಂದನ್ನು ಬಿಟ್ಟರೆ ಬೇರೆ ಯಾವುದನ್ನು ರೈತರು ಉಪಯೋಗಕ್ಕಿಲ್ಲದ ವಸ್ತು ಎಂದು ಬಿಸಾಡಬೇಕಾಗಿಲ್ಲ.
  • ಎಲ್ಲದಕ್ಕೂ ಅದರದ್ದೇ ಆದ ಬೇಡಿಕೆ ಇದೆ.
  • ಚೌತಿಯ ತರುವಾಯ ಉದುರುವ ಎಲ್ಲಾ ಅಡಿಕೆಯಲ್ಲೂ ಅಲ್ಪ ಸ್ವಲ್ಲ ಪ್ರಮಾಣದಲ್ಲಾದರೂ ತಿರುಳು ಅಂಶ ಇರುತ್ತದೆ.
  • ಇದನ್ನು ಸರಿಯಾಗಿ ಒಣಗಿಸಿದರೆ ಮಾರುಕಟ್ಟೆ ಮೌಲ್ಯ ಉಳ್ಳ ಅಡಿಕೆ ಸಿಗುತ್ತದೆ.
  • ಆದರೆ ಇಂದು ರೈತರಿಗೆ ಅದನ್ನು ಮಾಡಲಿಕ್ಕೆ ಆಗುತ್ತಿಲ್ಲ.
  • ಹಸಿ ಅಡಿಕೆ ಉದುರುವ ಸಮಯದಲ್ಲಿ ಮಳೆ ಬಂದರೆ ಏನೇ ಮಾಡಿದರೂ ಅದು ಒಣಗುವುದಿಲ್ಲ.
  • ಅರೆ ಬರೆ ಒಣಗಿಸಿದರೆ ಅದು ಬೂಸ್ಟ್ ಬಂದು ಹಾಳಾಗುತ್ತದೆ.
  • ಅದನ್ನೇ ಒಣಗಿಸುವ ಮಂದಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಇಟ್ಟುಕೊಂಡಿರುತ್ತಾರೆ.
  • ಸರಿಯಾಗಿ ಒಣಗಿಸಿ ಅದರ ಮೌಲ್ಯವನ್ನು ನಗದೀಕರಣ ಮಾಡಿಕೊಳ್ಳುತ್ತಾರೆ.
  • ಇದಕ್ಕೆ ಬೇಕಾಗುವುದು ಖರೀದಿ ವ್ಯವಸ್ಥೆ.
  • ಒಂದೇ ಕಡೆಯಲ್ಲಿ ಇದನ್ನು ತರುತ್ತಾರೆ ಎಂದಾದರೆ ಅಲ್ಲಿಗೆ ಖರೀದಿದಾರರೂ ಬರುತ್ತಾರೆ.
  • TSS ನಂತಹ ಸಂಸ್ಥೆಯ ಮಾರುಕಟ್ಟೆ ಪ್ರಾಂಗಣದಲ್ಲಿ ಹತ್ತಾರು ಕ್ವಿಂಟಾಲು ಅಡಿಕೆ ಸಿಗುತ್ತದೆ ಎಂದಾದರೆ ಯಾರು ತಾನೇ ಖರೀದಿಗೆ ಬರುವುದಿಲ್ಲ.

ಸಹಕಾರ ವ್ಯವಸ್ಥೆ ಹೀಗಿದ್ದರೆ ಎಷ್ಟು ಚಂದ:

  • ಶಿರಸಿಯ TSS  ಸಂಸ್ಥೆಯ ತರಹ ಬಹುಷಃ ಬೇರೆಲ್ಲೂ ಇಂತಹ ಸಹಕಾರ ವ್ಯವಸ್ಥೆಗಳು ಇದ್ದಂತಿಲ್ಲ.
  • ಎಲ್ಲಾ ಊರಿನಲ್ಲೂ ಇಂತಹ ವ್ಯವಸ್ಥೆ ಇದ್ದರೆ ರೈತರಿಗೆ ಮಾರುಕಟ್ಟೆ ಎಂಬ ಅತೀ ದೊಡ್ಡ ಸಮಸ್ಯೆ ಬಗೆಹರಿದಂತೆ.
  • ತೇಲಂಗ ಊರಿನ ರಾಮಕೃಷ್ಣ ನಾಯಕ ಇವರು ಇಂದು ಸುಮಾರು 80 ಕಿಲೋ ಗೂ ಹೆಚ್ಚು ರೋಗದಿಂದ ಉದುರಿದ ಅಡಿಕೆಯನ್ನು ತಂದು ಮಾರಾಟ ಮಾಡಿದ್ದಾರೆ.
  • ಇದಕ್ಕೆ ಒಬ್ಬ ಖರೀದಿದಾರ 3669 ರೂ. ದರ ಕೊಟ್ಟು ಖರೀದಿಸಿದ್ದಾರೆ.
  • ಇಲ್ಲವಾದರೆ ಇದನ್ನು ಇವರು ಬಹಳ ಕಷ್ಟಪಟ್ಟು ಒಣಗಿಸಿ ಮಾರಾಟ ಮಾಡಬೇಕಿತ್ತಂತೆ.
  • ಹಾಗೆಯೇ ಹಲವಾರು ಜನ ಬೇರೆ ಅಡಿಕೆ ಮಾರಾಟಕ್ಕೆ ತರುವುದರ ಜೊತೆಗೆ ತಮ್ಮ ತೋಟದಲ್ಲಿ ಬಿದ್ದ ಹಸಿ ಅಡಿಕೆ ಯನ್ನೂ ತಂದು ಮಾರಾಟ ಮಾಡಿ, ಬಂದ ಖರ್ಚನ್ನು ಇದರಿಂದ ಹೊಂದಿಸಿಕೊಂಡಿದ್ದಾರೆ.
  • ಪ್ರತೀ ಅಡಿಕೆ ಬೆಳೆಯುವ ಪ್ರದೇಶದಲ್ಲೂ ಇದನ್ನು ಸ್ಥಳೀಯ ಸಹಕಾರಿ ಸಂಸ್ಥೆಗಳು ಮಾಡಬಹುದು.ಹೀಗೆ ಮಾಡಿದರೆ ಬೆಳೆಗಾರರಿಗೆ ಎಷ್ಟೊಂದು ಅನುಕೂಲ ಅಲ್ಲವೇ?

Leave a Reply

Your email address will not be published. Required fields are marked *

error: Content is protected !!