ಗಡ್ಡೆಯಿಂದ ಅಂಗಾಂಶ ಕಸಿ- ನೀವೇ ಮಾಡಬಹುದು ಹೇಗೆ?

ಗಡ್ದೆ ಕಸಿಯ ಗಿಡ

ನಿಮಗೆ ಖುಷಿ ಕಂಡ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು  ಗಡ್ಡೆಯ ಮೂಲದಲ್ಲಿ 4 ತಿಂಗಳೊಳಗೆ 50 ಕ್ಕೂ ಹೆಚ್ಚು ಸಸಿಗಳನ್ನು  ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಚಾರಕ್ಕೆ ತಂದಿದ್ದಾರೆ.

  • ಬಾಳೆಯ ಅಧಿಕ ಸಸಿಗಾಗಿ ಅಂಗಾಂಶ ಕಸಿ ಮಾಡಬೇಕು. ಇಲ್ಲವೇ ಅಧಿಕ ತೂಕದ ಗಡ್ಡೆಯನ್ನು ತರಬೇಕು.
  • ಅದರ ಬದಲಿಗೆ ಒಂದು ಗಡ್ಡೆ ಇದ್ದರೆ ನಿಮ್ಮ ಮನೆಯಲ್ಲೇ ಅಧಿಕ ಸಂಖ್ಯೆಯ ಬಾಳೆ ಸಸಿಯನ್ನು ಉತ್ಪಾದಿಸಲು ಸಾಧ್ಯವಿದೆ.
  • ಸಾಗಾಟ ಮುಂತಾದ ಕಷ್ಟಗಳಿಲ್ಲ.

ವಿಧಾನ:

  •  ಉತ್ತಮ ನಿರ್ವಹಣೆಯಿರುವ ತೋಟದಿಂದ ಬಾಳೆಯ ಇಳುವರಿ ಕ್ಷಮತೆ ಗಮನಿಸಿ 2-3 ತಿಂಗಳು ಪ್ರಾಯದ  700 ರಿಂದ 1 ಕಿಲೋ ತನಕ ತೂಗುವ ಕತ್ತಿ ಕಂದನ್ನು  ಆಯ್ಕೆ ಮಾಡಬೇಕು.
  • ಬಾಳೆಯಿಂದ ಅದನ್ನು  ಪೆಟ್ಟಾಗದಂತೆ ಜಾಗರೂಕತೆಯಲ್ಲಿ ಬೇರ್ಪಡಿಸಬೇಕು.
  • ತೆಗೆದ ಗಡ್ಡೆಯ ಬೇರುಗಳನ್ನೆಲ್ಲಾ ಕತ್ತರಿಸಿ ತೆಗೆದು, ಸಸ್ಯ ಭಾಗವನ್ನು  ಪೂರ್ತಿ ಕತ್ತರಿಸಿ ತೆಗೆದು ಗಡ್ಡೆ ಮಾತ್ರ ಉಳಿಸಬೇಕು.
  •   ಆ ಗಡ್ಡೆಗೆ  ಗುಣಾಕಾರ ಚಿನ್ಹೆಯಂತೆ 8/10, 0.25 ರಿಂದ 0.50 ಸೆ. ಮೀ. ಆಳದ ಗಚ್ಚುಗಳನ್ನು ಹಾಕಬೇಕು.
  • ನಂತರ ಗಡ್ಡೆಯನ್ನು  ಶಿಲೀಂದ್ರ ಸೋಕು ನಿವಾರಣೆಗೆ ಶೇ. 0.3 ರ ಬಾವಿಸ್ಟಿನ್ ದ್ರಾವಣದಲ್ಲಿ   ಅದ್ದಿ ತೆಗೆದು 3-4 ಗಂಟೆ ಕಾಲ ನೆರಳಿನಲ್ಲಿ ಒಣಗಿಸಬೇಕು.

ಈ ರೀತಿ ಸಿದ್ದಪಡಿಸಿದ ಗಡ್ಡೆಗಳನ್ನು  ಪಾತಿಯಲ್ಲಿ , ಪಾಲಿಥೀನ್ ಚೀಲದಲ್ಲಿ ಅಥವಾ ಕುಂಡಗಳಲ್ಲಿ ಮರದ ಹುಡಿಯನ್ನು  ಗಡ್ಡೆಯ ಮೇಭಾಗ 3-5 ಸೆಂ.ಮೀ. ಮುಚ್ಚುವಂತೆ  ಹಾಕಿ ನೆರಳಿನಲ್ಲಿ ಇಡಬೇಕು. ಮರ ಸಿಗಿದ ಹುಡಿಗೆ ತೇವಾಂಶವನ್ನು ಅಧಿಕ ಪ್ರಮಾಣದಲ್ಲಿ ಹೀರಿಕೊಳ್ಳುವ ಗುಣ ಇದೆ. ರೋಗಗಳು ಇರುವುದಿಲ್ಲ. ನೀರೆಯುವಾದ ಗಡ್ಡೆಯ ಮೇಲ್ಭಾಗ ತೆರೆದುಕೊಳ್ಳಬಾರದು. ಮಾಧ್ಯಮವು  ಸದಾ ತೇವದಿಂದ ಇರಬೇಕು.

  • ಮರದ ಹುಡಿಯಲ್ಲದೆ ಬೇರೆ ಬೇರೆ ಮಾಧ್ಯಮವನ್ನೂ ಬಳಸಿ ನೊಡಲಾಗಿದ್ದರೂ, ಮರದ ಹುಡಿಯೇ ಉತ್ತಮವೆಂದು ಕಂಡು ಬಂದಿದೆ.

ಸಸಿ ಹೇಗೆ ಆಗುತ್ತದೆ:

ಗಡ್ಡೆಯಲ್ಲಿ  ಮಾಡಿದ ಅಂಗಾಂಶ ಕಸಿ ಗಿಡ
ಗಡ್ಡೆಯಲ್ಲಿ ಮಾಡಿದ ಅಂಗಾಂಶ ಕಸಿ ಗಿಡ
  •  ಈ ರೀತಿ ನಾಟಿ ಮಾಡಿದ ಗಡ್ಡೆಯಲ್ಲಿ 17-20 ದಿನಕ್ಕೆ 2-5 ಸಂಖ್ಯೆಯ  ಮೊಳಕೆಗಳು ಮೂಡುತ್ತವೆ.
  • ಅದನ್ನು 25 ರಿಂದ 30 ದಿನ ಬೆಳೆಯಲು ಬಿಟ್ಟಾಗ ಸುಮಾರು 1-20 ಸೆಂ ಮೀ. ಎತ್ತರಕ್ಕೆ ಬೆಳೆದು 3 ಎಲೆ ಬಂದಿರುತ್ತದೆ.
  • ಅದನ್ನು ಗಡ್ಡೆ ಉಳಿಸಿ ಸಸಿಯನ್ನು ಮಾತ್ರ ಜಾಗರೂಕತೆಯಲ್ಲಿ ಚೂರಿಯ ಮೂಲಕ ಕತ್ತರಿಸಿ ತೆಗೆಯಬೇಕು.
  • ಆ ಗಡ್ಡೆಗೆ  ಮತ್ತೆ ಪುನಹ ಎರಡು ಇಲ್ಲವೇ ಮೂರು ಗಚ್ಚು ಕೊಟ್ಟು ಮರದ ಹುಡಿಯಲ್ಲಿ ಮುಚ್ಚಿಟ್ಟರೆ, ಅದರಲ್ಲಿ ಮತ್ತೆ 20 ದಿನಗಳಲ್ಲಿ 4-5 ಮೊಳಕೆಗಳು ಬರುತ್ತವೆ.
  • ಅದನ್ನೂ ಸಹ 30 ದಿನಗಳ ಕಾಲ ಬೆಳೆಯಲು ಬಿಟ್ಟು ನಂತರ ಸಸ್ಯ ತೆಗೆದು, ಗಡ್ಡೆ ಉಳಿಸಿ  ಗಚ್ಚು ಕೊಟ್ಟು ಮರದ ಹುಡಿ ಮುಚ್ಚಿ ಅಲ್ಲೇ ಬಿಡಬೇಕು.
  • ಎರಡು ಸಾರಿ ಸಸ್ಯವನ್ನು ತೆಗೆದು ಮೂರನೇ ಬಾರಿ ಮೊಳಕೆ  ಬರಲು ಬಿಟ್ಟಾಗ   20-30 ಸಂಖ್ಯೆಯ ಬೇರು ಬಂದ  ಮೊಳಕೆಗಳು ಹುಟ್ಟಿಕೊಳ್ಳುತ್ತವೆ.
  • ಅ ಸಮಯದಲ್ಲಿ ಗಡ್ಡೆಯನ್ನು ಮೇಲೆ ತೆಗೆದು ಅದಕ್ಕೆ ಅಂಟಿಕೊಂಡಿರುವ ಮರದ ಹುಡಿಯನ್ನು ತೆಗೆದು ಗಡ್ಡೆಯನ್ನು ಜಾಗರೂಕತೆಯಲ್ಲಿ  ತೊಳೆದು ತೆಗೆದು ಒಂದು ಹರಿತವಾದ ಚೂರಿಯಿಂದ ಆ ಮೊಳಕೆಗಳನ್ನು ಜಾಗರೂಕತೆಯಲ್ಲಿ ಪ್ರತ್ಯೇಕಿಸುತ್ತ ಬರಬೇಕು.
  • ಪ್ರತೀಯೊಂದು ಬೇರ್ಪಡಿತ ಮೊಳಕೆಯಲ್ಲಿಯೂ 2-3 ಉತ್ತಮ ಬೇರುಗಳಿರಬೇಕು.
  • ಒಂದು ವೇಳೆ ಸಸ್ಯದ ಬೇರು ಸ್ವಲ್ಪ ಹಾನಿಯಾದರೂ ಉತ್ತಮ ಆರೈಕೆಯಲ್ಲಿ ಮತ್ತೆ ಬೆಳೆಯುತ್ತದೆ.
  • ಹೆಚ್ಚು ಬೇರುಗಳಿದ್ದರೆ  ಕತ್ತರಿಸಿ ತೆಗೆಯಬೇಕು. ಬೇರಿನ ಉದ್ದವೂ 2-3 ಇಂಚಿನಷ್ಟು ಇದ್ದರೆ ಸಾಕು.
  • ನಂತರ ಪ್ರತೀಯೊಂದು ಸಸಿಯನ್ನು ಒಂದೊಂದು ಪಾಲಿಬ್ಯಾಗ್  ನಲ್ಲಿ ನೆಟ್ಟು , ಅದನ್ನು ಗಡಸುತನಕ್ಕೆ ಒಳಪಡಿಸಬೇಕು.
  •   ಗಡ್ಡೆಯನ್ನು ಮತ್ತೆ ಮರದ ಹುಡಿಯ ಮಾಧ್ಯಮದಲ್ಲಿ ಹಾಕಿದರೆ ಮತ್ತೆ ಅದರಲ್ಲಿ ಸಸ್ಯ ಮೊಗ್ಗುಗಳು ಬರುತ್ತಲೇ ಇರುತ್ತದೆ.
ಗಡ್ಡೆಯನ್ನು ಅಧಿಕ ಸಸ್ಯೋತ್ಪಾದನೆಗೆ  ಒಳಪಡಿಸುವ ವಿಧಾನ
ಗಡ್ಡೆಯನ್ನು ಅಧಿಕ ಸಸ್ಯೋತ್ಪಾದನೆಗೆ ಒಳಪಡಿಸುವ ವಿಧಾನ

ಸಸಿಯ ಆರೈಕೆ ಕ್ರಮ:

  • ಪಾಲಿಥೀನ್ ಚೀಲಕ್ಕೆ  ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ, ಮತ್ತು ಮರಳನ್ನು 1:1:1 ರ ಅನುಪಾತದಲ್ಲಿ ಮಾಧ್ಯಮವನ್ನು ಸೇರಿಸಬೇಕು.
  • ಕತ್ತರಿಸಿ ತೆಗೆದ ಸಸಿಗಳ ಮೊಳಕೆಗಳಲ್ಲಿ  ಬೇಗ ಬೇರು ಬರುವಂತೆ ಶೇ. 0.25 ರ ಐಬಿಎ (ಇಂಡೋಲ್ ಬ್ಯೂಟ್ರಿಕ್ ಅಸಿಡ್ (IBA  ) ದಾವಣದಲ್ಲಿ  15 ನಿಮಿಷ ಕಾಲ ಅದ್ದಿ ತೆಗೆಯಬೇಕು.
  • ನಂತರ ಅದನ್ನು ಪಾಲಿಥೀನ್ ಚೀಲದಲ್ಲಿ ನೆಡಬೇಕು.  ಇಂಡೋಲ್ ಬ್ಯುಟ್ರಿಕ್ ಅಸಿಡ್ ಅನ್ನು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಐಬಿಎ ಯನ್ನು ನೀರಿನಲ್ಲಿ ಮಿಶಣಮಾಡಿ ತಯಾರಿಸಿಕೊಳ್ಳಬಹುದು.
  • ಈ ಪಾಲಿಥೀನ್ ಚೀಲಕ್ಕೆ ನೀರು ಒದಗಿಸುತ್ತಾ 45 ದಿನಗಳ ಕಾಲ  ಶೇಡ್ ನೆಟ್ ಹಾಕಿದ ಚಪ್ಪರದ  ಒಳಗೆ ನೆರಳಿನಲ್ಲಿ ಇಡಬೇಕು.
  •  ಪಾಲಿಥೀನ್ ಹಾಳೆ ಹೊದಿಸಿದ ಟುನೆಲ್ ಆದರೆ ಉತ್ತಮ. 45 ದಿನಗಳ ನಂತರ ಅದು ನಾಟಿಗೆ ಸಿದ್ದವಾಗುತ್ತದೆ.
  • ಆ ಸಮಯದಲ್ಲಿ ಏನಾದರೂ ಎಲೆ ಕಪ್ಪಗಾಗುವಿಕೆ ಕಂಡು ಬಂದರೆ ಶೇ.0.5 ರ ಬಾವಿಸ್ಟಿನ್ ಅಥವಾ ಬಾವಿಸ್ಟಿನ್ ಮತ್ತು ಮ್ಯಾಂಕೋಜೆಬ್ ಉಳ್ಳ  ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು.

ಉತ್ತಮ ಆರೈಕೆಗಾಗಿ ಹೀಗೆ ಮಾಡಿ:

  • ಹೆಚ್ಚು ಸಂಖ್ಯೆಯಲ್ಲಿ ಮೊಳಕೆ ಬರಿಸಲು  ಮರದ ಹುಡಿಗೆ ಜೈವಿಕ ಗೊಬ್ಬರಗಳಾದ ಮೈಕೋರೈಝಾ, ಟ್ರೈಕೋಡರ್ಮಾ ವನ್ನು ಬಳಸಬೇಕು.
  • ಶಿರಚ್ಚೇಧ ಮಾಡಿದ ಗಡ್ಡೆಯನ್ನು  ಮರದ ಹುಡಿಯ ಪಾತಿಯಲ್ಲಿ ನಾಟಿ ಮಾಡುವಾಗ ಅದರ ಮೊಳಕೆ ಭಾಗದ ಕುಳಿಗೆ  (meristem ) ವನ್ನು 4 ಮಿಲಿ ಲೀ. ಬಿ ಎ ಪಿ (BAP (0.04%) ಹಾಕಿದರೆ ಅಧಿಕ ಮೊಗ್ಗು ಮೂಡುತ್ತದೆ.
  • ಇದು ಸಾಮಾನ್ಯ ರೈತರಿಗೆ ಅಷ್ಟು ಅವಶ್ಯಕವಲ್ಲ . ವಾಣಿಜ್ಯಿಕವಾಗಿ ಸಸ್ಯೋತ್ಪಾದನೆ ಮಾಡುವಾಗ ಇದು ಬೇಕಾಗುತ್ತದೆ.
  • ಈ ರೀತಿಯ ಸಸ್ಯೋತ್ಪಾದನೆಯಲ್ಲಿ ಒಟ್ಟು 130-135 ದಿನದಲ್ಲಿ ಒಂದು ಗಡ್ಡೆಯಿಂದ 50-60 ನೆಡಬಹುದಾದ ಸಸ್ಯಗಳನ್ನು ಉತ್ಪಾದಿಸಬಹುದು.

ಅಪರೂಪದ ಬಾಳೆ  ಗಿಡ ದೊರೆತರೆ , ನಿಮ್ಮಲ್ಲೇ ಉತ್ತಮ ಬಾಳೆ ಸಸ್ಯ ಇದ್ದು, ಅದನ್ನು ಗಿಡ ಹೆಚ್ಚು ಮಾಡಬೇಕೆಂದಿದ್ದರೆ ಇದು ಅನುಕೂಲಕರ ವಿಧಾನ ಅಂಗಾಂಶ ಕಸಿ ಮಾಡುವವರಲ್ಲಿ ಕೊಟ್ಟರೆ ಅದಕ್ಕೆ ತಿಂಗಳು ಗಟ್ಟಲೆ ಸಮಯ ಬೇಕು. ಇದು ಬೇಗ ಆಗುತ್ತದೆ.

ಹೊಲದಲ್ಲೇ ಸಸ್ಯೋತ್ಪಾದನೆ:

  •  ರೈತರು ತಮಗೆ ಬೇಕಾದಷ್ಟು ಪ್ರಮಾಣದ ಸಸ್ಯಗಳನ್ನು ಉತ್ಪಾದಿಸಿಕೊಳ್ಳಬೇಕಾದರೆ ಮೇಲಿನಂತೆ ಕ್ರಮಗಳನ್ನು ಅನುಸರಿಸಬೇಕಾಗಿಲ್ಲ.
  • ಎಲ್ಲಿ ಬಾಳೆ ಇದೆಯೋ ಅಲ್ಲೇ  ಗಡ್ಡೆಯನ್ನು ತೆಗೆಯದೇ ಅಲ್ಲೇ  ಮೇಲಿನ ಕ್ರಮದಂತೆ ಸಸಿ ಮಾಡಿಕೊಳ್ಳಬಹುದು.
  • ಇದು ಗ್ರಾಮಿಣ ರೈತರಿಗೆ ಗುಣಮಟ್ಟದ ಸಸ್ಯಗಳನ್ನು  ಪ್ರಯೋಗಾಲಯವಿಲ್ಲದೇ ತಮ್ಮ ಬಳಿಯಲ್ಲೇ ಉತ್ಪಾದನೆ ಮಾಡಬಹುದಾದ ಮಿತವ್ಯಯದ ತಾಂತ್ರಿಕತೆ.

ಅಂಗಾಂಶ ಕಸಿಯ ತಂತ್ರಜ್ಞಾನಕ್ಕೆ ಬೇಕಾಗುವ ಬಂಡವಾಳ ಮತ್ತು  ಇತರ ಪೂರಕ ವ್ಯವಸ್ಥೆಗಳು ಇದಕ್ಕೆ ಬೇಕಾಗಿಲ್ಲ.. ಇದು ರೈತರಿಗೆ ಕೈಗೆಟಕುವಂತದ್ದು. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು, ನರ್ಸರಿ ಮಾಡಿ ಗ್ರಾಮೀಣ ಭಾಗದಲ್ಲಿ ವ್ಯವಹಾರ ಮಾಡಬಹುದು.  ಆಗಾಗ ಪಟ್ಟಣಗಳ ರಸ್ತೆ ಬದಿಯಲ್ಲಿ ತೊಟ್ಟೆಯಲ್ಲಿ ಬೆಳೆಸಿದ ಬಾಳೆ ಸಸಿ ಮಾರಾಟ ಸಿಗುವುದು ಇದೇ ತರಹದಲ್ಲಿ ಮಾಡಿದ ಸಸ್ಯೋತ್ಪಾದನೆ.
ಮೂಲ: ರಾಷ್ಟ್ರೀಯ ಬಾಳೆ ಸಂಶೋಧನಾ ಸಂಸ್ಥೆ ತಿರುಚಿನಾಪಳ್ಳಿ.
end of the article:
search words: banana tissue culture# banana cultivation# banana# banana multiplication #Tissue culture in your farm# banana plantain#  banana plants# simple tissue culture#

Leave a Reply

Your email address will not be published. Required fields are marked *

error: Content is protected !!