ಜೀವಜಲ – ನೀರಿನ ಬಗ್ಗೆ ಒಂದಷ್ಟು ತಿಳಿಯೋಣ.

by | Mar 22, 2020 | Water Conservation (ನೀರು ಸಂರಕ್ಷಣೆ) | 0 comments

ಒಂದು ಕಾಲದಲ್ಲಿ ನೆಲದಿಂದ ಮೇಲಕ್ಕೆ ಹೊರ ಚಿಮ್ಮುತ್ತಿದ್ದ ಕೆಲವು ನೀರ ಚಿಲುಮೆಗಳು ಈಗ ತಮ್ಮ ಕೆಲಸವನ್ನು ನಿಲ್ಲಿಸಿವೆ. ಓವರ್ ಪ್ಲೋ ಆಗುತ್ತಿದ್ದ ಕೊಳವೆ ಬಾವಿಗಳು ಆಯಾಸವಾಗಿ ತಮ್ಮ ಕೆಲಸವನ್ನು ನಿಲ್ಲಿಸಿವೆ. ಮನೆ ಮುಂದೆ ಕುಡಿಯುವ ನೀರಿಗಾಗಿ ಇದ್ದ ಬಾವಿಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ.ಎಲ್ಲಿ ನೋಡಿದರಲ್ಲಿ  ಕೊಳವೆ ಬಾವಿಯ ನೀರು. ನೀರಿನ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ನೀರಿನ ಬಳಕೆ – ಅಂದು:

Man collecting water

  • ನಾವು ಸಣ್ಣವರಿದ್ದಾಗ ಮನೆಯಲ್ಲಿ ಅಜ್ಜಿ ಯಾವಾಗಲೂ ಗದರಿಸುತ್ತಿದ್ದುದು, ನೀರಿನ ಮಿತ ಬಳಕೆಗೆ. “ಸ್ವಲ್ಪ ನೀರಿನಲ್ಲಿ ಕೈಕಾಲು ತೊಳೆಯಬೇಕು. ಸ್ನಾನ ಮಾಡಬೇಕು. ನೀರಿಲ್ಲ, ಎಲ್ಲಿಂದ ತರಲಿ ಎಂದು”.
  • ಈಗ ನಮ್ಮ ಮಕ್ಕಳಿಗೆ ನಾವು ಈ ಮಾತನ್ನು ಕೇಳಿದರೆ ಅವರು ಏನು ಹೇಳಿಯಾರು ಎಂದು ಒಮ್ಮೆ ಯೋಚಿಸಿ.

ಮನೆಯ ಬಾಗಿಲಿನ ಕಪ್ಪಾಲು (ನೀರು ತುಂಬಿಸುವ ಮಣ್ಣಿನ ಪಾತ್ರೆ)ಯ ಪಕ್ಕದಲ್ಲಿ ಇಟ್ಟಿರುವ ನೀರು ತೆಗೆಯುವ ತಂಬಿಗೆಯ ಗಾತ್ರ ನೋಡಿ ಆ ಮನೆಯ ಲಕ್ಷಣ ಹೇಳುತ್ತಿದ್ದರು. ಸ್ವಲ್ಪ ದರ್ಭಾರಿನವರಾಗಿದ್ದರೆ ( ಬಿಂದಾಸ್ ಖರ್ಚಿನವರು) ದೊಡ್ದ ತಂಬಿಗೆಯೂ , ಮಿತವ್ಯಯಿಗಳಾಗಿದ್ದರೆ  ಸಣ್ಣ ತಂಬಿಗೆಯನ್ನು ಇಡುತ್ತಿದ್ದರಂತೆ. ನೀರನ್ನು ಹಿತಮಿತವಾಗಿ ಬಳಸುವವರು ಮನೆ ಖಾಜಾನೆ  ತುಂಬುವವರು ಎಂದುದು ಹಿರಿಯರ ಮಾತು.

  •  ನಮ್ಮ ಹಿರಿಯರು ಬಾವಿಯಿಂದ ಕೊಡದಲ್ಲಿ ನೀರು ಸೇದುತ್ತಿದ್ದರು.
  • ಕೊಡದಲ್ಲಿ ನೀರು ಸೇದಿ ಬೆಳೆಗಳಿಗೆ ನೀರುಣಿಸುತ್ತಿದ್ದರು.
  • ಮನೆ ಬಾಗಿಲಲ್ಲಿ ಬಕೆಟ್  ಅಥವಾ ಮಣ್ಣಿನ ಪಾತ್ರೆಯಲ್ಲಿ ನೀರು ಇಟ್ಟು ಅದಕ್ಕೆ  ಒಂದು ಸಣ್ಣ ತಂಬಿಗೆ ಅಥವಾ  ತೆಂಗಿನ ಗೆರಟೆಯನ್ನು ಇಡುತ್ತಿದ್ದರು.
  • ಇದರಲ್ಲಿ  ಕೈಕಾಲು ತೊಳೆಯುತ್ತಿದ್ದರು. ಸ್ನಾನಕ್ಕೆ ಗುಡಾಣ ಇತ್ತು. ಅದಕ್ಕೆ ನೀರನ್ನು ಸೇದಿ ತುಂಬಿಸಲಾಗುತ್ತಿತ್ತು.
  • ಅವಿಭಕ್ತ ಕುಟುಂಬದಲ್ಲಿ ಪ್ರತೀಯೊಬ್ಬರೂ ಅವರವರಿಗೆ ಸ್ನಾನಕ್ಕೆ  ಬೇಕಾಗುವಷ್ಟು ನೀರನ್ನು ಸೇದಿ ಗುಡಾಣಕ್ಕೆ  ಹಾಕಿ ಹಿತಮಿತ ನೀರಿನಲ್ಲಿ ಸ್ನಾನ ಮಾಡಿ ಮುಗಿಸುತ್ತಿದ್ದರು.

ಇಂದಿನ ನೀರಿನ ಬಳಕೆ:

  •   1975-80 ನೇ ಇಸವಿ,  ನಮ್ಮ  ದೇಶದ ಜನಸಂಖ್ಯೆ 70 ಕೋಟಿಗಳಷ್ಟಿತ್ತು. ಆಗ ನೀರಿನ ಬಳಕೆ  ಮಿತವಾಗಿತ್ತು.
  • ಈಗ ಜನಸಂಖ್ಯೆ 130 ಕೋಟಿಗೆ ತಲುಪಿದೆ.
  • ಜನ ಕೈಕಾಲು ತೊಳೆಯಲು ಒಂದು ಬಿಂದಿಗೆಯ ಬದಲಿಗೆ ನಳ್ಳಿಯಲ್ಲಿ ನಾಲ್ಕು ಬಿಂದಿಗೆಯಷ್ಟು ಮುಗಿಸುತ್ತಾರೆ.
  • ಯಾರಿಗೂ ಬಾವಿಯಿಂದ ನೀರು ಸೇದುವುದು ಗೊತ್ತಿಲ್ಲ.
  • ಏನಿದ್ದರೂ ಪಂಪು, ಪೈಪು. ನಳ್ಳಿ. ಸ್ನಾನ ಮಾಡಲು ಶವರ್ ನೀರು. ನಳ್ಳಿ ನೀರು.
  • ಕನಿಷ್ಟ ಎರಡು ಮೂರು ಬಕೆಟ್ ನೀರು ಬೇಕು. ಎಲ್ಲಿಂದ ಬರಬೇಕು ಇಷ್ಟು ನೀರು?
  • ನೀರಿನ ಮೂಲ ಅದೇ ಮಳೆ. ಅದೇ ಮೂಲ. ಮೂಲ ನೀರು (ಸೇದು ಬಾವಿ) ಬರಿದಾಗಿ ಸಂಗ್ರಹಿತ ನೀರಿಗೆ ( ಕೊಳವೆ ಬಾವಿ) ಕೈಹಾಕಿದ್ದೇವೆ.
  • ನೀರಿನ ಬಳಕೆ ಹೆಚ್ಚಾಗುತ್ತಿದೆ. ನೀರಿನ ಬಳಕೆಯ ಒತ್ತಡ ಕನಿಷ್ಟ 10 ಪಟ್ಟು ಹೆಚ್ಚಿದೆ.

ಜಗತ್ತೇ ನೀರಿನ ಹೇರಾವರಿ ಬಳಕೆ ಮುಂದೊಂದು ದಿನ ಮನುಕುಲ ಸೇರಿದಂತೆ ಸಕಲ ಜೀವ ರಾಶಿಗಳಿಗೆ ತೊಂದರೆ ಉಂಟು ಮಾಡಲಿದೆ ಮನಗಂಡಿದೆ. ನೀರಿನ ಬಳಕೆಯ ಮಿತವ್ಯಯವನ್ನು ಜನರಿಗೆ ತಲುಪಿಸುವ ದೃಷ್ಟಿಯಿಂದ ಮಾರ್ಚ್ 22 ರಂದು ವಿಶ್ವ ನೀರಿನ  ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ.ಈ ವರ್ಷದ ನೀರಿನ ದಿನದ ಧ್ಯೇಯ  ಹವಾಮಾನ ಬದಲಾವಣೆ ಮತ್ತು ನೀರಿನ ದುರ್ಭಳಕೆ.

ನೀರಿನ ಮೂಲವೇ ಬರಿದಾಗುತ್ತಿದೆ:

water will carried long distance in some places

  • ಅತಿಯಾದ ನೀರಿನ ಬಳಕೆ ಮತ್ತು ಮಳೆಯ ಹಂಚಿಕೆಯ ವ್ಯತ್ಯಾಸದಿಂದಾಗಿ  ನೀರಿನ ಮೂಲ ಕ್ಷೀಣಿಸಲಾರಂಭಿಸಿದೆ.
  • ಸೇದು ಬಾವಿಗಳು ಬರಿದಾಗಿ ಮುಗಿದಿದೆ.
  • ಕೊಳವೆ ಬಾವಿಗಳು ಆಳಕ್ಕೆ ಆಳಕ್ಕೆ ಬಹು ಬಹು ಆಳಕ್ಕೆ ಹೋಗುತ್ತಿವೆ.
  • ಈ ನೀರು ಬಳಕೆಗೆ ಯೋಗ್ಯವಾದ ನೀರಾಗಿರದೆ ಮಾನವನೂ ಸೇರಿದಂತೆ ಜೀವ ಜಂತುಗಳೂ ಸಹ ಅಸ್ವಾಸ್ತ್ಯಕ್ಕೆ ಒಳಗಾಗುತ್ತಿವೆ.

ಹವಾಮಾನ ಬದಲಾಗಿದೆ ಎಚ್ಚರ:

  • ಕಳೆದ 10  ವರ್ಷದಿಂದೀಚೆಗೆ ತಾಪಮಾನ ಏರಿಕೆಯಾಗುತ್ತಿದ್ದು ಪ್ರತೀ ವರ್ಷವೂ ಹೆಚ್ಚಿನ ಬಿಸಿಯನ್ನು ನಾವು ಅನುಭವಿಸುತ್ತಿದ್ದೇವೆ.
  • ನಮ್ಮ ಹಿರಿಯರು ಫ್ಯಾನ್, ಏಸಿ ಇಲ್ಲದೆ ಬದುಕಿದ್ದರು. ಆದರೆ ನಮಗೆ ಅದು ಆಗುತ್ತಿಲ್ಲ.
  • ಕಾರಣ ಅಂದಿನ ಹವಾಮಾನ ಸ್ಥಿತಿಯೇ ಬೇರೆ. ಇಂದಿನ ಹವಮಾನ ಸ್ಥಿತಿಯೇ ಬೇರೆ.
  • ಮಟ ಮಟ ಮಧ್ಯಾನ್ಹದಲ್ಲಿ ತಂಪು ಬೇಕಾದರೆ ಹುಡುಕಿದರೂ ಜಾಗ ಸಿಗದು.
  • ಹಿಂದೆ ಹಾಗಿಲ್ಲ. ಮನೆಯೊಳಗೆ  ಅಥವಾ ಮರದಡಿಗೆ ಹೋದರೆ ಹವಾನಿಯಂತ್ರಣದ ಅನುಭವ ಆಗುತ್ತಿತ್ತು.
  • ಈಗ  ನೈಸರ್ಗಿಕ ಹವಾನಿಯಂತ್ರಣ ಕಡಿಮೆಯಾಗಿ ಕೃತಕ ಹವಾನಿಯಂತ್ರಣವೇ ಬೇಕಾಗಿದೆ.

ಹಿಂದೆ ಹೋಗೋಣ:

  • ನಮಗೆ ಇರುವ ಆಯ್ಕೆ  ಒಂದೇ ಹವಾಮಾನದ ವಿಷಯದಲ್ಲಿ ನಾವು ಇನ್ನೂ 40 ವರ್ಷ ಹಿಂದೆ ಹೋಗುವುದು.
  • ಇತರ ಪ್ರಗತಿ ವಿಚಾರಗಳಲ್ಲಿ ನಾವು ಮುಂದೆ ಹೋಗೋಣ.
  • ಆದರೆ ಇದರಲ್ಲಿ ಮಾತ್ರ ನಮ್ಮ ಉಢಾಫೆಯನ್ನು ಬಿಡಲೇ ಬೇಕು.
  • ಪ್ರಕೃತಿಯ ಮುಂದೆ ಮಾನವ ಕುಬ್ಜ.
  • ಮಾನವನ ಎಲ್ಲಾ ಪ್ರಗತಿಯನ್ನೂ  ಪ್ರಕೃತಿ ಸಂದರ್ಭೋಚಿತವಾಗಿ ತಡೆ ಹಿಡಿದೇ ತೀರುತ್ತದೆ.
  • ಆದ ಕಾರಣ ಪ್ರಕೃತಿ ನಮಗೆ ಶರಣಾಗುವುದು ಸಾಧ್ಯವೇ ಇಲ್ಲ. ನಾವು ಶರಣಾಗಲೇ ಬೇಕಾಗಿದೆ.

ಏನು ಮಾಡಬೇಕು:

  • ಸಾಧ್ಯವಾದಷ್ಟು ಅರಣ್ಯ ಇಲಾಖೆಯ ಜೊತೆ ಕೈ ಜೋಡಿಸಿ ಸಸಿ ನೆಟ್ಟಾದರೂ ಅರಣ್ಯ ಮರು ನಿರ್ಮಾಣ ಮಾಡೋಣ.
  • ಹಸಿರಿನ ಮರು ಸ್ಥಾಪನೆಯಿಂದ ಭೂಮಿಗೆ ತಂಪಾಗುತ್ತದೆ. ಭೂಮಿ ನಮಗೆ ತಂಪನ್ನು ಕೊಡುತ್ತಾಳೆ.
  • ಎಲ್ಲವೂ ಪರಸ್ಪರ ಕೊಡು ಕೊಳ್ಳುವಿಕೆ.
  • ನಾವು ಬಳಕೆ ಮಾಡುವ ನೀರಿನಲ್ಲಿ ಮಿತವ್ಯಯ ಸಾಧಿಸೊಣ.
  • ಕೈಕಾಲು ತೊಳೆಯುವುದಕ್ಕೆ ಮಿತ ನೀರು ಬಳಸೋಣ.
  • ಬಟ್ಟೆ ಒಗೆಯುವುದಕ್ಕೆ  ಧೋಭೀ ಸಾಬೂನು ಬಳಸೋಣ.
  • ನೀರಾವರಿಗೆ ಮಿತ ನೀರಾವರಿ ಮಾಡೋಣ.
  • ಕೈ ಕಾಲು ತೊಳೆದ , ಪಾತ್ರೆ ತೊಳೆದ ನೀರನ್ನು ಮರಗಳಿಗೆ ಉಣಿಸೋಣ.
  • ನೆಲಕ್ಕೆ ಹೊದಿಕೆ  ಹಾಕಿ ತೇವಾಂಶ ಸಂರಕ್ಷಿಸೋಣ.
  • ಅತಿಯಾದ ನೀರಿನ ಬಳಕೆಯನ್ನು ಕಡಿಮೆ ಮಾಡಿ ಮಿತ ಬಳಕೆ ಮಾಡೋಣ.
  • ಇದು ನಮ್ಮ ಮಕ್ಕಳಿಗೆ ನಾವು ನಮ್ಮ ಭೂಮಿಯನ್ನು ಸುಸ್ಥಿತಿಯಲ್ಲಿ ಕೊಡಲು ಮಾಡಬೇಕಾದ ಅಗತ್ಯ ಕೆಲಸ.

ಪ್ರಕೃತಿ ಮುನಿಯುವ ಮುನ್ನ ನಾವೇ ಪ್ರಕೃತಿಗೆ ಶರಣಾಗಬೇಕು. ಇಲ್ಲವಾದರೆ ನೆಗೆಟಿವ್ ಚೆಕ್ಸ್ ( ಸಹಿಸಲಾಗದ ಪ್ರಹಾರ) ಮೂಲಕ ಅದು ನಮಗೆ ರೋಗ ರುಜಿನಗಳ ಮೂಲಕ ಕಷ್ಟವನ್ನು ಕೊಟ್ಟೇ ಕೊಡುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!