ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.

ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ.

 • ಮಾರ್ಚ್ 21 ನೇ ದಿನಾಂಕವನ್ನು ವಿಶ್ವ ಅರಣ್ಯ ದಿನವಾಗಿ ಆಚರಿಸಲು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2012  ರಲ್ಲಿ ತೀರ್ಮಾನಿಸಲಾಯಿತು.
 • ತರುವಾಯ ಈ ದಿನವನ್ನು ಬೇರೆ ಬೇರೆ ಸಂಸ್ಥೆಗಳು ಮತ್ತು ದೇಶಗಳ ಸಹಭಾಗಿತ್ವದಲ್ಲಿ  ಆಚರಿಸುತ್ತಾ ಬರಲಾಗಿದೆ.
 • ಈ ದಿನ ಅರಣ್ಯ ಸಂಪತ್ತಿನ ಅವನತಿಯಿಂದ ಆಗುವ  ದುಷ್ಫರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತದೆ.
 • ನಮ್ಮಿಂದಾಗಿ ಅರಣ್ಯ ಸಂಪತ್ತಿಗೆ ಆದ ತೊಂದರೆಯನ್ನು ಸರಿಪಡಿಸಲಿಕ್ಕಾಗಿ ಸಾಧ್ಯವಾದಷ್ಟು ಗಿಡಗಳನ್ನು ನೆಡುವ ಬಗ್ಗೆ ಜನತೆಗೆ ಮನವರಿಕೆ  ಮಾಡಿಕೊಡುವುದೂ ಈ ದಿನದ  ವಿಶೇಷ.
 • ಪ್ರತೀ ವರ್ಷ ಒಂದೊಂದು ಧ್ಯೇಯವನ್ನಿಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತದೆ.
 • ಈ ವರ್ಷದ ಧ್ಯೇಯ ಅರಣ್ಯ ಮತ್ತು ಜೀವ ವೈವಿಧ್ಯ.
ಬಾನನ್ನು ಚುಂಬಿಸುವ ಮರಮಟ್ಟುಗಳು ನಮ್ಮ ಅರಣ್ಯದ ವೈಭವ.

ಅರಣ್ಯ ಅಳಿಯುತ್ತಿದೆ- ನಾವೂ ಅಳಿಯುತ್ತಿದ್ದೇವೆ:

 • ಕಳೆದ 30-40  ವರ್ಷದಿಂದೀಚೆಗೆ ಅರಣ್ಯ ಸಂಪತ್ತಿನ ಅವನತಿ ಚರಿತ್ರೆಯಲ್ಲೇ  ನಡೆಯದಷ್ಟೂ ಭೀಕರವಾಗಿ ನಡೆದಿದೆ.
 •  ಕಾಡಿನ ಮರ ಮಟ್ಟುಗಳು  ಖಾಲಿಯಾಗುತ್ತಿವೆ.
 • ಪರಿಸರ ತಾಪಮಾನ ಏರಿಕೆಯ ಮೂಲಕ ಮತ್ತು ರೋಗ ರುಜಿನಗಳ ಮೂಲಕ ಅರಣ್ಯ ನಾಶಕ್ಕೆ ಕಾರಣರಾದವರನ್ನು ಎಚ್ಚರಿಸುತ್ತಿದೆ.
 • ನಮಗೆಷ್ಟು ಅದು ತಿಳುವಳಿಕೆಗೆ ಬಂದಿದೆಯೋ ಗೊತ್ತಿಲ್ಲ.
 • ಕ್ಷುಲ್ಲಕವಾಗಿದ್ದುದು  ಗಂಭೀರವಾಗುತ್ತಿದೆ.
 • ನೆಲದ ಜೀವ ರಾಶಿಗಳಲ್ಲಿ ಏನೋ ವೈಪರೀತ್ಯಗಳು  ಪರಿವರ್ತನೆಗಳು ಆಗಿ ಅದು ಏನೇನೋ ಆಗಿ ಮಾನವ  ಮತ್ತು ಜೀವ ಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿವೆ.
 • ಇದಕ್ಕೆಲ್ಲಾ ಪರಿಹಾರ ನಮ್ಮ ಅರಣ್ಯ ಸಂಪತ್ತಿನ ಪುನಶ್ಚೇತನ ಒಂದೇ.
 • ಪ್ರಕೃತಿ ಮಾನವನ ಮೇಲೆ ಪೂರ್ಣ  ಮುನಿಯುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.
ಎಲ್ಲಾ ನೀರಿನ ಮೂಲಗಳೂ ನಮ್ಮ ಅರಣ್ಯಗಳಿಂದಲೇ ಪ್ರಾರಂಭವಾಗಿವೆ.

ಹೇಗೆ ಪುನಶ್ಚೇತನ:

 • ಸುಸ್ಥಿರ ರೀತಿಯಲ್ಲಿ ಅರಣ್ಯಾಭಿವೃದ್ದಿ ಆಗಬೇಕಾಗಿದೆ ಎಂಬ ಮಾತನ್ನು ಇಲ್ಲಿ ಹೇಳಬೇಕಾಗುತ್ತದೆ.
 • ಬರೇ ಮರಮಟ್ಟು ಇದ್ದಾಕ್ಷಣ ಅದು ಅರಣ್ಯವಾಗುವುದಿಲ್ಲ.
 • ಅರಣ್ಯ ಎಂದರೆ ಅಲ್ಲಿರುವ ಮರಮಟ್ಟುಗಳು, ಸಸ್ಯಗಳು ಒಂದು ರಕ್ಷಕ ಅಷ್ಟೇ.
 • ಇಲ್ಲಿ ಕೋಟ್ಯಾಂತರ ಇತರ ಜೀವ ರಾಶಿಗಳು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತವೆ.
 • ನಮ್ಮ ದೇಶದಲ್ಲಿ ಹಿಮಾಯಲದ ಪರ್ವತ ಕಾಡುಗಳನ್ನು ಹೊರತಾಗಿಸಿ ಉಳಿದ ಎಲ್ಲಾ ಪಶ್ಚಿಮ ಘಟ್ಟದ ಕಾಡುಗಳು ಅಲ್ಲಿರುವ ಮರಮಟ್ಟು, ಬಳ್ಳಿ, ಕುರುಚಲು ಸಸ್ಯಗಳು, ಮಣ್ಣು , ವಾತಾವರಣ ಎಲ್ಲವೂ ಪ್ರಪಂಚದಲ್ಲೇ ಅತೀ ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟ ತಾಣಗಳು.
 • ಇಲ್ಲಿ ಬದುಕುವ ಪ್ರಾಣಿಗಳು, ಪಕ್ಷಿಗಳು, ಕಶೇರುಕ, ಅಕಶೇರುಕ, ಸುಕ್ಷ್ಮಾತಿಸೂಕ್ಶ್ಮ ಜೀವ ರಾಶಿಗಳು ಸಹ ಅತೀ ಸೂಕ್ಷ್ಮ.
 • ಅವುಗಳೆಲ್ಲಾ ತಮ್ಮ ಅಸ್ತಿತ್ವಕ್ಕೆ ತೊಂದರೆ ಆದಾಗ ಮಾನವನ ಮೇಲೆ ಪ್ರತಿರೋಧ ಒಡ್ಡುವವುಗಳು.
 • ಉದಾಹರಣೆಗೆ ಮಂಗ, ಕಾಡುಕೋಣ, ಆಣೇ, ನವಿಲು,  ಹುಲಿ,  ಹಾವು ಮುಂತಾದವುಗಳು ಮಾನವನಿಗೆ ಕೊಡುವ ಉಪಟಳ.
 • ಆದ ಕಾರಣ ಅವುಗಳಿಗೆಲ್ಲಾ ಯಾವ ತೊಂದರೆಯೂ ಆಗದಂತೆ ಅರಣ್ಯವನ್ನು ಉಳಿಸುವುದೇ ಸುಸ್ಥಿರ, ನೈಜ ಪುನಃಶ್ಚೇತನ.
 • ಈ ದಿನ ನಾವು ಅರಣ್ಯ ಉಳಿಸಿ ರಕ್ಷಿಸುತ್ತೇವೆ ಎಂದು ಶಪಥ ಮಾಡಬೇಕಾಗಿದೆ.
ಮಳೆ ತರುವ ಮೋಡಗಳನ್ನು ಹಿಡಿದು ನಿಲ್ಲಿಸುವ ಶಕ್ತಿ ಇರುವುದು ಅರಣ್ಯಕ್ಕೆ ಮಾತ್ರ

ಎಲ್ಲವೂ ಇದೆ- ನಮ್ಮ ಸಹಕಾರ ಬೇಕಾಗಿದೆ:

ಅರಣ್ಯ ಇಲಾಖೆ ನೈಜ ಕಾಡು ಉಳಿಸಲು ಕಟಿಬದ್ಧವಾಗಿದೆ.
 • ಕಳೆದ ಕೆಲವು ವರ್ಷಗಳಿಂದ ಅರಣ್ಯದ ಪುನಶ್ಚೇತನದ ಬಗ್ಗೆ ನಮ್ಮ ದೇಶವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳೂ ಸಹ ಎಚ್ಚೆತ್ತುಕೊಂಡಿವೆ.
 • ಸುಸ್ಥಿರ ಅರಣ್ಯಾಭಿವೃದ್ದಿಗೆ ಬೇಕಾದ ರೂಪು ರೇಷೆಗಳನ್ನು ರೂಪಿಸಿವೆ.
 • ಅರಣ್ಯ ಎಂದರೆ ಅದು  ನೈಜ ಅರಣ್ಯ ಆಗಬೇಕು ಎಂದು ಮನವರಿಕೆ ಮಾಡಿಕೊಂಡು ಅರಣ್ಯದಲ್ಲಿ ನಶಿಸಿ ಹೋದ ಮರಮಟ್ಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ.
ಈ ಹೆಬ್ಬಲಸಿನ ಸಸಿಗಳು ಮರವಾದರೆ ಕಾಡು ಪ್ರಾಣಿಗಳು ಕಾಡೀನಲ್ಲೇ ಇರಬಲ್ಲವು.
 • ಅರಣ್ಯ ಇಲಾಖೆಯು ತನ್ನ ಸಸ್ಯ ಪಾಲನಾ ನರ್ಸರಿಯಲ್ಲಿ ಈಗ ಅಧಿಕ ಪ್ರಮಾಣದಲ್ಲಿ ಕಾಡು ಸಸ್ಯಗಳ ಸಸ್ಯೋತ್ಪಾದನೆ ಮಾಡುತ್ತಿವೆ.
 • ಲಸು, ಹೆಬ್ಬಲಸು, ನೇರಳೆ, ಅತ್ತಿ, ಆಲ, ಬಿಲ್ವ, ಮುರುಗಲ, ನೆಲ್ಲಿ, ಮಾವು,ಮುಂತಾದ ಸಸ್ಯಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿವೆ.
 • ಇದು ಶ್ಲಾಘನೀಯ ಕೆಲಸ.

 • ಅರಣ್ಯ ಇಲಾಖೆಯ ಈ ಶ್ರಮ ಇನ್ನು ಕೆಲವೇ ವರ್ಷಗಳಲ್ಲಿ ಅರಣ್ಯದಲ್ಲಿ ನೈಸರ್ಗಿಕ ಅರಣ್ಯ ಸಂಪತ್ತಿನ ಪುನರ್ ನಿರ್ಮಾಣ ಮಾಡಲಿವೆ.
ನೈಜ ಕಾಡುಗಳು ಉಳಿಯಬೇಕು ಎಂಬ ಆಶಯದಲ್ಲಿ ಅರಣ್ಯ ಇಲಾಖೆ ಶ್ರಮಿಸುತ್ತಿದೆ.

ನಮ್ಮ ಸಹಕಾರ ಎಷ್ಟರ ಮಟ್ಟಿಗೆ ಇದೆಯೋ ಅಷ್ಟರ ಮಟ್ಟಿಗೆ ಇದರ ಯಶಸ್ಸು ನಿಂತಿದೆ. ಅರಣ್ಯ ಮರು ನಿರ್ಮಾಣ ಕೆಲಸದದಲ್ಲಿ ಕೇವಲ ಅರಣ್ಯ ಇಲಾಖೆಯ  ಪಾತ್ರ ಮಾತ್ರವಲ್ಲ, ನಮ್ಮೆಲ್ಲರ ಪಾಲುದಾರಿಕೆಯೂ ಇದೆ. ನಾವು ಇವರ ಜೊತೆಗೆ ಕೈ ಜೋಡಿಸಬೇಕು. ಆಗ ಅವರಿಗೂ ಬಲ ಬರುತ್ತದೆ. ಪ್ರಜ್ಞಾವಂತರಾದ ನಾವು  ಅನವಶ್ಯಕ ಕಾಡು ಮರಗಳನ್ನು ನಾಶ ಮಾಡದೆ ಇದ್ದರೆ ಅರಣ್ಯ ಸಂಪತ್ತು ಉಳಿಯುತ್ತದೆ. ಕೃಷಿಯ ಜೊತೆಗೆ 10% ಹೊಲದಲ್ಲಿ ಅರಣ್ಯ ಉಳಿಸಿದರೆ ಸಾಕು ಮತ್ತೆ ಅದೇ ಗತ ವೈಭವದ ಅರಣ್ಯ ಮರುಸ್ಥಾಪನೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!