ನಾವೂ ಬೆಳೆಸಬಹುದೇ ಸ್ಟ್ರಾಬೆರಿ ಬೆಳೆ.

ಸ್ಟ್ರಾಬೆರಿ ಹಣ್ಣು

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ  ಎಲ್ಲರಿಗೂ  ಇಷ್ಟ. ಈ ಹಣ್ಣು  ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ  ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ.  ಕೈ ಹಿಡಿದರೆ  ಮಾತ್ರ ಇದು ಭಾರೀ ಲಾಭದ ಬೆಳೆ .

  • ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು  ಬರುವುದು ಮಹಾರಾಷ್ಟ್ರದ  ಮಹಾಬಲೇಶ್ವರದಿಂದ.
  • ಇದಕ್ಕೆ ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರು.  ದೇಶದ ಬೇರೆ ಕಡೆಗಳಲ್ಲಿ ಬೆಳೆಯುತ್ತಾರೆಯಾದರೂ ಇಷ್ಟು ಪ್ರಮಾಣ ಇಲ್ಲ.
  • ಸ್ಥಳೀಯರು ಅದನ್ನು ಪಾರದರ್ಶಕ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ತುಂಬಿ  ಆಕರ್ಷಕವಾಗಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಾರೆ.

ಮಹಾಬಲೇಶ್ವರ ಹೆಸರುವಾಸಿ:

  •  ಮಹಾರಾಷ್ಟ್ರದ ಅತ್ಯಂತ ತಂಪು ಪ್ರದೇಶ ಎಂದರೆ  ಮಹಾಬಲೇಶ್ವರ.
  • ಇದು ಕೃಷ್ಣಾ ನದಿ ಹುಟ್ಟಿನ ಸ್ಥಳ. ಮಹಾಬಲೇಶ್ವರದ  ಊರಿನಾದ್ಯಂತ ಸ್ಟ್ರಾಬೆರಿ ಬೆಳೆಸುತ್ತಾರೆ.
  • ಬರೇ ರೈತರು ಮಾತ್ರವಲ್ಲ , ಹೊಟೇಲುಗಳ ವಠಾರದಲ್ಲೂ ಸಹ ಸ್ಟ್ರಾಬೆರಿ ಬೆಳೆ ಒಂದು ಆಕರ್ಷಣೆ.
  • ದೊಡ್ಡ ಪ್ರಮಾಣದ ಕೃಷಿ ಇಲ್ಲ. ಬಹುತೇಕ ಕಾಲು ಎಕ್ರೆ, ಅರ್ಧ ಎಕ್ರೆ ಪ್ರಮಾಣದಲ್ಲಿ ಬೆಳೆಸುವವರು.
  • ಕೆಲವೇ ಕೆಲವರು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬೆಳೆಸುತ್ತಾರೆ.
ಸ್ಟ್ರಾಬೆರಿ ಬೆಳೆಯುವ ಕ್ರಮ
ಸ್ಟ್ರಾಬೆರಿ ಬೆಳೆಯುವ ಕ್ರಮ

ಇಲ್ಲಿ ಮಾತ್ರ ಬೆಳೆಯುತ್ತಿರುವುದು:

  • ನಮ್ಮ ರಾಜ್ಯದಲ್ಲೂ ಸ್ಟ್ರಾಬೆರಿ ಬೆಳೆಸಬಹು. ಆದರೆ ಅದರ ಲಾಭ ಮತ್ತು ಗುಣಮಟ್ಟ ಸತಾರಾ ಜಿಲ್ಲೆಯ ಮಹಾಬಲೇಶ್ವರ ಸ್ಟ್ರಾಬೆರಿಗೆ  ಸ್ಪರ್ಧಿಯಾಗಬೇಕು.
  • ದೇಶದಲ್ಲೇ  ಉಳಿದ ಎಲ್ಲಾ ಪ್ರದೇಶಗಳಿಗಿಂತ ಮಹಾಬಲೇಶ್ವರದಲ್ಲೇ ಅಧಿಕ ಪ್ರಮಾಣದಲ್ಲಿ  ಸ್ಟ್ರಾಬೆರ್ರಿ ಬೆಳೆಸಲ್ಪಡುವುದು.
  •  ಅಲ್ಲಿ ಬೆಳೆಯುವ ಕ್ರಮವನ್ನು ಅನುಸರಿಸಿದರೆ ಇಲ್ಲಿಯೂ ಬೆಳೆಯಬಹುದು.
  • ಮುಂಬೈ, ಪುಣೆ ಮೂಲಕ ಬೇರೆ ಬೇರೆ ಉರಿಗೆ ಹೋಗುವ ಬಸ್ಸುಗಳಲ್ಲಿ , ಲಾರಿಗಳಲ್ಲಿ  ಮಹಾಬಲೇಶ್ವರದ ಸ್ಟ್ರಾಬೆರಿ  ಪ್ಯಾಕೇಟುಗಳು ರವಾನೆಯಾಗುತ್ತದೆ.
  • ಸುಮಾರು 2000 ಎಕ್ರೆ ಪ್ರದೇಶದಲ್ಲಿ ಸುಮಾರು 3000 ಕ್ಕೂ ಹೆಚ್ಚು ರೈತರು  ಸ್ಟ್ರಾಬೆರಿ ಬೆಳೆಸುತ್ತಾರಂತೆ.
  • ವಾರ್ಷಿಕ 20,000 ಟನ್ ಉತ್ಪಾದನೆ ಆಗುತ್ತದೆ, ಎಕ್ರೆಗೆ 5-8  ಟನ್   ತನಕ ಇಳುವರಿ ದೊರೆಯುತ್ತದೆ ಎಂಬ ಲೆಕ್ಕಾಚಾರ ಇದೆ.
  •  ಒಂದೆಕ್ರೆಗೆ ಸುಮಾರು 3 ಲಕ್ಷ ಉತ್ಪತ್ತಿ.  ನೋಟ ಆಕರ್ಷಣೆ ಇದ್ದರೆ  ಒಳ್ಳೆ ಬೇಡಿಕೆ.
  • ರಾತ್ರೆ ಅತ್ಯಧಿಕ ಚಳಿ ಮತ್ತು ಹಗಲು ಹೆಚ್ಚು ಬಿಸಿಲು ಇದ್ದಾಗ ಮಾತ್ರ ಹೂವು – ಕಾಯಿ ಅಧಿಕ ಬರುತ್ತದೆ.
  • ಇದು 4 ತಿಂಗಳ ಬೆಳೆ. ನವೆಂಬರ್ ನಿಂದ ಮೇ  ತನಕ.  ಮಳೆಗಾಲ  ಬೆಳೆ ಇಲ್ಲ.

ಹೇಗೆ ಬೆಳೆಸುತ್ತಾರೆ?

  •  ರೈತರು ನೆಲವನ್ನು ಇತರ ತರಕಾರಿ ಬೆಳೆಗೆ ಹೊಲದಸಿದ್ಧತೆ ಮಾಡಿದಂತೆ ಮಾಡಿಕೊಳ್ಳುತ್ತಾರೆ.
  • ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಸೇರಿಸಿ 4 ಅಡಿಯ ಎತ್ತರಿಸಿದ ಸಾಲು ಮಾಡಿ ಅದಕ್ಕೆ ಮಲ್ಚಿಂಗ್ ಶೀಟು ಹಾಕುತ್ತಾರೆ.
  •  ಎರಡು ಸಾಲುಗಳಲ್ಲಿ ಸಸಿಯಿಂದ ಸಸಿಗೆ  45 ಸೆಂ. ಮೀ. ಅಂತರ  ಸಸಿ ನೆಟ್ಟು ಬೆಳೆ ಬೆಳೆಸುತ್ತಾರೆ.
  • ಹನಿ ನೀರಾವರಿ  ಮಾಡುತ್ತಾರೆ.
  • ಇಲ್ಲಿ ರಾಯಲ್ ಸಾವರಿನ್, ದಿಲ್ ಪಸಂದ್, ಬೆಂಗಳೂರು ( ಬೆಂಗಳೂರು ಸುತ್ತಮುತ್ತ ಬೆಳೆಯುವ ತಳಿ) ತಳಿಯನ್ನು ಅಲ್ಲದೆ ಕ್ಯಾಲಿಫೋರ್ನಿಯಾದಿಂದ ತರಿಸಿದ  ತಳಿಗಳಾದ Torrey, Toiga and Solana  ಇದನ್ನೂ  ಯಶಸ್ವಿಯಾಗಿ ಬೆಳೆಸುತ್ತಾರೆ.
  •   ಸಸ್ಯಾಭಿವೃದ್ದಿಯನ್ನು ಹಬ್ಬು ಚಿಗುರುಗಳನ್ನು ಕತ್ತರಿಸಿ ನೆಡುವ ಮೂಲಕ ಮಾಡುತ್ತಾರೆ.
  • ಸ್ಟ್ರಾಬೆರಿ ಸಸ್ಯ ಒಂದು ಹಬ್ಬು ಸಸ್ಯವಾಗಿದ್ದು, ವಿಸ್ತಾರಕ್ಕೆ ಬೆಳೆದಂತೆ ಗಂಟುಗಳಲ್ಲಿ ಬೇರು ಬರುತ್ತದೆ.
  • ಬೇರು ಬಂದ ಸಸ್ಯವನ್ನು ಬೇರ್ಪಡಿಸಿ ಸಸ್ಯಾಭಿವೃದ್ದಿ ಮಾಡಲಾಗುತ್ತದೆ.
ಮಾರಾಟ ಕ್ರಮ
ಮಾರಾಟ ಕ್ರಮ

ಉತ್ಪತ್ತಿ ಇದೆ ಕಷ್ಟವೂ ಇದೆ :

  • ಸ್ಟ್ರಾಬೆರಿ ಬೇಸಾಯದಲ್ಲಿ ದೊರೆಯುವ ಆದಾಯ ಅದಕ್ಕೆ ಹಾಕುವ ಶ್ರಮಕ್ಕೆ ಸಾಲದು.
  • ಹವಾಮಾನದ ವೆತ್ಯಾಸ ಸ್ಟ್ರಾಬೆರಿ ಬೇಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಂತೆ.
  • ಈಗ ಹಿಂದಿನಂತೆ ಇಳುವರಿ ಬರುತ್ತಿಲ್ಲ. ಕೀಟಗಳ ಸಮಸ್ಯೆ , ರೋಗ ಸಮಸ್ಯೆ ಗೆ ಬಾರೀ ಸಿಂಪರಣೆ ಅಗತ್ಯವಾಗಿದೆ.
  • ರೈತರು ಈ ಪ್ರದೇಶದ ಘನತೆಯನ್ನು  ಉಳಿಸಿಕೊಳುವುದಕ್ಕೋಸ್ಕರ  ಸ್ಟ್ರಾಬೆರಿ ಬೆಳೆಸುತ್ತಿದ್ದಾರೆ ಎನ್ನುತ್ತಾರೆ ಸರ್ದೇಸ್ ಪಾಂಡಾ ರವರು.
  • ಅತಿಯಾದ ಚಳಿ ಸಹ ಬೆಳೆಗೆ ಉತ್ತಮವಲ್ಲ. ಕಳೆದ ಎರಡು ವರ್ಷಗಳಿಂದ  ಚಳಿ ಹೆಚ್ಚಾಗಿ ಗುಣಮಟ್ಟದ ಸ್ಟ್ರಾಬೆರಿ ಉತ್ಪಾದಿಸಲು ಕಷ್ಟವಾಗುತ್ತಿದೆ.
  • ಚಳಿ ಕಳೆದ ಮೇಲೆ ಬರುವ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ.
  • ಈ ಸಮಯದಲ್ಲಿ ಉತ್ಪಾದನೆಯೂ ಹೆಚ್ಚು ಇರುತ್ತದೆ.
ನಾವು ಹೀಗೆ ಬೆಳೆಯಬಹುದು
ನಾವು ಹೀಗೆ ಬೆಳೆಯಬಹುದು

ಸ್ಟ್ರಾಬೆರಿಗೆ ಫಲವತ್ತಾದ ಸಾವಯವ  ಅಂಶ ಉಳ್ಳ ನೀರು ಬಸಿಯಲು ಅನುಕೂಲ ಇರುವ ಮಣ್ಣು ಬೇಕು. ಸಾಕಷ್ಟು ರಾಸಾಯನಿಕ ಗೊಬ್ಬರಗಳೂ ಬೇಕು. ಒಂದು ಎಕ್ರೆಗೆ 20- 25 ಟನ್ ಸಾವಯವ ಗೊಬ್ಬರ, 45 ಕಿಲೊ ಸಾರಜನಕ, 30 ಕಿಲೋ ರಂಜಕ, ಮತ್ತು 40 ಕಿಲೋ ಪೊಟ್ಯಾಶಿಯಂ ಗೊಬ್ಬರ ಬೇಕಾಗುತ್ತದೆ. ಇದಲ್ಲದೆ ಸಾಕಷ್ಟು ಬೆಳವಣಿಗೆ  ಪ್ರಚೋದಕಗಳನ್ನೂ  ಬಳಕೆ ಮಾಡುತ್ತಾರೆ.

  • ಬೆಳೆಗೆ ಸಾಕಷ್ಟು ಕೀಟ – ರೋಗ ಸಮಸ್ಯೆಗಳೂ ಇದೆ. ಸಾಮಾನ್ಯವಾಗಿ  ಮೈಟ್ ಗಳು  ಇದ್ದೇ ಇರುತ್ತದೆ.
  • ಎಲೆ ತಿನ್ನುವ ಹುಳು, ಕಾಯಿ ತಿನ್ನುವ ಹುಳುಗಳು ಮಾಮೂಲಿ.
  • ಇದಕ್ಕಾಗಿ ಬಾರೀ ಹಣ ಖರ್ಚು ಮಾಡಬೇಕಾಗುತ್ತದೆ.
  • ಸಸಿ ಕೊಳೆಯುವ ಫೈಟೋಪ್ಥೆರಾ  ಶಿಲೀಂದ್ರ ರೋಗ , ಬೇರು ಕೊಳೆಯುವ ರೋಗ ಇರುತ್ತದೆ.

ಇಳುವರಿ

ಸಸಿ ನೆಟ್ಟು 3 ತಿಂಗಳಿಗೆ ಹೂ ಬರಲು ಪ್ರಾರಂಭವಾಗುತ್ತದೆ. ಸುಮಾರು 4 ತಿಂಗಳ ತನಕವೂ ಹಣ್ಣು ಬಿಡುತ್ತಿರುತ್ತದೆ.
ಪ್ರವಾಸಿ ತಾಣ ಅದ ಕಾರಣ ಇಲ್ಲಿಯ ರೈತರಿಗೆ ಸ್ವಲ್ಪ ಮಟ್ಟಿಗೆ ಸ್ಥಳೀಯವಾಗಿಯೇ ಮಾರಾಟ ಮಾಡಲು ಅನುಕೂಲವಾಗಿದೆ. ಪ್ರವಾಸಿಗರ ಪ್ರಚಾರ ಸಹ ಇಲ್ಲಿನ ಬೆಳೆಗೆ ಅನುಕೂಲವಾಗಿದೆ. ಇವರು ತಮ್ಮ ಬೆಳೆಯನ್ನು ದೇಶದಾದ್ಯಂತ ಬ್ರಾಂಡಿಂಗ್ ಸಹ ಮಾಡಿದ್ದಾರೆ.

 ಈಗಿನ ತಂತ್ರಜ್ಞಾನದಲ್ಲಿ ಯಾವ ಬೆಳೆಯನ್ನೂ ಎಲ್ಲೂ ಬೆಳೆಯಬಹುದು. ಆದಕ್ಕೆ  ಸೂಕ್ತ ವಾತಾವರಣ ಕಲ್ಪಿಸಿ ಕೊಡಬೇಕು. ನಮ್ಮ ರಾಜ್ಯದ ಮಡಿಕೇರಿ, ಬೆಂಗಳೂರು  ಮಲೆನಾಡಿನ ಭಾಗಗಳಲ್ಲಿ   ತಂಪು ಇರುವ ಕಡೆ ಇದನ್ನು ಬೆಳೆಸಬಹುದು.

;

Leave a Reply

Your email address will not be published. Required fields are marked *

error: Content is protected !!