ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು

ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು  ಪಡೆದು ಬದುಕುವ ವಿಶಿಷ್ಟ ಸಸ್ಯ.

 • ಹಾಗೆಂದು ಇದು ಬದನಿಕೆ ಸಸ್ಯವಲ್ಲ.
 • ಬದನಿಕೆ ಸಸ್ಯವು  ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ.
 • ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ.
 • ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ ಮರವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಹಿರಿಯ ವಿಜ್ಞಾನಿ  ಡಾ| ಪಿ ವಿ ಸೋಮಶೇಖರ್ ರವರು ಹೇಳುವುದು ಹೀಗೆ.

ಯಾವ  ಆಸರೆ ಒಳ್ಳೆಯದು:

 • ತೊಗರಿ ಸಸ್ಯ ಬೇಡ: ಸಮಾನ್ಯವಾಗಿ ಗಂಧದ ಸಸ್ಯದೊಂದಿಗೆ ತೊಗರಿ ಸಸ್ಯವನ್ನು ಬೆಳೆಸುವುದನ್ನು ಕಾಣಬಹುದು.
 • ಇದನ್ನು  ಪ್ರಾರಂಭದಲ್ಲಿ  ಶಿಫಾರಸು ಮಾಡಲಾಗುತ್ತಿತ್ತು.
 • ಆದರೆ ಈ ಸಸ್ಯಕ್ಕೆ ಪೌಡ್ರೀ ಮಿಲ್ಡಿವ್  ಸಮಸ್ಯೆ  ಹೆಚ್ಚು.
 • ಇದು ಶ್ರೀಗಂಧಕ್ಕೂ ತೊಂದರೆ ಉಂಟು ಮಾಡುವ ಕಾರಣ  ಇದು  ಆಸರೆ ಸಸ್ಯಕ್ಕೆ ಸೂಕ್ತವಲ್ಲ.
ಇಂತಹ ಸಸ್ಯಗಳು ಉತ್ತಮ

ಇದರ ಬದಲಿಗೆ ನೀಲಿ, ಹಳದಿ, ಕೆಂಪು  ಬಣ್ಣದ ಹೂ ಬಿಡುವ ಗೋರಂಟಿ ಹೂವಿನ (Barleria Obtusa) ಸಸ್ಯವನ್ನು ಆಸರೆಯಾಗಿ ಬೆಳೆಸಬಹುದು. ಇದು ಗೆಲ್ಲು ತುಂಡುಗಳಿಂದ ಬದುಕುತ್ತದೆ. ಬೇಗ ಸಾಯುವುದಿಲ್ಲ. ರೋಗ ಕೀಟ ಯಾವುದೂ ಇಲ್ಲ

ದಾಳಿಂಬೆಯೊಂದಿಗೆ ಬೆಳೆಯಬೇಡಿ:

ಸೊರಗುತ್ತಿರುವ ದಾಳಿಂಬೆ ಸಸ್ಯ
 • ದಾಳಿಂಬೆ ಸಸ್ಯದೊಂದಿಗೆ ಶ್ರೀಗಂಧವನ್ನು ಬೆಳೆದರೆ ಎರಡು ಮೂರು ವರ್ಷದಲ್ಲಿ ದಾಳಿಂಬೆ ಸಸ್ಯ ಸಾಯುವ ಸಾಧ್ಯತೆ ಇದೆ.
 • ಗಂಧ ಬೆಳೆಸಿದ ಒಂದೇ ವರ್ಷದಲ್ಲಿ ದಾಳಿಂಬೆಯ ಸಸ್ಯದಲ್ಲಿ ಹೆಣ್ಣು ಹೂವು ಕಡಿಮೆಯಾಗುತ್ತದೆ.
 • ಕಾಯಿ ಸಣ್ಣದಾಗುತ್ತಾ ಬರುತ್ತದೆ.

ದಾಳಿಂಬೆಯೊಂದಿಗೆ ಬೆಳೆಸುವಾಗ ಪ್ರತೀ ಗಂಧದ ಸಸಿಯ ಜೊತೆಗೆ ಸರ್ವೇ ಗಿಡ ಬೆಳೆಸಿದರೆ ಸರಿಯಾಗುತ್ತದೆ.

ಸರ್ವೇ ಗಿಡ ಉತ್ತಮ ಆಸರೆ:

 • ಸರ್ವೇ ಗಿಡ ಅಥವಾ ಗಾಳಿ ಗಿಡ ಒಂದು ಉತ್ತಮ ಆಸರೆ ಸಸ್ಯವಾಗಿರುತ್ತದೆ.
 • ಇದರೊಂದಿಗೆ ಶ್ರೀಗಂಧ ಚೆನ್ನಾಗಿ ಹೊಂದಿಕೊಂಡು ಸ್ಪರ್ಧೆಯಲ್ಲಿ ಬೆಳೆಯುತ್ತದೆ.
 • ಹೆಬ್ಬೇವಿನ ಜೊತೆಗೆ ಶ್ರೀಗಂಧ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
 • ಹೆಬ್ಬೇವು ಮರವೂ ಚೆನ್ನಾಗಿಯೇ ಬೆಳೆಯುತ್ತದೆ.

 • ಈಗ ಶ್ರೀಗಂಧ ಬೆಳೆಸುತ್ತಿರುವ ಹಲವು ರೈತರು  ಹೆಬ್ಬೇವನ್ನೇ ಹೆಚ್ಚಾಗಿ ಆಸರೆ ಸಸ್ಯವಾಗಿ ಬೆಳೆಸುತ್ತಿದ್ದಾರೆ.
 • ಬಿದಿರಿನ ಜೊತೆಯೆಲ್ಲಿ ಹೆಬ್ಬೇವು  ಬದುಕುತ್ತದೆ. ನೇರಳೆ, ನೆಲ್ಲಿ ಸಹ ಹೊಂದಿಕೊಳ್ಳುತ್ತದೆ.
 • ಮುಳ್ಳಿನ ಬಿದಿರು ಮತ್ತು ಶ್ರೀಗಂಧದ ಸಸ್ಯವನ್ನು ಒಟ್ಟಿಗೆ ಬೆಳೆಸಬಹುದು.
 • ಸಾಗುವಾನಿಯ ಜೊತೆಗೂ ಬೆಳೆಯುತ್ತದೆ.

ನುಗ್ಗೆ ಸಸ್ಯವನ್ನು ಬೆಳೆಸಬಹುದು:

 • ನುಗ್ಗೆಯೂ ಸಹ  ಆಸರೆ ಸಸ್ಯವಾಗಿ ಹೊಂದಿಕೊಳ್ಳುತ್ತದೆ.
 • ಆದರೆ ನುಗ್ಗೆ ಸಸ್ಯವನ್ನು 5-6  ವರ್ಷಕ್ಕಿಂತ ಮೊದಲೇ ಕಡಿದರೆ   ಶ್ರೀಗಂಧದ ಸಸ್ಯ ಸೊರಗುತ್ತದೆ.

 ಕಾಫೀ ತೋಟದಲ್ಲಿ ಬೇಡ:

 • ಶಿವಮೊಗ್ಗ ಮಂಡಗದ್ದೆ ಸಮೀಪ  ಕಾಫೀ ತೋಟದಲ್ಲಿ  ಶ್ರೀಗಂಧ ಬೆಳೆಸಿದಾಗ  ಮೂರೇ ವರ್ಷಕ್ಕೆ ಕಾಫೀ ಇಲ್ಲದಂತಾಗಿದೆ.
 • ಆದ ಕಾರಣ ಕಾಫೀ ಬೆಳೆಯಲ್ಲಿ ಬೇಡ.

ಎಷ್ಟು  ಸಮಯ ಆಸರೆ ಸಸ್ಯ ಬೇಕು:

 • ಶ್ರೀಗಂಧ ಬೆಳೆಯುತ್ತಿರುವಾಗ ಸುಮಾರು 5 -6  ವರ್ಷದ ತನಕ ಆಸರೆ ಸಸ್ಯ ಬೇಕು.
 • ಆ ನಂತರ  ಆಸರೆ ಸಸ್ಯವನ್ನು  ಕಡಿಯಬೇಕು. ಕಡಿಯುವಾಗ  ಬುಡ ಭಾಗ 1- 1.5   ಬಿಟ್ಟು ಕಡಿಯಬೇಕು.
 • ಆಗ ಅದು ಮತ್ತೂ ಒಂದೆರಡು ವರ್ಷ  ಗಂಧದ ಗಿಡಕ್ಕೆ ಆಹಾರ ಪೂರೈಕೆಗೆ ಆಸರೆಯಾಗಿ ಬದುಕಿಸುತ್ತದೆ.
 • ಗಿಡ ಬೆಳೆದ ಮೇಲೆ ಮಧ್ಯಂತರದಲ್ಲಿ   ಆಸರೆ ಸಸ್ಯಗಳು ಸಾಕಾಗುತ್ತದೆ.
ಸೀಬೆ ಜೊತೆ ಶ್ರೀಗಂಧ

ಶ್ರೀಗಂಧ ಸಸ್ಯಕ್ಕೆ ಆಸರೆ ಇಲ್ಲದಿದ್ದರೆ ಅದರ ಬೆಳೆವಣಿಗೆಯೇ ನಿಲ್ಲುತ್ತದೆ. ಗಿಡ ಸೊರಗುತ್ತದೆ.  ಹಾಗೆಂದು ಶ್ರೀಗಂಧವನ್ನು  ಯಾವಾಗಲೂ ಬೆಳೆಸುತ್ತಾ ಇರುವುದಲ್ಲ. 5   ವರ್ಷ ಆಹಾರ – ನೀರು ಕೊಟ್ಟು ಸಾಕಿ ನಂತರ ಉಪವಾಸ ಹಾಕಬೇಕು. ಆ ಸಮಯದಲ್ಲಿ ಬೇರುಗಳಿಗೆ ಆಸರೆ ಬೇಕೋ ಬೇಕು, ಬೇಡವೋ ಬೇಡ ಎಂಬಂತೆ ಇರಬೇಕು.

ಶ್ರೀಗಂಧ ಸಸ್ಯದ ಆಸರೆ ಬಗ್ಗೆ ಮತ್ತು ಆಸರೆ ಇಲ್ಲದೆ ಬೆಳೆಯುವ ಬಗ್ಗೆ ಸಂಶೋಧನೆಗಳು ಆಗುತ್ತಿದ್ದು, ಕೆಲವು ರೈತರು ಆಸರೆ ಸಸ್ಯ ಇಲ್ಲದೆಯೂ ಬೆಳೆದುದಿದೆ. ಆದರ ಬಗ್ಗೆ ಇನ್ನು ಮುಂದಿನ ದಿನಗಳಲ್ಲಿ  ಫಲಿತಾಂಶ ತಿಳಿಯಲಿದೆ.

 

Leave a Reply

Your email address will not be published. Required fields are marked *

error: Content is protected !!