ಸಸ್ಯಗಳಿಗೆ ಬೋರಾನ್ ಬೇಕು- ಹೆಚ್ಚಾದರೆ ಹೀಗಾಗುತ್ತದೆ.

ಲಘು ಅಥವಾ ಸೂಕ್ಷ್ಮ ಪೋಷಕಾಂಶ ಎಂದರೆ ಅದು ಸಸ್ಯಕ್ಕೆ ಬೇಕಾಗುವುದು ತೀರಾ ಅಲ್ಪ. ಇದನ್ನು ಚಿಟಿಕೆ ಪ್ರಮಾಣದ  ಪೋಷಕ ಎನ್ನಬಹುದು.  ಇದು ಹೆಚ್ಚಾದರೆ ಸಸ್ಯಕ್ಕೆ ಅಪಾಯ.

 • ನಿರಂತರ ಬೆಳೆಗಳನ್ನು  ಬೆಳೆಯುತ್ತಿರುವ ಹೊಲ, ಫಲವತ್ತಾಗಿಲ್ಲದ ಮಣ್ಣು  ಸಾವಯವ ವಸ್ತುಗಳಾದ ಸೊಪ್ಪು, ತರಗೆಲೆ, ಕೊಟ್ಟಿಗೆ ಗೊಬ್ಬರ ಇತ್ಯಾದಿ ಬಳಸದ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶದ ಕೊರತೆ ಉಂಟಾಗುತ್ತದೆ.
 • ಇವು ಬೇಕಾಗುವುದು ಅತೀ ಅಲ್ಪ. ಕೊರತೆಯಾದರೇ ಆಗುವುದೂ ತುಂಬಾ ನಷ್ಟ. ಹೆಚ್ಚಾದರೆ ತೊಂದರೆ ಉಂಟಾಗುತ್ತದೆ.
 • ಬೂದಿ ಹಾಕಿದರೆ ಒಳ್ಳೆಯದು. ಆದರೆ  ಹೆಚ್ಚು ಹಾಕಿದರೆ ಗಿಡವೇ ಸಾಯಬಹುದು.
 • ಬೂದಿಯಲ್ಲಿ  ಸೇರಿಕೊಂಡಿರುವ  ಒಂದು ಪೋಷಕ ಬೋರಾನ್.
 • ಇದನ್ನು ಈಗ ರಾಸಾಯನಿಕ ಮೂಲದಲ್ಲಿ ಬೋರಿಕ್ ಅಸಿಡ್ ರೂಪದಲ್ಲಿ ಬೆಳೆಗಳಿಗೆ ಬಳಸಲಾಗುತ್ತದೆ.
 •   ಸಿಂಪರಣೆ ಮೂಲಕ ಮತ್ತು ಬೇರುಗಳ ಸಮೀಪ ಒದಗಿಸುವ ಮೂಲಕ  ಇದನ್ನು ಪೂರೈಸಲಾಗುತ್ತದೆ.

ಇದನ್ನು  ತಜ್ಞರ ಸಲಹೆಯಂತೆ ಬಳಸಬೇಕು.  ಅಪ್ರಭುದ್ದರ ಸಲಹೆಯಂತೆ  ಬಳಕೆ ಮಾಡಿದರೆ ತೊಂದರೆ ಖಂಡಿತಾ. ಬೆಳೆಗೆ ಒಳಿತಾಗುವ ಬದಲು ಪೂರ್ತಿ ಹಾಳಾಗಲೂಬಹುದು.

 ಎಷ್ಟು ಬೋರಾನ್ ಬೇಕು?

 • ಒಂದು ಸಸ್ಯಕ್ಕೆ ಬೇಕಾಗುವ ಬೋರಾನ್ ಅಂಶ ತೀರಾ ಕಡಿಮೆ.
 • ಇದು ಗ್ರಾಂ ಅಥವಾ ಮಿಲಿ ಗ್ರಾಂ ಲೆಕ್ಕದಲ್ಲಿ.
 • ಒಂದು ಎಕ್ರೆ ಹೊಲಕ್ಕೆ ವರ್ಷಕ್ಕೆ ಹೆಚ್ಚೆಂದರೆ 2- 5 ಕಿಲೋ.
 •  ಸಿಂಪರಣೆಗೆ ಬಳಸುವಂತದ್ದಾದರೆ ಅದು ಕೇವಲ 1 ಕಿಲೊ ಮಾತ್ರ.
 • ಇದರ ಬದಲು ಗಿಡಕ್ಕೆ 50 -100  ಗ್ರಾಂ ತರಹ ಬಳಸಿದರೆ  ಗಿಡಕ್ಕೆ ಅದು ಮಾರಕವಾಗಬಹುದು.

ಆಗುವುದು ಏನು?

 • ಕೃಷಿ  ತೋಟಗಾರಿಕಾ  ಇಲಾಖೆಗಳು ರೈತರಿಗೆ ಬೋರಾನ್ , ಜ಼ಿಂಕ್  ಮುಂತಾದ ಸೂಕ್ಷ್ಮ ಪೋಷಕಾಂಶಗಳನ್ನು   ಉಚಿತ/ ಸಹಾಯಧನದಲ್ಲಿ ವಿತರಿಸುತ್ತವೆ.
 • ಕೆಲವು ರೈತರು  ಇಲಾಖೆಯವರು ಕೊಡುವ  ಸಾಮಾಗ್ರಿ, ಸಬ್ಸಿಡಿ ಇರುವಂತದ್ದು ಎಂದು ಅದನ್ನು ತಂದು ಬಳಸುತ್ತಾರೆ.
 • ಅವರು ಬಳಕೆ ಮಾಡಲು ಹೇಳುವುದು ಎಕ್ರೆಗೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ.
 • ನಮಗೆ ಎಕ್ರೆ  ಹೆಕ್ಟೇರು ಅರ್ಥವಾಗುವುದಿಲ್ಲ. ನಮ್ಮ ಅಭ್ಯಾಸ ಬಲದಂತೆ ಬಳಕೆ ಮಾಡುತ್ತೇವೆ.
 • ಕನಿಷ್ಟ ಗಿಡಕ್ಕೆ ಒಂದು ಮುಷ್ಟಿ ಹಾಕಿದರೂ ಅದು 50  ಗ್ರಾಂ ಮೀರುತ್ತದೆ.
 • ಇದು ಸಸ್ಯದ ಆರೋಗ್ಯವನ್ನು ಹಾಳು ಮಾಡಲು ಸಾಕು.

ಬೋರಾನ್ ಯಾಕೆ ಬೇಕು:

 • ಬೋರನ್ ಪೋಷಕಾಂಶವು  ಹೂವಾಗಲು ಬೇಕು.
 • ಹೂವಿನಲ್ಲಿ ಪರಾಗ ಕಣಗಳ ಸಧೃಢ  ಬೆಳವಣಿಗೆ ಹಾಗೂ  ಪರಾಗಸ್ಪರ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳಲು ಅಗತ್ಯವಾಗಿ ಬೇಕು.
 • ಸಸ್ಯದ ಕೋಶ ಭಿತ್ತಿ (cell wall) ಪರಾಗ ಕಣಗಳಲ್ಲಿ, ಹಾಗೂ  ಹೆಣ್ಣು ಹೂವುಗಳಲ್ಲಿಬೋರಾನ್ ಇರುತ್ತದೆ.

ಬೋರಾನ್ ಕಡಿಮೆಯಾದಾಗ  ಬೀಜಗಳು  ಸಮರ್ಪಕವಾಗಿ ಪಕ್ವವಾಗುವುದಿಲ್ಲ. ಪೊಳ್ಳು, ಅರೆ ಪಕ್ಕ್ವ ಕಾಯಿಗಳಾಗುತ್ತದೆ.

ಹೆಚ್ಚಾದರೆ ಏನಾಗುತ್ತದೆ?

 • ಸಸ್ಯಗಳಲ್ಲಿ ಬೋರಾನ್ ಕಡಿಮೆಯಾದಾಗ ಬೆಳವಣಿಗೆಯ ಸುಳಿ ಭಾಗ  ( ಎಳೆಯ ಭಾಗಗಳು) ಸಾಯಲಾರಂಭಿಸುತ್ತದೆ.
 • ಹೆಚ್ಚಾದರೆ  ಇದು ಎಲೆಯಲ್ಲಿ ಶೇಖರಣೆಗೊಂಡು  ಎಲೆಗಳು  ಸುಟ್ಟಂತೆ  ಕಾಣುತ್ತದೆ ( excess boran inflicts what looks like burns on lower leaves, whereby they turn yellow, undergo edge necrosis, die and fall off)  ಎಲೆಯ ಅಲಗಿನ  ಜೀವ ಕೋಶಗಳು ಸಾಯುತ್ತವೆ.
 • ಎಲೆಗಳು ಉದುರುತ್ತವೆ.   ಬೋರಾನ್ ಹೆಚ್ಚಳದ  ತೊಂದರೆ  ( ವಿಷಕಾರಿತ್ವ) ಗೋಚರಕ್ಕೆ  ಬರುವುದು ಇತರ ಪೊಷಕಾಂಶಗಳಾದ ರಂಜಕ ಮತ್ತು ಕ್ಯಾಲ್ಸಿಯಂ ಲಭ್ಯತೆಯ ಮೇಲೆ.
 • ಬೆಳೆಗಳಿಗೆ ಕ್ಯಾಲ್ಸಿಯಂ ಮತ್ತು ರಂಜಕ ಬೇಕಾದಷ್ಟು ಕೊಟ್ಟಾಗ ಬೋರಾನ್ ಅವಶ್ಯಕತೆ ಹೆಚ್ಚುತ್ತದೆ.
 • ಅದು ಕಡಿಮೆಯಾದರೆ  ಬೋರಾನ್ ವಿಷಕಾರಿಯಾಗಿ ( Toxic) ಪರಿಣಮಿಸುತ್ತದೆ.

ದ್ವಿದಳ  ಜಾತಿಯ ಬೆಳೆಗಳಿಗೆ ( dicotes) ಬೋರನ್ ಹೆಚ್ಚು ಬೇಕಾಗುತ್ತದೆ. ಏಕದಳ ಸಸ್ಯಗಳಿಗೆ ಅವಶ್ಯಕತೆ  ಕಡಿಮೆ ಇರುತ್ತದೆ. ಏಕದಳ ಸಸ್ಯಗಳೆಂದರೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳು. ಯಾರೋ ಹೇಳಿದರು ಎಂದು ಸಿಕ್ಕ ಸಿಕ್ಕ ಗೊಬ್ಬರಗಳನ್ನು  ಹಾಕಬಾರದು.

ನಮ್ಮ ದೇಶದಲ್ಲಿ ಬಹಳಷ್ಟು ಜನ ರೈತರು ಬೆಳೆಗಳ ಅವಶ್ಯಕತೆಗನುಗುಣವಾಗಿ ಪೋಷಕಗಳನ್ನು ಅರಿತಿಲ್ಲ. ಆದ ಕಾರಣ ಮುಖ್ಯ ಪೋಷಕಾಂಶಗಳ ಪೂರೈಕೆಯೇ  ವ್ಯತ್ಯಯವಾಗುತ್ತದೆ. ಹೀಗಿರುವಾಗ ಸ್ವಲ್ಪ ಮುಂದುವರಿದ  ತಂತ್ರಜ್ಞಾನವಾದ ಸೂಕ್ಷ್ಮ ಪೋಷಕಾಂಶಗಳನ್ನು ಬಳಕೆ ಮಾಡುವಾಗ ತುಂಬಾ ಜಾಗರೂಕತೆ ವಹಿಸಬೇಕು. 

 

Leave a Reply

Your email address will not be published. Required fields are marked *

error: Content is protected !!